ಗೋರಿಯ ಮೇಲೆ ಗೆಜ್ಜೆಯಿಟ್ಟು...
ಬಹಳ ಯೋಚಿಸಿ ದುಃಖ ಒಳಬಾರದಿರಲಿ ಎಂದು ಕಟ್ಟಿಕೊಂಡ ಕೋಟೆ. ಆದರೆ ಒಳಗಿನ ದುಃಖವೂ ಹೊರ ...

ಬಹಳ ಯೋಚಿಸಿ ದುಃಖ ಒಳಬಾರದಿರಲಿ ಎಂದು ಕಟ್ಟಿಕೊಂಡ ಕೋಟೆ. ಆದರೆ ಒಳಗಿನ ದುಃಖವೂ ಹೊರ ಹೋಗದಾಯ್ತು. ಸಂತೋಷಕ್ಕೂ ಮನದ ದಾರಿ ಸಿಗಲಿಲ್ಲ. ಮೌನ ಹೆಪ್ಪುಗಟ್ಟಿತು. ಅಂಥಾ ಸಮಯದಲ್ಲಿ ಅವ ಬಂದ. ಪರದೇಶದ ರಾಜಕುಮಾರ. ಕೋಟೆ ದಿಡ್ಡಿ ಬಾಗಿಲು ತೆರೆಯಲಿಲ್ಲ. ಅವನೂ ಹಟ ಬಿಡಲಿಲ್ಲ, ತ್ರಿವಿಕ್ರಮ. ಹತ್ತಿ ಬಂದ. ಮೌನಕ್ಕೆ ಕಾವು ಕೊಟ್ಟ. ಮಾತು ಭೋರ್ಗರೆದು ಹರಿಯಿತು, ಸಮುದ್ರದಂತೆ ನೀಳವಾಗಿ ಕುಳಿತ ಅವನತ್ತ. ಭಾವಗಳನ್ನು ಆಳಕ್ಕೆಳೆದುಕೊಳ್ಳುತ್ತಿದ್ದಾನೆಂಬಂಥ ಆಳ ನೋಟ. ಅವನನ್ನು ಗೆಲ್ಲುವ ಅನಾಯಾಸ ಆಕರ್ಷಣೆಗೆ ಮನ ಸೋಲುವಾಗ ಆ ಹಳೆಯ ಹುಡುಗ ಕೊಲಂಬಸ್‌ನ ನೆನಪುಗಳು ಕಾಲು ಮುದುಡಿಕೊಂಡು ಚಳಿ ಕಾಸುವಂತೆ ಬಂದು ಅಡ್ಡ ಕುಳಿತವು...
ಅವನು ಕೊಟ್ಟ ಗೆಜ್ಜೆ ಎದೆಯಲ್ಲಿ ಘಲ್ ಎಂದಿತು. ಸದ್ದು ಪುಳಕ ತರಲಿಲ್ಲ, ಬದಲಿಗೆ ಹೃದಯ ಅಳುತ್ತಿತ್ತು. ಇಂದಿಗೆ 3 ವರ್ಷ, ನಾಲ್ಕು ತಿಂಗಳು, 3 ದಿನದ ಹಿಂದಿನ ಸಂಜೆ ಸಾಗರದ ಮಾರಿಜಾತ್ರೆಯಲ್ಲಿ ಕೊಲಂಬಸ್ ಆಡುವಾಗ ಕೆಳಗೆ ಬಿದ್ದ ನನ್ನ ಬೆಳ್ಳಿಯ ಗೆಜ್ಜೆ. ಬಗ್ಗುವಂತಿಲ್ಲ, ಇಳಿಯುವಂತಿಲ್ಲ. ಬೆದರಿದ ನನ್ನ ಕಣ್ಗಳನ್ನು ಅದೆಲ್ಲಿಂದ ಕಂಡುಕೊಂಡನೋ ಈ ಕೊಲಂಬಸ್, ಇಳಿದು ಹುಡುಕುವಾಗ ಮುಖ ನೋಡಿ ನಕ್ಕ. ಮತ್ತೆ ಹುಡುಕಲು ಒಂಟಿಯಾಗಿ ನನ್ನ ಬಿಟ್ಟು ಎಲ್ಲೋ ಮರೆಯಾದವನು ಸಿಕ್ಕಿದ್ದು ಮರುದಿನದ ಜಾತ್ರೆಯಲ್ಲಿ ಮತ್ತೆ ಅಲೆವಾಗ. ಈ ಅಲೆದಾಟದಲ್ಲಿ ನನಗೇ ಗೊತ್ತಿಲ್ಲದೆ ಕಣ್ಗಳು ಹುಡುಕುತ್ತಿದ್ದುದು ಗೆಜ್ಜೆಯನ್ನಂತೂ ಅಲ್ಲ! ಗೆಳತಿಯರೊಂದಿಗೆ ಮಸಾಲಮಂಡಕ್ಕಿ ತಿನ್ನುವಾಗ ಯಾರದೋ ನೋಟಕ್ಕೆ ಗುರಿಯಾಗುತ್ತಿರುವ ಭಾವ ತೀವ್ರವಾದದ್ದು ನನ್ನ ಅವನ ಭೇಟಿಯ ಪಲ್ಲವಿ. ಮುಂದೆ ಮುಂದೆ ಸಾಗುವಾಗೆಲ್ಲ ಹಿಂದಿನಿಂದ ಗೆಜ್ಜೆಯ ಸದ್ದು ಹಿಂಬಾಲಿಸಿದಂತೆ. ತಿರುಗಿ ನೋಡಿದೆ. ಅವ ನಿಂತಿದ್ದ. ನನ್ನ ಕಾಲ್ಗಳೂ ನಿಂತವು, ಗೆಳತಿಯರಿಗೆ ಮುಂದೆ ಹೋಗಲು ಹೇಳಿ ಅಲ್ಲೇ ಪಕ್ಕದಂಗಡಿಯಲ್ಲೇನೋ ನೋಡುವಂತೆ. ಏನು ನೋಡುತ್ತಿದ್ದೆ, ಗೊತ್ತಿಲ್ಲ! ಅಷ್ಟರಲ್ಲಿ ಪಕ್ಕದಲ್ಲಿ ಅವನ ಮಧುರ ಧ್ವನಿ, 'ಮಿಸ್, ನೀವು ಹುಡುಕುತ್ತಿರುವುದು ಇದನ್ನೇನಾ?' ಜಾತ್ರೆಯಲ್ಲಿ ಕೊಂಡ ಆರ್ಟಿಫಿಶಿಯಲ್ ಗೆಜ್ಜೆಯನ್ನು ಕಣ್ಮುಂದೆ ಹಿಡಿದಿದ್ದ. ಜೊತೆಗೊಂದು ಲೆಟರ್. 'ಥ್ಯಾಂಕ್ಸ್' ಎಂದವಳೇ ಅವೆರಡನ್ನೂ ಕಸಿದು ಓಡಿದ್ದೆ. ಆ ಕ್ಷಣ ನನ್ನ ಮೈ ನಡುಗಿದ್ದೇಕೆ? ಕೆಂಪುಹಸಿರು ಮಣಿಯ ಬಣ್ಣದ ಗೆಜ್ಜೆ. ಲೆಟರ್ ಬಿಡಿಸುವಾಗ ಸಾವಿರ ಚಿಟ್ಟೆಗಳು ಹೊಟ್ಟೆಯೊಳಗೆ ಕುಳಿತು ಪಟಪಟನೆ ರೆಕ್ಕೆ ಬಡಿಯುತ್ತಿದ್ದವು. ನೆನೆಸಿಕೊಂಡರೆ ಈಗಲೂ ರೋಮಾಂಚನವಾಗುವುದು. ಅದರಲ್ಲಿದ್ದುದಿಷ್ಟೇ,
'ಹಸಿರುಕೆಂಪು ಬಣ್ಣ ತೊಟ್ಟ ಮುದ್ದಿನರಗಿಣಿ
ಎದೆಯೊಳಿನಿತು ಜಾಗ ನೀಡೆ ಉಲಿವೆ ಕಿಣಿಕಿಣಿ
ಅಭಿಮನ್ಯು- 98803777--'
ನಡುಗುವ ಕೈಯಲ್ಲಿ ನಂಬರ್ ಒತ್ತುವ ಮೊದಲೇ ಆತನಿಗೆ ಮನದಲ್ಲಿ ಜಾಗ ನೀಡಿಯಾಗಿತ್ತು! ಆದರೆ ಅವನ ಧ್ವನಿ ಕೇಳುತ್ತಲೇ ನನ್ನ ಧ್ವನಿ ಬಿದ್ದುಹೋಗಿತ್ತು. ನಾ ಮಾತೇ ಆಡಲಿಲ್ಲ. ಆದರೂ ಅವ ಹೇಳಿದ- 'ಗೆಜ್ಜೆ ನಿಮ್ಮ ಕಾಲಿಗೆ ತುಂಬ ಚೆನ್ನಾಗಿ ಒಪ್ಪುತ್ತದೆ'. ನನ್ನ ಕಳ್ಳಹೆಜ್ಜೆಯನ್ನು ಅವನು ಗುರುತಿಸಿಬಿಟ್ಟ ಎಂಬ ನಾಚಿಕೆಯಲ್ಲಿ ಫೋನ್ ಕಾಲನ್ನು ಕಟ್ ಮಾಡಿಬಿಟ್ಟೆ.
ಅಷ್ಟೆ, ನಂತರದ ಚಾಟಿಂಗ್‌ಗಳೂ ಮೀಟಿಂಗ್‌ಗಳೂ ಅನಾಯಾಸವಾದವು. ಅದುವರೆಗೂ 'ನೀವು' ಎನ್ನುತ್ತಿದ್ದ ಮಾತು ಯಾವುದೋ ಮಾಯದಲ್ಲಿ 'ನೀನು' ಎಂದಾಗಿತ್ತು. ಆಗಲೇ ಅವನು ಹೇಳಿದ್ದು; ನೀನಿಲ್ಲದಿದ್ದರೆ ಸತ್ತು ಹೋಗುತ್ತೀನಿ ಕಣೇ... ಇನ್ನೊಮ್ಮೆ ಮಾತು ತಗೊಂಡ, ನಾನು ನೀನು ಕೊನೆವರೆಗೂ ಒಟ್ಟಿಗಿರಬೇಕು. ಒಂದು ವೇಳೆ ನಿನಗೇನಾದರೂ ಆಗಿ ನೀ ಸತ್ತರೆ ನಾನೂ ಆತ್ಮಹತ್ಯೆ ಮಾಡಿಕೊಳ್ಳುವೆ, ಹಾಗೆಯೇ ನನಗೇನಾದರೂ ಆದರೆ ನೀನೂ ನನ್ನೊಂದಿಗೆ ಬರಬೇಕು ಎಂದು. ನಮ್ಮ ಫೇರಿಟೇಲಿನ ಮೋಡದ ಮೇಲೆ ನಾವಿಬ್ಬರೇ ವಿಹರಿಸಿದೆವು. ಆ ಎರಡು ವರ್ಷಗಳ ಕಾಲ ಪ್ರಪಂಚವನ್ನಾಳುತ್ತಿದ್ದ ರಾಜರಾಣಿ ನಾವಾಗಿದ್ದೆವು. ಕನಸು ಯಾವುದೋ, ನನಸು ಯಾವುದೋ ತಿಳಿಯುವ ಸ್ಥಿತಿಯಲ್ಲಿರಲಿಲ್ಲ.
ಒಂದು ದಿನ ನನ್ನ ಫೋನ್ ಸ್ಕ್ರೀನ್ ಮೇಲೆ 'ಅಭಿ ಕಾಲಿಂಗ್...', ಫೋನ್ ಎತ್ತಿದೆ. ಮಾತಾಡಿದ್ದು ಅವನ ಗೆಳೆಯ. 'ಧೈರ್ಯ ತಂದ್ಕೊಳಿ. ಪರೀಕ್ಷೆಯಲ್ಲಿ ಫೇಲಾದೆ ಎಂದು ಅಭಿ ನೇಣು ಹಾಕಿಕೊಂಡಿದ್ದಾನೆ.'
ಮನಕ್ಕೆ ಬಡಿದ ಸಿಡಿಲು ಅದೆಷ್ಟೋ ದಿನ ಗರ ಹಿಡಿಸಿತ್ತು. ಅವನಿಗೆ ಮಾತು ಕೊಟ್ಟಿದ್ದೆ, ಅವನು ಸತ್ತರೆ ನಾನೂ ಸಾಯುವೆನೆಂದು. ಜೀವತ್‌ಶವವಾದರೂ ಜೀವ ತೆಗೆದುಕೊಳ್ಳಲಿಲ್ಲ ಏಕೆ? ಏಕೆ?
ಅಭಿ ನನ್ನಿಂದನೇ ಫೇಲಾದನೇ? ಆದರೂ ನನ್ನನ್ನೊಬ್ಬಳನ್ನೇ ಬಿಟ್ಟು, ನನ್ನನ್ನೇ ಹೊಣೆ ಮಾಡಿಬಿಟ್ಟು ಹೋದದ್ದು ಪ್ರೀತಿಗೆ ಮಾಡಿದ ಅನ್ಯಾಯವಲ್ಲವೇ? ಸತ್ತು ಹೋದವನ ಮೇಲೆ ದ್ವೇಷ ಭುಗಿಲೆದ್ದಿತ್ತು. ನಾ ಸಾಯಲಿಲ್ಲ. ಏಕೆಂದರೆ ಹುಟ್ಟಿದಂದಿನಿಂದ ಬದುಕಿಗಂಟಿಕೊಂಡ ನನಗೆ ಸಾವು ಅಷ್ಟೊಂದು ಸುಲಭವಿರಲಿಲ್ಲ. ಆದರೆ ಬದುಕು ಉತ್ಸಾಹ ಕಳೆದುಕೊಂಡಿತ್ತು. ನಂಬಿಕೆಗಳ ಗೋರಿ ಮೇಲೆ ಉಸಿರಾಟ ಕಷ್ಟವಾಗಿತ್ತು. ಒಂದು ವರ್ಷದ ಪ್ರಜ್ಞಾಪೂರ್ಣ ಕೋಮಾ ಸ್ಟೇಟಿನಲ್ಲಿದ್ದ ನನ್ನನ್ನು ಇವನು ಮತ್ತೆ ಈಚೆ ಎಳೆಯುತ್ತಿದ್ದಾನೆ, ತ್ರಿವಿಕ್ರಮ.
ಸಾವಿನೆಡೆಗೆ ಕರೆವ ಅವನು, ಬದುಕಿಗೆಳೆ ತರುವ ಇವನು, ಉಸಿರ ಈ ಆಟಕ್ಕೆ ನಾ ಹೈರಾಣು.. ಪ್ರೀತಿಯನ್ನು ಪ್ರೀತಿಯಿಂದಲೇ ಗೆಲ್ಲಬೇಕೆನ್ನುವ ತ್ರಿವಿಕ್ರಮನ ಹಟಕ್ಕೆ ಗೆಜ್ಜೆ ತಾಳ ತಪ್ಪುತ್ತಿದೆ.
ದೃಢ ನಿಶ್ಚಯದಿ ಇಂದು ಹೊರಟಿದ್ದೇನೆ ಅಭಿಯ ಗೋರಿ ಮೇಲೆ ಗೆಜ್ಜೆ ಇಟ್ಟು ಬರಲು...ಇವನ ಹೆಜ್ಜೆ ಮೇಲೆ ಹೆಜ್ಜೆ ಇಡಲು..
-ರೇಶ್ಮಾರಾವ್ ಸೊನ್ಲೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


