ಮುಖಪುಸ್ತಕ
ಬದುಕು ಪಾಠ ಕಲಿಸಿದಾಗ ಆ ಪಾಠ ಇನ್ನೊಬ್ಬರಿಗೂ ತಿಳಿಯಲಿ ಅಂತ...

ಸುಮ್ಮನೆ ಬರೆಯಬೇಕೆನ್ನುವ ತುಡಿತವಿದೆ. ಯಾರ ಮೇಲೂ ಹಗೆ ತೀರಿಸಿಕೊಳ್ಳುವುದಕ್ಕಾಗಲೀ, ಅಭಿಮಾನ ಗಿಟ್ಟಿಸಿಕೊಳ್ಳುದಕ್ಕಾಗಲೀ ಬರೆಯೋದಿಲ್ಲ. ಬರೆಯೋದು ಆತ್ಮಸಂತೃಪ್ತಿಗೆ. ಅವಳ ನೆನಪಾದಾಗ ಬರೆಯುತ್ತೇನೆ. ಅವಳೆಂದರೆ ಅಮ್ಮ, ಅಕ್ಕ, ವರದೇವತೆ, ಸ್ನೇಹಿತೆ. ಬದುಕು ಪಾಠ ಕಲಿಸಿದಾಗ ಆ ಪಾಠ ಇನ್ನೊಬ್ಬರಿಗೂ ತಿಳಿಯಲಿ ಅಂತ ಬರೆಯೋದು. ಅದಕ್ಕೆ ಫೇಸ್‌ಬುಕ್ ಒಳ್ಳೆಯ ಮಾರ್ಗ ಅನ್ನೋದೇ ನನ್ನ ಆಶಯ.
ಒಬ್ಬರು ತಮ್ಮ 'ಫೇಸ್‌ಬುಕ್ ಕವಿತ್ವ'ದ ಹಿಂದಿನ ಕಾರಣ ಕೊಟ್ಟರು. ತಂತ್ರಜ್ಞಾನದ ರಾವಣ ಬೊಬ್ಬಿರಿಯುತ್ತ, ಸೊಕ್ಕೇರುತ್ತಾ, ಸಾಹಿತ್ಯ ಕ್ಷೇತ್ರವನ್ನೂ ಅಂತರ್ಜಾಲಾಡಿ ಬಿಟ್ಟಿದ್ದಾನೆ. ಇವನ ಮಹಿಮೆಗೆ ಬಹಳಷ್ಟು ಸಾಹಿತಿಗಳ ಫೇಸೂ ರೂಪಾಂತರಗೊಂಡಿದೆ. ಫೇಸುಬುಕ್ಕು ಆರಂಭವಾಗಿ ಹತ್ತು ವರ್ಷಕಳೆದರೂ, ಅದಕ್ಕೆ ಆಗಾಗ ತುತ್ತುಣಿಸಿ ಬೆಳೆಸಿದ ಕನ್ನಡ ಯುವ ಸಾಹಿತಿಗಳ ಮಾಹಿತಿಯ ಮೂಟೆಯನ್ನು ಜಾಲಾಡುತ್ತಾ ಸಾಗಿದರೆ ಒಂದಿಷ್ಟು ಸ್ವಾರಸ್ಯಗಳು ದಕ್ಕುತ್ತವೆ.
ವರ್ತಕನೊಬ್ಬ ಫೇಸ್‌ಬುಕ್ಕನ್ನು ತನ್ನ ವ್ಯಾಪಾರದ ಮುಖವಾಣಿಯಾಗಿ ಬಳಸಿದರೆ, ಬರಹಗಾರ ಇಲ್ಲಿ ಕವಿತೆ ಕಟ್ಟುತ್ತಾನೆ. ಕತೆಯ ರೊಟ್ಟಿ ತಟ್ಟುತ್ತಾನೆ. ಇನ್ನೂ ಕೆಲವು ಸಾಹಿತಿಗಳೂ ಆಗಾಗ ಫೇಸ್‌ಬುಕ್ಕಿಗೆ ಬಂದು ಅಲ್ಲಿನ ಮಹಾಗೋಡೆಯ ಮೇಲೆ ಅಭಿಪ್ರಾಯದ ಲಕ್ಷ್ಮೀಪಟಾಕಿ ಹಚ್ಚಿ ಡಬ್ಬೆನ್ನಿಸುತ್ತಾರೆ. ಮತ್ತೆ ಕೆಲವರು ಅಡ್ಡಗೋಡೆಯ ಮೇಲೆ ಕವನದ ದೀಪ ಇಟ್ಟು ಅದಕ್ಕೆ ತಮ್ಮ ಅಭಿಮಾನಿಗಳು ಎಣ್ಣೆಹಾಕಲಿ ಅಂತ ಕಾಯುವ ಶಬರಿಯ ಫ್ಯಾಮಿಲಿಯವರು. ಕನ್ನಡದಲ್ಲಿ ಸಾವಿರಾರು ಸಾಹಿತಿಗಳಿದ್ದರೂ ಫೇಸ್‌ಬುಕ್ಕನ್ನು ಒಂದು ಸಾಹಿತ್ಯಮಾರ್ಗವಾಗಿ, ಸಾಹಿತ್ಯ ಪಂಚಾಯ್ತಿಯ ವೇದಿಕೆಯಾಗಿ, ಅಭಿಮಾನಿಗಳೊಂದಿಗೆ ಹರಟೆಗಾಗಿ ಬಳಸುವಲ್ಲಿ ಹಿಂಬದಿ ಬೆಂಚಿನ ವೀರರೇ. ಅದರಲ್ಲೂ ಹಳೇ ತಲೆಮಾರಿನ ಸಾಹಿತಿಗಳು 3ಜಿ, 2ಜಿ ಅಂದ್ರೆ ಈ ಪದಗಳೇ ಪರಿಚಯವಿಲ್ಲ ಎನ್ನುತ್ತಾರೆ. ಈ ಅಂತರ್ಜಾಲದ ಸಹವಾಸನೇ ಬೇಡ, ಅದರಲ್ಲೂ ಫೇಸ್‌ಬುಕ್ಕಿಗೆ ನುಗ್ಗಿದರೆ ನಮ್ಮ ಬರಹದ ಫೇಸಿಗೆ ಮಣ್ಣಾಗಬಹುದೆಂದೂ, ಇದುವರೆಗೆ ನಾವು ಕಾಪಿಟ್ಟುಕೊಂಡ ಸಂಪ್ರದಾಯ ಈ ಫೇಸ್‌ಬುಕ್ಕಿನ ದೆಸೆಯಿಂದ ಚಪ್ಪೆಕಾಫಿಯಂತಾಗಬಹುದೆಂಬ ಅಂಜಿಕೆಯ ಜಿಂಕೆಗಳವರು.
'ನೀವು ಬರೆಯದಿದ್ದರೆ ಕತ್ತೆ ಬಾಲ ಕುದುರೆ ಜುಟ್ಟು. ನಾವಾದ್ರೂ ಫೇಸ್ಬುಕ್ ಸಾಹಿತಿಗಳಾಗಿ ಅಭಿಪ್ರಾಯದ ಬತ್ತಿಯಿಡುತ್ತೇವೆ' ಅಂತ ಹೊಸ ತಲೆಮಾರಿನ ಲೇಖಕರು ತಲೆಕೆರಕೊಳ್ಳದೇ, ಫೇಸ್‌ಬುಕ್ಕಿಗೆ ಅತ್ತೆಮನೆಯಲ್ಲಿ ಅಳಿಯ ಠಿಕಾಣಿ ಹೂಡುವಂತೆ ಕಾಲೂರಿದ್ದಾರೆ. ನಾವು ಹೊಸತಲೆಮಾರೂ ಹೌದು, ಹಳೇ ತಲೆಮಾರೂ ಹೌದು. ನಾವು ಮಿಶ್ರ ತಳಿ ಅಂತ ಕೆಲ ಹಿರಿ-ಕಿರಿ ಸಾಹಿತಿಗಳು ಆಗಾಗ್ಗೆ ವಾದಿಸಿಕೊಳ್ಳುವುದುಂಟು. ಬಿಟ್ಟರೆ ಫೇಸ್‌ಬುಕ್ಕನ್ನು ಅಭಿಪ್ರಾಯದ ಗೂಡಾಗಿ ಬದಲಿಸಲು ತಮ್ಮಿಂದ ಸಾಧ್ಯವಾ ಎನ್ನುವ ಚಿಂತನೆಯ ಹುಳು ಅವರನ್ನು ಕೊರೆಯುವುದೇ ಇಲ್ಲ.
ಫೇಸ್‌ಬುಕ್ಕೇ ಸೊಕ್ಕೇ...
ಹಿರಿಯ ಸಾಹಿತಿಯೊಬ್ಬರಿಗೆ 'ನೀವು ಫೇಸ್‌ಬುಕ್ನಲ್ಲಿದ್ದೀರಾ?' ಅಂತ ಯಾರೋ ಕೇಳಿದಾಗ, 'ಅದೆಲ್ಲಾ ನಂಗೊತ್ತಿಲ್ಲ. ಅದೇನಿದ್ದರೂ ನಿಮ್ಗೆ. ನಮ್ಗೇನಿದ್ರೂ ಪಾಸ್‌ಬುಕ್' ಅಂದಾಗ ಪ್ರಶ್ನೆ ಕೇಳಿದ್ದವನಿಗೆ 'ಫೇಸ್'ಭಂಗವಾಯಿತು. ಕೆಲವು ಫೇಸ್‌ಬುಕ್ಕಿನ ಪುಟಗಳನ್ನು ಅಪಾದಮಸ್ತಕ ಜಾಲಾಡಿದಾಗ ಕೆಲ ಹಿರಿಯ ಸಾಹಿತಿಗಳು ತಮ್ಮ ಹೆಂಡಿರು ಫೇಸ್‌ಬುಕ್‌ಗೆ ಸೇರ್ರೀ ಸೇರ್ರೀ' ಅಂತ ಒತ್ತಾಯಿಸಿದ್ದಕ್ಕೋ ಅಥವಾ ತಾವು ಪ್ರವಾಸ ಮಾಡಿದ್ದನ್ನು ಎಲ್ಲರೂ ನೋಡಿ ಮಂಡೆ ಬಿಸಿಮಾಡಿಕೊಳ್ಳಲಿ ಅಂತ ಕುಟುಂಬಯೋಜನೆಯ ಜಾಹೀರಾತಿನಂತೆ ಚಿತ್ರ ಛಾಪಿಸುವುದ್ದಕ್ಕಷ್ಟೇ ಫೇಸ್‌ಬುಕ್ ಲಾಂಗೂಲ ಹಿಡಕೊಂಡಿದ್ದಾರೆ ಎಂಬುದು ಸಾಬೀತಾಗುತ್ತದೆ. ಬರೆದ ಸಣ್ಣ ಕವಿತೆಯೋ, ಕತೆಯೋ ಅಮೆರಿಕದ ಕನ್ನಡ ಹೃದಯಕ್ಕೂ ತಟ್ಟಬೇಕೆಂದರೆ ಅವರು ತಮ್ಮ ಫೇಸನ್ನು ಫೇಸ್‌ಬುಕ್ ಬರವಣಿಗೆಯತ್ತ ಬೀರಬೇಕು.
ನಾ ನಿಮ್ಮ ಅಭಿಮಾನಿ ಸಾ...
'ನಾ ನಿಮ್ಮ ಅಭಿಮಾನಿ, ನಿಮ್ಮ ಎಲ್ಲಾ ಪುಸ್ತಕ ಓದಿದ್ದೇನೆ. ಆದರೆ ನಿಮ್ಮ ಸಾಹಿತ್ಯದ ಬಗ್ಗೆ ಕೆಲವು ಅನುಮಾನಗಳಿವೆ'- ಹೀಗೆ ಯಾವನೋ ಅಭಿಮಾನಿ ತಮ್ಮ ನೆಚ್ಚಿನ ಸಾಹಿತಿಯ ಫೇಸ್‌ಬುಕ್ ಗೋಡೆಯ ಮೇಲೆ ಪೀಪಿಯೂದಿದ್ದೇ ಬಂತು. ಆ ಸಾಹಿತಿಯಿಂದ ಒಂದು ಧನ್ಯವಾದವೂ ಬರದೇ ಅಭಿಮಾನಿ ಪೆಚ್ಚು. ಕೆಲವು ಸಾಹಿತಿಗಳು ನೋಡದೇ ಹೋದರೂ ಹಾಯಾಗಿ ಉತ್ತರಿಸುತ್ತಾರೆ. ಫೇಸ್‌ಬುಕ್ಕು, ಅಭಿಮಾನಿ ಹಾಗೂ ಸಾಹಿತಿ ಗಳನ್ನು ಮುಖಾಮುಖಿಯಾಗಿಸೋದಿಕ್ಕೂ ಸೇತುವೆ. ಕನ್ನಡದ ಪ್ರಸ್ತುತ ವಿಚಾರಗಳ ಮನನಕ್ಕೆ ಇದೊಂದು ಪಂಚಾಯಿತಿ ಕಟ್ಟೆ. ತಂತ್ರಜ್ಞಾನಕ್ಕೆ ಹೊಂದಿಕೊಂಡರೆ ಕನ್ನಡ ಇನ್ನೂ ಬೆಳೆಯುತ್ತದೆ ಅಂತ ಹೇಳುವವರೇ ತಂತ್ರಜ್ಞಾನದಿಂದ ಮೈಲುದೂರ ಓಡಿದರೆ ಏನು ಗತಿ? ಅಭಿಮಾನಿ ಮಾತ್ರ ಕಾಯುತ್ತಲೇ ಇದ್ದಾನೆ ಫೇಸುಬುಕ್ಕಿನ ಪುಟಗಳ ನಡುವೆ ತನ್ನ ಪ್ರೀತಿಯ ಕವಿಗಾಗಿ.
ಯಾರ್ಯಾರು ಇದ್ದಾರೆ?
ಫೇಸ್‌ಬುಕ್ನಲ್ಲಿ ಕವಿಗಳಿಗಿಂತಲೂ ಜಾಸ್ತಿಯಾಗಿ, ಕವಿಗಳಲ್ಲದವರು ಸೊಗಸಾಗಿ ಕವಿತೆ ಕೆತ್ತುತ್ತಾರೆ. ಚೆಂದದ ಹಾಡು ಉಕ್ಕುವುದು ಅವರಿಂದಲೇ. ಆದರೂ ನಮ್ಮ ಖ್ಯಾತನಾಮ ಸಾಹಿತಿಗಳ ಜಾತಕ ಬಿಚ್ಚಿಡಲೇಬೇಕಲ್ಲ.
- ಪ್ರೇಮ ಕವಿ ಬಿ.ಆರ್. ಲಕ್ಷ್ಮಣರಾಯರಿಗೆ ಫೇಸ್‌ಬುಕ್ ಬರವಣಿಗೆಯಲ್ಲಿ ಪ್ರೇಮವಿದ್ದಂತೆ ತೋರುವುದಿಲ್ಲ. ನೋಡಿದರೆ ನನ್ನ ಫೋಟೋನೇ ನೋಡಲಿ ಅಂತ ಚೆಂದದ ಫೋಟೋ ಅಂಟಿಸಿದ್ದಾರಷ್ಟೇ.
- ಹಾಸ್ಯ ಸಾಹಿತಿ ಎಂ.ಎಸ್. ನರಸಿಂಹಮೂರ್ತಿ ಪತ್ರಿಕೆಗಳಲ್ಲಿ ಮೂಡಿಬಂದ ತಮ್ಮ ಲೇಖನಗಳನ್ನೆಲ್ಲ ಪೇರಿಸಿಟ್ಟಿದ್ದಾರೆ. ಸಿ.ಎನ್. ರಾಮಚಂದ್ರನ್ ಫೇಸ್‌ಬುಕ್ನಲ್ಲಿ ಆಗಾಗ ಇಣುಕುತ್ತಾರೆ.
- ನೇಮಿಚಂದ್ರ, ಭುವನೇಶ್ವರಿ ಹೆಗಡೆಯವರವೆಲ್ಲ ಕನ್ನಡ ಮರೆತು ಇಂಗ್ಲಿಷಿನಲ್ಲಿ ಒಂದೆರಡು ಸಾಲು ಕೆತ್ತಿದ್ದಾರೆ.
- ಕತೆಗಾರ ಜೋಗಿ, ಅಬ್ದುಲ್ ರಶೀದ್, ದೀಪಾ ಹಿರೇಗುತ್ತಿ, ವಸುಧೇಂದ್ರ, ಕಣಾದ ರಾಘವ, ಜಿ.ಎನ್. ಮೋಹನ್, ಶ್ರೀವತ್ಸಜೋಷಿ, ಜಿ.ಎನ್. ಅಶೋಕವರ್ಧನ, ಫೇಸ್‌ಬುಕ್ ಬರಹವನ್ನು ಪೊರೆಯುವುದರಲ್ಲಿ ಅಭಿಪ್ರಾಯ ಮೂಡಿಸುವಲ್ಲಿ, ವಿಮರ್ಶೆ ಮಾಡುವಲ್ಲಿ ಕುದುರೆಯ ವೇಗದಲ್ಲಿದ್ದಾರೆ.
- ಹನಿದೊರೆ ಡುಂಡಿರಾಜ್ ಫೇಸ್‌ಬುಕ್ನಲ್ಲೂ ರಾಜರೇ. 'ಬರೆಯುತ್ತೇನೆ, ಬರೆಯಲೇಬೇಕು... ಅನ್ನಿಸಿದ್ದಕ್ಕೆ
- ಮತ್ತು ಬರೆದದ್ದನ್ನು ನೀವು ಮನ್ನಿಸಿದ್ದಕ್ಕೆ' ಅಂತ ಫೇಸ್‌ಬುಕ್ನಲ್ಲಿ ಬರಕೊಂಡಿರುವ ಡುಂಡಿರಾಜರು ಆಗಾಗ ಕವಿತೆಗಳನ್ನು ಅಂಟಿಸುತ್ತಾರೆ. 'ರಾವಣನ ಹೆಂಡತಿ ಮಂಡೋದರಿ, ಕನ್ನಡ ಪುಸ್ತಕ ಕೊಂಡೋದಿರಿ' ಅಂತ ಕನ್ನಡಾಭಿಮಾನ ಚೆಲ್ಲುವ ಇವರು ಫೇಸ್‌ಬುಕ್ಕಿನ ಓದುಗನಿಗೆ ಹನಿಯ ಬಾಡೂಟ ಕೊಡುವಲ್ಲಿ ಮೊದಲಿಗರು.
- ಪ್ರಸಾದ್ ಶೆಣೈ ಆರ್.ಕೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


