ಮಕರಂದ/ದೋಣಿ

ಸ್ನೇಹಾ ಐಸ್‌ಕ್ರೀಂ!

ಸ್ನೇಹಾ ಐಸ್‌ಕ್ರೀಂ!
Published On :

ಎಲ್ಲಿಯಾದರೂ ಸಣ್ಣ ಮಕ್ಕಳು ಜಗಳವಾಡುವುದನ್ನು ನೋಡಿದಾಗ, ಹಿಂದೆ ನಡೆದ ಈ ಘಟನೆ ಮತ್ತೆ ಮತ್ತೆ ನೆನಪಾಗುತ್ತದೆ; ಅದು ಈಗಲೂ ಮನಸ್ಸಿನಾಳದಲ್ಲಿ ಅಚ್ಚಳಿಯದೇ ಉಳಿದುಬಿಟ್ಟಿದೆ.
ಅವತ್ತು ಬಿರುಗಾಳಿಯ ಹಾಗೆ ಮನೆಯೊಳಗೆ ನುಗ್ಗಿದೆ; ರಪ್ ಅಂತ ಬಾಗಿಲು ಹಾಕಿಕೊಂಡೆ; ಸ್ಕೂಲ್ ಬ್ಯಾಗ್ ತೆಗೆದು ಪುಸ್ತಕ, ಪೆನ್ನು ಈಚೆಗೆಳೆದು ಹೋಂ ವರ್ಕ್ ಮಾಡಲು ಶುರು ಮಾಡಿದೆ. ನನ್ನ ಮುಖ ಊದಿಕೊಂಡೇ ಇತ್ತು ಎನ್ನುವುದು ನನಗೇ ಗೊತ್ತಾಗುವಂತಿತ್ತು.
ಅಪ್ಪ ಪೇಪರ್ ಓದುತ್ತಾ ಕೂತಿದ್ದರು. ಓರೆಗಣ್ಣಿನಲ್ಲಿ ನೋಡಿದರು. ಮಾತಾಡಲಿಲ್ಲ. ನಿಧಾನವಾಗಿ ಎದ್ದುಬಂದು ನನ್ನನ್ನು ಎತ್ತಿ ಕಾಲಮೇಲೆ ಕೂರಿಸಿಕೊಂಡರು. ತಲೆಯನ್ನು ಎದೆಗೊತ್ತಿಕೊಂಡು ಕೇಳಿದರು: "ಹೇಳು ಏನಾಯ್ತು?"
ಪಕ್ಕದ ಮನೆಯ ಪ್ರದ್ಯುಮ್ನ ಪಟ್ಟಣದಲ್ಲಿ ಓದುತ್ತಿದ್ದ. ನನ್ನಷ್ಟೇ ವಯಸ್ಸು, ನನ್ನದೇ ಕ್ಲಾಸು. ರಜೆಗೆ ಮನೆಗೆ ಬಂದಿದ್ದ. ಸಂಜೆ ನಮ್ಮ ಮನೆ ಅಂಗಳಕ್ಕೆ ಬಂದು 'ಆಟ ಆಡೋಣ ಬರ್ತೀಯೇನೋ' ಎಂದು ಕೇಳಿದ. ಅಪ್ಪನಿಗೂ ಅವನು ಬಂದಿದ್ದು ಖುಷಿ. ಇಬ್ಬರನ್ನೂ ಅಂಗಡಿಗೆ ಕರೆದುಕೊಂಡು ಹೋಗಿ ಒಂದೊಂದು ಐಸ್‌ಕ್ರೀಂ ಕೊಡಿಸಿದ್ದರು; ಆಟ ಆಡಿಕೊಳ್ಳಲು ನಮ್ಮನ್ನು ಅಲ್ಲೇ ಬಿಟ್ಟು ಮನೆಗೆ ಬಂದಿದ್ದರು.
'ಹೇಳು ಏನಾಯ್ತು' ಮತ್ತೆ ಕೇಳಿದರು ಅಪ್ಪ.
'ಅವನು ಐಸ್ ಕ್ರೀಂ ಬೇಗ ಬೇಗ ತಿಂದ'.
'ಆಮೇಲೆ?'
'ನನ್ನ ಹತ್ತಿರ ಇದ್ದ ಐಸ್‌ಕ್ರೀಂನಲ್ಲಿ ಪಾಲು ಕೇಳಿದ; ಕೊಡಲ್ಲ ಅಂದಿದ್ದಕ್ಕೆ ಜಗಳಕ್ಕೇ ಬಂದ'.
'ನೀನು ಏನು ಮಾಡಿದೆ?'
'ಉಳಿದಿದ್ದ ಐಸ್ ಕ್ರೀಂ ಬೇಗ ಬೇಗ ತಿಂದು ಅವನ ಹತ್ರ ಠೂ ಬಿಟ್ಟು ಓಡಿ ಬಂದೆ'.
ಅಪ್ಪ ಸಿಟ್ಟಿನಿಂದ ನನ್ನ ಆಚೆ ತಳ್ಳಬಹುದು ಅನ್ನಿಸಿ ಅವರ ಮುಖ ನೋಡಿದೆ.
'ಮಗೂ' ನನ್ನ ತಲೆಯನ್ನು ಎದೆಗವಚಿಕೊಂಡು ಅವರು ವ್ಯಥೆಯಿಂದ ಹೇಳಿದರು: "ಕಂದಾ, ನಿನಗೆ ಇನ್ನೊಂದು ಐಸ್ ಕ್ರೀಂ ಕೊಡಿಸುವ ಶಕ್ತಿಯನ್ನು ದೇವರು ನನಗೆ ಕೊಟ್ಟಿದ್ದಾನೆ. ನಿನಗೆ ಬೇಕು ಅನ್ನಿಸಿದಾಗ ಕೊಡಿಸಬಹುದು. ಆದರೆ ನಾನು ಏನೇ ಮಾಡಿದರೂ, ಎಷ್ಟೇ ದುಡ್ಡು ಖರ್ಚು ಮಾಡಿದರೂ ನಿನಗೆ ಒಬ್ಬ ಸ್ನೇಹಿತನನ್ನು ಕೊಡಿಸೋಕೆ ಆಗೋದಿಲ್ಲವಪ್ಪಾ"
   ಮೂವತ್ತು ವರ್ಷಕ್ಕೂ ಮೇಲಾಯಿತು ಈ ಘಟನೆ ನಡೆದು. ಅಪ್ಪ ಇವತ್ತು ಇಲ್ಲ. ಶುಗರ್ ಸಮಸ್ಯೆಯಿಂದ ನಾನು ಈಗ ಐಸ್ ಕ್ರೀಂ ತಿನ್ನುವಂತೆಯೂ ಇಲ್ಲ. ಆದರೆ ಅಪ್ಪನ ಮಾತಿನಿಂದಾಗಿ ಮತ್ತೆ ಗಳಿಸಿದ ಪ್ರದ್ಯುಮ್ನನ ಸ್ನೇಹ ಐಸ್ ಕ್ರೀಂ ಗಿಂತ ಸಿಹಿಯಾಗಿ ಇವತ್ತಿಗೂ ಉಳಿದುಕೊಂಡು ಬಂದಿದೆ.

- ಎ.ವಿ.ಎಲ್. ರಾವ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.