ಖಾಲಿ ಕೋಣೆ ಕಥೆ ಹೇಳಿತು...
ಎರಡನೇ ಮಹಡಿಯಲ್ಲಿ ಸಿಂಗಲ್ ರೂಂ ಖಾಲಿಯಿದೆ. ಹೋಗಿ ನೋಡಿ, ಇಷ್ಟವಾದರೆ ನೀವು...

ಎರಡನೇ ಮಹಡಿಯಲ್ಲಿ ಸಿಂಗಲ್ ರೂಂ ಖಾಲಿಯಿದೆ. ಹೋಗಿ ನೋಡಿ, ಇಷ್ಟವಾದರೆ ನೀವು ಅಲ್ಲಿಗೆ ಶಿಫ್ಟ್ ಆಗಬಹುದು ಎಂದು ನಮ್ಮ ಪಿಜಿಯ ಆಂಟಿ ಹೇಳಿದ್ದರಿಂದ ರೂಂ ನೋಡಲು ಹೋಗಿದ್ದೆ. ಚಿಕ್ಕ ರೂಂ ಆಗಿದ್ದರೂ, ಸಾಕಷ್ಟು ಪ್ರೈವೆಸಿ ಅಲ್ಲಿರುತ್ತೆ ಎಂಬ ಒಂದೇ ಒಂದು ಕಾರಣಕ್ಕೆ ಸಿಂಗಲ್ ರೂಂ ಆಯ್ಕೆ ಮಾಡಿದ್ದೆ. ಆ ರೂಂನಲ್ಲಿದ್ದ ಹುಡುಗಿ ಆಗಷ್ಟೇ ರೂಂ ಖಾಲಿ ಮಾಡಿ ಹೋಗಿದ್ದಳು. ಹೊರಡುವ ವೇಳೆ ಅವಳು ಬಿಸಾಡಿದ ವೇಸ್ಟ್ ಪೇಪರ್‌ಗಳು ಕಸದ ಬುಟ್ಟಿಯಲ್ಲಿ ತುಂಬಿ ತುಳುಕುತ್ತಿತ್ತು. ಬೆಡ್ ಸ್ಪ್ರೆಡ್ ಇಲ್ಲದೇ ಇರುವ ಬೆಡ್, ಅದರ ಮೇಲೆ ಕವರ್ ಇಲ್ಲದ ತಲೆದಿಂಬು, ಪಕ್ಕದಲ್ಲೇ ಇಟ್ಟಿರುವ ಕುರ್ಚಿ... ಬಾಕಿ ಎಲ್ಲ ಖಾಲಿ ಖಾಲಿ. ಅಷ್ಟೊತ್ತಿಗೆ ಕೆಲಸದಾಕೆ ಬಂದು ರೂಂ ಕ್ಲೀನ್ ಮಾಡಿ ಹೊರಟು ಹೋಗಿದ್ದಳು. ಆದರೂ ಆಗ ತಾನೇ ಪ್ಯಾಕಿಂಗ್ ಮಾಡಿ ಹೊರಡುವ ಹೊತ್ತಿಗೆ ಆಕೆ ಹಾಕಿಕೊಂಡಿದ್ದ 'ಎಂಗೇಜ್' ಪರ್‌ಫ್ಯೂಮ್‌ನ ಸುಗಂಧ ಇನ್ನೂ ಹಾಗೇ ಉಳಿದುಕೊಂಡಿತ್ತು. ಕಿಟಿಕಿ ಬಾಗಿಲು ತೆರೆದು ನೋಡಿದೆ, ದೂರದಲ್ಲಿ ಇಸ್ಕಾನ್ ಗೋಪುರ ಕಾಣಿಸುತ್ತಿತ್ತು. ಏಕಾಂತದಲ್ಲಿರಲು ಬೆಸ್ಟ್ ರೂಂ ಇದೇ ಎಂದು ಮನಸ್ಸಲ್ಲೇ ನಿರ್ಧರಿಸಿದೆ.
ಗಿರ ಗಿರ ಸದ್ದು ಮಾಡುತ್ತಾ ಫ್ಯಾನ್ ತಿರುಗುತ್ತಲೇ ಇತ್ತು. ಅರೇ, ಗೋಡೆಯಲ್ಲಿ ತೂಗು ಹಾಕಿದ ಕ್ಯಾಲೆಂಡರ್ ಅನ್ನು ಆಕೆ ಬಿಟ್ಟು ಹೋಗಿದ್ದಾಳೆ! ಅದರಲ್ಲಿ ಕೆಲವೊಂದು ತಾರೀಖುಗಳ ಮೇಲೆ ಮಾರ್ಕ್ ಮಾಡಲಾಗಿದೆ. ಸಾಮಾನ್ಯವಾಗಿ ಹೆಣ್ಣು ಮಕ್ಕಳು ದಿನಾಂಕಗಳನ್ನು ನೆನಪಿಟ್ಟುಕೊಳ್ಳುವುದರಲ್ಲಿ ನಿಸ್ಸೀಮರು. ಆದರೂ ಪತ್ರಕರ್ತೆಯ ಸಹಜ ಕುತೂಹಲದಿಂದ ಆ ಕ್ಯಾಲೆಂಡರ್‌ನಲ್ಲಿದ್ದ ತಾರೀಖುಗಳನ್ನು ಸೂಕ್ಷ್ಮವಾಗಿ ಗಮನಿಸಿದೆ. ಪ್ರತಿಯೊಂದು ತಿಂಗಳಲ್ಲಿಯೂ ಕೆಲವೊಂದು ತಾರೀಖು ಮೇಲೆ ರೌಂಡ್ ಹಾಕಲಾಗಿತ್ತು. ಅದು ಆಕೆಯ ಚಂಪ್ಸ್ ದಿನಗಳೇ? ಅಥವಾ ಕೆಲಸದ ಡೆಡ್‌ಲೈನ್ ಆಗಿರಬಹುದಾ? ಮನಸ್ಸಲ್ಲಿ ಯೋಚನೆಗಳು ಗಿರಕಿ ಹೊಡೆಯುತ್ತಿದ್ದವು.
ಆವಾಗಲೇ ಡಸ್ಟ್ ಬಿನ್‌ನಲ್ಲಿರುವ ಗ್ರೀಟಿಂಗ್ ಕಾರ್ಡ್ ಕಣ್ಣಿಗೆ ಬಿತ್ತು. ತೆರೆದು ನೋಡಿದೆ. ಟು ಮೈ ಸ್ವೀಟ್ ಹಾರ್ಟ್ ಎಂದು ಬರೆದು ಸಹಿ ಮಾಡಿರುವ ಬರ್ತ್ ಡೇ ಕಾರ್ಡ್ ಅದು. ಅದರ ಜತೆಗೆ ಕಸದ ಬುಟ್ಟಿಯಲ್ಲಿ ಹರಿದು ಹಾಕಿದ ಕಾಗದಗಳ ಜತೆ ಫೋಟೋದ ಚೂರುಗಳು... ಗ್ರೀಟಿಂಗ್ ಕಾರ್ಡ್ ಕೈಗೆತ್ತಿ ಓದಿ, ನಂತರ ಅದನ್ನು ಅಲ್ಲೇ ಬಿಸಾಕಿದೆ. ಆ ಹುಡ್ಗಿಗೆ ಮದ್ವೆ ಅಂತೆ, ಅದಕ್ಕೇ ಬಿಟ್ಟು ಹೋದ್ಳು ಎಂದು ಹೇಳಿ ಕೆಲಸದಾಕೆ ಕಸದ ಬುಟ್ಟಿಯನ್ನು ಎತ್ತಿ ಕೊಂಡು ಹೋದ್ಳು.
ನನ್ನ ಸಾಮಾನುಗಳನ್ನೆಲ್ಲಾ ಹೊಸ ರೂಂಗೆ ಶಿಫ್ಟ್ ಮಾಡಿದ ನಂತರವೂ, ಆ ಕ್ಯಾಲೆಂಡರ್, ಗ್ರೀಟಿಂಗ್ ಕಾರ್ಡ್, ಅದರಲ್ಲಿನ ಬರಹ ನನ್ನನ್ನು ಕಾಡುತ್ತಲೇ ಇತ್ತು. ಮದುವೆ ಎಂದು ಪಿಜಿ ಖಾಲಿ ಮಾಡಿ ಮನೆಗೆ ಹೋಗುವಾಗ ಆಕೆ ಅದೆಷ್ಟೋ ನೆನಪುಗಳನ್ನು ಇಲ್ಲಿ ಬಿಸಾಕಿ ಹೋಗಿದ್ದಾಳೆ!.
ಈ ಕೋಣೆಯಲ್ಲಿ ಆಕೆ ಸುಮ್ಮನೆ ನಕ್ಕಿರಬಹುದು, ಯಾರಿಗೂ ಕೇಳಿಸದಂತೆ ಬಿಕ್ಕಿ ಅತ್ತಿರಬಹುದು. ಆಕೆ ಈಗ ತಾನೆ ಹರಿದು ಬಿಸಾಕಿದ ಕಾಗದದ ಚೂರುಗಳಲ್ಲಿಯೂ ಅದೆಷ್ಟು ನೋವುಗಳಿದ್ದಿರಬಹುದು? ಆಕೆಯ ನೋವು ನಲಿವುಗಳಿಗೆ ಮೂಕ ಸಾಕ್ಷಿಯಾಗಿದ್ದದ್ದು ಈ ನಾಲ್ಕು ಗೋಡೆಗಳು ಮಾತ್ರ. ಹೀಗೆ ಯೋಚಿಸುತ್ತಾ ಸಮಯ ಕಳೆದದ್ದೇ ಗೊತ್ತಾಗಿಲ್ಲ. ಕೊನೆಗೆ, ಆಕೆಯ ಬಗ್ಗೆ ನಾನ್ಯಾಕೆ ಯೋಚಿಸಬೇಕು? ಎಂದು ಗೊಣಗುತ್ತಾ ಏನೋ ಬರೆಯೋಕೆ ಕುಳಿತೆ. ಹರಿದು ಬಿಸಾಡಿದ ಕಾಗದದ ಚೂರುಗಳು ಕಥೆ ಹೇಳುತ್ತಾ ಹೋದವು.
- ರಶ್ಮಿ ಕಾಸರಗೋಡು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


