ಮಕರಂದ/ದೋಣಿ

ಕಪ್ಪು ಸೂರ್ಯ

ಕಪ್ಪು ಸೂರ್ಯ
Published On :

ದಾದರ್‌ನಲ್ಲಿ ಒಂದು ಕವಿಗೋಷ್ಠಿ ನಡೆಯುತ್ತಿತ್ತು. ಅಲ್ಲಿ ಆಮಂತ್ರಿತ ಹಿರಿಯ ಕವಿಗಳು ಕವಿತೆ ಓದುತ್ತಿದ್ದರು. ಅಷ್ಟರಲ್ಲಿ ಒಬ್ಬ ಯುವಕ ಸೀದಾ ಮೈಕಿನೆಡೆಗೆ ಬಂದವನೇ ಮೈಕನ್ನು ಕಸಿದು ತನ್ನ ಕವಿತೆಯನ್ನು ಹೇಳಲಾರಂಭಿಸಿದ. ಈ ಯುವಕನ ಕೈಯಲ್ಲಿ ಕವಿತೆಯ ಹಾಳೆ ಇರಲಿಲ್ಲ. ಇಡೀ ಕವಿತೆ ಅವನಿಗೆ ಬಾಯಿಪಾಠವಾಗಿತ್ತು. ಎತ್ತರದ ಧ್ವನಿಯಲ್ಲಿ ಆತ ಕವಿತೆ ಹೇಳುತ್ತಿದ್ದಂತೆಯೇ ಇಡೀ ಸಭಾಗೃಹ ಸ್ತಬ್ಧವಾಗಿ ಹೋಯ್ತು. ಯುವಕನ ಕವಿತೆ ಮುಗಿದಾಗ, ಕೂತಿದ್ದ ಜನ ಒಮ್ಮಿಂದೊಮ್ಮೆಲೆ ವಾಸ್ತವಕ್ಕೆ ಬಂದರು. ಹಿರಿಯ ಆಮಂತ್ರಿತ ಕವಿಗಳ ಕವಿತೆಗಳಿಂದ ಬೋರಾಗಿ ಹೋಗಿದ್ದ ಆ ಸಭಾಗೃಹ ಈ ಯುವಕನ ಹೊಸ ಕವಿತೆಯಿಂದ ಉಲ್ಲಸಿತವಾಯ್ತು. ಗಡಚಿಕ್ಕುವ ಚಪ್ಪಾಳೆಗಳು. ಯಾರು ಈ ಕವಿ? ಎಲ್ಲರೂ ಪ್ರಶ್ನಿಸಹತ್ತಿದರು. ಸಂಘಟಕರಿಗೂ ಈತ ಯಾರೆಂದು ಗೊತ್ತಿರಲಿಲ್ಲ. ಅಧ್ಯಕ್ಷತೆ ವಹಿಸಿದ್ದವರು ಇವನಿಗೆ ಯಾರು ನೀನು ಇಷ್ಟು ಹೊತ್ತು ಇಲ್ಲಿಯ ವಾತಾವರಣ ಬಿಸಿ ಮಾಡಿದವನು ಎಂದರು. ಯುವಕ ಉತ್ತರಿಸಿದ- ನಾನು ನಾಮದೇವ ಢಸಾಳ. ಟ್ಯಾಕ್ಸಿ ಓಡಿಸುತ್ತೇನೆ. ಆಗಾಗ ಕವಿತೆಗಳನ್ನು ಬರೆಯುತ್ತೇನೆ.
1972ರಲ್ಲಿ ದಲಿತ ಚಳುವಳಿಯ ಹೀರೋನಾಗಿ ಹೊರಹೊಮ್ಮಿದ ನಾಮದೇವ ಢಸಾಳ ಆಗ ಮುಂಬೈಯಲ್ಲಿ ಟ್ಯಾಕ್ಸಿ ಡ್ರೈವರ್. ಸೂಳೆಯರು ವಾಸ ಮಾಡುವ ಫರಾಸ್ ರೋಡ್ ಮತ್ತು ಗೋಲಪೀಠಾದಲ್ಲಿ ವಾಸ್ತವ್ಯಕ್ಕಿದ್ದವ. ತನ್ನ ಮೊದಲ ಕವನ ಸಂಕಲನಕ್ಕೆ 'ಗೋಲಪೀಠಾ'ವೆಂದು ಹೆಸರು ಕೊಟ್ಟು ಸಾಹಿತ್ಯ ಕ್ಷೇತ್ರಕ್ಕೆ ಢಸಾಳ ಶಾಕ್ ನೀಡಿದ್ದರು. ಗೋಲಪೀಠಾಕ್ಕೆ ಖ್ಯಾತ ನಾಟಕಕಾರ ವಿಜಯ ತೆಂಡೂಲ್ಕರ್ ಮುನ್ನುಡಿ ಬರೆದಿದ್ದಾರೆ. ಇಲ್ಲಿಯ ಕವಿತೆಗಳನ್ನು ಅರ್ಥ ಮಾಡಿಕೊಳ್ಳಬೇಕಾದರೆ ಮರಾಠಿ ಸಾಹಿತ್ಯಕ್ಕೆ ಇನ್ನೊಂದು ಡಿಕ್ಷನರಿಯ ಅವಶ್ಯಕತೆ ಇದೆ ಎಂದು ತೆಂಡೂಲ್ಕರ್ ಬರೆದಿದ್ದಾರೆ.
ಢಸಾಳರ ಕವಿತೆಗಳು ಮರಾಠಿಯ ಸರ್ವಸಾಮಾನ್ಯ ಓದುಗರಿಗೆ ದಿಗ್ಭ್ರಮೆ ಹುಟ್ಟಿಸುವಂತಿವೆ. ಅವರ ಕವಿತೆಗಳ ಸ್ಥಾಯಿಭಾವ ಉಗ್ರತೆ. ಭಾವನಾತ್ಮಕ ಉದ್ರೇಕಗಳ ಜೊತೆಗೆ ಶಬ್ದಗಳನ್ನು ಮುರಿಯುವುದರಲ್ಲಿ, ತನಗೆ ಹೇಗೆ ಬೇಕೋ ಹಾಗೆ ರೂಪು ಕೊಡುವುದರಲ್ಲಿ ಢಸಾಳ ನಿಷ್ಣಾತ. ಅವರ ಕವಿತೆಗಳಲ್ಲಿ ಬರುವ ಜಗತ್ತು ವಿಲಕ್ಷಣವಾದ ಜಗತ್ತು. ಇಲ್ಲಿ ಹಗಲೂ ರಾತ್ರಿ ಹಸಿವೆಯಿಂದ ಒದ್ದಾಡುವವರು, ನಾಳಿನ ಚಿಂತೆಯಲ್ಲಿ ಮುಳುಗಿರುವವರು, ನಾಚಿಕೆ ಮತ್ತು ಸಂವೇದನೆಗಳ ಗೋರಿ ಕಟ್ಟಿದವರು, ತುಂಬಿ ಹರಿಯುವ ಗಟಾರುಗಳ ಪಕ್ಕದಲ್ಲಿಯೇ ಸಂಸಾರ ಮಾಡುತ್ತಿರುವವರು, ಮೃತ್ಯುವಿನ ದಾರಿಯನ್ನು ನೋಡುತ್ತಿರುವ ರೋಗಿಗಳು, ಕೆಲಸವಿಲ್ಲದವರು, ಭಿಕಾರಿಗಳು, ಕಿಸೆ ಕತ್ತರಿಸುವವರು, ಬೈರಾಗಿಗಳು, ದಾದಾಗಳು, ಬಡ್ಡಿ ಮಕ್ಕಳು, ಕ್ಷಯ ರೋಗಿಗಳು, ಸ್ಮಗ್ಲಿಂಗ್ ಕಿಂಗ್‌ಗಳು, ರಾಜೇಶ ಖನ್ನಾನ ರಾಣಿಯಾಗಿ ಮೆರೆಯಬೇಕೆಂಬಾಸೆಯ ಯುವತಿಯರು ಹೀಗೆ ಅನೇಕ ಜನರು ಮೆರವಣಿಗೆಯೋಪಾದಿಯಲ್ಲಿ ಕಾಣಿಸಿಕೊಳ್ಳುತ್ತಾರೆ.
ಮಹಾರಾಷ್ಟ್ರದಲ್ಲಿ ದಲಿತ ಚಳವಳಿಗೆ ವೈಚಾರಿಕ ಹಾಗೂ ಸಾಹಿತ್ಯಿಕ ಸ್ಫೂರ್ತಿ ನೀಡಿದವರು ನಾಮದೇವ ಢಸಾಳ. ಆಗ ಸಾಹಿತ್ಯ ಕ್ಷೇತ್ರ, ರಾಜಕೀಯ ಕ್ಷೇತ್ರ, ಸಾಂಸ್ಕೃತಿಕ ಕ್ಷೇತ್ರ ಹಾಗು ಒಟ್ಟು ಜನಜೀವನ ಹೊಸತನಕ್ಕಾಗಿ ತುಡಿಯುತ್ತಿತ್ತು. ತಮ್ಮ ಹಕ್ಕುಗಳ ಜಾರಿಗಾಗಿ ದಲಿತರು ರಸ್ತೆಗೆ ಇಳಿದಿದ್ದರು. ಈ ಕಾಲದಲ್ಲಿಯೇ ದಲಿತ ಪ್ಯಾಂಥರ್ ಹುಟ್ಟಿತು. ದಲಿತ ಚಳವಳಿಗೆ ಸಾಹಿತ್ಯದ ಅವಶ್ಯಕತೆಯಿತ್ತು. ಇಂತಹ ಸಂದರ್ಭದಲ್ಲಿ ನಾಮದೇವ ಢಸಾಳ, ಕೇಶವ ಮೇಶ್ರಾಮ, ದಯಾ ಪವಾರ್, ಅರ್ಜುನ ಡಾಂಗಳೆ, ಮಲ್ಲಿಕಾ ಅಮರಶೇಖ (ಈಕೆ ಢಸಾಳರ ಪತ್ನಿ) ಮುಂತಾದವರು ತಮ್ಮ ಅನುಭವಗಳ ಬುತ್ತಿಯನ್ನು ಕಟ್ಟಿಕೊಂಡು ಸಾಹಿತ್ಯದ ನಿರ್ಮಿತಿಗೆ ತೊಡಗಿದರು. ಅವರಿಂದ ಹುಟ್ಟಿ ಬಂದ ಸಾಹಿತ್ಯ ಈ ಹಿಂದಿನ ಸಾಹಿತ್ಯದ ವ್ಯಾಖ್ಯೆಯನ್ನೇ ಮುರಿದು ಹಾಕಿತು. ಇವರು ಬರೆದದ್ದನ್ನು ಓದಿ ಅನೇಕರು ಅಸ್ವಸ್ಥರಾಗಿದ್ದರೆಂದು ಮರಾಠಿಯ ಖ್ಯಾತ ವಿಮರ್ಶಕ ನೆರೂರಕರ್ ಹೇಳುತ್ತಾರೆ.
ನಾನು ಮನುಷ್ಯನ ಹಾಡನ್ನು ಹಾಡುತ್ತೇನೆ ಎಂದು ಢಸಾಳ ಅನೇಕ ಸಲ ಹೇಳಿಕೊಂಡರು. ಶಾಹಿರ್ ಅಮರಶೇಖ ಎಂಬ ಕವಿಯ ಮಗಳು ಮಲ್ಲಿಕಾಳನ್ನು ಮದುವೆಯಾದ ಢಸಾಳರ ದಾಂಪತ್ಯದಲ್ಲಿ ಬಿರುಕು ಕಾಣಿಸಿಕೊಂಡಿತ್ತು. ಆಗ ಸಿಟ್ಟಿನಲ್ಲಿದ್ದ ಮಲ್ಲಿಕಾ ಮಲಾ ಉದ್ವಸ್ತ ಹ್ವಾಯಚಾಯ (ನಾನು ಉಧ್ವಸ್ತಗೊಳ್ಳಬೇಕಾಗಿದೆ) ಎಂದು ಆತ್ಮಕಥೆ ಬರೆದು ಢಸಾಳರ ದೌರ್ಬಲ್ಯಗಳನ್ನು ಜಗಜ್ಜಾಹೀರುಗೊಳಿಸಿದ್ದರು. ಆದರೆ ಅನಂತರ ಇಬ್ಬರ ಸಂಸಾರ ಮತ್ತೆ ಸುರಳಿತವಾಗಿ ಪುನರಾರಂಭಗೊಂಡಿತು. ತನ್ನ ಹೆಂಡತಿ ತನ್ನ ಬಗ್ಗೆ ಬರೆದದ್ದನ್ನು ಢಸಾಳ ಎಂದೂ ಮನಸ್ಸಿಗೆ ಹಚ್ಚಿಕೊಳ್ಳಲಿಲ್ಲ. ನಾನು ಹಾಗಿದ್ದೆ, ಅದಕ್ಕೇ ಆಕೆ ಹಾಗೆ ಬರೆದಿರಬೇಕು ಎಂದು ಹೇಳಿದ್ದರು.
ದಲಿತ ಪ್ಯಾಂಥರನ್ನು ಒಂದು ರಾಜಕೀಯ ಶಕ್ತಿಯಾಗಿ ಪರಿವರ್ತಿಸಿದವರು ಢಸಾಳ. ಪ್ಯಾಂಥರ್ ಆಗ ಎಷ್ಟು ಪ್ರಬಲವಾಗಿತ್ತೆಂದರೆ ದಲಿತರ ಕೈವಾರಿಯೆಂದೆನ್ನಿಸಿಕೊಳ್ಳುವ ಕಾಂಗ್ರೆಸ್, ಪ್ಯಾಂಥರಿನ ಶಕ್ತಿ ನೋಡಿ ಕಂಗಾಲಾಯಿತು. ಅನಂತರ ರಾಜಕೀಯ ಪಕ್ಷಗಳಲ್ಲಿ ಸರ್ವೇಸಾಮಾನ್ಯವಾಗಿ ನಡೆಯುವ ಗುಂಪುಗಾರಿಕೆ ಪ್ಯಾಂಥರಿನಲ್ಲೂ ನುಸುಳಿದವು. ಢಸಾಳ ಒಂದು ಸಲ ಎಡಪಕ್ಷಗಳನ್ನು ಬೆಂಬಲಿಸಿದರು. ಅನಂತರ ಯುಟರ್ನ್ ಮಾಡಿ ಶಿವಸೇನೆಯ ಬೆನ್ನಿಗೆ ನಿಂತರು. ಅವರ ಈ ಹುಚ್ಚಾಟ ಪ್ಯಾಂಥರನ್ನು ಪೂರಾ ಪಾತಾಳಕ್ಕೆ ನೂಕಿತು.
ಢಸಾಳ ಕವಿತೆಗಳಲ್ಲದೇ ಅಂಬೇಡ್ಕರ್ ಚಳವಳಿಯ ಬಗ್ಗೆ ಕೃತಿ ಪ್ರಕಟಿಸಿದ್ದಾರೆ. ಈ ಹಿಂದೆ ವಿದ್ರೋಹ ಎಂಬ ಸಾಹಿತ್ಯಿಕ ದ್ವೈಮಾಸಿಕ ಹೊರಡಿಸುತ್ತಿದ್ದರು. ಮರಾಠಿ ದಲಿತ ಸಾಹಿತಿಗಳಲ್ಲಿ ಸಾಮಾನ್ಯವಾಗಿರುವ ಆತ್ಮಕಥೆಯನ್ನು ಅವರು ಬರೆಯಲು ಹೋಗಲಿಲ್ಲ. ಈ ಬಗ್ಗೆ ವಿಮರ್ಶಕ ಅರುಣ ಕಾಲಾವಣಕರ್ ಕೇಳಿದಾಗ, ನನ್ನ ಕವಿತೆಗಳು ನನ್ನ ಸಮಗ್ರ ಆತ್ಮಕಥೆಗಳೇ ಆಗಿವೆ ಎಂದು ಹೇಳಿದರು.
ಢಸಾಳರು ತಮ್ಮ 64ನೆಯ ವಯಸ್ಸಿನಲ್ಲಿ (ಜನವರಿ 15, 2014) ತೀರಿಕೊಂಡರು. ಅವರ ಸಾವಿನಲ್ಲಿ ಮರಾಠಿ ದಲಿತ ಸಾಹಿತ್ಯದ ಜ್ವಾಲೆಯೊಂದು ಶಾಂತವಾದಂತಾಯಿತು. ಆದರೆ ಜ್ವಾಲೆಯ ಬೆಂಕಿಯ ಝಳ ಇನ್ನೂ ಕಾಣಿಸಿಕೊಳ್ಳುತ್ತಲೇ ಇದೆ.


-ಡಾ. ಸರಜೂ ಕಾಟ್ಕರ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.