ಸೀನಿಯರ್ಸ್‌ಗಳ ಸಿಹಿ ನೆನಪು
ನೂರೂರು ಆಲೋಚನೆಗಳು, ದುಗುಡ ದುಮ್ಮಾನಗಳು,...

ನೂರೂರು ಆಲೋಚನೆಗಳು, ದುಗುಡ ದುಮ್ಮಾನಗಳು, ಹೃದಯದಲ್ಲಿ ಮಡುಗಟ್ಟಿ ನಿಂತ ಆತಂಕಗಳು, ಎದೆಯಲ್ಲಿ ತುಂಬಿದ ಭಯ... ಇವೆಲ್ಲದರ ಮಧ್ಯೆ ಬ್ಯಾಗ್ ಹಾಕಿಕೊಂಡು ಕಾಲೇಜ್‌ಗೆ ಬಂದ ಮೊದಲ ದಿನವೇ ಸರ್ ಕ್ಲಾಸ್ ರೂಂಗೆ ಬಂದು ಒಬ್ಬೊಬ್ಬರೇ ತಮ್ಮ ಪರಿಚಯ ಮಾಡಿಕೊಳ್ಳಿ ಅಂದ್ರು. ನಾನು ಬೇರೆ ಫಸ್ಟ್ ಬೆಂಚ್‌ನಲ್ಲಿ ಕುಂತಿದ್ದೆ. ಹೇಗೋ ಕತ್ತಲ್ಲಿ ಇದ್ದ ವೇಲ್ ಗಟ್ಟಿಯಾಗಿ ಹಿಡಿದು ಹೆಸರು ಹೇಳುವುದಕ್ಕೆ ಎದ್ದು ನಿಂತಾಗ ಎಲ್ಲಿಂದಲೋ ಅಶರೀರವಾಣಿಯೊಂದು 'ಎಚ್.ಓ.ಡಿ. ಬಂದ್ರು ಮಗಾ' ಅಂತ ಹೇಳಿದ ಕೂಡಲೇ ನಮ್ಮ ಮುಂದೆ ಇದ್ದ ಸರ್ ಮಾಯ! ಆಮೇಲೆ ಒಂದು ಪೀರಿಯಡ್ ಮುಗಿಸಿಕೊಂಡು ಹೊರಗೆ ಬಂದಾಗಲೇ ಗೊತ್ತಾಗಿದ್ದು ನಮ್ಮ ಕ್ಲಾಸ್‌ಗೆ ಬಂದಿದ್ದು ಸರ್ ಅಲ್ಲ, ನಮ್ಮ ಸೀನಿಯರ್ಸ್ ಅಂತ. ಹೀಗೆ ವರ್ಷಪೂರ್ತಿ ನಮ್ಮ ಜೊತೆ ಕೀಟಲೆ ಚೇಷ್ಟೆ ಮಾಡುತ್ತಲೇ ನಮಗೆ ರಸದೌತಣ ನೀಡುತ್ತಿದ್ದ ಹಿರಿತಲೆಗಳು ಈಗ ತಮ್ಮ ಜವಾಬ್ದಾರಿಯ ಪಟ್ಟ ನಮ್ಮಗಳ ಮುಡಿಗೇರಿಸಿ ಆಗಲೇ ವಿದಾಯ ಹೇಳುತ್ತಿದ್ದಾರೆ. ಇನ್ನು ಮುಂದೆ ನಾವೇ ಸೀನಿಯರ್ಸ್. ಅಲ್ಲ ಅಲ್ಲ ನಾನೇ ಸೀನಿಯರ್! ಈ ಗಮ್ಮತ್ ಇರೋದಾದರೂ ಎಷ್ಟು ದಿನ? ಹೊಸ ನೀರು ಬಂದ ಮೇಲೆ ಹಳೇ ನೀರು ಹೊಗಲೇಬೇಕಲ್ಲ. ಮುಂದಿನ ಇದೇ ಸಮಯದಲ್ಲಿ ನಮಗೂ ನಮ್ಮ ಜೂನಿಯರ್ ಸೆಂಡ್‌ಆಫ್ ನೀಡುತ್ತಿರುತ್ತಾರೆ.
ಮೊದಮೊದಲಿಗೆ ಕಾಲೇಜಿಗೆ ಕಾಲಿಟ್ಟಾಗ ಸೀನಿಯರ್ಸ್ ಅಂದರೆ ಅದೇನೋ ಒಂಥರಾ ಭಯ. ರ್ಯಾಗಿಂಗ್ ಮಾಡುತ್ತಾರಾ? ಏನಾದ್ರೂ ಕೆಲಸ ಮಾಡು ಅಂತಾರ? ಮಾಡಲಿಲ್ಲ ಅಂದರೆ ಪನಿಷ್‌ಮೆಂಟ್ ನೀಡಿ ಎಲ್ಲ್ಲರ ಎದುರಿಗೂ ತಲೆ ತಗ್ಗಿಸುವ ಹಾಗೆ ಮಾಡ್ತಾರಂತೆ... ಅವರ ಮಾತು ಕೇಳದೆ ಹೋದರೆ ನೋಟ್ಸ್ ಕೊಡದೆ ಸತಾಯಿಸಿ ಬಿಟ್ರೆ, ಇಂಥ ಹಲವಾರು ಆಲೋಚನೆಗಳು ತಲೆಯಲ್ಲಿ ಸುತ್ತುತ್ತಿದ್ದವು.
ಆದರೆ, ಅವರು 'ವೆಲ್ ಕಮ್ ಪಾರ್ಟಿ' ಇಟ್ಕೊಂಡು ಒಬ್ಬರಿಗೊಬ್ಬರು ಪರಿಚಯಿಸಿಕೊಂಡಾಗಲೇ ಗೊತ್ತಾಗಿದ್ದು ನಮ್ಮ ಸೀನಿಯರ್ಸ್ ಎಷ್ಟೊಂದು ಒಳ್ಳೆಯವರು ಅಂತ. ಏನಾದರೂ ತಿಳಿಯದೆ ಹೋದ್ರೆ 'ಅಣ್ಣಾ ಇದು ಗೊತ್ತಾಗ್ತಿಲ್ಲ' ಅಂತ ಬಳಿ ಹೋದಾಗ ತೋರುತ್ತಿದ್ದ ಪ್ರೀತಿ ಕಂಡು ಅವರ ಮೇಲೆ ಅಭಿಮಾನ ಇಮ್ಮಡಿಯಾಗಿತ್ತು. ಇವರ ಜೊತೆ ನಾವು ಇಟ್ಟ ಪ್ರತಿಯೊಂದು ಹೆಜ್ಜೆಯಲ್ಲಿಯೂ ಪ್ರೀತಿ, ವಿಶ್ವಾಸ, ಆತ್ಮೀಯತೆ ಇತ್ತು. ಅವರ ಜೊತೆ ನಾವು ಕಳೆದ ಪ್ರತಿ ಕ್ಷಣವನ್ನೂ ಸಖತ್ತಾಗಿ ಎಂಜಾಯ್ ಮಾಡಿದ್ವಿ. ಸೀನಿಯರ್ ಅಂದ್ರೆ ಹೀಗೆ ಇರಬೇಕು ಅನ್ನಿಸುವಷ್ಟು ನಮ್ಮ ಬಗ್ಗೆ ಕಾಳಿಜಿ ತೋರಿಸುತ್ತಿದ್ರು. ಅವರೆಂದೂ ನಾವು ಸೀನಿಯರ್ಸ್ ಎಂದು ಗರ್ವ ಪಡುವುದಾಗಲಿ, ನಮ್ಮ ಮೇಲೆ ಅಧಿಕಾರ ಚಲಾಯಿಸುವುದಾಗಲಿ ಮಾಡಿದವರಲ್ಲ. ಬದಲಾಗಿ ನಮ್ಮನ್ನು ಅವರೊಂದಿಗೆ ಸೇರಿಸಿಕೊಂಡು ಸಂತಸ ಹಂಚಿಕೊಳ್ಳುತ್ತಿದ್ದರು. ಜೊತೆ ಜೊತೆಗೇನೆ ಕ್ಯಾಂಟಿನ್‌ಗೆ ಕರೆದುಕೊಂಡು ಹೋಗುತ್ತಿದ್ದರು. ಇವಾಗ ನಮ್ಮನ್ನು ಬಿಟ್ಟು ಹೋಗುವ ಸಂದರ್ಭದಲ್ಲಿ ಚೆನ್ನಾಗಿ ಓದ್ರಿ, ಡಿಪಾರ್ಟ್‌ಮೆಂಟ್‌ಗೆ ಒಳ್ಳೆ ಹೆಸರು ತಂದುಕೊಡ್ರಿ. ನಿಮ್ಮನ್ನು ನೀವು ಓದಿನಲ್ಲಿ ತೊಡಗಿಸಿಕೊಳ್ಳಿ. ಏನಾದ್ರೂ ಸಾಧನೆ ಮಾಡ್ರಿ... ಎಂದೆಲ್ಲಾ, ಒಡಹುಟ್ಟಿದವರಿಗಿಂತ ಹೆಚ್ಚು ಬುದ್ದಿ ಹೇಳುತ್ತಿದ್ದಾರೆ. ಇನ್ನು ಮೇಲೆ ಅವರ ಸ್ಥಾನ ನಾವು ತುಂಬಲಿದ್ದೀವಿ. ಅವರ ರೀತಿಯಲ್ಲಿಯೇ ನಾವು ಇರಬೇಕು. ಬರುವ ಜೂನಿಯರ್ಸ್‌ಗೆ ವೆಲ್‌ಕಮ್ ಮಾಡಬೇಕು. ಅವರಿಗೆ ಒಳ್ಳೆಯ ಸಲಹೆ ಸೂಚನೆಗಳನ್ನು ನೀಡಬೇಕು. ನಮ್ಮ ಸೀನಿಯರ್ಸ್ ನಮಗೆ ತೋರಿದ ಪ್ರೀತಿಗಿಂತ, ಜಾಸ್ತಿ ಪ್ರೀತಿ, ವಿಶ್ವಾಸ ತೋರಿಸಬೇಕು. ನಮ್ಮ ಸೀನಿಯರ್ಸ್‌ಗಳನ್ನು ಮಿಸ್ ಮಾಡಿಕೊಳ್ಳುತ್ತಿದ್ದೀವಿ. ಆದರೆ ಒಂದು ವರ್ಷನಾದ್ರೂ ಅವರ ಜೊತೆ ಕಾಲ ಕಳೆದೆವು ಅನ್ನೋದು ಮಾತ್ರ ನಮ್ಮ ಪಾಲಿಗಿರುವ ಸಂತೋಷದ ವಿಷಯ.
-ಮಧುಮತಿ ಬಿ.ಎಸ್.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


