ಮರು ಹುಟ್ಟು
"ಕಂಡ ಕನಸುಗಳ ಕಥೆಯೇನು"? ನಿಧಾನವಾಗಿ ಆದರೆ ಅಷ್ಟೇ ಧೃಡವಾಗಿ ಕೇಳಿದಳು ರಮ್ಯ. ಭೀಕರ ಮಳೆಗೆ ಸಿಕ್ಕ ಗುಬ್ಬಚ್ಚಿ ಗೂಡಿನಂತಾಗಿತ್ತು ಪ್ರತಾಪನ ಮನಸ್ಸು. ಮೃತನ ಮನೆಯಲ್ಲಿ ಕುಳಿತು, ಆತನ ಗುಣಗಾನ ಮಾಡುವ ಜನಸಮೂಹದಂತೆ, ಪ್ರತಾಪನ ಒಳಗೊಳಗೂ ಭೂತಕಾಲದ ಮಧುರ ನೆನಪುಗಳು ಬೇಡವೆಂದರೂ ಇನ್ನಿಲ್ಲದಂತೆ ಕಾಡುತ್ತಿದ್ದವು.
"ಬಿಟ್ಟೋಗಲೇಬೇಕ"? ಎಷ್ಟೇ ಪ್ರಯತ್ನಿಸಿದರೂ ಮಾತಿನ ರೂಪ ಪಡೆದೇ ತೀರಿತು ಕಣ್ಣಿನ ಭಾವ. ರಮ್ಯ ಮೃದುವಾಗಿ ನಕ್ಕಳು. ಅವಳಿಗೆ ಗೊತ್ತಿತ್ತು: ಇದು ಬಾಳುವಂಥ ಸಂಬಂಧವಲ್ಲವೆಂದು, ಇಬ್ಬರದ್ದೂ 7 ವರ್ಷದ ಜೋಡಿ ನಡಿಗೆ. ಎಲ್ಲೂ ತಪ್ಪಲಿಲ್ಲ. ಈಗಲೂ ಅಷ್ಟೇ, ಬೇರೆಯಾಗಬೇಕೆಂಬ ನೋವಿದೆಯೇ ವಿನಃ ಅಲ್ಲಿ ದ್ವೇಷವಿಲ್ಲ. ನಿನ್ನದೇ ತಪ್ಪು ಎಂಬ ಸುಳ್ಳು ಆರೋಪವಿಲ್ಲ. ಉರುಳಿದ್ದು ಕೆಟ್ಟ ಕಾಲವೂ ಅಲ್ಲ, ಅಸಲಿಗೆ ಅವಳು ಈ ಜಗತ್ತನ್ನು ಅರ್ಥ ಮಾಡಿಕೊಂಡಿದ್ದೇ ಅವನಿಂದ, ಆತನ ವಿನಾಕಾರಣ ಪ್ರೀತಿಯಿಂದ. ಅವನದು ಮುಗಿಯದ ಕಾಳಜಿ, ಶಾಸ್ತ್ರೀಯ ಸಂಗೀತದಿಂದ ಹಿಡಿದು ತಂತ್ರಜ್ಞಾನದ ಹೊಚ್ಚ ಹೊಸ ಆವಿಷ್ಕಾರದವರೆಗೆ ಅವರ ಅಭಿರುಚಿ ಬೆಳೆದಿತ್ತು, ಅದರಲ್ಲಿ ಇಬ್ಬರದ್ದೂ ಸಮಪಾಲಿತ್ತು, ಎಲ್ಲವನ್ನೂ ಹಂಚಿಕೊಂಡಿದ್ದರು - ನಿಷ್ಕಳಂಕ ಮನಸ್ಸಿನಿಂದ. ಪ್ರಬುದ್ಧರಾಗಿದ್ದರು - ನೈಜ ಪ್ರೀತಿಯ ಚಿಗುರು ಚಿಂತನೆಯಿಂದ.
ಇಂದಿನದು ಮಾತ್ರ ಕಟು ವಾಸ್ತವ. ಕಾರಣಗಳನ್ನು ಕಟಕಟೆಗೆ ನಿಲ್ಲಿಸಲು ಇಬ್ಬರಿಗೂ ಇಷ್ಟವಿಲ್ಲ. ಎರಡೂ ಸಹ ಮಾಗಿದ ಮನಸ್ಸಾದ್ದರಿಂದ ನೆಪಗಳ ಹುಡುಕಾಟವಿಲ್ಲ. ನಾಳೆ ಹುಟ್ಟುವ ಸೂರ್ಯ ನಮ್ಮಿಬ್ಬರನ್ನು ಬೇರೆಯಾಗಿಯೇ ನೋಡಲಿದ್ದಾನೆ ಎಂಬುದು ಇಬ್ಬರಿಗೂ ಸ್ಪಷ್ಟ. ಇಷ್ಟಾದರೂ ಆ ಕೊನೆಯ ಭೇಟಿ ಇಬ್ಬರನ್ನೂ ಸೋಲಿಸಿತ್ತು. ಮನಸ್ಸು ನಾಳಿನ ಭರವಸೆಗಳನ್ನು ಒಪ್ಪಲೇ ಸಿದ್ಧವಿರಲಿಲ್ಲ. ಅರ್ಥ ಸತ್ತ ಭಾವಗಳು ಕಣ್ಣಿನ ಅಂಚಿಗೆ ಬಂದು ನಿಲ್ಲುತ್ತಿತ್ತು. ರಮ್ಯ ನಿರ್ಲಪ್ತತೆಯ ಮೊರೆ ಹೋಗಿದ್ದರೆ, ಪ್ರತಾಪ ನೆನಪುಗಳಲ್ಲೇ ಕಳೆದುಹೋಗಿದ್ದ. ಸುಮಾರು 2 ಘಂಟೆಗಳ ಕಾಲ ಹೀಗೆಯೇ ಸಾಗಿತು ಅವರ ಮೌನ ಭಾವ ಮೆರವಣಿಗೆ. ಕೊನೆಯಲ್ಲಿ ಪ್ರತಾಪನೇ ಅವಳ ಕಣ್ಣೊರೆಸಿ ಬೀಳ್ಕೊಡಲು ಅನುವಾದ. ಅವನ ಕಣ್ಣುಗಳಲ್ಲಿ ಕೊಂಚ ಬೆಳಕು ಮೂಡಿದ್ದೇ ತಡ, ಸಂತೃಪ್ತಿಯ ನಗು ಚೆಲ್ಲಿ ಹೊರಟೇಬಿಟ್ಟಳು ರಮ್ಯ, 'ನಾನಿರದ ಸುಂದರ ಜಗವೊಂದು ನಾಳೆಯಿಂದ ಅವರಿಗಾಗಿ ಕಾದಿರಲಿ' ಎಂದು ದೇವರನ್ನು ಪ್ರಾರ್ಥಿಸುತ್ತಾ. ಇತ್ತ ಕಡೆ, 'ಅವಳಿಗಾಗಿಯಾದರೂ ನಾನು ಅವಳನ್ನು ಬಿಟ್ಟು ಬದುಕಲೇಬೇಕು' ಎಂದು ಪ್ರತಾಪನೂ ನಿರ್ಧರಿಸಿಬಿಟ್ಟ. ಸೂರ್ಯ ತನ್ನ ಪ್ರಖರತೆ ಕಳೆದುಕೊಂಡು ಪಶ್ಚಿಮದಲ್ಲಿ ಕರಗತೊಡಗಿದ - ಇವನ ಘನ ಪ್ರೀತಿಗೆ, ಸಮಯದ ಘೋರ ನಡೆಗೆ.
ಪ್ರಸನ್ನ ಕಾರಂತ್, ಬೆಂಗಳೂರು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

