ನಿಮ್ಮ ನಗು ಚಿರಂತನವಾಗಲಿ...
ನನ್ನೊಟ್ಟಿಗೆ ನಿನ್ನ ಬೆಸುಗೆ ಇಷ್ಟೊಂದು ಗಾಢವಾಗಬಹುದೆಂದು ನಾನೆಂದೂ ನಿರೀಕ್ಷಿಸಿರಲಿಲ್ಲ.

ನನ್ನೊಟ್ಟಿಗೆ ನಿನ್ನ ಬೆಸುಗೆ ಇಷ್ಟೊಂದು ಗಾಢವಾಗಬಹುದೆಂದು ನಾನೆಂದೂ ನಿರೀಕ್ಷಿಸಿರಲಿಲ್ಲ. ನನ್ನೆದುರೇ ಹುಟ್ಟಿ, ಬೆಳೆದ ನೀನು ಈ ಪರಿಯಾಗಿ ನನ್ನಾವರಿಸಬಹುದೆಂದು ಕೂಡಾ ಎಣಿಸಿರಲಿಲ್ಲ. ನನ್ನ ಅಸ್ತಿತ್ವವೇ ನಿನ್ನ ಇರುವಿಕೆಯಲ್ಲಿ, ಇದೆಂಥಾ ಸೋಜಿಗವಲ್ಲವೇ? ನಿನ್ನ ಪ್ರತಿಯೊಂದು ಬೆಳವಣಿಗೆಯೂ ನನಗದೆಷ್ಟು ಸಂತಸ, ಆಹ್ಲಾದ ನೀಡುತ್ತದೆ ಯಾಕೆ? ದಿನದಲ್ಲಿ ನಾಲ್ಕಾರು ಬಾರಿ ನಿನ್ನ ಇಂಚಿಂಚಿನ್ನೂ ನಿರುಕಿಸಿ ಪುಳಕಗೊಳ್ಳುವೆ. ದುಗುಡಗೊಂಡ ಮನಸಿಗೆ ನಿನ್ನದೊಂದು ನೋಟ ಸಾಕು ಮನ ನಸುನಗಲು.
ಒಮ್ಮೊಮ್ಮೆ ಮನಸ್ಸು ಅಸೂಯೆಯಿಂದ ನಿನ್ನ ಜೊತೆ ಸ್ಪರ್ಧೆಗಿಳಿಯುತ್ತದೆ. ಕನ್ನಡಿ ಮುಂದೆ ಹಲವಾರು ಪ್ರಸಾದನಗಳ, ಬಣ್ಣಬಣ್ಣದ ಬಟ್ಟೆಗಳೊಂದಿಗೆ ನನ್ನನ್ನು ಯಾವ ಕೋನದಿಂದ ಅಳೆದರೂ ನಾ ನಿನ್ನ ಮೀರಿಸಲಾರೆನೇ? ನಿನ್ನ ಚೆಲುವು ಅದೆಷ್ಟು ಸ್ನಿಗ್ಧ, ಅದೆಷ್ಟು ಸತ್ಯ! ನಿನಗೆ ನೀನೇ ಸಾಟಿ. ನಿನ್ನ ಬಾಯಾರಿಕೆ ತಣಿಸಿ, ನಿನ್ನ ಹೊಟ್ಟೆ ತುಂಬಿಸಿ ನೀ ಬೆಳೆಯುವುದನ್ನು ಗಮನಿಸುವುದೇ ನನಗೊಂದು ಹಬ್ಬ. ತಾಯಿ ಹೃದಯದಂತೆಯೇ ಮನಸ್ಸು ಸಂಭ್ರಮಿಸುತ್ತದೆ. ನಿನಗೆ ನಾನಿತ್ತ ಪ್ರೀತಿಯ ದುಪ್ಪಟ್ಟು ತೃಪ್ತಿ, ಸಂತೋಷ ನೀ ನೀಡುವೆ ನನಗೆ ಅನುದಿನ.
ನಿನ್ನನಗಲಿ ಎರಡು ದಿನವಾದರೆ ಸಾಕು ಮನ ಕಳವಳಗೊಳ್ಳುತ್ತದೆ. ಮರಳಿ ನಿನ್ನ ನೋಡಿದಾಗಲೇ ಸಮಾಧಾನ ಮನಸ್ಸಿಗೆ ನಿನ್ನ ಘಾಸಿಗೊಳಿಸಿದರೆಂದು ಅದೆಷ್ಟು ಬಾರಿ ನಾ ಕೆಲಸದಾಳುಗಳ ಜೊತೆ ಕಾದಾಡಿಲ್ಲ? ಆಗೆಲ್ಲಾ ರೋಷದಿಂದ ತಪ್ತಗೊಂಡ ಮನಸ್ಸಿಗೆ ನಿನ್ನ ಮೋಹಕ ಚೆಲುವಿನದೇ ಸಾಂತ್ವನ. ಎಲ್ಲೋ ಸ್ವಲ್ಪ ಗಾಯವಾದರೆ ನೀ ಸಾಯಲಾರೆ. ಮತ್ತೆ ಚಿಗುರಿ, ಹೂ ಬಿಟ್ಟು, ಕಾಯಾಗಿ, ಹಣ್ಣಾಗಿ ಹೊಸ ಸೃಷ್ಟಿಯೊಂದಿಗೆ ನಿನ್ನ ಬೆರಗುಗೊಳಿಸುವೆ ಎನ್ನುವ ನಿನ್ನ ರೀತಿ ನನ್ನನ್ನು ಬದುಕಿನೆಡೆಗೆ ಅದಮ್ಯ ವಿಶ್ವಾಸದಿಂದ ಮರಳುವಂತೆ ಮಾಡುತ್ತದೆ. ಓ ನನ್ನ ಹೂಗಳೇ ನಿಮ್ಮ ನಗು ಚಿರಂತನವಾಗಲಿ. ನಿಮ್ಮಿಂದ ನನಗೆ ಹೀಗೇ ಸಿಗಲಿ ಸಂತಸ, ತೃಪ್ತಿ.
- ಉಷಾ ಶಶಿಧರ್ ನಿಟ್ಟೂರು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


