ಬಿಟ್ಟು ಬಾಳುವ ಶಕ್ತಿ ನನಗಿಲ್ಲ

ಏನನ್ನೇ ಆಗಲಿ ನೀನು ನನ್ನೊಂದಿಗೆ ಮುಕ್ತವಾಗಿ ಮಾತನಾಡುವುದಿಲ್ಲ ಎಂದು ಕೇಳುತ್ತಿಯಲ್ಲ, ಹೌದು ಸುನಿ, ನಿಜ. ಏಕೆಂದರೆ ನಿನಗಿರುವಷ್ಟು ಧೈರ್ಯ ನನಗಿಲ್ಲ. ಆ ಧೈರ್ಯ ನನಗಿಲ್ಲವೆಂದೇ ನನ್ನ ಮನಸ್ಸಿನ ಭಾವನೆಗಳನ್ನು ಪದಗಳ ರೂಪದಲ್ಲಿ ವ್ಯಕ್ತಪಡಿಸಿ ನಿನಗೆ ತಿಳಿಸುವ ಅವಕಾಶವನ್ನು ಆ ದೇವರು ನನಗೆ ಕೊಟ್ಟಿದ್ದಾರೆ. ಎಷ್ಟೋ ಸಾರಿ ನೀ ನನಗೆ ಅದೆಷ್ಟೋ ಪ್ರಶ್ನೆಗಳನ್ನು ಕೇಳಿದ್ದಿ. ಆದರೆ ನನ್ನಿಂದ ಬಂದ ಉತ್ತರ ಮಾತ್ರ ಮೌನ.
ನಿನ್ನ ಬಿಟ್ಟು ಬದುಕುವ ಶಕ್ತಿ ನನಗಿಲ್ಲವಾದರೂ, ನನ್ನೊಡನೆ ಬಾ ಎಂದು ನೀ ಕರೆದಾಗ ಬರುವೆ ಎಂದು ಹೇಳುವ ತಾಕತ್ತು ನನ್ನಲ್ಲಿಲ್ಲ. ನಿನಗೆ ಇನ್ನೂ ನನ್ನ ಮನದಾಳದ ತುಡಿತ ಅರ್ಥವೇ ಆಗಿಲ್ಲ. ನೀನು ಹೇಳಿದ್ದು ಸರಿಯೇ ಆದರೂ, ಕೆಲವೊಂದು ಕಟ್ಟುಪಾಡುಗಳಲ್ಲಿ ನಾನು ಬಂದಿಯಾಗಿರುವೆನು. ಇದರಿಂದ ಹೊರಬರಲು ಹರಸಾಹಸ ಪಡುತ್ತಿರುವೆ. ನನ್ನ ಇಂದಿನ ಈ ನೋವಿನ ಕಣ್ಣೀರು ಮುಂದೆ ನಿನ್ನೊಂದಿಗಿನ ಬಾಳಲ್ಲಿ ಪನ್ನೀರಾಗಿ ನನ್ನ ಕಣ್ಣ ಸೇರುವುದೆಂದು ಎಲ್ಲರನ್ನೂ ಸಿಹಿಸಕೊಳ್ಳುತ್ತಾ ದಿನದೂಡುತ್ತಿರುವೆ. ಎಷ್ಟು ದಿನ ಅಂತ ನೋವು ಪಡ್ತಿಯಾ ಅಂತ ಕೇಳ್ತಿಯಲ್ಲ. ಇದು ನನಗೆ ಅನಿವಾರ್ಯ.
ನನ್ನ ಮನಸ್ಸಿನಲ್ಲಿರೋದು ಹೇಳೋದು ಸುಲಭ. ಆದರೆ ಅದನ್ನು ಕಾರ್ಯರೂಪಕ್ಕೆ ತರುವುದು ಅಷ್ಟು ಸುಲಭದ ಮಾತಲ್ಲ.
ತನ್ನ ಸುತ್ತ ತಾನೇ ಕಟ್ಟಿಕೊಂಡಿದ್ದ ಸಂಬಂಧಗಳ ಕೋಟೆಯಿಂದ ಹೊರಬಂದು ನೋಡಿದಾಗಲೇ ನನ್ನ ನಿಜಸ್ಥಿತಿಯ ಅರಿವಾಗಿದ್ದು. ಅಲ್ಲಿಯವರೆಗೂ ಎಲ್ಲ ನನ್ನವರು ಎಂದು ತಿಳಿದಿದ್ದ ನನಗೆ ಸಂಬಂಧಗಳಲ್ಲಿ ಬಂಧಿಯಾಗಿರುವ ನನಗೆ, ಯಾರೂ ನನ್ನವರಲ್ಲ, ಜೀವಕ್ಕೆ ಜೀವವಾಗಿ ಪ್ರೀತಿಸುವ ನಿನ್ನ ಪ್ರೀತಿಯೊಂದೇ ನನಗೆ ಸ್ವಂತ, ನೀನೇ ನನ್ನ ಏಳೂ ಜನ್ಮಕೂ ಸಂಬಂಧಿ ಎಂಬ ಸತ್ಯ ಅರಿವಾಯಿತು.
ಮೌನಕ್ಕೆ ಸಾವಿರ ಅರ್ಥಗಳನ್ನು ಕಲ್ಪಿಸುವವರ ನಡುವೆ ಜೀವವಿದ್ದರೂ ನಿರ್ಜೀವಿಯಂತೆ ಬದುಕುತ್ತಿರುವೆ.
ಒಂದೆಡೆ ಪ್ರೀತಿ ಹಸಿವು ನಿನ್ನ ಸೇರೆಂದು ಹೇಳುತ್ತಿದ್ದರೆ, ಮತ್ತೊಂದೆಡೆ ಭಯದ ಹಸಿವು ಹಂತಹಂತವಾಗಿ ನನ್ನನ್ನು ತಿನ್ನುತ್ತಿದೆ. ಪ್ರೀತಿ ಹಸಿವ ಬಯಸಿ ನಿನ್ನ ಸೇರವಾಗ ಆ ಪ್ರೀತಿ ಹಸಿವೆ ನನ್ನಿಂದ ದೂರವಾಗಿಬಿಟ್ಟರೇ ಎಂಬ ಭಯ ಪ್ರತಿಕ್ಷಣ ನನ್ನ ಕೊಂದು ಹಾಕುತ್ತಿದೆ. ನಮ್ಮ ವಿರುದ್ಧ ನಿಲ್ಲುವವರ ಎದುರು ದೃಢವಾಗಿ ನಿಂತು, ಎಲ್ಲವನ್ನೂ ಎದುರಿಸಿ ನಿಲ್ಲುವೆಯಾ? ಹೇಳು ಸುನಿ. ನಿನಗೆ ಆ ಶಕ್ತಿ ಇದೆಯಾ ಎಂದು ನನ್ನಲ್ಲೇ ಈ ಪ್ರಶ್ನೆ ಕೇಳಿದಾಗ, ಹೌದು ನಾನು ದೃಢವಾಗಿ ನಿಲ್ಲುತ್ತೇನೆ. ಎಲ್ಲವನ್ನೂ ಎದುರಿಸಿ ನಿಲ್ಲುವ ಶಕ್ತಿ ನನ್ನಲ್ಲಿದೆ ಎಂಬ ಉತ್ತರ ನನ್ನಲ್ಲಿ ದನಿಸಿತು. ಆದರೂ ನಿನ್ನ ಪ್ರೀತಿಯಲ್ಲಿ ಒಂದು ಕ್ಷಣ ನನ್ನ ಭಯದ ಕಣ್ಣೀರು ಝರಿಯಾಗಿ ಹರಿದಿತ್ತು.
ನಿನ್ನೆದುರು ಹೇಳುವ ಧೈರ್ಯ ನನಗಿಲ್ಲವಾದರೂ ನನ್ನ ಅಂತರಂಗದ ಭಾವನೆಗಳನ್ನು ಈ ಪದಗಳಲ್ಲಿ ವ್ಯಕ್ತಪಡಿಸುತ್ತಿರುವೆ. ನಿನ್ನ ಬಿಟ್ಟು ಬಾಳುವ ಶಕ್ತಿ ನನಗಿಲ್ಲ. ಈ ಹೃದಯದಲ್ಲಿ ನಿನಗಲ್ಲದೇ ಬೇರಾರಿಗೂ ಪ್ರವೇಶವಿಲ್ಲ. ಕಳೆದು ಹೋಗುವ ಮುಂಚೆಯೇ ಈ ಪ್ರೀತಿಯ ಕೂಡಿಟ್ಟುಕೋ, ನಿನ್ನ ಕತ್ತಲಾದ ಹೃದಯಕ್ಕೆ ಪ್ರೀತಿ ಬೆಳಕು ನಾನಾಗುವೆ...
- ಶಿಲ್ಪ ಎಸ್. ಕುಮಾರ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


