ಮಕರಂದ/ದೋಣಿ

ರಂಗ ಹಿನ್ನೆಲೆ

ರಂಗ ಹಿನ್ನೆಲೆ
Published On :

ಪೌರಾಣಿಕ, ಐತಿಹಾಸಿಕ, ಸಾಮಾಜಿಕ, ಕಾಮಿಡಿ, ಟ್ರ್ಯಾಜಿಡಿ, ಅಸಂಗತ ಇತ್ಯಾದಿ ನಾಟಕ ಪ್ರಕಾರಗಳನ್ನು ನಾವಿಂದು ಗಮನಿಸುತ್ತಿದ್ದೇವೆ. ಇವೆಲ್ಲಾ ನಾಟಕದ್ದೇ ಮೂಲವಾದರೂ ಅದರದ್ದೇ ಬೇರೆ ಬೇರೆ ಟಿಸಿಲುಗಳು.

ನಾಟಕ ಮೊದಲ ಬಾರಿಗೆ ನಡೆದದ್ದು ಎಲ್ಲಿ?
ಹುಡುಕುತ್ತಾ ಹೊರಟರೆ ಸಿಗುವುದು ನೆರಳು ಸಿಗುವುದು ಕ್ರಿಸ್ತಪೂರ್ವದಲ್ಲಿ. ಇದು ಅರೆ ಧಾರ್ಮಿಕ ಆಚರಣೆ ಮತ್ತು ಅರೆ ರಂಗಭೂಮಿಯಂಥ ಪ್ರಕಾರದಿಂದ ಹುಟ್ಟಿದ್ದು. ಅಂದರೆ ಧಾರ್ಮಿಕ ಆಚರಣೆಗಳಲ್ಲಿ ಕಂಡುಬಂದು ನಂತರ ಸ್ವತಂತ್ರವಾಗಿ ಗುರುತಿಸಿಕೊಂಡಿತು. ಇದನ್ನು ಬೆನ್ನತ್ತಿದರೆ ಕರೆದೊಯ್ಯುವುದು ಗ್ರೀಕ್ ಸಂಸ್ಕೃತಿಗೆ. ಗ್ರೀಕ್ ನಾಗರಿಕತೆಯನ್ನು ಪಾಶ್ಚಾತ್ಯ ಇತಿಹಾಸದ ಅಡಿಗಲ್ಲು ಎನ್ನುತ್ತಾರೆ. ಇದು ಕ್ರಿ.ಪೂ. 5, 4 ,3 ನೇ ಶತಮಾನದಲ್ಲಿ ಉಚ್ಛ್ರಾಯ ಸ್ಥಿತಿಯಲ್ಲಿತ್ತು ಎಂಬುದಾಗಿ ಉಲ್ಲೇಖವಿದೆ. ಇದೇ ಸಂದರ್ಭದಲ್ಲಿ ನಮಗೆ ಮೊಟ್ಟ ಮೊದಲ ರಂಗಭೂಮಿಯ ಹುಟ್ಟು ಕಾಣಿಸುತ್ತದೆ.
ಇಲ್ಲೇ ಎರಡು ವಾದಗಳಿವೆ. ಒಂದು, ಗ್ರೀಕ್ ರಂಗಭೂಮಿ ಹುಟ್ಟಿದ್ದು ವೀರಗಾಥೆಗಳ ವಾಚನ ಸಂಪ್ರದಾಯದಿಂದ ಎನ್ನುವುದು. ಎರಡನೆಯ ವಾದ ಡಯೋನಿಯಸಿಸ್ ಎನ್ನುವುದು. ವಿಶ್ವ ರಂಗಭೂಮಿಗೆ ಸಂಬಂಧಿಸಿದ ಪುಸ್ತಕಗಳಲ್ಲಿ ಇದೆಲ್ಲಾ ಮಾಹಿತಿ ಲಭ್ಯ.
ಇಷ್ಟಕ್ಕೂ ಇದೆಲ್ಲಾ ನೆನಪಾಗಿದ್ದು ಇತ್ತೀಚೆಗೆ ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಮೈಲಾರ ಎಂಬ ಊರಿನ ಕಾರ್ಣೀಕೋತ್ಸವ ನಡೆದ ಸಂದರ್ಭದಲ್ಲಿ. ಗೊರವಪ್ಪ ಹೇಳುವ ಕಾರ್ಣೀಕ ಆಯಾ ವರ್ಷದ ಸಾಮಾಜಿಕ, ಆರ್ಥಿಕ, ಧಾರ್ಮಿಕವಷ್ಟೇ ಅಲ್ಲ, ಮನುಷ್ಯ ಮನುಷ್ಯನ ಸಂಬಂಧಗಳ ಭವಿಷ್ಯ ಎಂದೇ ನಂಬಲಾಗುತ್ತದೆ. ಮತ್ತು ಇಂಥ ಭವಿಷ್ಯವನ್ನು ಬಹುಸಂಖ್ಯೆಯ ಮಂದಿ ತಲತಲಾಂತರದಿಂದ ನಂಬಿಕೊಂಡು ಬಂದಿದ್ದಾರೆ. ಲಕ್ಷಗಟ್ಟಲೆ ಜನ ಸೇರಿ ಈ ಹಬ್ಬವನ್ನು ಆಚರಿಸುತ್ತಾರೆ. ನಂಬಲೇಬೇಕಾದ ಅಂಶ ಎಂದರೆ ರಂಗಭೂಮಿ ಬಗ್ಗೆ, ಡಯೋನಿಯಸಿಸ್ ದೇವತೆ ಬಗ್ಗೆ, ಅಲ್ಲಿನ ಆಚರಣೆಗಳ ಬಗ್ಗೆ ಓದಿದ್ದು ಇಲ್ಲಿ ಅಕ್ಷರಶಃ ನಮ್ಮ ಮುಂದೆ ದೃಶ್ಯವಾಗಿ ಕಾಣಿಸಿಕೊಳ್ಳತೊಡಗುತ್ತದೆ.

ಫಲಕೊಡುವ ದೇವರು
ಡಯೋನಿಯಸಿಸ್ ಎಂಬ ಫಲಕೊಡುವ ದೇವರಿನ ಪ್ರೀತ್ಯರ್ಥ ಕ್ರಿ.ಪೂ. 13ನೇಯ ಶತಮಾನದಲ್ಲಿ ಊರಿನಿಂದ ಹೊರಗೆ ಹೋಗಿ ಬಯಲಿನ ಪ್ರದೇಶದಲ್ಲಿ ಪೂಜೆ ಸಲ್ಲಿಸಲಾಗುತ್ತಿತ್ತು. ಮೈಲಾರದಲ್ಲಿ ಊರೊಳೊಗಿನ ಲಿಂಗೇಶ್ವರ ದೇಗುಲದಿಂದ ಹೊರಗಿನ ಪ್ರದೇಶ (ಡಂಕಣಮರಡಿ)ದಲ್ಲಿ ಕಾರ್ಣೀಕೋತ್ಸವ ನಡೆಯುತ್ತದೆ.
ಡಯೋನಿಯಸಿಸ್ ಆರಾಧನೆ ಉನ್ಮತ್ತ ವಿಧಿವಿಧಾನಗಳಿಂದ ಕೂಡಿದ್ದು, ಮುಂಚಿನ ದಿನಗಳಲ್ಲಿ ನರಬಲಿಯೊಂದಿಗೆ ಆಚರಣೆ ಮುಗಿಯುತ್ತಿತ್ತು. ಕಾಲ ಸರಿದಂತೆ ಈ ಸಂಭ್ರಮಕ್ಕೆ ನಾಗರಿಕತೆಯ ಸ್ಪರ್ಶವಾಯಿತು. ಅಂತೆಯೇ ನರಬಲಿಗೆ ನಿಂತಿತು.
ಡಯೋನಿಯಸಿಸ್ ದೇಗುಲದಿಂದ ನಿಗದಿಗೊಳಿಸಿದ ಬಯಲು ಪ್ರದೇಶಕ್ಕೆ ಮೆರವಣಿಗೆಯಲ್ಲಿ ತೆರಳುವಾಗ ಡಿಥಿರ್ಯಾಂಬ್ ಎಂಬ ಭಜನೆ ಇರುತ್ತಿತ್ತು. ಮೈಲಾರಲಿಂಗೇಶ್ವರ ದೇಗುಲದಿಂದ ಡಂಕಣಮರಡಿಗೆ ಹೋಗುವಾಗ ದೇವರ ಸುತ್ತ ಗೊರವರ ದೊಡ್ಡ ಗುಂಪೇ ಇರುತ್ತದೆ. ಇವರ ಕೈಯಲ್ಲಿನ ಡಮರುಗಗಳ ಶಬ್ದ ಕಿವಿಗೆ ರಾಚುತ್ತದೆ. 'ಚಾಂಗ್‌ಲೋ ಚಾಂಗ್‌ಲೋ ಏಳುಕೋಟಿಗೆ ಚಾಂಗ್‌ಲೇ' ಎನ್ನುವ ಘೋಷಣೆ ಆಕಾಶದೆತ್ತರಕ್ಕೆ ಚಿಮ್ಮುತ್ತದೆ.
ಡಿಥಿರ್ಯಾಂಬ್ ಮೇಳದ ಭಜನೆ ಪದಗಳಲ್ಲಿ ಗ್ರೀಕ್ ವೀರರ ಕಥಾನಕಗಳು ಬರುವಷ್ಟರಲ್ಲಿ ಕ್ರಿ.ಪೂ. 7ನೇ ಶತಮಾನವಾಗಿತ್ತು. ಈ ಸಂದರ್ಭದಲ್ಲಿ ಭಜನೆಪದಗಳು ಏಕತೆ ಸಾಧನಗಳಾಗಿದ್ದವು. ಆದ್ದ ರಿಂದ ಇವಕ್ಕೆ ಜನಪ್ರಿಯತೆಯೂ ಸಿಕ್ಕಿತ್ತು.
ಇದೇ ಸಂದರ್ಭದಲ್ಲಿ ಒಂದು ಬೆಳವಣಿಗೆ ಭಜನೆಯನ್ನು ನಾಟಕ ಕ್ರಿಯೆಯನ್ನಾಗಿಸುವ ತಿರುವನ್ನು ತಂದಿತ್ತು. ಭಜನೆ ತಂಡದಲ್ಲಿನ ಥೆಸ್ಪಿಸ್ ಎಂಬಾತ ತಂಡದಿಂದ ಹೊರಬಂದು ಸಂಭಾಷಣೆಯ ಮೂಲಕ ನಾಟಕೀಯವಾಗಿ ಸನ್ನಿವೇಶಗಳನ್ನು ಮಾಡತೊಡಗಿದಾಗ ಕ್ರಿ.ಪೂ. 534. ಇಲ್ಲಿ ಗೊರವರ ಗುಂಪಿನ ಒಬ್ಬ ಪ್ರಮುಖ ನಿಗದಿಗೊಂಡ ಸ್ಥಳದಲ್ಲಿ ಹೇಳುವ ಘೋಷಣೆಯನ್ನು ಕಾರ್ಣೀಕ ಎಂದು ಕರೆಯುತ್ತಾರೆ. ಇದೇ ವರ್ಷದ ಭವಿಷ್ಯ ಎಂದು ನಂಬುವುದು. ಈ ಗೊರವನಾದರೂ ಗುಂಪಿನೊಳಗೊಬ್ಬ. ಆದರೆ ಉಳಿದವರಿಗಿಂತ ವಿಶೇಷ ಸ್ಥಾನಮಾನ ಈತನಿಗೆ.
ಹೀಗೆ ಭಜನೆ ತಂಡದಿಂದ ಹೊರಬಂದ ಥೆಸ್ಪಿಸ್ ಎಂಬ 'ನಟ' ಉಳಿದವರಿಗಿಂತ ಭಿನ್ನವಾಗಿ ಕಾಣಬೇಕಾಗುವ ಅಗತ್ಯ ಇದ್ದಿದ್ದರಿಂದ ಇತರರಿಗಿಂತ ತನ್ನ ಪೋಷಾಕುಗಳನ್ನು ಬದಲಿಸಿಕೊಂಡ. ಡಯೋನಿಯಸಿಸ್ ದೇವತೆಯ ಪೂಜೆಯ ಮಾರನೇ ದಿನ ಇಂಥ ಹಲವು ನಾಟಕಗಳ ಪ್ರದರ್ಶನ ಇರುತ್ತಿತ್ತು. ಕೊನೆಗೆ ಇದರಲ್ಲಿಯೇ ಬೇರೆ ಬೇರೆ ಪ್ರಕಾರಗಳು ಹುಟ್ಟಿರಬೇಕು ಎಂಬುದು ತಜ್ಞರ ಅಭಿಪ್ರಾಯ.
ಇನ್ನು ಇಲ್ಲಿ ಗೊರವಪ್ಪ ಹೇಳಿದ ಕಾರ್ಣೀಕವನ್ನು ತಮ್ಮ ಜೀವನಕ್ಕೆ ಹೇಗೆ ಇದು ಅನ್ವಯವಾಗುತ್ತದೆ ಎಂದು ಸ್ವವಿಮರ್ಶೆಯಲ್ಲಿ ತೊಡಗುತ್ತಾರೆ. ನಂತರದ ಕಾರ್ಯಕ್ರಮಗಳೂ ಹಲವಿವೆ. ಸರಪಳಿ ಪವಾಡ, ಭಂಡಾ ತೊಡೆಯುವುದು ಇತ್ಯಾದಿ.
ಒಟ್ಟಾರೆ ಕ್ರಿ.ಪೂ. 5ನೇ ಶತಮಾನದಲ್ಲಿ ನಡೆಯುತ್ತಿದ್ದ ಆ ಆರಾಧನೆಗೂ ಈಗಲೂ ನಡೆಯುತ್ತಿರುವ ಈ ಭಕ್ತಿಯ ಸಂಭ್ರಮಕ್ಕೂ ಎಷ್ಟೊಂದು ನಂಟು ಅನ್ನಿಸದೇ ಇರದು. ನಾಗರಿಕ ಪೂರ್ವದ ಆ ವಿಧಿಗಳು, ನಾಗರಿಕತೆಯ ದಿನಗಳ ಈ ಆರಾಧನೆಗೂ ಎಷ್ಟೊಂದು ಸಾಮ್ಯತೆ ಇದೆಯಲ್ಲವೆ?

ಮಾನವ ಇನ್ನು ಬೇಟೆಯಾಡಿ ತಿಂದು ಉಂಡು ಮಾಡುತ್ತಿದ್ದ ದಿನಗಳು. ಆಗ ತಾನು ಬೇಟೆಯಾಡಿದ ಬಗೆ, ಆ ಪ್ರಾಣಿಗಳು ಜೀವ ಭಯದಿಂದ ಕೂಗಿಕೊಳ್ಳುತ್ತಿದ್ದ ರೀತಿಗಳನ್ನು ಇತರರಿಗೆ ಹೇಳಲು ಭಾಷೆಯ ಅಥವಾ ಮಾಧ್ಯಮಗಳ ಬಲವಿಲ್ಲದೆ ಹೇಳಲು ನಟನೆಯ ಮಾಧ್ಯಮ ಬಳಸುತ್ತಿದ್ದಿರಬಹುದು ಎಂದು ಅಂದಾಜಿಸಲಾಗಿದೆ. ಬೇಟೆಯಾಡಿದ ಪ್ರಾಣಿಯ ಚರ್ಮವನ್ನು ಧರಿಸಿ ಪ್ರಾಣಿಯ ತೆರನಾಗಿ ನಟಿಸಿದರೆ, ಉಳಿದವರು ಬೇಟೆಗಾರರಂತೆ ಅಭಿನಯಿಸಿ ತೋರಿಸುತ್ತಿದ್ದರು. ಇದು ನಾಟಕದ ಮೂಲವಾಗಿರಬೇಕು ಎನ್ನುವುದು ಕೆಲ ತಜ್ಞರ ಅಭಿಪ್ರಾಯ.
ಹೀಗೆ ಪ್ರಾಣಿ ಚರ್ಮವನ್ನು ಯಾರಾದರೂ ಧರಿಸಿ ನಟಿಸಲು ಅವಕಾಶವಿತ್ತು. ಆತ ಪ್ರಾಣಿಯಂತೆ ನಟಿಸಿದರೆ ಸಾಕಷ್ಟೇ. ಆದರೆ, ಕ್ರಮೇಣ ಇದಕ್ಕಾಗಿ ಒಬ್ಬನನ್ನು ನೇಮಿಸಲಾಗುತ್ತಿತ್ತು.
ಆಫ್ರಿಕನ್ ಬುಡಕಟ್ಟು ಜನಾಂಗಗಳಲ್ಲಿ ಆಚರಿಸಲ್ಪಡುವ ಪಿತೃ ಕರೆಯುವ ಸಂಪ್ರದಾಯವಿದೆ. ಇದರಲ್ಲಿ ಆ ಸಮಾಜದಿಂದ ನಿಯುಕ್ತಿಗೊಂಡ ಪಾತ್ರಿ, ತೀರಿಹೋದ ಪಿತೃಗಳನ್ನು ಆಹ್ವಾನಿಸುತ್ತಾನೆ. ಆ ಪಿತೃಗಳು ಈಗಾಗಲೇ ಆಯ್ಕೆಯಾದ ಕೆಲವರ ಮೇಲೆ ಬಂದು ಅಲ್ಲಿ ತಮ್ಮ ಸಮಾಜದ ಬಾಂಧವರೊಂದಿಗೆ ಸಂಭಾಷಿಸುತ್ತಾರೆ!
ಇದೇ ತೆರನಾದ ರಂಗಕ್ರಿಯೆ ಎಂದರೆ ದಕ್ಷಿಣಕನ್ನಡ ಜಿಲ್ಲೆಯಲ್ಲಿನ ನಾಗಾರಾಧನೆ. ಇಲ್ಲಿಯೂ ಸಮಾಜದಿಂದ ನಿಯುಕ್ತಿಗೊಂಡ ನಾಗಾಪಾತ್ರಿ ಇದನ್ನು ನಿರ್ವಹಿಸುತ್ತಾರೆ.
ಇಲ್ಲಿ ಅವರ ಚಲನವಲನ, ಕೂಗಿನ ಧ್ವನಿಗಳು ಇವರನ್ನು ಉಳಿದವರಿಗಿಂತ ಭಿನ್ನವಾಗಿ ನಿಲ್ಲಿಸುತ್ತವೆ. ಇಲ್ಲಿಯೂ ರಂಗಭೂಮಿಯಲ್ಲಿನ ಬಳಕೆಗಳನ್ನು ಗುರುತಿಸಬಹುದು. ವೇಷಭೂಷಣಗಳು, ವೇದಿಕೆ, ಘಟನೆಗಳು, ಧ್ವನಿಯ ಏರಿಳಿತ ಇತ್ಯಾದಿ.

-ಚನ್ನಮಲ್ಲಿಕಾರ್ಜುನ ಹದಡಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.