ಮಕರಂದ/ದೋಣಿ

ಒಂದು ಫೋಟೋದ ಕತೆ

ಮನೆಯ ಗೋಡೆಯಲ್ಲಿ ತೂಗು ಹಾಕಿರುವ ಫೋಟೋಗಳನ್ನು ನೋಡುವಾಗ ಬಾಲ್ಯ...

ಒಂದು ಫೋಟೋದ ಕತೆ
Published On :

ಮನೆಯ ಗೋಡೆಯಲ್ಲಿ ತೂಗು ಹಾಕಿರುವ ಫೋಟೋಗಳನ್ನು ನೋಡುವಾಗ ಬಾಲ್ಯ ನೆನಪಾಗುತ್ತದೆ. ಮೊದಲ ಹುಟ್ಟುಹಬ್ಬದ ಫೋಟೋ, ಮರದ ಕುದುರೆ ಮೇಲೆ ಕೂರಿಸಿ ತಲೆಗೊಂದು ಕರ್ಚೀಫ್ ಕಟ್ಟಿ ತೆಗೆಸಿದ ಫೋಟೋ, ಅಂಗನವಾಡಿಯಲ್ಲಿ ತೆಗೆದ ಫೋಟೋ... ಹೀಗೆ ಎಲ್ಲ್ಲ ಫೋಟೋಗಳಿಗೆ ಫ್ರೇಮ್ ಹಾಕಿಸಿ ಅಮ್ಮ ಅದನ್ನು ಜೋಪಾನವಾಗಿರಿಸಿದ್ದಾರೆ. ಮನೆಗೆ ಬಂದವರೆಲ್ಲಾ ಆ ಫೋಟೋಗಳನ್ನು ನೋಡಿ, ಇವಳು ಚಿಕ್ಕವಳಿರುವಾಗ ಹೀಗೆ ಇದ್ಳಾ? ಎಂದು ಆ ಫೋಟೋದೊಂದಿಗೆ ನನ್ನನ್ನು ಹೋಲಿಕೆ ಮಾಡಿ ನೋಡ್ತಾರೆ.
ಆ ಹಳೆಯ ಫೋಟೋಗಳನ್ನೆಲ್ಲಾ ನೋಡುತ್ತಿದ್ದರೆ ಮನಸ್ಸಿಗೆ ಒಂಥರಾ ಖುಷಿ. ಇವತ್ತು ಫೋಟೋ ತೆಗೆಯೋಕೆ ಹೋಗೋಣ ಎಂದು ಹೊಸ ಡ್ರೆಸ್ ತೊಡಿಸಿ, ಅಪ್ಪ ಪೇಟೆಗೆ ಕರೆದುಕೊಂಡು ಹೋಗುತ್ತಿದ್ದರು. ಸ್ಟುಡಿಯೋ ಒಳಗೆ ಹೋದಾಗ, ಫೋಟೋಗ್ರಾಫರ್ ಪೌಡರ್ ಹಾಕೊಳ್ಳಿ ಎಂದು ಹೇಳುತ್ತಿದ್ರು... ಆ ಡ್ರೆಸ್ಸಿಂಗ್ ರೂಂ ಒಳಗೆ ದೊಡ್ಡದಾದ ಪಾಂಡ್ಸ್ ಪೌಡರ್, ಇನ್ನೊಂದು ದೊಡ್ಡ ಬಾಚಣಿಗೆ ಇರುತ್ತಿತ್ತು. ಇನ್ನೊಂದ್ಸಾರಿ ಪೌಡರ್ ಹಾಕಿ, ಡ್ರೆಸ್ ಸರಿಮಾಡಿಕೊಂಡು ನಿಂತರೂ, ಛೇ... ಸರಿಯಾಗಿ ಇದೆಯೋ ಇಲ್ವೋ ಎಂಬ ಗೊಂದಲವೂ ಇರುತ್ತಿತ್ತು. ಆಮೇಲೆ ಫೋಟೋಗ್ರಾಫರ್ ರೆಡಿ.. ಸ್ಮೈಲ್ ಎಂದು ಹೇಳಿ ಕ್ಲಿಕ್ಕಿಸುವ ಹೊತ್ತಿಗೆ ಕಣ್ಣುರೆಪ್ಪೆ ಮುಚ್ಚಿಬಿಡುತ್ತೇನೋ ಎಂಬ ಭಯದಿಂದ ನಿಂತುಕೊಂಡ ಕ್ಷಣಗಳು... ಪ್ರಿಂಟ್ ಹಾಕಿಸಿದ ನಂತರ ಅದೇ ಫೋಟೋವನ್ನು ಮತ್ತೆ ಮತ್ತೆ ನೋಡಿ, ಛೇ..ನಾನು ಹೀಗೆ ನಿಂತ್ಕೋಬೇಕಿತ್ತು... ಅಣ್ಣ ಸ್ವಲ್ಪ ನಗಬೇಕಿತ್ತು..ಅಮ್ಮನ ಸೆರಗು ಸ್ವಲ್ಪ ಜಾರಿದೆ..ಅಪ್ಪ ಗಂಭೀರವಾಗಿ ಕೂತು ಬಿಟ್ರು ಅಂತೆಲ್ಲಾ ಕಾಮೆಂಟ್ ಹೇಳಿ, ಆಲ್ಬಂ ಒಳಗೆ ತುರುಕಿಸಿ ಬಿಡ್ತಿದ್ದೆವು.
ಇದಾದ ಮೇಲೆ ಮೊದಲ ಬಾರಿಗೆ ಅಣ್ಣ ಖರೀದಿಸಿದ ರೋಲ್ ಕ್ಯಾಮೆರಾದಲ್ಲಿ ಫೋಟೋ ತೆಗೆಸಿಕೊಂಡದ್ದೇ ಗಮ್ಮತ್ತು. ಬೇರೆ ಬೇರೆ ಡ್ರೆಸ್ ಬದಲಿಸಿ ಮನೆಯಲ್ಲಿ, ಹಿತ್ತಿಲಲ್ಲಿ ಕುಳಿತು, ನಿಂತು ಮನೆಯವರೆಲ್ಲರೂ ಫೋಸ್ ಕೊಟ್ಟಿದ್ದೇ ಆಯ್ತು. ರೋಲ್ ಕ್ಯಾಮೆರಾ ಆಗಿದ್ದರಿಂದ ಫೋಟೋ ಹೇಗಿರುತ್ತೆ ಎಂದು ನೋಡಬೇಕಾದರೆ ಪ್ರಿಂಟ್ ಗಾಗಿ ಕಾಯಬೇಕಿತ್ತು. ಆದಾಗ್ಯೂ, ಪ್ರಿಂಟ್ ಹಾಕಿಸಿದ್ದರೂ ಅದರಲ್ಲಿ ಕೆಲವೊಂದು ಫೋಟೋಗಳು ಬೆಳಕು ಸಾಕಾಗದೆ, ಇಲ್ಲವೇ ಕ್ಲಿಕ್ಕಿಸಿದ್ದು ಸರಿಯಾಗದೇ ವೇಸ್ಟ್ ಆಗುತ್ತಿತ್ತು.
ಈಗಂತೂ ಡಿಜಿಟಲ್ ಕ್ಯಾಮೆರಾ, ಮೊಬೈಲ್‌ನಲ್ಲೇ ಚಕ ಚಕ ಎಂದು ಫೋಟೋ ಕ್ಲಿಕ್ ಮಾಡಿ, ಚೆನ್ನಾಗಿಲ್ಲ ಎಂದಾಗ ಡಿಲೀಟ್ ಮಾಡಿ ಬಿಡುತ್ತೇವೆ. ನಮ್ಮ ಫೋಟೋಗಳು, ನಾವು ಕ್ಲಿಕ್ಕಿಸಿದ ಫೋಟೋಗಳೆಲ್ಲಾ ವಿವಿಧ ಫೋಲ್ಡರ್‌ಗಳಲ್ಲಿ ಸೇವ್ ಆಗಿವೆ. ಇನ್ನು ಕೆಲವು ಫ್ಲಿಕರ್, ಫೇಸ್‌ಬುಕ್‌ಗಳಲ್ಲಿ ಲೈಕ್, ಕಾಮೆಂಟ್ ಗಿಟ್ಟಿಸಿಕೊಂಡು ಅಂತರ್ಜಾಲದಲ್ಲಿ ಹರಿದಾಡುತ್ತಿವೆ. ಆದರೂ, ಸ್ಟುಡಿಯೋಗೆ ಹೋಗಿ  ತೆಗೆದ ಫ್ಯಾಮಿಲಿ ಫೋಟೋ, ಮೊಗ್ಗಿನ ಜಡೆ ಹಾಕಿ ತೆಗೆಸಿದ ಫೋಟೋ, ಹಾಲ್‌ಟಿಕೇಟ್‌ಗೆ ಅಂಟಿಸಲು ತೆಗೆದ ಬ್ಲಾಕ್ ಩್ ವೈಟ್ ಪಾಸ್‌ಪೋರ್ಟ್ ಸೈಜ್ ಫೋಟೋಗಳು ಎಲ್ಲವೂ ಬಾಲ್ಯದ ಸವಿಸವಿ ನೆನಪುಗಳ ದಾಖಲಾತಿಗಳು...
ಈಗಂತೂ ಮನೆಯ ಗೋಡೆಯಲ್ಲಿರುವ ಫೋಟೋಗಳಿಗಿಂತ ಫೇಸ್‌ಬುಕ್ ಗೋಡೆಗಂಟಿಸಿರುವ ಫೋಟೋಗಳ ಸಂಖ್ಯೆಯೇ ಜಾಸ್ತಿಯಾಗಿದೆ. ಇಲ್ಲಿಯವರೆಗೆ ನಮ್ಮ ಬಂಧುಗಳು, ಆಪ್ತರಿಗೆ ಮಾತ್ರ ತೋರಿಸುತ್ತಿದ್ದ ಫೋಟೋಗಳನ್ನು ನಾವಿಂದು ಎಲ್ಲರಿಗೂ ತೋರಿಸಿ ಸಂಭ್ರಮಿಸಬಹುದು. ತಂತ್ರಜ್ಞಾನ ಮುಂದುವರಿಯುತ್ತಿದ್ದಂತೆಮಾತು ಕಮ್ಮಿಯಾಗಿದೆ. ಈ ಮೌನ ಸಂಭಾಷಣೆಯಲ್ಲಿ ನೆನಪುಗಳ ಸುರುಳಿ ಬಿಚ್ಚುತ್ತಾ ಹೋದಂತೆ ಫೋಟೋಗಳು ಮಾತನಾಡುತ್ತಿವೆ...

- ರಶ್ಮಿ ಕಾಸರಗೋಡು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.