ಮಕರಂದ/ದೋಣಿ

ಒಂದೇ ಒಂದ್ಸಲ ನನ್ನನ್ನು ಕ್ಷಮಿಸಿಬಿಡು...

ಒಂದೇ ಒಂದ್ಸಲ ನನ್ನನ್ನು ಕ್ಷಮಿಸಿಬಿಡು...
Published On :

ಒಲವಿನ ಹೃದಯವೇ,
ಬೇಸಿಗೆ ಧಗೆಯ ಮಧ್ಯಾಹ್ನದಲ್ಲೂ ಹಾಗೆಯೇ ಕುಳಿತಿರುವೆ, ನಮ್ಮಿಬ್ಬರನ್ನೂ ಮತ್ತಷ್ಟು ಹತ್ತಿರ ಮಾಡಿದ ಪಾಕ್‌ನಲ್ಲಿ,ಅದೇ ಬೆಂಚು ಕಲ್ಲು, ಅದೇ ಮರಗಳು, ನೀನು ಇಷ್ಟಪಡುತ್ತಿದ್ದ ಅದೇ ಸಂಪಿಗೆ ಹೂವುಗಳ ಘಮ, ಹೊಂಗೆ ಹೂವುಗಳ ರಾಶಿಗೆ ದುಂಬಿಗಳ ಝೇಂಕಾರದ ಮೇಳ ಎಲ್ಲವೂ ಎಲ್ಲವೂ.... ಹಾಗೆಯೇ ಇದೆ. ಆದರೆ ನೀನು ಮಾತ್ರ ಇಲ್ಲ. ಒಂಟಿ ಕಾಗೆಯಾಗಿರುವ ನನ್ನ ಮನಸ್ಸು ಕರ್ಕಶ ಧ್ವನಿಯಲ್ಲಿ ರೋಧಿಸುತ್ತಿದೆ. ನನಗೆ ಗೊತ್ತು, ನಿನ್ನ ಮನದಲಿ ಭಾವನೆಗಳು ಯಾವ ರೀತಿ ರುದ್ರ ತಾಂಡವ ಆಡುತ್ತಿವೆ ಅಂತ. ಈ ಶನಿ ಕೊನೆಗೂ ದಾರಿಯಿಂದ ತೊಲಗಿದ ಎಂದು ನಿಟ್ಟುಸಿರು ಹೊರಹಾಕುತ್ತಿರುವೆ ಅಲ್ಲವಾ...? ಹೌದು ಕಣೆ. ನನ್ನ ತಪ್ಪು ಹೇಳ ತೀರದಷ್ಟು ಇದೆ. ಹೂವಂಥ ನಿನ್ನ ಹೃದಯವ ಕಲಕಿ ರಾಡಿ ಮಾಡಿದ ಕಿರಾತಕ ನಾನು. ಬಾಳ ಮೆಟ್ಟಿಲುಗಳ ಏರುತ್ತಾ ನಾಳೆಗಳಿಗೆ ಸುಂದರ ಕನಸ ಕಾಣುತ್ತಿದ್ದವಳ ಬದುಕ ಹಿಂಡಿದವ ನಾನು. ನಿಜ, ನೀನು ಕೊನೆಯ ಬಾರಿ ಹೇಳಿದ್ದು ಅಪ್ಪಟ ಸತ್ಯ. ನಾನೊಬ್ಬ ರಾಕ್ಷಸ. ಭಾವನೆಗಳಿಗೆ ಬೆಲೆ ಕೊಡಲು ತಿಳಿದಿರದ ನಿಶ್ಪ್ರಯೋಜಕ, ನಿನ್ನ ಪ್ರೀತಿಯ ಆಳವ ಅರಿಯದ ಪಾಪಿ, ಇನ್ನೇನಂತ ಹೇಳಲಿ? ಪ್ರಪಂಚದಲ್ಲಿ ಏನೆಲ್ಲಾ ಕೆಟ್ಟ ಕ್ರಿಮಿ ಇರುತ್ತದೋ ಅದೆಲ್ಲವೂ ನಾನೇ ಅಲ್ಲವಾ..?
ಒಲವಿನ ಹಕ್ಕಿಗಳಂತೆ ಹಾರಾಡುತ್ತಿದ್ದ ನಮಗೆ ಜಗವೇ ಕಾಣುತ್ತಿರಲಿಲ್ಲ. ಈ ಲೋಕಕೆ ನಾವಿಬ್ಬರೇ ರಾಜರಾಣಿ ಎಂಬಂತೆ ಮರೆಯುತ್ತಿದ್ದುದರಿಂದ ಐದೂವರೆ ವರ್ಷ ಹೇಗೆ ಉರುಳಿತೆಂದೇ ತಿಳಿಯಲಿಲ್ಲ. ಮೊದಲಿನಿಂದಲೂ ನನಗೆ ನಿನ್ನ ಮೇಲೆ ಅನುಮಾನ. ಇದಕ್ಕೆ ನನ್ನ ಕೀಳರಿಮೆಯೂ ಕಾರಣವಾಗಿರಬಹುದು. ನನ್ನಂತಹ ಕಡುಗಪ್ಪು ಹುಡುಗನಿಗೆ ನಿನ್ನಂತಹ ಕೈ ತೊಳೆದು ಮುಟ್ಟಬೇಕೆನಿಸುವಂತಹ ಸುಂದರಿ ಅದು ಹೇಗೆ ಮೆಚ್ಚಿ ಪ್ರೀತಿಯ ಪ್ರಸ್ತಾವನೆ ಮಾಡಿದಳು ಎನ್ನುವುದೇ ಇಂದಿಗೂ ಕಾಡುತಿರುವ ಯಕ್ಷ ಪ್ರಶ್ನೆ. ಕಪ್ಪಿದ್ದರೂ ನಿನ್ನ ಹೃದಯ ಹಾಲಿನಷ್ಟು ಶುಭ್ರ ಎಂದು ನೀನು ಅಂದು ನೀಡಿದ್ದ ಉತ್ತರ ಈ ಕಲ್ಮಶ ತುಂಬಿದ ಮನಕೆ ಸಾಂತ್ವನ ನೀಡಲು ಸಾಕಾಗಲಿಲ್ಲವೇಕೋ ತಿಳಿಯದು. ಅದಕ್ಕೇ ಇರಬೇಕು: ದಿನಗಳುರುಳಿದಂತೆ ನೀನು ನನ್ನೊಟ್ಟಿಗಿದ್ದಷ್ಟೂ ದಿನ ಅನುಮಾನದಿಂದ ನೋಡಿದೆ. ಮಾತು ಮಾತಿಗೂ ನಿನ್ನ ಜರಿಯಲು ಪ್ರಾರಂಭಿಸಿದೆ. ದಿನಗಳು ಕಳೆದಂತೆ ಇದೇ ಒಂದು ಹವ್ಯಾಸವಾಗತೊಡಗಿತು.
ಅಂದು ಆಕಸ್ಮಿಕವಾಗಿ ಸಿಕ್ಕ ನಿನ್ನ ಬಾಲ್ಯ ಸ್ನೇಹಿತನ ಜೊತೆ ನಗುನಗುತ್ತಾ ಮಾತಾಡುತ್ತಾ ನಿಂತು ಹಳೆಯ ದಿನಗಳ ನೀನು ಮೆಲುಕು ಹಾಕುತ್ತಿದ್ದೆ. ಇದ್ದಕ್ಕಿದ್ದಂತೆ ಸಿಡಿಯಲು ಶುರುಮಾಡಿದ ನನ್ನ ಅನುಮಾನದ ಜ್ವಾಲಾಗ್ನಿ ನಿನಗೆ ಕಿರುಕುಳವ ಕೊಡಲಾರಂಭಿಸಿತು. ಇಲ್ಲಸಲ್ಲದ ಕಾರಣಕ್ಕೆ ನಿನಗೆ ಹೊಡೆಯಲಾರಂಭಿಸಿದೆ. ರಕ್ತ ಹೆಪ್ಪುಗಟ್ಟುವ ಹಾಗೆ ಗಿಲ್ಲಲು ಶುರುಮಾಡಿದೆ. ಪ್ರತೀ ಭೇಟಿಯಲ್ಲೂ ನಾಲಿಗೆ ತಿರುಗಿದಂತೆ ಬೈಯುತ್ತಿದ್ದೆ. ನೋಯಿಸಲು ಇನ್ನೇನೂ ಉಳಿದಿಲ್ಲ ಎನ್ನುವಷ್ಟು ಕಾಡಿದೆ. ಇದನ್ನೆಲ್ಲಾ ಮನ್ನಿಸಿ ನಾನು ಕರೆದಾಗಲೆಲ್ಲಾ ಜಿಂಕೆಯಂತೆ ಬೇಟಿಯಾಗಲು ಬರುತ್ತಿದ್ದ ನಿನ್ನ ಅಂತರಂಗವ ನಾನು ಅರ್ಥ ಮಾಡಿಕೊಳ್ಳಲೇ ಇಲ್ಲ. ಯಾವಾಗ ನಿನ್ನ ಚಿಕ್ಕಪ್ಪನ ಮಗನೊಂದಿಗೆ ಸಂಬಂಧ ಕಲ್ಪಿಸಿ ಹಿಗ್ಗಾಮುಗ್ಗಾ ಜರಿದೆನೋ ಅಂದು ನಿನ್ನ ತಾಳ್ಮೆಯ ಕಟ್ಟೆ ಒಡೆಯಿತು. ಪ್ರೇಮದ ಮನೆ ಮುರಿಯಿತು.
ಹೌದು. ನನ್ನಿಂದ ಕ್ಷಮಿಸಲಾರದಷ್ಟು ದೊಡ್ಡ ತಪ್ಪಾಗಿದೆ. ಯಾವ ಪ್ರೇಮಿಯೂ ಕನಸಿನಲ್ಲೂ ಬಯಸದಷ್ಟು ಪಾಪಿ ನಾನು. ಹೂವಂಥ ಹೃದಯವ ಬಾಡುವವರೆಗೆ ಬಡಿದ ರಾಕ್ಷಸ ನಾನು. ಆದರೆ ನನ್ನೆಲ್ಲಾ ತಪ್ಪನ್ನು ಮನ್ನಿಸಿ ಮತ್ತೆ ಬಾಳಿಗೆ ಹೆಜ್ಜೆ ಇಡಲು ಸಾಧ್ಯವಾ..? ಕೊಳಕು ಕೆಸರಲಿ ತುಂಬಿ ತುಳುಕುತಿರುವ ನನ್ನನ್ನು, ಅದರಿಂದ ಹೊರತರಲು ನಿನ್ನಿಂದ ಮಾತ್ರ ಸಾಧ್ಯ, ಆ  ದೊಡ್ಡ ಗಣೇಶನ ಮುಂದೆ ನಿಂತು ಪ್ರಮಾಣ ಮಾಡುವೆ. ಅನುಮಾನದ ಭೂತವ ಕಿತ್ತೊಗೆದು ನಿನ್ನೊಡನೆ ನಾಳೆಗಳಲಿ ಸಾಗಲು ಬಯಸಿರುವೆ. ಕೊನೆಯ ಬಾರಿ ನನ್ನನ್ನು ಕ್ಷಮಿಸಿ ಮತ್ತೆ ನನ್ನ ಬರಡು ಬಾಳಿಗೆ ಹೆಜ್ಜೆ ಹಾಕುವ ಮನಸ್ಸು ಮಾಡುವೆಯಾ? ಪ್ಲೀಸ್, ತಿಳಿಸು...

- ಜಮುನಾ ರಾಣಿ ಎಚ್.ಎಸ್.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.