ಅಷ್ಟೊಂದು ಧೈರ್ಯ ನನ್ನಲ್ಲಿಲ್ಲ...

ನಿನ್ನ ಬರವಣಿಗೆಯಲ್ಲಿ ಸತ್ವವೇ ಇಲ್ಲ ಎಂದ. ನೀನು ಯಾವುದನ್ನೂ ಮುಕ್ತವಾಗಿ ಬರೆಯುವುದಿಲ್ಲ ಯಾಕೆ? ಅಷ್ಟೊಂದು ಧೈರ್ಯ ನಿನ್ನಲ್ಲಿಲ್ಲವೇ? ಲೇಖನಿ ಖಡ್ಗಕ್ಕಿಂತ ಹರಿತ ಅಂತಿದ್ದೆಯಲ್ಲಾ...ಈಗೇನಾಯ್ತು? ಅನ್ಯಾಯವನ್ನು ನೋಡಿ ಸಹಿಸಿಕೊಳ್ಳುತ್ತೀಯಲ್ಲಾ ಮಾರಾಯ್ತಿ..ಛೇ...
ಅವನ ಪ್ರಶ್ನೆಗಳ ಸುರಿಮಳೆಗೆ ನಾನು ಮೌನಿ. ನನ್ನ ಉತ್ತರಕ್ಕೆ ಕಾಯದೆ ಅವನು ಸಿಟ್ಟಿನಿಂದ ಎದ್ದು ಹೋದ.
ನಾನು ನನ್ನದೇ ಆದ ಲೋಕಕ್ಕೆ ಮರಳಿದೆ. ಆಗಲೇ ಮನಸ್ಸು ಮಾತಾಡಿತು.
ಅಭಿ, ನಿನಗೆ ನನ್ನ ಒಡಲಾಳದ ಬೇಗುದಿ ಅರ್ಥವೇ ಆಗಿಲ್ಲ. ನೀನು ಹೇಳಿದ್ದು ಸರಿಯೇ ಇದೆ. ಆದರೆ ಕಟ್ಟುಪಾಡುಗಳಲ್ಲಿ ಬಂಧಿ ನಾನು. ಇದನ್ನು ಬೇಧಿಸಲು ಪ್ರತಿನಿತ್ಯವೂ ಹೆಣಗಾಡುತ್ತಾ ಇದ್ದೇನೆ. ಇದೊಂದು ಅನಿವಾರ್ಯತೆ. ಅನ್ಯಾಯವನ್ನು ಸಹಿಸುತ್ತೀಯಲ್ಲಾ? ಎಂದು ಹೇಳಿದ್ದಿ...
ಹೇಳ್ತೀನಿ ಕೇಳು, ಇದನ್ನೆಲ್ಲಾ ಇನ್ನೊಬ್ಬರಿಗೆ ಬೋಧನೆ ಮಾಡಲು ಸುಲಭ. ಆದರೆ ಅದನ್ನು ಅನುಷ್ಠಾನಕ್ಕೆ ತರಲು ಎಷ್ಟು ಕಷ್ಟವಿದೆ ಎಂಬುದು ನಿನಗ್ಗೊತ್ತಾ?
ಪುಸ್ತಕಗಳ ಜತೆ ನಾನೇ ಸೃಷ್ಟಿಸಿಕೊಂಡ ಭ್ರಾಮಕ ಲೋಕದಿಂದ ವಾಸ್ತವಕ್ಕೆ ಮರಳಿದಾಗಲೇ ನನಗೆ ಇದೆಲ್ಲಾ ಅರಿವಾದುದು. ಆದರೆ ನಾನೇನು ಮಾಡಲಿ? ನಾವೇ ಸೃಷ್ಟಿಸಿದ ಚೌಕಟ್ಟಿನೊಳಗೆ ಸಿಕ್ಕು ಅತ್ತಿಂದಿತ್ತ ಸುಳಿದಾಡುತ್ತಿದ್ದೇನೆ ಅಷ್ಟೇ.
ನೈತಿಕತೆಯ ಬಗ್ಗೆ ಪಾಠ ಹೇಳಿದವರೇ, ನೈತಿಕತೆಯ ಅರ್ಥವನ್ನು ಛಿದ್ರಗೊಳಿಸುವಾಗ ಮನಸ್ಸು ರೋಷಗೊಳ್ಳುತ್ತದೆ. ಅನ್ಯಾಯವೊಂದಕ್ಕೆ ನೇರ ಸಾಕ್ಷಿಯಾದಾಗ ನನ್ನೊಳಗಿನ ಮನಸ್ಸಾಕ್ಷಿ ನನ್ನನ್ನೇ ಅಣಕಿಸುತ್ತಿದೆ. ಆದರೆ ನಾನಿಲ್ಲಿ ಪರಿಸ್ಥಿತಿಗೆ ತಲೆಬಾಗಲೇ ಬೇಕಾಗಿದೆ. ಪ್ರಕೃತಿಯ ಸಹಜ ಕ್ರಿಯೆಗಳಾದ ಸೂರ್ಯೋದಯ, ಸೂರ್ಯಾಸ್ತದಂತೆ ಇವೂ ಕೂಡ ಜೀವನದ ಸಹಜ ಕ್ರಿಯೆಗಳಾಗಿ ಮಾರ್ಪಟ್ಟಿವೆ.
ಅಭಿ, ನಿನ್ನ ಗೊಣಗಾಟವೂ ಇದನ್ನೇ ಹೇಳುತ್ತದೆ ಅಲ್ಲವೇ? ಗಂಡಸು ತನ್ನ ದನಿಯಿಂದಲೇ ರೋಷ ವ್ಯಕ್ತಪಡಿಸಿದರೆ, ನಾವು ಹುಡ್ಗೀರು ಮೌನದಲ್ಲೇ ಅದನ್ನು ಕರಗಿಸುತ್ತೇವೆ. ನಮ್ಮಿಬ್ಬರ ನಡುವೆ ಇರುವ ವ್ಯತ್ಯಾಸವೂ ಅದೇ. ನೀವು ಸುಡುವ ಬೆಂಕಿಯಾದರೆ ನಾವು ಬೆಳಕಾಗುತ್ತೇವೆ. ಬೆಂಕಿ ಮತ್ತು ಬೆಳಕು ಒಂದೇ ಕಾಲಕ್ಕೆ ಸೃಷ್ಟಿಯಾಗುತ್ತದೆ. ನಮ್ಮ ಮನಸ್ಸು ಸೃಷ್ಟಿಗೆ ಅರ್ಥಕೊಡುತ್ತದೆ. ನಮ್ಮ ದೃಷ್ಟಿಗಳು ಜೀವನದ ಓರೆ ಕೋರೆಗಳನ್ನು ತಿದ್ದಲು ಯತ್ನಿಸುತ್ತವೆಯೇ ವಿನಾ..ನಮ್ಮ ಕ್ರಿಯೆಗಳನ್ನಲ್ಲ!
ನಮ್ಮ ಕೈಗಳು ಬಂಧಿಯಾಗಿವೆ. ನಮ್ಮ ನಾಲಗೆಯನ್ನು ಕಿತ್ತುಕೊಳ್ಳಲಾಗಿದೆ. ಆದರೂ ನಾವು ಸ್ವತಂತ್ರರು; ನಮ್ಮ ಭಾವನಾಲೋಕದಲ್ಲಿ. ನಿರ್ಜೀವ ವಸ್ತುಗಳ ಮೇಲೆ ಸಂಶೋಧನೆ ನಡೆಸಿದ ನಾವು ಜೀವವಿದ್ದರೂ ನಿರ್ಜೀವಿಗಳಂತೆ ಬದುಕುತ್ತಿದ್ದೇವೆ... ಅಲ್ಲ! ಕೇವಲ ಉಸಿರಾಡುತ್ತಿದ್ದೇವೆ.
ಮೌನಗಳಿಗೆ ಸಾವಿರ ಅರ್ಥವನ್ನು ಕಲ್ಪಿಸುವ ನಮಗೆ ಮನುಷ್ಯ ಸಂಬಂಧಗಳೇ ಅರ್ಥವಾಗುವುದಿಲ್ಲ...ಕಾಲನ ವೇಗದಲ್ಲಿ ಸಿಲುಕಿ ಸದಾ ತಿಕ್ಕಾಟದಲ್ಲಿರುವ ಮನುಷ್ಯ ಸಂಬಂಧಗಳು ಪ್ರಶ್ನೆಗಳನ್ನು ಹುಟ್ಟು ಹಾಕುತ್ತಲೇ ಇರುತ್ತವೆ. ನಾವು ಉತ್ತರ ನೀಡದೆ 'ಉತ್ತರ ಕುಮಾರ'ರಂತೆ ದರ್ಪ ಮೆರೆಯುವಲ್ಲಿ ತಲ್ಲೀನರಾಗಿದ್ದೇವೆ.
ಒಂದೆಡೆ ಪ್ರೀತಿಯ ಹಸಿವು, ಜನರ ಮನಸ್ಸನ್ನು ಬೆಸೆಯುವ ಬದಲು ಜೀವ ತೆಗೆಯುತ್ತದೆ. ಅಧಿಕಾರದ ಹಸಿವು ಇನ್ನೊಬ್ಬರನ್ನು ತುಳಿಯುತ್ತದೆ. ತಾನು ಬೆಳ್ಳಗಿರಬೇಕೆಂದು ಹಂಬಲಿಸುವವ ಇನ್ನೊಬ್ಬರಿಗೆ ಮಸಿ ಬಳಿಯುತ್ತಾನೆ. ಹಣ, ಅಂತಸ್ತು, ಅಧಿಕಾರವಿದ್ದವನು ಅನ್ಯಾಯವೆಸಗಿದರೂ ನಾವು ಮೂಕಪ್ರೇಕ್ಷಕರಂತೆ ಇದ್ದು ಬಿಡುತ್ತೇವೆ. ಅವನಿಗೇ ಜೈಕಾರ ಕೂಗುತ್ತೇವೆ, ಚಪ್ಪಾಳೆ ತಟ್ಟುತ್ತೇವೆ.
ಹೇಳು ಅಭಿ, ಇಂಥವರ ವಿರುದ್ಧ ಸೆಟೆದು ನಿಲ್ಲಲು ನಿನಗೆ ಗುಂಡಿಗೆ ಇದೆಯೇ?
ಉತ್ತರಿಸು...ನಿನಗೆ ಆ ಗುಂಡಿಗೆ ಇದೆಯೇ?
ಹೀಗೆ, ನನ್ನದೇ ಪ್ರಶ್ನೆಗಳು ಅಷ್ಟ ದಿಕ್ಕುಗಳಲ್ಲಿ ಮಾರ್ದನಿಸುತ್ತಿರಬೇಕಾದರೆ...
"ಇದೆ...ನಾನು ನಿಲ್ಲುತ್ತೇನೆ...ಈ ಅನ್ಯಾಯದ ವಿರುದ್ಧ ಹೋರಾಡುತೇನೆ' ಎಂದು ಅವನು ಘರ್ಜಿಸಿದಂತಾಯಿತು".
ನಾನು ನಡುಗಿ ಹೋದೆ. ಕತ್ತಲಲ್ಲಿ ಎರಡು ಹನಿ ಕಣ್ಣೀರು ಸುರಿಸಿ ಸುಮ್ಮನಾಗಬಹುದಾಗಿತ್ತು...ಆದರೆ ಹಣೆಯಲ್ಲಿ ಮೂಡಿದ ಬೆವರ ಹನಿ ಕುಂಕುಮವನ್ನು ಕರಗಿಸಿದಾಗ ಬಿಕ್ಕಳಿಸಿ ಅತ್ತುಬಿಟ್ಟೆ.
- ರಶ್ಮಿ ಕಾಸರಗೋಡು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


