ನನ್ನ ಕಂಗಳು ನಿನ್ನನ್ನೇ ಹುಡುಕುತ್ತಿವೆ...
ಒಲವಿನ ಇನಿ,
ನಿನ್ನ ಮೌನಕ್ಕೆ ಶರಣಾಗಿ ಹೋದವನು ನಾನು. ನಿನ್ನ ದಾರಿ ನಿನಗೆ ಇರಲಿ ಅಂತ ಮೌನದಲ್ಲೆ ಹೇಳಿ ಹೋದವಳು ನೀನು. ಹೇಳಿ ಹೋಗು ಕಾರಣ ಅಂತ ಕೇಳಲು ನನ್ನೊಳಗೊಂದಿಷ್ಟು ಜೀವಂತಿಕೆ ಉಳಿಸದೇ ಹೋದೆ ನೀನು. ಯಾವತ್ತಿಗೂ, ನೀನು ನನ್ನವಳೇ. ನೀ ದೂರ ಹೋಗಿದ್ದಕ್ಕೆ ಕಾರಣ ಕೇಳಿ ತಿಳಿದುಕೊಂಡು ಏನಾಗಬೇಕಿದೆ ಬಿಡು. ನೆನಪಿನಂಗಳದಲ್ಲಿ ಈ ಬದುಕು ಸಾಗುತ್ತಿದೆ. ನೋವಿನ ಹೂಗಳು ವರ್ತಮಾನದಲ್ಲಿ ನಗುತ್ತಿವೆ.
ಪ್ರೀತಿಸುವುದನ್ನು ಕಲಿಸಿದವಳು, ಮರೆಯುವುದನ್ನು ಕಲಿಸಲು ಯಾಕೆ ಮರೆತುಬಿಟ್ಟೆ? ಪ್ರೀತಿಯಲ್ಲಿ ಸೋಲು ಸದಾ ನನ್ನನ್ನು ತನ್ನ ಎದುರಿಗೆ ಕೂರಿಸಿಕೊಂಡು ಸಾವಿರ ಪ್ರಶ್ನೆಗಳನ್ನೆಸೆಯುತ್ತದೆ. ಅವೆಲ್ಲಾ ನಿನ್ನನ್ನು ಅಪರಾಧಿಯಾಗಿಸುತ್ತಾ ನನ್ನನ್ನು ನಿಸ್ಸಹಾಯಕ ತ್ಯಾಗಮಯಿಯಾಗಿಸುತ್ತಾ ಸಂತೈಸುತ್ತವೆ. ಆಗೆಲ್ಲಾ ನಿನ್ನ ಗೈರು ಮತ್ತಷ್ಟು ದಟ್ಟವಾಗಿ ಕಾಡುತ್ತದೆ. ನೋವು ಹೆಪ್ಪುಗಟ್ಟುತ್ತದೆ. ನೋವು ಹೆಪ್ಪುಗಟ್ಟಿದಂತೆಲ್ಲಾ ಹೃದಯ ಮಾತಾಡುತ್ತದೆ. ಅವಳ ಅನಿವಾರ್ಯತೆಗಳು ಏನೇನಿದ್ದವೋ, ಕದಲದ ಅವಳ ಮೌನದ ಕಡಲಿನೊಳಗೆಂಥಾ ನೋವಿತ್ತೋ ಬಲ್ಲವರಾರು? ಅಂಥ ಮೃದು ಹೃದಯದಲ್ಲಿ ಮೋಸದ ಕಠಿಣತೆಯನ್ನು ಸುಮ್ಮನೆ ಹುಡುಕಬೇಡ. ಕಳೆದುಕೊಂಡಿದ್ದಕ್ಕೆ ಹತಾಶೆ ಕಾಳ್ಗಿಚ್ಚು ನಿನ್ನ ವಿವೇಕ ನುಂಗಿ ಹಾಕಿದೆ. ಪ್ರೀತಿಗೆ ದೇಹದ ಹಂಗಿಲ್ಲ. ಅವಳು ಕಟ್ಟಿಕೊಟ್ಟ ಕನಸುಗಳು ಸಾವಿರಾರಿವೆ. ಒಂದೊಂದೇ ಕನಸುಗಳನ್ನು ನನಸು ಮಾಡಿಕೊಳ್ಳುತ್ತಾ ಹೋಗು. ಕೊನೆಯ ಕನಸಿನ ಸನ್ನಿಧಿಯಲ್ಲಿ ಅವಳೇ ನಿಂಗಾಗಿ ಕಾಯುತ್ತಾ ನಿಂತಿರುತ್ತಾಳೆ ಅನ್ನುತ್ತೆ ಹೃದಯ. ಹೃದಯದ ಮಾತುಗಳಿಗೆಲ್ಲಾ ನನ್ನನ್ನು ಗಾಳಿಯಷ್ಟು ಹಗುರಾಗಿಸುತ್ತದೆ.
ಅವತ್ತು ಅಷ್ಟೊಂದು ಗಾಢವಾಗಿ ಅಪ್ಪಿಕೊಂಡು ಹಣೆಗೊಂದು ಹೂ ಮುತ್ತನಿಟ್ಟು ತಲೆ ನೇವರಿಸಿ ಕಣ್ಣಲ್ಲಿ ಕಣ್ಣಿಟ್ಟು ಕಣ್ಣ ತುಂಬಿಸಿಕೊಂಡು ಮೌನದಲ್ಲೇ ಆತ್ಮ ತಾಕುವಂತೆ ವಿದಾಯ ಹೇಳಿ ಬದುಕನ್ನು ಮತ್ತಾವುದೋ ಹೊಸ ಹಳಿಗೆ ತಂದು ಬಿಟ್ಟಂತೆ ದೂರದಲ್ಲೆಲ್ಲೋ ಕೈ ಚಾಚಿ ಕಾಯುತ್ತೇನೆ ಎಂಬಂತೆ ನನ್ನನ್ನೆ ದಿಟ್ಟಿಸಿ ಈ ಬದುಕಿನಿಂದ ಎದ್ದು ಹೋದವಳು ನೀನು. ನೀ ಮರೆಯಾಗುವ ಮುನ್ನ ನೋಡಿದ ನಿನ್ನ ಕಣ್ಣ ಬಣ್ಣವ ಹೇಗೆ ಮರೆಯಲಿ ಗೆಳತಿ? ಹೃದಯ ಹಿಂಡಿದ ನೋವು ತುಂಬಿ ತುಳುಕಿದ ನಿಸ್ಸಹಾಯಕತೆಯ ಗಾಢವಾದ ಬಣ್ಣ ಅದು. ಸದಾ ದೇವರಿಗೆ ಹಚ್ಚಿಟ್ಟ ನೀಲಾಂಜನದಂತಿದ್ದ ನಿನ್ನ ಮುಖ ಆವತ್ತು ಕಾಳ ಮೇಘಗಳಿಂದ ತುಂಬಿ ಹೋದ ನಭದಂತಿತ್ತು. ನಿನ್ನ ನಿಟ್ಟುಸಿರು ನನ್ನನ್ನಾವರಿಸಿ ಮುಗಿಯದ ದುಃಖವೊಂದನ್ನು ನನ್ನಡೆಗೆ ಹೊತ್ತು ತಂದಿತು. ನೀ ಏನೂ ಹೇಳಲಾರದೇ ನಾ ಏನೂ ಕೇಳಲಾರದೇ ಎಲ್ಲವೂ ಅರ್ಥವಾದಂತೆ ಒಬ್ಬರಿಗೊಬ್ಬರು ಮೌನದ ಉಡುಗೊರೆ ಕೊಟ್ಟುಕೊಂಡು ಬಿಟ್ಟೆವು.
ನಿನ್ನನ್ನು ಕಳೆದುಕೊಂಡ ದುಃಖ ಹಾಗೂ ನಿನ್ನನ್ನು ಮತ್ತೆ ಪಡೆಯುತ್ತೇನೆಂಬ ಹಂಬಲದ ಉಯ್ಯಾಲೆಯ ನಡುವೆ ಬದುಕು ಸಾಗುತ್ತಿದೆ. ಸದಾ ನಿನಗಾಗಿ ನನ್ನ ಕಣ್ಗಳು ಹುಡುಕುತ್ತವೆ. ನಿನಗಾಗಿ ಎದೆಯ ಬಾಗಿಲು ತೆರೆದು ಕಾಯುತ್ತಿದ್ದೇನೆ. ನಿನ್ನ ಪ್ರೀತಿ ನನಗಷ್ಟೇ ಅರ್ಥವಾಗಲು ಸಾಧ್ಯ. ನೀ ಬರುವ ಹಾದಿಯಾವುದೋ ನಾ ಅರಿಯೇ ಆದರೆ ನನ್ನೆಲ್ಲಾ ಹಾದಿಗಳು ನಿನ್ನತ್ತಲೇ ಕೈ ಹಿಡಿದು ನಡೆಸುತ್ತೇನೆ ಗೆಳತಿ. ನಿನಗಾಗಿ ಕಾಯುವುದರಲ್ಲಿ ನನ್ನೊಳಗೊಂದು ಸಾರ್ಥಕತೆಯಿದೆ.
ಬಂದುಬಿಡು ಗೆಳತಿ ಕಣ್ಣ ಹನಿಗಳು ಮಣ್ಣ ಸೇರಿ ಇಂಗಿ ಹೋಗುವ ಮುನ್ನ; ಬದುಕು ಭರವಸೆ ಕಾಲನ ಕ್ರೂರ ಕಾಲುಗಳಡಿಯಲ್ಲಿ ಸಿಕ್ಕು ನಾಶವಾಗುವ ಮುನ್ನ ಬಂದುಬಿಡು ಗೆಳತಿ..... ನನ್ನ ಬದುಕಿಗೆ. ನಿನ್ನವನು....
- ಜೀವ, ಮುಳ್ಳೂರು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

