ಮಕರಂದ/ದೋಣಿ

ಹೀಗಾಗಬಾರದಿತ್ತು !

Published On :

ಆಗ ತಾನೇ ಮಳೆಯ ಅಬ್ಬರ ನಿಂತಿತ್ತು. ನಮಗೇನು... ಎಂಬಂತೆ ಭೂಮಿಗೆ ಬಿದ್ದ ನೀರು ಸುಮ್ಮನೆ ರಸ್ತೆಗುಂಟ ಹರಿಯುತ್ತಿತ್ತು. ಜನ-ದನ-ಮನೆ-ಹೊಲ-ಗದ್ದೆಗಳೆಲ್ಲವೂ ತಾವೆಲ್ಲಾ ಒಂದೆಂಬಂತೆ; ಕಾಗದದ ದೋಣಿಗಳಂತೆ ತೇಲಿ ತೇಲಿ ಹೋಗ್ತಾನೇ ಇದ್ವು! ನಿಂತ ಮಳೆ ಅದ್ಯಾವಾಗ ಬಾಂಬಿನಂತೆ ಬೀಳುತ್ತೋ ಅಂತ ಅಳಿದುಳಿದ ಜನ ಪರಿಹಾರ ಕಾರ್ಯದಿ ತೊಡಗಿದ್ದಾಗ... ಎಳೇ ಮಗುವಿನ ಕೊರಳ ಆಳದ ಅಳುವ ದನಿ! ದಡಬಡಾಯಿಸಿ ನೋಡಿದರೆ ಚರಂಡಿಕಲ್ಲಿಗೆ ಸಿಕ್ಕಿದೆ. ಎತ್ತಿ ತಂದವರಲ್ಲಿ ಯಾರೋ ಅಂದಾಂಗಾತು "ಅಯ್ಯೋ... ಇದ ಸಾಬರ ಇಮಾಮನ ಕೂಸು" ಅಂತ! ಮಗು ಅಳ್ತಿತ್ತು. ನೀರು ಕಣ್ಣಿಂದೋ... ಮಳೇದೋ ಗೊತ್ತಾಗ್ಲಿಲ್ಲ!
ಸಂಬಂಧ
ದಾರಿಯುದ್ದಕ್ಕೂ ಅವರು ಸುಮ್ನೇ ನಡೀತಾ ಇದ್ರು, ಅಫ್‌ಕೋರ್ಸ್ ಬಹಳಷ್ಟು ಜನ ಅವರಂತೆ ನಡ್ದು ಹೋಗ್ತಾನೇ ಇದ್ರು. ಆದ್ರೆ ಇವರ ನಡಿಗೆ ಆ ಎಲ್ಲರ ಹೆಜ್ಜೆಗಳ ಜೊತೆ ಬೆರಿತಾ ಇರ್ಲಿಲ್ಲ... ನಿಧಾನ ಎಣಿಸಿ ಎಣಿಸಿ ಹೆಜ್ಜೆ... ಹೀಗೆ ಸಾಗಿತ್ತು; ಕೊನೆಗೆ ರಸ್ತೆ ತಿರುವು ಬಂತು, ಅವಳು ಮುಗುಳ್ನಕ್ಕು ಅವನ ಕೈ ಹಿಡಿದು ಚರಂಡಿ ದಾಟಿಸಿದಳು ಅವನು ಕತ್ತಾಡಿಸುತ್ತಾ ಹೆಜ್ಜೆಯಿರಿಸಿದ. ಅವಳಿಗೆ ಬಾಯಿಲ್ಲ. ಇವನಿಗೆ ಕಣ್ಣಿಲ್ಲ. ದೊಡ್ಡ ಮನೆ ಮುಂದೆ ಆತ ಹಾಡಲಾರಂಭಿಸಿದ!
ಸಂತೆಬೆನ್ನೂರು ಫೈಜ್ನಟ್ರಾಜ್, ಸಂತೆಬೆನ್ನೂರು
ಹೆಣ್ಣು
ಆ ಮನೆಯಲ್ಲಿ ಎರಡನೆಯ ಹೆರಿಗೆಯ ಸಂಭ್ರಮ. ಹುಟ್ಟಿದ ಮಗುವನ್ನು ನೋಡಿದ ಬಂಧುಗಳೆಲ್ಲರೂ, ಮಗು ಅಪ್ಪನಂತೆ, ಕಣ್ಣುಗಳು ಅಮ್ಮನಂತೆ, ತುಟಿ ಅತ್ತೆಯದು, ಮುಖ ಅಜ್ಜಿಯಂತಿದೆ ಅಂತೆಲ್ಲಾ ಹೋಲಿಕೆ ಮಾಡಿ ನೋಡಿ ಖುಷಿ ಪಡುತ್ತಿದ್ದರು. ಆ ಮಗುವಿನ ಅಜ್ಜಿ ಮಾತ್ರ ತಾನೂ ಸಹ ಒಂದು ಹೆಣ್ಣೆಂಬುದನ್ನು ಮರೆತು, ಈ ಸಲವೂ ಹೆಣ್ಣನ್ನೇ ಹೆತ್ತಿದ್ದಾಳೆಂದು ತನ್ನ ಸೊಸೆಗೆ ಮನದಲ್ಲೇ ಶಪಿಸಿದರು.
ಪ್ರೀತಿ
ಹುಡುಗಿ ಕೈ ಕೊಟ್ಟಾಗ ಸಾಯಲು ನಿರ್ಧರಿಸಿ ವಿಷದ ಬಾಟಲನ್ನು ಕೈಗೆತ್ತಿಕೊಂಡ. ಅಷ್ಟರಲ್ಲೇ ಅವನ ಮೊಬೈಲ್‌ಗೆ ಅನಾಮಿಕ ಕರೆಯೊಂದು ಬಂತು. ಅತ್ತಲಿಂದ ಹುಡುಗಿಯ ಧ್ವನಿ! ಸಾರಿ ನಂಬರ್ ಮಿಸ್ಸಾಗಿ ಬಂದದ್ದು, ರಾಂಗ್ ನಂಬರ್ ಎಂದು ಫೋನಿಟ್ಟಳು. ಇವನು ವಿಷದ ಬಾಟಲನ್ನು ಕೆಳಗಿಟ್ಟು ಮೊಬೈಲ್ ರಿಚಾರ್ಜ್ ಮಾಡಿಸಲು ಹೋದ.
ಎಸ್ಸೆಮ್ಮೆಸ್
ಅವಳ ಮೊಬೈಲ್‌ಗೆ ಕಳಿಸಿದ ಇವನ ಕೊನೆಯ ಎಸ್‌ಎಂಎಸ್: ಮೋಸ ಮಾಡಿದ್ದಕ್ಕೆ ಥ್ಯಾಂಕ್ಸ್! ನನಗೆ ನಿನಗಿಂತಲೂ ಒಳ್ಳೆಯ ಹುಡುಗಿ ಸಿಕ್ತಾಳೆ! ಮತ್ತು ನಿಜವಾಗಲೂ ನಿನಗೆ ನನಗಿಂತಲೂ ಕೆಟ್ಟ ಹುಡುಗನೇ ಸಿಗೋದು!! ಮದುವೆಯಾದಮೇಲೆ ನಿನ್ನ ಗಂಡ ನಿನಗೆ ಮುತ್ತಿಡುವಾಗ ನಾನು ಕೊಟ್ಟ ಮುತ್ತುಗಳು ನೆನಪಾದರೆ ಕ್ಷಮಿಸು!! ತುಂಬಾ ಜನ ಹುಡುಗರಿಗೆ ಮೋಸ ಮಾಡಬೇಡ, ಮತ್ತೆಂದೂ ನಿನಗೆ ಕಾಲ್ ಮಾಡುವುದಿಲ್ಲ. ನೀನೂ ಕರೆ ಮಾಡುವುದು ಬೇಕಾಗಿಲ್ಲ.
ನವೀನ್ ಮಧುಗಿರಿ, ವೀರಾಪುರ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.