ಮಕರಂದ/ದೋಣಿ

ನನ್ನೆದೆಯ ಬೆಳಕೇ ನೀ ಎಲ್ಲಿ ಹೋದೆ?

ಮನದಂಗಳದಲಿ ಬಿಕರಿಯಾಗುತ್ತಿದ್ದ ಕನಸುಗಳು, ಕಲ್ಪನೆಗಳು, ಪಿಸುಮಾತುಗಳು ನೀ ಇಲ್ಲದೆ ಖಾಲಿಯಾಗುವ ಸೂಚನೆಯನ್ನು ನೀಡುತ್ತಿವೆ...

ನನ್ನೆದೆಯ ಬೆಳಕೇ ನೀ ಎಲ್ಲಿ ಹೋದೆ?
Published On :

ಮನದಂಗಳದಲಿ ಬಿಕರಿಯಾಗುತ್ತಿದ್ದ ಕನಸುಗಳು, ಕಲ್ಪನೆಗಳು, ಪಿಸುಮಾತುಗಳು ನೀ ಇಲ್ಲದೆ ಖಾಲಿಯಾಗುವ ಸೂಚನೆಯನ್ನು ನೀಡುತ್ತಿವೆ. ವಿರಹದ ಕಡುಗಪ್ಪು ಮೋಡದ ಕಗ್ಗತ್ತಲ ಛಾಯೆ ಮನದ ಮನೆಯ ತುಂಬೆಲ್ಲಾ ತುಂಬಿದೆ. ನಿನ್ನ ಹೆಸರಿನ ದೀಪ ನನ್ನ ಬಾಳ ತುಂಬ ದೀಪಾವಳಿಯಂತೆ ಬೆಳಕ ಚೆಲ್ಲುತ್ತದೆ ಎಂದು ಭಾವಿಸಿದ್ದ ನಾನು ಅದು ಸುಳ್ಳು ಎಂದು ಒಪ್ಪಿಕೊಳ್ಳುವ ಸ್ಥಿತಿಯಲೇ ಇಲ್ಲ. ನೀನು ಬಿಟ್ಟು ಹೋದ ನೆನ್ನೆಗಳ ಬೆಳದಿಂಗಳ ತಂಪು ಇನ್ನೂ ಬದುಕುವ, ಕಾಯುವ ಆಸೆಯ ಕಮರಿಸದೆ ಉಳಿಸಿದೆ.
ದೀಪಾ, ನನ್ನ ಬಾಳ ದೀಪ. ನಕ್ಷತ್ರಗಳ ದೀವಿಗೆಯ ಜೊತೆಯಲಿ ಮೂರುವರೆ ವರ್ಷಗಳ ಶುಭ್ರ ನಗುವಿನಲಿ ತೇಲಿಸಿದ್ದ ನಂದಾದೀಪ. ಆಕಾಶಕೆ ಏಣಿಯ ಹಾಕಲು ಸಾಧ್ಯವಿಲ್ಲ ಎಂದು ಗೊತ್ತಿದ್ದರೂ ಹಾರುವುದು ಕಲಿಸುವೆ. ಗುರಿಯನ್ನು ಮೆಟ್ಟಿ ನಿಲ್ಲಿಸುವೆ ಎಂದೆಲ್ಲಾ ನನ್ನ ಮುಂದಿನ ದಿನಗಳಿಗೆ ಮುನ್ನುಡಿ ಬರೆದಿದ್ದ ಬೆಳಕೇ...! ಎಲ್ಲಿರುವೆ...? ಏಕೆ ನನ್ನಿಂದ ದೂರವಾಗಿರುವೆ...? ನಿನ್ನ ಹುಡುಕಾಟದಲಿ ನನ್ನನ್ನು ನಾನು ಕಳೆದುಕೊಳ್ಳುತಿರುವೆ, ಕುಸಿಯುತಿರುವೆ.
ಏನು ಮಾಡುವುದು? ಯಾರ ಬಳಿ ನಿನ್ನ ತಲುಪುವ ದಾರಿಯ ಕೇಳುವುದು ನೀನೇ ಹೇಳು? ನಮ್ಮಿಬ್ಬರ ಸಂಬಂಧದ ಎಲ್ಲ ತಂತುಗಳನ್ನು ಕಡಿದು ಹಾಕಿರುವೆ. ಮೊಬೈಲ್, ಫೇಸ್‌ಬುಕ್, ಮೇಲ್ ಯಾವುದಕ್ಕೂ ನೀನು ಸಿಗುತ್ತಿಲ್ಲ. ನೀನು ನನ್ನನ್ನು ತಲುಪಲು ಪ್ರಯತ್ನಿಸದ ಕಾರಣವೂ ನನಗೆ ತಿಳಿದಿಲ್ಲ. ನಿನ್ನ ಪ್ರೀತಿಯ ಪ್ರಸ್ತಾಪದ ದಿನವೇ ಹೇಳಿದ್ದೆ ನೀನು ಕೈಗೆಟುಕದ ತುತ್ತೆಂದು. ನಾಳೆ ನೋಯುವ ಬದಲು ಇಂದಿನಿಂದಲೇ ಸ್ನೇಹಿತರಾಗಿ ಇದ್ದು ಬಿಡೋಣ ಎಂದು... ನೀನು ಕೇಳಲೂ ಇಲ್ಲ. ಮೊಳಕೆಯಾಗಿದ್ದ ಪ್ರೀತಿ ಹೆಮ್ಮರವಾಗಿರುವಾಗ ಬಿರುಗಾಳಿಯ ಬೀಸುತಿರುವೆಯಾ...? ನನ್ನನ್ನು ಒಂಟಿ ಮಾಡಿ ನೀನು ಎಲ್ಲಿ ಹೋಗಿರುವೆ...? ಎಂದಿಗೆ ಬಂದು ಸೇರುವ ಇರಾದೆ ಹೊಂದಿರುವೆ ಬಾಳ ಬೆಳಕೇ? ಏನಾಯಿತು ನಿನ್ನ ಹೆತ್ತವರ ಒಪ್ಪಿಸುವ ಜವಾಬ್ದಾರಿ ನನ್ನದು ಎಂದಿದ್ದ ಭರವಸೆಯ ಗೋಪುರಕ್ಕೆ..? ನೀನು ಇಚ್ಛೆ ಪಟ್ಟಂತೆ ಒಳ್ಳೆಯ ಕೆಲಸ. ಸಂಬಳ, ಮನೆ, ಕಾರು... ಎಲ್ಲವನ್ನೂ ಸಂಪಾದಿಸಿರುವೆ.
ನಿನಗಾಗಿ ಕಾದಿರುವ
ದೇವದಾಸ

- ಜಮುನಾ ರಾಣಿ ಎಚ್.ಎಸ್.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.