ಅವನಂದ್ರೆ... ಅವನೇ!
ಅವನು... ಈ ಒಂದು ಪದ ಇಷ್ಟೊಂದು ಕುತೂಹಲ ಹುಟ್ಟಿಸುತ್ತದೆ ಎಂಬುದು ನನಗೂ ತಿಳಿದಿರಲಿಲ್ಲ....

ಅವನು...
ಈ ಒಂದು ಪದ ಇಷ್ಟೊಂದು ಕುತೂಹಲ ಹುಟ್ಟಿಸುತ್ತದೆ ಎಂಬುದು ನನಗೂ ತಿಳಿದಿರಲಿಲ್ಲ. ನಾನೇನಾದರೂ ಅವನ ಬಗ್ಗೆ ಬರೆದರೆ ಅವನ್ಯಾರವ? ಅವನ್ಯಾರವ? ಎಂದು ಕೆಲವರು ಕೇಳಿದರೆ, ಇನ್ನು ಕೆಲವರು ಓ ಇದು ಅವನೇ ಆಗಿರಬೇಕು ಎಂದು ಮನಸ್ಸಲ್ಲಿಯೇ ಯಾರ್ಯಾರನ್ನೋ ಕಲ್ಪಿಸಿಕೊಂಡು ಸುಮ್ಮನಾಗುತ್ತಾರೆ. ಆದರೆ ಹೆಣ್ಣು ಮಾತ್ರ ಮನಸ್ಸಲ್ಲಿರುವ ಅವನು ಯಾರು ಎಂಬುದನ್ನು ಯಾವತ್ತೂ ಬಾಯಿಬಿಟ್ಟು ಹೇಳುವುದೇ ಇಲ್ಲ. ಅವನು ಗೆಳೆಯನಾಗಿರಬಹುದು, ಗಂಡನಾಗಿರಬಹುದು, ಪ್ರೇಮಿಯಾಗಿರಬಹುದು... ಕೈ ಕೊಟ್ಟ ಹುಡುಗನೂ ಆಗಿರಬಹುದು. ಭಕ್ತೆಯೊಬ್ಬಳಿಗೆ ಭಗವಂತನೂ ಆಗಿರಬಹುದು. ಹೀಗೆ ಅವರವರ ಭಾವಕ್ಕೆ ತಕ್ಕಂತೆ ಅವನಿರುತ್ತಾನೆ. ಭಗವಂತನ ಇರುವಿಕೆಯಂತೆ 'ಅವನು' ಅಸ್ಪಷ್ಟವಾದರೂ, ಆಕೆಗೆ ಮಾತ್ರ ಆತ ಸರ್ವವ್ಯಾಪಿ.
ಹೆಣ್ಣೊಬ್ಬಳ ಜೀವನದಲ್ಲಿ ಮೊದಲ ಬಾರಿಗೆ ಬರುವ 'ಅವನು' ಜೀವನದುದ್ದಕ್ಕೂ ಆಕೆಯನ್ನು ಕಾಡುತ್ತಲೇ ಇರುತ್ತಾನೆ. ಹದಿಹರೆಯದಲ್ಲಿ ಗೆಳೆಯನಾಗಿ ಬಂದವನು ಕ್ರಮೇಣ ಪ್ರೇಮಿಯಾಗುತ್ತಾನೆ. ಅವನ ಪ್ರೇಮದಲ್ಲಿ ಈಕೆ ತಲ್ಲೀನಳಾಗುವಾಗ ಅವಳು ಅವನಾಗುತ್ತಾಳೆ. ಆದರೆ ಅವನು ಅವನಾಗಿಯೇ ಉಳಿಯುತ್ತಾನೆ. ಒಂದೊಮ್ಮೆ ಪ್ರೀತಿ ಕೈತಪ್ಪಿ ಹೋಗಿ, ಮತ್ತೊಬ್ಬ ಆ ಸ್ಥಾನದಲ್ಲಿ ಬಂದರೂ ಆಕೆಯ ಮನಸ್ಸಲ್ಲಿರುವ ಮೊದಲ ಹುಡುಗನ ನೆನಪು ಬೇಗನೆ ಮಾಸಿ ಹೋಗುವುದಿಲ್ಲ. ಜೀವನದ ಮೊದಲ ಅನುಭವ, ಅನುಭೂತಿ ಎಲ್ಲವನ್ನೂ ನೀಡಿದವನು ಅವನೇ ಅಲ್ಲವೇ? ನಂಬಿಕೆ ಗಳಿಸಿ ಪ್ರೀತಿಸಿದವನೂ, ಆಮೇಲೆ ನಂಬಿಕೆಗೆ ದ್ರೋಹ ಮಾಡಿದವನೂ 'ಅವನೇ' ಆಗಿದ್ದರೂ, ಮೊದಲ ಪ್ರೀತಿಯೊಂದಿಗೆ ಅವನು ನೆನಪಾಗಿಯೇ ಉಳಿದು ಬಿಡುತ್ತಾನೆ.
ಇಷ್ಟೆಲ್ಲಾ ಆದ ಮೇಲೆ ಆಕೆ ಇನ್ನೊಬ್ಬನ ಕೈ ಹಿಡಿಯಬೇಕಾಗಿ ಬಂದರೂ ಆಕೆಯ ಮನಸ್ಸಿನ ಮೂಲೆಯಲ್ಲಿ ಅವನು ಅವಿತಿರುತ್ತಾನೆ. ಜೀವನ ಅಂದ ಮೇಲೆ ಇದೆಲ್ಲಾ ಇದ್ದದ್ದೇ, ಎಲ್ಲವನ್ನು ಮರೆತು... ಅಲ್ಲಲ್ಲ... ಮರೆತಂತೆ ನಟಿಸಿ ಮುಂದೆ ಸಾಗಬೇಕು ಎಂಬ ವಾಕ್ಯ ಅನುರಣಿಸುವಾಗ ಅವನ ಅನುರಾಗದ ನೆನಪು ಬರೀ ಪದಗಳಲ್ಲಿ ಬಂಧಿಯಾಗಿ ಚಡಪಡಿಸುತ್ತಿರುತ್ತದೆ.
ಇನ್ಮುಂದೆ ಕೈ ಹಿಡಿದ ಗಂಡನೇ ತನ್ನ ಸರ್ವಸ್ವ ಎಂದು ತೆಕ್ಕೆಗೆ ಒರಗುವಾಗಲೂ 'ಅವನು' ಕಾಡದೇ ಇರಲಾರ. ಗಂಡನ ಪ್ರೀತಿಯಲ್ಲಿ ಮೈ ಮರೆಯುವಾಗ ಅವನು ನೆನಪಾಗದೇ ಇರಬಹುದು. ಆದರೆ ಗಂಡನ ಮುನಿಸು, ಬೈಗುಳಕ್ಕೆ ಕಣ್ಣೀರು ಸುರಿಸುವಾಗ ಮನಸ್ಸು ಪಿಸುಗುಡುತ್ತದೆ; ಗಂಡನ ಸ್ಥಾನದಲ್ಲಿ ಅವನಿರುತ್ತಿದ್ದರೆ...
ಗಂಡನಾದವನು ಸ್ವಲ್ಪ ನಿರ್ಲಕ್ಷ ತೋರಿದರೆ ಸಾಕು; ಆ ಮಧ್ಯಂತರದಲ್ಲಿ 'ಅವನ' ನೆನಪು ನುಸುಳಿ ಬಿಡುತ್ತದೆ.
ಅರೇ, ನಾನೀಗ ಹೀಗೆಲ್ಲಾ ಯೋಚನೆ ಮಾಡಲೇಬಾರದು. ನನಗೀಗ ಮದುವೆಯಾಗಿ ಮಕ್ಕಳಿದ್ದಾರೆ. ಅಂಥದರಲ್ಲಿ ನಾನ್ಯಾಕೆ ಅವನ ಬಗ್ಗೆ ಚಿಂತಿಸಬೇಕು. ಅದು ಮುಗಿದು ಹೋದ ಅಧ್ಯಾಯ ಎಂದು ಆಕೆ ಮುಂದಿನ ಅಧ್ಯಾಯವನ್ನು ತೆರೆಯುವಾಗ ಮತ್ತೆ ಅವನು ಕಾಡುತ್ತಾನೆ. ಬದುಕಿನ ಜಂಜಾಟದ ನಡುವೆ ಒಮ್ಮೊಮ್ಮೆ ಗಂಡನಲ್ಲಿ ಅವನನ್ನು ಕಂಡರೆ, ಇನ್ನೊಮ್ಮೆ ಮಗನ ಮುದ್ದು ಮುಖದಲ್ಲಿ ಅವನು ಇಣುಕುತ್ತಾನೆ.ಜೀವನದ ಪ್ರತಿಯೊಂದು ಪುಟವನ್ನು ಬದಲಿಸುವಾಗ 'ಅವನು' ಮಾತ್ರ ಬುಕ್‌ಮಾರ್ಕ್‌ನಂತೆ ಪುಟಗಳ ನಡುವೆ ಸ್ಥಾನ ಪಡೆಯುತ್ತಾ ಹೋಗುತ್ತಾನೆ. ಪ್ರತಿಯೊಂದು ಹುಡುಗಿಯ ಮನಸ್ಸಲ್ಲಿರುವ ಆ ವ್ಯಕ್ತಿಯ ಹೆಸರು ಬೇರೆ ಬೇರೆ ಆಗಿರಬಹುದು. ಆದರೆ ಅವಳು ಅವನಿಗಿಡುವ ಒಂದೇ ಹೆಸರು 'ಅವನು'. ಈಗ ಅವನ್ಯಾರೆಂದು ಕೇಳಬೇಡಿ... ಅವನು ಅವನಾಗಿಯೇ ಉಳಿದಿರಲಿ.
- ಇಬ್ಬನಿ
loveibbani@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


