ಸ್ನೇಹ ಸಂಬಂಧಗಳು ಅಷ್ಟೊಂದು ಸಡಿಲವೇ?

ಮುಸ್ಸಂಜೆಯ ಹೊತ್ತಿನಲ್ಲಿ ಮನಸ್ಸು ಮತ್ತೆ ಮುದುಡಿ ಕುಳಿತಿದೆ. ಏನೋ ಹೇಳಲಾಗದ ಬೇಸರ. ಹೊಸತನ್ನು ಪಡೆದುಕೊಂಡ ಹುಮ್ಮಸ್ಸಿನೊದಿಗೆ ಹಳೆಯ ಕೊಂಡಿಯೊಂದು ಕಳಚಿಹೋದ ನೋವು. ಇದನ್ನು ಕಂಡು ಖುಷಿಪಡಬೇಕೆ ಅಥವಾ ದುಃಖಿಸಬೇಕೇ ಎಂಬುದು ಅರ್ಥವಾಗದೇ ಮನಸ್ಸು ತೊಳಲಾಡುತ್ತಿದೆ. ಜೊತೆ ಜೊತೆಗೆ ಮನದಲ್ಲಿ ಮಾತ್ರ ಅದೇ ಪ್ರಶ್ನೆ ಮತ್ತೆ ಮತ್ತೆ ಮೂಡಿ ಮಾಯವಾಗುತ್ತಿದೆ. "ಸ್ನೇಹವೆಂದರೆ ಬೇಕಾದಾಗ ತೊಟ್ಟು ಬೇಡದಿದ್ದಾಗ ಬಿಸಾಕುವ ಮೈ ಮೇಲಿನ ಬಟ್ಟೆಗಳಂತೆಯೇ...?"
ಅವರೇ ಬಯಸಿ ಬಯಸಿ ಬಿಗಿದುಕೊಂಡ ಬಂಧನವನ್ನು ಮುಂದೊಂದು ದಿನ ತಮಗೇ ಸಂಬಂಧಿಸಿದ್ದೇ ಅಲ್ಲವೆನ್ನುವಂತೆ ತೊರೆದು ಹೋಗುತ್ತಾರೇಕೆ? ಕತ್ತರಿಯಲ್ಲಿ ಕಾಗದವನ್ನು ತುಂಡರಿಸುವಂತೆ ತನ್ನ ಮನಸ್ಸನ್ನು ಚೂರು ಚೂರು ಮಾಡಿ ಹೋಗುವುದು ಸರಿಯೇ? ತನ್ನ ಸ್ನೇಹ, ಪ್ರೀತಿ, ನಂಬಿಕೆಗಳಿಗೆ ಅವರಲ್ಲಿ ಬೆಲೆಯೇ ಇಲ್ಲವೇ? ತಮಗೆ ಬೇಕಾದಾಗ ತನ್ನಿಂದ ಏನೆಲ್ಲ ಬಗೆಯ ಸಹಾಯ ತೆಗೆದುಕೊಂಡಿರಲಿಲ್ಲವೇ? ಅವರ ಆಟದಲ್ಲಿ ತಾನೊಂದು ದಾಳವಾಗಿಬಿಟ್ಟೆನೇ?- ಹೃದಯದ ಆಳದಲ್ಲಿ ಮೊರೆಯುವ ಈ ಪ್ರಶ್ನೆಗಳಿಗೆ ಉತ್ತರಿಸುವವರಾರು?
ಮನುಷ್ಯ ಜನ್ಮದ ಎಲ್ಲ ಬಗೆಯ, ಕೊನೆಗೆ ರಕ್ತ ಸಂಬಂಧಕ್ಕಿಂತಲೂ ಶ್ರೇಷ್ಠವಾದುದು ಸ್ನೇಹ ಸಂಬಂಧ. ಮೊದಲೆಲ್ಲಾ ಸ್ನೇಹಕ್ಕಾಗಿ, ಸ್ನೇಹಿತರಿಗಾಗಿ ಪ್ರಾಣ ಬೇಕಾದರೂ ಒತ್ತೆ ಇಡುತ್ತಿದ್ದರು. ಈಗ ಪ್ರಾಣ ಬಿಡಿ, ಚೈನಾದಲ್ಲಿ ತಯಾರಾಗುವ ಮಾಲುಗಳಂತೆಯೇ ಮನುಷ್ಯ ಮನುಷ್ಯರ ನಡುವಿನ ಸ್ನೇಹ ಸಂಬಂಧವೂ ಅಲ್ಪಾಯುಷ್ಯದ್ದಾಗುತ್ತಿದೆಯಲ್ಲಾ? ಬೇರೆಯವರ ಬೇಸರ, ನೋವುಗಳಿಗೆ ನಮ್ಮಲ್ಲಿ ಬೆಲೆ ಇಲ್ಲದಾಯಿತೇ? ಪ್ರಾಣಿಗಳಿಗಿಂತ ಹೀನನಾದನೇ ಮನುಷ್ಯ?
ಈಗ ಮನಸ್ಸನ್ನು ಮುದುಡಿಸಿಕೊಂಡು ಕೂತರೇನು ಪ್ರಯೋಜನ? ಪ್ರಪಂಚ ವಿಶಾಲವಾಗಿದೆ. ಸುಂದರವಾಗಿದೆ. ಯಾರೋ ಒಬ್ಬರು ನಮ್ಮಿಂದ ದೂರವಾದರೆಂದರೆ ಬೇರೆ ಯಾರೋ ಒಳ್ಳೆಯ ಮನಸ್ಸಿನವರು ನಮ್ಮ ಜೊತೆಗಾರರಾಗಬಹುದೆಂಬ ಆಶಾಭಾವನೆಯಿಂದ ಮನಸ್ಸಿಗೆ ಸಮಾಧಾನ ಹೇಳಬೇಕು. ಅಷ್ಟಕ್ಕೂ ನಮ್ಮ ಜೊತೆಯಲ್ಲಿ ಇರುವ ಅದೃಷ್ಟ ಅವರ ಹಣೆಯಲ್ಲಿ ಬರೆದಿಲ್ಲವೆಂದರೆ ಯಾರು ತಾನೇ ಏನು ಮಾಡಬಲ್ಲರು? ಯಾವಾಗಲೂ ಕಹಿ ಕ್ಷಣಗಳನ್ನು ನೆನಪಿನಂಗಳದಿಂದ ಝಾಡಿಸಿ ತೊಳೆದು ಅರಳಲಿರುವ ಸುಂದರ ನಾಳೆಗಳತ್ತ ಗಮನಹರಿಸುವುದೇ ಜಾಣತನ.
- ಲಹರಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


