ಓದುವುದು ಯಾತನೆ, ಸ್ಫೂರ್ತಿ

ಸೂಸನ್ ಸೊಂಟಾಗ್, ಅಮೆರಿಕದ ಮಹತ್ವದ ಹಾಗೂ ಜನಪ್ರಿಯ ಲೇಖಕಿಯರಲ್ಲೊಬ್ಬಳು. ಈಕೆ ಚಿತ್ರ ನಿರ್ದೇಶಕಿ, ಚಳವಳಿಗಾರ್ತಿ ಕೂಡ. ಒಂದು ರೀತಿಯಲ್ಲಿ ನಮ್ಮ ಅರುಂಧತಿ ರಾಯ್ ಥರದವಳು ಎಂದು ಹೇಳಬಹುದಾದ ಈಕೆಯ ಕೆಲವು ಕೃತಿಗಳು: ಇನ್ ಅಮೆರಿಕ, ವೋಲ್ಕನೋ ಲವರ್, ದಿ ವೇ ವಿ ಲಿವ್ ನೌ. ಈಕೆ ನ್ಯೂಯಾರ್ಕ್ ಟೈಮ್ಸ್‌ನಲ್ಲಿ ಬರೆದ ಲೇಖನದ ಆಯ್ದ ಭಾಗ:
ಕಾದಂಬರಿ ಓದುವುದೊಂದು ಸಹಜ ಕ್ರಿಯೆ. ಆದರೆ ಕಾದಂಬರಿ ಬರೆಯುವುದು ಮಾತ್ರ ವಿಚಿತ್ರ ಹವ್ಯಾಸ. ಓದುವುದು ಕಲೆ. ಅದಕ್ಕೆ ಹೋಲಿಸಿದರೆ, ಬರೆಯುವುದು ನಿಮ್ಮ ಸಂಪೂರ್ಣ ಗಮನ ಮತ್ತು ತೀವ್ರತೆಯನ್ನು ಅವಲಂಬಿಸಿದ ಪರಿಶ್ರಮ. ಬರೆಯುವುದು ಯಾಕೆಂದರೆ ನಾವು ಓದಿ ಮೆಚ್ಚುವುದಕ್ಕೆಂದೇ. ಆದರೆ ಯಾವತ್ತೂ ನಮಗೆ ನಾವೇ ಹಾಗೆ ಮೆಚ್ಚಿಗೆ ಗಳಿಸಿಕೊಳ್ಳಲಿಕ್ಕಾಗುವುದಿಲ್ಲ. ಆದ್ದರಿಂದ ಮತ್ತೆ ಅದನ್ನು ತಿದ್ದಿ ಬರೆಯಬೇಕಾಗುತ್ತದೆ. ಮತ್ತೆ ಓದು, ಮತ್ತೆ ತಿದ್ದು. ಇದನ್ನು ಮರುಕಳಿಸಬೇಕಾಗುತ್ತದೆ. 'ಬರೆಯುವುದೆಂದರೆ ನಮ್ಮ ಬಗ್ಗೆ ನಾವೇ ತೀರ್ಪು ಕೊಟ್ಟುಕೊಳ್ಳುವ ಸ್ಥಾನದಲ್ಲಿ ಕುಳಿತಂತೆ' ಎಂದು ಒಮ್ಮೆ ಹೆನ್ರಿಕ್ ಇಬ್ಸನ್ ಹೇಳಿದ್ದ. ಪರಿಶ್ರಮವಿಲ್ಲದೆ ಬರೆದದ್ದನ್ನು ಓದುವುದರಲ್ಲಿ ಹಿತವೂ ಇಲ್ಲ.
ಸಾಮಾನ್ಯವಾಗಿ, ಬರೆಯುವಿಕೆಯನ್ನು ಓದುವಿಕೆ ಹತ್ತಿಕ್ಕುತ್ತದೆ. ಓದುವ ಪ್ರೀತಿಯೇ ನಿಮ್ಮನ್ನು ಬರಹಗಾರನಾಗಿಸುವ ಕನಸಿಗೆ ದೂಡುತ್ತದೆ. ಆದರೆ ಓದುವಿಕೆಯಿಂದ ಬರೆಯುವ ಚಟವೂ ಕೆಲವೊಮ್ಮೆ ಸತ್ತುಹೋಗುತ್ತದೆ. ನೀವು ಬರಹಗಾರನಾಗಿ ಸ್ಥಾಪಿತರಾಗಿಬಿಟ್ಟ ಮೇಲಂತೂ, ಇನ್ನೊಬ್ಬರು ಬರೆದದ್ದನ್ನು ಓದುವುದು ಹಾಗೂ ಕ್ಲಾಸಿಕ್‌ಗಳನ್ನು ಮರಳಿ ಓದುವುದು ಒಂದು ಹಿಂಸೆ, ಯಾತನೆ... ಹಾಗೆಯೇ- ಸ್ಫೂರ್ತಿ.
ಎಲ್ಲ ಖ್ಯಾತ ಬರಹಗಾರರೂ ಇದನ್ನು ಒಪ್ಪಲಾರರು. ನಾನೊಮ್ಮೆ ವಿ.ಎಸ್.ನೈಪಾಲ್ ಅವರನ್ನು ಭೇಟಿಯಾದಾಗ, ಖ್ಯಾತ ಕ್ಲಾಸಿಕ್ ಇಂಗ್ಲಿಷ್ ಕಾದಂಬರಿಯೊಂದರ ಬಗ್ಗೆ ಮಾತನಾಡಿದ್ದೆ. ಅವರು ಓದನ್ನು ಓದಿರಬಹುದೆಂದು ನಾನು ಭಾವಿಸಿದ್ದೆ. ಆದರೆ ಅವರು ಓದಿರಲಿಲ್ಲ. ನನ್ನ ಮುಖದ ಮೇಲಿನ ಆಶ್ಚರ್ಯವನ್ನು ಗಮನಿಸಿ ಅವರು ಹೇಳಿದರು: ಸೂಸನ್, ನಾನು ಲೇಖಕ. ಓದುಗನಲ್ಲ!
-ಹರೀಶ್ ಕೇರ
harishkera@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


