ಎಲ್ಲ ದೇಶದೆಲ್ಲೆ ಮೀರಿ...

ಮಾರಿಯೋ ವರ್ಗಾಸ್ ಲೋಸಾ, ಪೆರು- ಸ್ಪೇನ್ ಮೂಲದ ಲೇಖಕ, ರಾಜಕಾರಣಿ, ಪತ್ರಕರ್ತ. ಹುಟ್ಟಿದ್ದು 1936ರಲ್ಲಿ, ಈಗ 77 ವರ್ಷ. 2010ರ ಸಾಹಿತ್ಯ ನೊಬೆಲ್ ಪುರಸ್ಕೃತ. 'ಅಧಿಕಾರ ಹಾಗೂ ಪ್ರತಿರೋಧದ ನೆಲೆಗಳನ್ನು ಸೊಗಸಾಗಿ ಚಿತ್ರಿಸಿದಾತ' ಎಂದು ಸ್ವೀಡಿಶ್ ಅಕಾಡೆಮಿಯಿಂದ ಶ್ಲಾಘನೆ ಪಡೆದ ಈತನ ನೊಬೆಲ್ ಪುರಸ್ಕಾರ ಭಾಷಣದ ಆಯ್ದ ಭಾಗ:
ಕತೆ ಬರೆಯುವುದು ಸುಲಭವಲ್ಲ. ಅದು ಪದಗಳಾಗಿ ಕಾಗದದ ಮೇಲೆ ಮೂಡಿತೆಂದರೆ, ಐಡಿಯಾಗಳು ಹಾಗೂ ಬಿಂಬಗಳು ವಿಫಲವಾಯಿತೆಂದೇ ಅರ್ಥ. ಅದಕ್ಕೆ ಜೀವ ತುಂಬುವುದು ಹೇಗೆ? ಅದೃಷ್ಟವಶಾತ್, ಅನೇಕ ಹಿರಿಯರು ನಮಗೆ ಆ ಕುರಿತು ಹಾದಿ ಹಾಕಿಕೊಟ್ಟಿದ್ದಾರೆ. ಪ್ರತಿಭೆ ಅಂದರೆ ಶಿಸ್ತು ಹಾಗೂ ತಾಳ್ಮೆ ಎಂದು ಫ್ಲೂಬರ್ಟ್ ತಿಳಿಸಿದ. ಫಾಕ್ನರ್, ಸ್ವರೂಪವು ವಸ್ತುವನ್ನು ಮೇಲೆತ್ತುತ್ತದೆ ಅಥವಾ ವಿಫಲಗೊಳಿಸುತ್ತದೆ ಎಂದ. ಟಾಲ್‌ಸ್ಟಾಯ್, ಕಾನ್ರಾಡ್, ಡಿಕನ್ಸ್, ಬಾಲ್ಜಾಕ್ ಮುಂತಾದವರು ಸಾಧ್ಯತೆ ಹಾಗೂ ಮಹತ್ವಾಕಾಂಕ್ಷೆಗಳು ಕಾದಂಬರಿಯ ಶೈಲಿ ಅಥವಾ ಕಥನರೀತಿಯಷ್ಟೇ ಮುಖ್ಯ ಎಂದರು. ಪದಗಳೆಂದರೆ ಕ್ರಿಯೆಗಳಲ್ಲದೆ ಮತ್ತೇನಲ್ಲ, ಸೂಕ್ತ ಅವಕಾಶ ಸಿಕ್ಕಿದರೆ ಅವು ಭವಿಷ್ಯವನ್ನೇ ಬದಲಾಯಿಸಬಲ್ಲವು ಎಂದವನು ಸಾರ್ತೃ. ಮೌಲ್ಯವನ್ನು ಮರೆತ ಸಾಹಿತ್ಯ ಅಮಾನವೀಯವಾದ್ದು ಎಂದವರು ಕಾಮು ಮತ್ತು ಆರ್ವೆಲ್.
ಸಾಹಿತ್ಯ ಇಲ್ಲದಿದ್ದರೆ, ಕಾಲ್ತುಳಿತಗಳಡಿ ಸಿಲುಕಿದ ನಾವು ಬದುಕಿನ ಸ್ವಾತಂತ್ರ್ಯದ ಪ್ರಾಮುಖ್ಯದ ಬಗ್ಗೆ ಅರಿವೇ ಇಲ್ಲದವರಾಗಿರುತ್ತಿದ್ದೆವು. ಸಾಹಿತ್ಯ ಸೌಂದರ್ಯ ಹಾಗೂ ಸುಖದ ಹೊಳೆಯಲ್ಲಿ ನಮ್ಮನ್ನು ಮುಳುಗಿಸುವುದು ಮಾತ್ರವಲ್ಲ, ಎಲ್ಲ ಬಗೆಯ ತುಳಿತಗಳ ಕುರಿತು ಎಚ್ಚರಿಸುತ್ತದೆ ಎಂದು ಮರೆಯಬಾರದು. ಹೀಗಾಗಿಯೇ, ತೊಟ್ಟಿಲಿನಿಂದ ಚಟ್ಟದವರೆಗೂ ಎಲ್ಲ ಬಗೆಯಲ್ಲಿ ನಮ್ಮನ್ನು ನಿಯಂತ್ರಿಸುವ ಬೇರೆಬೇರೆ ಬಗೆಯ ಕೈಗಳು, ಸ್ವತಂತ್ರ ಬರಹಗಾರರ ಬಗ್ಗೆ ಒಂದು ಕಣ್ಣಿಟ್ಟೇ ಇರುತ್ತವೆ. ಯಾಕೆಂದರೆ ಪುಸ್ತಕಗಳಲ್ಲಿ ಸ್ವತಂತ್ರವಾಗಿ ಹಾರಬಿಟ್ಟ ಕಲ್ಪನೆಗಳು, ಬಿಡುಗಡೆಯನ್ನು ಬಯಸುವ ಓದುಗನಲ್ಲಿ ಯಾವ ರೂಪ ಪಡೆಯಬಹುದೆಂಬುದು ಅವುಗಳಿಗೆ ಗೊತ್ತು.
ಉತ್ತಮ ಸಾಹಿತ್ಯ ವಿಭಿನ್ನ ಜನರ ನಡುವೆ ಸಂಬಂಧ ಬೆಸೆಯುತ್ತದೆ. ಖುಷಿ, ಯಾತನೆ, ಅಚ್ಚರಿಗಳ ಮೂಲಕ ಭಾಷೆಯಾಚೆಗೆ, ನಂಬಿಕೆ, ರೂಢಿ, ಕಾಯಿದೆಗಳಾಚೆಗೆ ನಮ್ಮನ್ನು ಜೋಡಿಸುತ್ತದೆ. ಬೇಜವಾಬ್ದಾರಿ, ಸಿದ್ಧಾಂತ, ಮತ, ಭಾಷೆ, ಮೂರ್ಖತನಗಳಿಂದಾಗಿ ಮಾನವರ ನಡುವೆ ಎದ್ದ ಬೇಲಿಗಳನ್ನು ಒಡೆದುಹಾಕುತ್ತದೆ.
- ಹರೀಶ್ ಕೇರ
harishkera@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


