ಹೊಂಡಕ್ಕೆ ಬಿದ್ದರೂ ಎದ್ದು ನಿಂತ ಹೋಂಡ
ಸೋಯಿಚಿರೋ ಹೋಂಡಾ ಹುಟ್ಟಿದ್ದು 1906 ನವೆಂಬರ್ 17ರಂದು. ಜಪಾನಿನ ಕೋಮಿಯೋ ಗ್ರಾಮದಲ್ಲಿ. ಆತ...

ಸೋಯಿಚಿರೋ ಹೋಂಡಾ ಹುಟ್ಟಿದ್ದು 1906 ನವೆಂಬರ್ 17ರಂದು. ಜಪಾನಿನ ಕೋಮಿಯೋ ಗ್ರಾಮದಲ್ಲಿ. ಆತ ಗೀಹೀ ಹೋಂಡಾ ಮತ್ತು ಮೈಕ್ ದಂಪತಿಯ ಮೊದಲ ಮಗ. ಸೈಕಲ್ ರಿಪೇರಿಯಲ್ಲಿ ಅಪ್ಪನಿಗೆ ಸಹಾಯ ಮಾಡುತ್ತಾ ಬೆಳೆದ. 16ರ ಹರೆಯದಲ್ಲಿ ಇನ್ನೂರ ಎಪ್ಪತ್ತು ಕಿಲೋ ಮೀಟರ್ ದೂರದ ಟೋಕಿಯೋಗೆ ತೆರಳಿ ವಾಹನ ರಿಪೇರಿ ಅಂಗಡಿಯೊಂದರಲ್ಲಿ ಸೇರಿದ. ಇಪ್ಪತ್ತು ತುಂಬಿದಾಗ ಸೇನೆ ಸೇರಲು ಕರೆ ಬಂತು. ವೈದ್ಯಕೀಯ ಪರೀಕ್ಷೆಯಲ್ಲಿ ಆತನಿಗೆ ಬಣ್ಣಗುರುಡೆಂದು ಗೊತ್ತಾಗಿ ತಿರಸ್ಕೃತನಾದ. 21ರಲ್ಲಿ ಯಂತ್ರ ರಿಪೇರಿ ಮತ್ತು ಸಂಶೋಧನೆಯಲ್ಲಿ ನುರಿತವನೆನಿಸಿಕೊಂಡ. ತನ್ನೆಲ್ಲ ಅನುಭವವನ್ನು ಹೂಡಿ ಸಣ್ಣದೊಂದು ವರ್ಕ್ಶಾಪ್ ತೆರೆದ. ಪಿಸ್ಟನ್ ರಿಂಗೊಂದನ್ನು ಆವಿಷ್ಕರಿಸಿದ. ಅದನ್ನು ಟೊಯೊಟಾ ಸಂಸ್ಥೆಗೆ ಮಾರಲಿಚ್ಛಿಸಿದ್ದ. ನಿದ್ರೆಗೆಟ್ಟ ರಾತ್ರಿಗಳು, ಹೆಂಡತಿಯ ಆಭರಣಗಳ ಮಾರಾಟ ಎಲ್ಲವನ್ನು ಮಾಡಿ ವ್ಯವಹಾರದಲ್ಲಿ ಹೂಡಿದ. ಅಂತಿಮವಾಗಿ ಟೊಯೊಟಾಗೆ ಆತ ನೀಡಿದ ಪಿಸ್ಟನ್ ರಿಂಗ್ ಗುಣಮಟ್ಟದ ಸಮಸ್ಯೆಯಿಂದ ತಿರಸ್ಕೃತವಾಯ್ತು.
ಮುಂದಿನ ಎರಡು ವರ್ಷ ವಿಶ್ವವಿದ್ಯಾಲಯಗಳು, ಕಬ್ಬಿಣ ಕೈಗಾರಿಕೆಗಳಿಗೆಲ್ಲ ಭೇಟಿ ನೀಡಿ ತಯಾರಿ ತಂತ್ರಗಳನ್ನೆಲ್ಲ ಕಲಿತ. ಕೊನೆಗೂ ಟಯೋಟಾ, ನಕಜಿಮ ಏರ್ಕ್ರಾಫ್ಟ್ ಮುಂತಾದ ಕಂಪೆನಿಗಳಿಗೆ ಬಿಡಿಭಾಗಗಳನ್ನು ಪೂರೈಸಲು ಶಕ್ತನಾದ. ಅವನ ನಂಬಿಕೆ ವ್ಯಾಮೋಹಗಳು ಫಲ ಕೊಟ್ಟಿದ್ದವು. ಆದರೆ ಇಷ್ಟಕ್ಕೇ ಮುಗಿಯಲಿಲ್ಲ.
ಆಗ ಜಪಾನ್ ಯುದ್ಧಕ್ಕೆ ಅಣಿಯಾಗುತ್ತಿತ್ತು. ಫ್ಯಾಕ್ಟರಿ ತಯಾರಿಕೆಗೆ ಬೇಕಿದ್ದ ಕಾಂಕ್ರೀಟನ್ನು ಆತನಿಗೆ ನೀಡಲು ಸರ್ಕಾರ ನಿರಾಕರಿಸಿತು. ಕೈ ಚೆಲ್ಲುವುದನ್ನೇ ಅರಿಯದ ಹೋಂಡಾ ಅಲ್ಲಿಗೆ ಸುಮ್ಮನಿರಲಿಲ್ಲ. ತನ್ನ ತಂಡದ ಜತೆಗೂಡಿ ಬೇರೆಯದೇ ರೀತಿಯಲ್ಲಿ ಕಾಂಕ್ರೀಟ್ ತಯಾರಿಸಲು ಕಲಿತು ಫ್ಯಾಕ್ಟರಿ ಕಟ್ಟಿದ. ಯುದ್ಧ ಆರಂಭವಾಯ್ತು. ಹೋಂಡಾನ ಫ್ಯಾಕ್ಟರಿಯ ಮೇಲೆ ಎರಡು ಬಾರಿ ಬಾಂಬ್ ದಾಳಿಯಾಯಿತು. ಎಲ್ಲವೂ ಧ್ವಂಸವಾಯಿತು. ಕಚ್ಚಾವಸ್ತುಗಳೂ ದೊರೆಯುವುದು ಅಸಾಧ್ಯವಾಯಿತು. ಈ ಅನಾಹುತಗಳನ್ನೆಲ್ಲ ದಾಟಿ ಬಂದಿದ್ದನೋ ಇಲ್ಲವೋ, ಭೂಕಂಪವೊಂದು ಆತನ ಘಟಕವನ್ನು ನೆಲ ಕಚ್ಚಿಸಿತು. ಹೋಂಡಾ ಇಷ್ಟಕ್ಕೇ ಸುಮ್ಮನಾದನೆ? ಇಲ್ಲ. ಯುದ್ಧದ ನಂತರ ಜಪಾನ್ನಲ್ಲಿ ತೀವ್ರ ಇಂಧನ ಕೊರತೆಯುಂಟಾಯ್ತು. ತನ್ನ ಕುಟುಂಬಕ್ಕೆ ಆಹಾರ ಸಾಗಿಸಲೂ ಆತ ಪರದಾಡಬೇಕಾಯ್ತು. ಅನಿವಾರ್ಯತೆಯೇ ಆವಿಷ್ಕಾರದ ತಾಯಿ ಎನ್ನುತ್ತಾರಲ್ಲ, ತನ್ನ ಸೈಕಲಿಗೇ ಸಣ್ಣದೊಂದು ಮೋಟಾರು ಅಳವಡಿಸಿದ. ಅದನ್ನು ನೋಡಿ ಆಕರ್ಷಿತರಾದ ನೆರೆಹೊರೆಯವರು ತಮಗೂ ಅಂತಹದ್ದನ್ನು ಮಾಡಿಕೊಡಲು ಹೇಳಿದರು. ಬೇಡಿಕೆ ಎಷ್ಟು ಹೆಚ್ಚಿತೆಂದರೆ, ಅವನ ಬಳಿಯಿರುವ ಮೋಟಾರುಗಳು ಖಾಲಿಯಾಗಿ ಅವುಗಳನ್ನು ತಯಾರಿಸುವ ಫ್ಯಾಕ್ಟರಿ ಕಟ್ಟಲು ಮುಂದಾದ. ಆದರೆ ಬಂಡವಾಳದ ಕೊರತೆಯುಂಟಾಯ್ತು. ಜಪಾನ್ ದೇಶದಲ್ಲಿರುವ 18,000 ಸೈಕಲ್ ಅಂಗಡಿ ಮಾಲಿಕರಿಗೆ ಪತ್ರ ಬರೆದು ತನ್ನ ಹೊಸ ಆವಿಷ್ಕಾರ ದೇಶಕ್ಕೆ ಎಷ್ಟು ಅಗತ್ಯ ಎಂದು ವಿವರಿಸಿದ. ಅವರಿಂದ ಬಂಡವಾಳ ಕೇಳಿದ. ಐದು ಸಾವಿರ ಮಂದಿ ಹಣ ಹೂಡಲು ಒಪ್ಪಿದರು. ತದನಂತರ ಆತ ತಯಾರಿಸಿದ ಬೈಕ್ ವಿನ್ಯಾಸದಲ್ಲಿ ಭಾರವಾಗಿತ್ತು. ಅದನ್ನು ಕೆಲವೇ ಬೈಕ್ ಹುಚ್ಚರು ಖರೀದಿಸಿದರು. ಇದನ್ನರಿತ ಹೋಂಡಾ ಬೈಕನ್ನು ಮತ್ತಷ್ಟು ಪರಿಷ್ಕರಿಸಿ ಹಗುರಗೊಳಿಸಿದ. 'ಕಬ್' ಎಂದು ಹೆಸರಿಟ್ಟ. ಅದರ ಮಾರಾಟದ ಗ್ರಾಫ್ ಪೂರಿಯಂತೆ ಉಬ್ಬಿತು. ಈ ಯಶಸ್ಸಿನಿಂದ ಉತ್ಸಾಹಿತನಾಗಿ ಯುರೋಪ್, ಅಮೆರಿಕಾಗಳಿಗೆ ರಫ್ತು ಮಾಡತೊಡಗಿದ. ಅಮೆರಿಕಾದಿಂದ ಸಡಿಲ ಕ್ಲಚ್, ಗ್ಯಾಸ್ಕೆಟ್ ಬಿರುಕು ಮುಂತಾದ ದೂರುಗಳು ಬರತೊಡಗಿದವು. ಚಕಿತನಾದ ಹೋಂಡ ಅವುಗಳನ್ನು ವಾಪಾಸು ತರಿಸಿಕೊಂಡು ನೋಡಲಾಗಿ, ಅಮೆರಿಕನ್ನರು ಹೆಚ್ಚು ವೇಗವಾಗಿ ಬೈಕನ್ನು ಓಡಿಸುವುದು ಗೊತ್ತಾಯ್ತು. ಅದಕ್ಕನುಗುಣವಾಗಿ ಮತ್ತೆ ಬೈಕನ್ನು ಪರಿಷ್ಕರಿಸಿ ಕಳುಹಿಸಿದ. 1963ರಿಂದ ಅಮೆರಿಕಾದಲ್ಲಿ ಹೋಂಡಾ ಬೈಕ್ಗಳು ಮಾರಾಟದಲ್ಲಿ ದಾಖಲೆ ಮಟ್ಟದಲ್ಲಿವೆ. 1970ರಲ್ಲಿ ಹೋಂಡಾ ಕಾರುಗಳು ಮಾರುಕಟ್ಟೆಗೆ ಬಂದು ಖ್ಯಾತಿ ಗಳಿಸಿದವು.
ಇಂದು ಹೋಂಡಾ ಕಂಪೆನಿಯಲ್ಲಿ ಒಂದು ಲಕ್ಷ ಸಿಬ್ಬಂದಿಗಳಿದ್ದಾರೆ. ಏಷ್ಯಾ, ಯುರೋಪ್, ಉತ್ತರ ಅಮೆರಿಕಾಗಳ ಅಟೋಮೊಬೈಲ್ ಉದ್ಯಮದ ಬೃಹತ್ ಶಕ್ತಿಯಾಗಿದೆ ಹೋಂಡಾ. ಬೈಕ್ ತಯಾರಿಕೆಯಲ್ಲಿ ಮೊದಲ ಸ್ಥಾನ, ಅಟೋಮೊಬೈಲ್ ತಯಾರಿಕೆಯಲ್ಲಿ 9ನೇ ಸ್ಥಾನ ಗಳಿಸಿದೆ.
ನಿಮ್ಮೊಳಗಿದೆ ಸಕ್ಸಸ್!
(ಗೆದ್ದಾಗ ನೀವು ಸ್ಫೂರ್ತಿಯಾಗುತ್ತೀರಿ)
ಲೇ: ಯು.ಎಸ್.ಮೊಯ್ನುದ್ದೀನ್
ಅನು: ಹರೀಶ್ ಕೇರ
ಪುಟ: 150, ಬೆಲೆ: 125/-
ಪ್ರ: ವಸಂತ ಪ್ರಕಾಶನ
ನಂ.360, 10 ಬಿ ಕ್ರಾಸ್, 3 ಬ್ಲಾಕ್
ಜಯನಗರ, ಬೆಂಗಳೂರು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


