ಮಕರಂದ/ದೋಣಿ

ಮನುಷ್ಯ ಮನುಷ್ಯರನ್ನು

ಮನುಷ್ಯ ಮನುಷ್ಯರನ್ನು
Published On :

ಮೊಟ್ಟಮೊದಲು ಮನುಷ್ಯನು ತನ್ನನ್ನು ತಾನು
ಸಂಪೂರ್ಣವಾಗಿ ಉಧ್ವಸ್ತಗೊಳಿಸಿಕೊಳ್ಳಬೇಕು

ಭಯವಿಲ್ಲದೇ ಡಿಂಗ್‌ಡಾಂಗ್ ಮಾಡಬೇಕು
ಚರಸ ಗಾಂಜಾ ಸೇದಬೇಕು
ಅಫೀಮು ಗುಟ್ಕಾ ಜರ್ದಾ ತಿನ್ನಬೇಕು
ರೊಕ್ಕವಿಲ್ಲದಿದ್ದರೆ ಕಂಟ್ರಿ ಕುಡಿಯಬೇಕು
ಹಗಲು ರಾತ್ರಿ ರಾತ್ರಿ ಹಗಲು ಕುಡಿದು ಟರ್ರ್ ಆಗಿರಬೇಕು
ಅವನು ಇವನು ಎಲ್ಲರೂ ಅವರವರ ಅಕ್ಕತಂಗಿಯರ ಹೆಸರಿನಲ್ಲಿ ಬೈಯಬೇಕು.

ಮನುಷ್ಯನು ತನ್ನ ಹತ್ತಿರ ಚಾಕು ಇಟ್ಟುಕೊಳ್ಳಬೇಕು
ತಲ್ವಾರ್, ಕುಡಗೋಲು, ಕೊನೆಗೆ ಹಾಕಿ ಸ್ಟಿಕ್ಕು
ಆಸಿಡ್ ಬಲ್ಬ್ ಹೀಗೆ ಏನು ಬೇಕಾದ್ದನ್ನು
ಬೇಕಾದಲ್ಲಿ ಉಪಯೋಗಿಸಬೇಕು

ಮನುಷ್ಯ ರಸ್ತೆಗಳನ್ನು ಕಿತ್ತಿ ತೆಗೆಯಬೇಕು
ಸೇತುವೆಗಳನ್ನು ಹಾಳುಗೆಡವಬೇಕು
ವಿದ್ಯುತ್ ಕಂಭಗಳನ್ನು ಮುರಿದುಹಾಕಬೇಕು
ಪೋಲೀಸ್ ಸ್ಟೇಶನ್ ರೈಲ್ವೆ ಸ್ಟೇಶನ್‌ಗಳನ್ನು ಉಧ್ವಸ್ತಗೊಳಿಸಬೇಕು
ಕಾರುಗಳನ್ನು ಸುಟ್ಟು ಬೂದಿ ಮಾಡಬೇಕು
ಸಾಹಿತ್ಯ ಸಂಘ ಶಾಲೆ ಕಾಲೇಜು ಆಸ್ಪತ್ರೆ ವಿಮಾನ ನಿಲ್ದಾಣ
ರಾಜಧಾನಿ ಬಿಲ್ಡಿಂಗ್ ಹಾಗೂ ಗುಡಿಸಲುಗಳ ಮೇಲೆ
ಕೈ ಬಾಂಬ್ ಹೈಡ್ರೋಜನ್ ಬಾಂಬ್‌ಗಳನ್ನು ಹಾಕಬೇಕು

ಮನುಷ್ಯನು ಪ್ಲೇಟೋ ಐನ್‌ಸ್ಟೈನ್ ಆರ್ಕಿಮಿಡೀಸ್ ಸಾಕ್ರೆಟಿಸ್
ಮಾರ್ಕ್ಸ್ ಅಶೋಕ ಹಿಟ್ಲರ್ ಬಟ್ಲರ್ ಕಾಮು ಸಾರ್ತ್ ಕಾಫ್ಕಾ
ಬೋದಲೇರ್ ರೆಂಬೋ ಏಜ್ರಾ ಪೌಂಡ್ ಹಾಫ್‌ಕಿನ್ಸ್
ಗಯಟೆ ದೋಸ್ತೋವಸ್ಕಿ ಮಾಕ್ಸಿಂ ಗಾರ್ಕಿ
ಎಡಿಸನ್ ಮೆಡಿಸನ್ ಕಾಳಿದಾಸ ತುಕಾರಾಂ ವ್ಯಾಸ
ಶೇಕ್ಸ್‌ಪಿಯರ್ ಜ್ಞಾನೇಶ್ವರ ಮುಂತಾದವರನ್ನು ಅವರವರ
ಶಬ್ದಗಳ ಸಹಿತವಾಗಿ ಗಟಾರುಗಳ ಮ್ಯಾನ್‌ಹೋಲ್ ತೆರೆದು
ಆಳದಲ್ಲಿ ಅವರುಗಳನ್ನು ಹುಗಿದು
ಅದರಲ್ಲೇ ಕೊಳೆಸುತ್ತ ಇಡಬೇಕು

ಮನುಷ್ಯನು ಮನುಷ್ಯನ ರಕ್ತ ಕುಡಿಯಬೇಕು ಮಾಂಸ ತಿನ್ನಬೇಕು
ಚರ್ಬಿಯನ್ನು ಕರಗಿಸಿ ನೀರಿನಂತೆ ಕುಡಿಯಬೇಕು
ಟೀಕಿಸುವವರನ್ನು ಹಿಡಿದಿಡಿದು ಒದೆಯಬೇಕು
ವರ್ಗಯುದ್ಧ ಜಾತಿಯುದ್ಧ ಪಕ್ಷಯುದ್ಧ ಧರ್ಮಯುದ್ಧ ಮಹಾಯುದ್ಧ
ಗಳನ್ನು ಸಂಘಟಿಸಬೇಕು ಆದಿ ಮಾನವನಂತೆ
ಕ್ರೂರಿ ಅನಾಗರಿಕನಾಗಬೇಕು

ಕಾಳು ಕಡಿ ಬೆಳೆಯದಂತೆ ಚಳುವಳಿ ಮಾಡಬೇಕು
ಅನ್ನವಿಲ್ಲದೆ ನೀರಿಲ್ಲದೆ ಪ್ರತಿಯೊಬ್ಬರೂ ಸಾಯುವಂತೆ ನೋಡಿಕೊಳ್ಳಬೇಕು
ರೋಗಗಳು ಹರಡುವಂತೆ ಕ್ರಮ ಕೈಗೊಳ್ಳಬೇಕು
ಪ್ರತಿ ಗಿಡವೂ ಒಣಗಿ ಹೋಗುವಂತೆ ಬಿಸಿ ನೀರು ಸುರಿಯಬೇಕು
ಪಕ್ಷಿಗಳು ಹಾಡದಂತೆ ವಾತಾವರಣ ಸೃಷ್ಟಿಸಬೇಕು
ಮನುಷ್ಯನು ಪ್ರತಿ ಮನುಷ್ಯರು ಆದಷ್ಟು ಬೇಗ ಸಾಯುವಂತೆ
ಉಪಾಯಗಳನ್ನು ಹುಡುಕಬೇಕು
ಇವೆಲ್ಲವುಗಳು ಇಡೀ ಜಗತ್ತಿಗೆ ಪ್ರಚಾರಿಸಿ
ಇಡೀ ಜಗತ್ತು ಆದಷ್ಟು ಬೇಗ ಉಧ್ವಸ್ತವಾಗುವಂತೆ ನೋಡಿಕೊಳ್ಳಬೇಕು

ಅನಂತರ ಮಾತ್ರ,

ಉಳಿದವರು ಯಾರೂ ಯಾರನ್ನೂ ಗುಲಾಮನನ್ನಾಗಿ ಮಾಡಕೂಡದು
ಯಾರೂ ಯಾರನ್ನೂ ಲೂಟಿ ಮಾಡಕೂಡದು
ನೀನು ಬ್ರಾಹ್ಮಣ ನೀನು ಕ್ಷತ್ರಿಯ ನೀನು ವೈಶ್ಯ ನೀನು ಶೂದ್ರ
ನೆಂದು ಯಾರೂ ಯಾರನ್ನೂ ಅಣಕಿಸಬಾರದು
ಯಾರೂ ಯಾವ ಪಕ್ಷವನ್ನೂ ಆರಂಭಿಸಬಾರದು
ಯಾರೂ ಮನೆ ಮಠ ಕಟ್ಟಬಾರದು
ಯಾರೂ ತನ್ನ ಅಕ್ಕ ತಂಗಿಯರನ್ನು ಅವ್ವ ಅಪ್ಪ ಅಣ್ಣ ತಮ್ಮಂದಿರನ್ನು
ಗುರುತಿಸದಿರುವ ಅಪರಾಧ ಮಾಡಕೂಡದು

ಆಕಾಶವನ್ನು ಅಜ್ಜನೆಂದು
ಭೂಮಿಯನ್ನು ಅಜ್ಜಿಯೆಂದು
ಅವುಗಳ ಅಪ್ಪುಗೆಯಲ್ಲಿ ಸಂತೋಷದಿಂದ ಇರಬೇಕು

ಸೂರ್ಯಚಂದ್ರರುಗಳು ಮಸುಕಾಗುವಂತೆ
ಒಳ್ಳೆಯ ಕೆಲಸಗಳನ್ನು ಮಾಡಬೇಕು
ಒಂದೇ ತಾಟಿನಲ್ಲಿ ಎಲ್ಲರೂ ಊಟ ಮಾಡಬೇಕು
ಮನುಷ್ಯರು ಮನುಷ್ಯರ ಮೇಲೆಯೇ
ಪುರಾಣ ಉಪನಿಷತ್ತು ಸೂಕ್ತಿ ರಚಿಸಬೇಕು

ಮನುಷ್ಯರೇ ಮನುಷ್ಯರ
ಹಾಡುಗಳನ್ನು ಹಾಡಬೇಕು

-ಮೂಲ ಮರಾಠಿ: ನಾಮದೇವ ಢಸಾಳ
-ಕನ್ನಡಕ್ಕೆ: = ಡಾ. ಸರಜೂ ಕಾಟ್ಕರ್


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.