ಮಕರಂದ/ದೋಣಿ

ಲಾಕ್ ಕೆಟ್ಟಿದೆ!

ಅಲ್ಮೆರಾದೊಳಗೆ ಲ್ಯಾಪ್‌ಟಾಪ್ ಇಟ್ಟು ಎಡಗೈಯಿಂದ ಅದರ ಎಡಗಡೆ ಬಾಗಿಲು ನೂಕಿ, ಬಲಗೈಯಿಂದ ಬಲಗಡೆ ಬಾಗಿಲು ನೂಕಿ ಹ್ಯಾಂಡಲನ್ನು ಮೇಲಕ್ಕೆ 'ಕಳಕ್‌' ಎಂದು...

ಲಾಕ್ ಕೆಟ್ಟಿದೆ!
Published On :

ಅಲ್ಮೆರಾದೊಳಗೆ ಲ್ಯಾಪ್‌ಟಾಪ್ ಇಟ್ಟು ಎಡಗೈಯಿಂದ ಅದರ ಎಡಗಡೆ ಬಾಗಿಲು ನೂಕಿ, ಬಲಗೈಯಿಂದ ಬಲಗಡೆ ಬಾಗಿಲು ನೂಕಿ ಹ್ಯಾಂಡಲನ್ನು ಮೇಲಕ್ಕೆ 'ಕಳಕ್‌' ಎಂದು ಎತ್ತಿ ಕೀ ಹೋಲಿನಲ್ಲಿಯೇ ಇದ್ದ ಕೀಯನ್ನು ಎಡಗಡೆಗೆ ತಿರುಗಿಸಿದೆ. ನಂತರ ರೂಢಿಯಿಂದೆಂಬಂತೆ ಬೀಗ ಬಿದ್ದಿದೆಯೋ ಇಲ್ಲವೋ ಎಂದು ನೋಡಲು ಒಮ್ಮೆ ಹ್ಯಾಂಡಲ್ ಜಗ್ಗಿದೆ. ಪುಸಕ್ಕನೆ ಕೆಳಕ್ಕೆ ಬಗ್ಗಿ ಬಾಗಿಲು ತೆರೆದುಕೊಂಡಿತು. ಅರೆ! ಕೀ ಸರಿಯಾಗಿ ತಿರುಗಿಸಿರಲಿಕ್ಕಿಲ್ಲ ಎಂದು ಮತ್ತೊಮ್ಮೆ ಇಡೀ ಪ್ರಕ್ರಿಯೆಯನ್ನು ಪುನರಾವರ್ತಿಸಿದೆ. ಊಹ್ಞೂಂ, ಮಗದೊಮ್ಮೆ ಪುನರಾವರ್ತಿಸಿದೆ. ಅದೇ ಫಲಿತಾಂಶ.
ಆಗ ಲಾಕ್ ಕೆಟ್ಟಿರುವುದು ಕನ್‌ಫರ್ಮ್ ಆಯಿತು.
ಆಫೀಸಿನ ಕ್ಯಾಮೆರಾ, ಎಲ್‌ಸಿಡಿ ಪ್ರೊಜೆಕ್ಟರು, ವಿಡಿಯೋ ಕ್ಯಾಮೆರಾ, ಲ್ಯಾಪ್‌ಟಾಪ್‌ಗಳೆಲ್ಲಾ ಅದರಲ್ಲಿದ್ದವು. ಅವೆಲ್ಲಾ ಸ್ಟಾಕ್‌ಲಿಸ್ಟಿನಲ್ಲಿ ನನ್ನ ಹೆಸರಿಗೇ ಅಲಾಟ್ ಆಗಿದ್ದವು. ಹೆಚ್ಚು- ಕಮ್ಮಿ ಆದರೆ ಸ್ಯಾಲರಿ ಕಟ್. ಹಾಗೇ ಬಿಡುವಂತಿಲ್ಲ. ಅಟೆಂಡರ್ ರಮೇಸಿಗೆ ಯಾರಾದರೂ ಬೀಗ ರಿಪೇರಿಯವರಿದ್ದರೆ ನೋಡು ಎಂದೆ.
'ಅತ್ರ ಎಲ್ಲೂ ಇಲ್ಲ ಸಾ, ಗುಂಚಿ ಸರ್ಕಲ್ಲತ್ರ ಒಬ್ನೇ ಒಬ್ನೈವ್ನೆ, ಅವುನ್ನ ಗಾಡಿಲ್ ಕರ್ಕಂಬರ್ಬೇಕು, ಗಾಡಿಲ್ ಕರ್ಕೊಂಡೊಗ್‌ಬಿಡ್ಬೇಕು, ಅವ್ನು ಕೈಯಿಕ್ಕಿರೆ ಇನ್ನೂರ್ ಬಿಚ್ಬೇಕು, ಅದುಕ್ಕಿಂತ ಒಂದ್ ರುಪಾಯ್ ಕಮ್ಮಿ ಮುಟ್ಟಲ್ಲ'.
ಆಫೀಸಲ್ಲಿ ಯಾರತ್ರನಾದ್ರೂ ಕೆಲ್ಸ ತಗೀಬಹುದು, ಆದ್ರೆ ಈ ಅಟೆಂಡರುಗಳತ್ರ ಊಹ್ಞೂಂ. ಮೇಲಿನೆಲ್ಲಾ ರೂಲ್ಸುಗಳೂ ಬೀಗ ರಿಪೇರಿಯವನದೋ ಇಲ್ಲಾ ಇವನದೋ ಗೊತ್ತಾಗಲಿಲ್ಲ.
ರಮೇಸಿಯನ್ನು ಬಿಟ್ಟು ಸೀದಾ ಸಾಹೇಬರತ್ರ ಹೋದೆ, 'ನೋಡಿ ಸಾರ್ ಈತರಕೀತರ ಆಗಿದೆ, ವಾಲ್ಯುಬಲ್ಸ್ ಎಲ್ಲಾ ಅದರಲ್ಲೇ ಇರದು, ಒಂದ್ ಜೀಪ್ ಕೊಡಿ, ರಿಪೇರಿ ಮಾಡೋನ್ನ ಕರ್ಕಂಬರ್ತೀನಿ' ಎಂದೆ. ಜತೆಗೆ ಇನ್ನೂರು ರುಪಾಯಿ ಪೇಮೆಂಟಿನ ಬಗ್ಗೆಯೂ ಹೇಳಲು ಮರೆಯಲಿಲ್ಲ.
ಅವರು ಒಮ್ಮೆ ವ್ಹೀಲ್‌ಛೇರಿನ ಹಿಂದಕ್ಕೆ ಒರಗಿ ಕಿರ್ರ್ ಎನ್ನಿಸಿ 'ಇಂಥವುಕ್ಕೆಲ್ಲಾ ಆಪೀಸಿಂದ ಎಕ್ಸ್‌ಪೆಂಡಿಚರ್ ಮಾಡೋಕೆ ಬರಲ್ಲ' ಅಂದುಬಿಟ್ಟರಲ್ಲದೆ, 'ಲಾಸ್ಟ್ ಮಂತು ನನ್ ಟೇಬಲ್ ಕೀ ಕಳದೋಗಿತ್ತು. ಕೈಯಿಂದ್ ನಾನೇ ಖರ್ಚು ಮಾಡಿ ತಗುಸ್ದೆ' ಎನ್ನುವುದನ್ನು ಒತ್ತಿ ಒತ್ತಿ ಹೇಳಿದರು. ಒಮ್ಮೆ ಮೀಸೆ ಕಿತ್ತುಕೊಂಡು ನಗಾಡಿದರು.
'ಸಾರ್ ಕೀ ಕಳದೊಗೋದ್ ಬೇರೆ, ಲಾಕ್ ಕೆಟ್ಟೋಗೋದ್ ಬೇರೆ, ಆಫೀಸ್ ಅಲ್ಮೆರಾ ರಿಪೇರಿಗೆ ನಾನ್ಯಾಕ್ ಸಾರ್ ಕೈಯಿಂದ ದುಡ್ ಕೊಡ್ಲಿ?'.
'ಕಳದೋಗದು ಕೆಟ್ಟೋಗದು ಎಲ್ಲ ಒಂದೆರಿ' ಎಂದವರು ಇವನತ್ತಿರ ಜಾಸ್ತಿ ಮಾತಾಡಿ ಪ್ರಯೋಜನವಿಲ್ಲ ಎಂಬ ಮುಖಭಾವದಲ್ಲಿ ಮುಂದಕ್ಕೆ ಬಗ್ಗಿ, 'ರಿಪೇರಿ ಮಾಡ್ಸದು ಮಾಡ್ಸಿ, ಯಾವ್ದಾದ್ರೂ ಬಿಲ್‌ನಲ್ಲಿ ಅಡ್ಜಸ್ಟ್ ಮಾಡಿ' ಎಂದು ಗುಟ್ಟು ಉಸುರಿದರು. ಅಲ್ಲಿಂದ ಎದ್ದೆ.
ಎಫ್.ಎಂ. ಹತ್ರ- ಅಂದ್ರೆ ಫೈನಾನ್ಸ್ ಮ್ಯಾನೇಜರ್ ಹತ್ರ ಒಂದ್ ಸಜೆಷನ್ ತಗಳನ ಅಂತ ಅವರ ಚೇಂಬರ್ ಕಡೆ ಹೊರಟೆ. ರೂಮಿನ ಮುಂದೆ ಒಂದೆರಡು ಸಾರಿ ಅಡ್ಡಾಡಿ ವೆದರ್ ಕ್ಲಿಯರ್ರಾಗಿರುವುದನ್ನು ಖಚಿತಪಡಿಸಿಕೊಂಡು ಒಳಹೊಕ್ಕೆ.
ಅವರಿಗೂ ಈತರಕೀತರ ಆಗಿದೆ ಎಂದು ತಿಳಿಸಿ ಸಾಹೇಬರು ಹೇಳಿಕೊಟ್ಟ ಗುಟ್ಟಿನ ಬಗ್ಗೆಯೂ ಪ್ರಸ್ತಾಪಿಸಿದೆ. ಯಾಕಂದ್ರೆ ನಾಳೆ ಪೇಮೆಂಟ್ ಮಾಡುವವರು ಇವರೇ ಆದ್ದರಿಂದ ಬಿಲ್ನಲ್ಲಿ ಅಡ್ಜಸ್ಟ್ ಮಾಡಲು ಹೋದರೆ ಅದುಕ್ಯಾಕ್ ಇಷ್ಟು, ಇದುಕ್ಯಾಕ್ ಅಷ್ಟು ಅಂತ ರಾಗ ಹಾಡ್ತಾರೆ. ಹಾಗಾಗಿ ಯಾವುದೇ ಮುಚ್ಚುಮರೆ ಇರಬಾರದೆಂದು ನೇರ ವಿಚಾರ ಮುಂದಿಟ್ಟೆ.
ಅವರಿಗೂ ಸಾಹೇಬರಿಗೂ ಅಷ್ಟಕ್ಕಷ್ಟೆ. ಬಿಲ್ ಅಡ್ಜಸ್ಟಿನ ಮಾತು ಕೇಳಿದ ತಕ್ಷಣ ಎಗರಿಬಿದ್ದರು. 'ಇಪ್ಪತ್ತ್ ವರ್ಷದಿಂದ ನೋಡ್ತಾ ಇದಿನ್ ಕಣ್ರೀ ಈವಯ್ಯನ್ ಬ್ಯಾಳೆಕಾಳ್ನ, ಕೊನಿಗೂ ಮದ್ಲಿಗೂ ಇದೇ ಆಗೋಯ್ತು' ಎಂದು ಮುಂತಾಗಿ ಜಾಲಾಡಿದರು. ನನಗೆ ಇಬ್ಬರ ಬೇಳೆಕಾಳಿನ ಕ್ವಾಲಿಟಿಯೂ ಗೊತ್ತಿದ್ದರಿಂದ ಹೂಂನ್‌ಸಾ, ಹೂಂನ್‌ಸಾ ಎಂಬ ಎರಡೇ ಸದ್ದನ್ನು ಹೊರಡಿಸಿ ಸೇಫರ್ ಸೈಡಾದೆ. ಕೊನೆಗೆ 'ಅದ್ಯಾಕ್ ಆಫೀಸ್ನಿಂದ ಖರ್ಚು ಮಾಡೋಕ್ಕಾಗಲ್ವೋ ಕೇಳಿ?' ಅಂದರೇ ವಿನಾ ಬಿಲ್ ತಗೊಂಬನ್ನಿ ನಾನ್ ಪೇಮೆಂಟ್ ಮಾಡ್ತೀನಿ ಅನ್ನುವ ಸೊಲ್ಲು ಮಾತ್ರ ಬರಲಿಲ್ಲ.
ಅದಾಗಲೇ ಸಂಜೆ ಆಗುತ್ತಿತ್ತು. ಬೀಗ ಹಾಕದೆ ಮನೆಗೋಗೋದು ಹೇಗೆ ಎಂದು ಚಿಂತಿಸುತ್ತಿರುವಾಗ ತೇಜಸ್ವಿಯವರು ನೆನಪಾದರು. ಅವರ 'ಅಣ್ಣನ ನೆನಪು' ಪುಸ್ತಕ, ಅದರಲ್ಲಿ ಅವರು ತಮ್ಮ ಸ್ಕೂಟರನ್ನು ಥರೋ ಆಗಿ ಬಿಚ್ಚಿ ರಿಪೇರಿ ಮಾಡಿದ ವಿವರಣೆ, ಒಮ್ಮೆ ಕುವೆಂಪುರವರ ಕಾರು ಕೆಟ್ಟಾಗ ರಾತ್ರಿ ಎಲ್ಲಾ ಚಿಂತಿಸಿ ಸಮಸ್ಯೆಯ ಮೂಲವನ್ನು ಕಂಡುಹಿಡಿದು ಬೆಳಗಾಗೆದ್ದು ಅವರೇ ರಿಪೇರಿ ಮಾಡಿದ್ದು, ಕಂಪ್ಯೂಟರ್ನಲ್ಲಿ ಕಾಣಿಸಿಕೊಂಡ ಸಮಸ್ಯೆಯನ್ನು ಕಂಡುಹಿಡಿದು ಅದರ ತಯಾರಿಕಾ ಕಂಪನಿಗೇ ತಿಳಿಸಿ ಅಚ್ಚರಿ ಹುಟ್ಟಿಸಿದ್ದು ಹಾಗೂ ಇನ್ನೂ ಹಲವು ಸಂದರ್ಭಗಳಲ್ಲಿ ಮಾಡಿಕೊಂಡ ಅವರ ಸ್ವಯಂರಿಪೇರಿಯ ಸಾಹಸಗಳೆಲ್ಲಾ ಕಣ್ಣ ಮುಂದೆ ತೆರೆದುಕೊಂಡಿತು.
ಅವರು ಅಷ್ಟೆಲ್ಲಾ ಮಾಡಿರೋವಾಗ ನಾನು ಒಂದ್ ಅಲ್ಮೆರಾ ರಿಪೇರಿ ಮಾಡೀಕಾಗಲ್ವೇ? ಅಷ್ಟೂ ಮಾಡ್ಲಿಲ್ಲಾ ಅಂದ್ರೆ ಅವರನ್ನ ಓದಿ ಕಲಿತಿದ್ದಾದ್ರೂ ಏನು ಎನಿಸಿತು. ಒಂದು ಕೈ ನೋಡೇಬಿಡೋಣ ಎಂದುಕೊಂಡು ಹೊರಟೆ.
ನಮ್ಮ ಜೀಪ್ ಡ್ರೈವರ್ ಬಳಿ ಸ್ಕ್ರೂಡ್ರೈವರ್ ತಂದು ಅಲ್ಮೆರಾದ ಇಡೀ ಲಾಕ್ ಸಿಸ್ಟಮ್ ಬಿಚ್ಚಿದೆ. ಹ್ಯಾಂಡಲನ್ನು ಮೇಲಕ್ಕೂ ಕೆಳಕ್ಕೂ ಹಲವು ಸಲ ಆಡಿಸಿದೆ, ಲಾಕ್ ಸಿಸ್ಟಮ್‌ಗೆ ಸಪೋರ್ಟ್ ಮಾಡುವ ಉದ್ದನೆಯ ಕಬ್ಬಿಣದ ರಾಡಿನಲ್ಲಿ ಏನೂ ತೊಂದರೆಯಿರಲಿಲ್ಲ. ಒಮ್ಮೆ ಕೀ ಬಳಸಿ ಲಾಕ್ ಹಾಕಿ ಮತ್ತೆ ತೆರೆದೆ. ಆಗ ಸಮಸ್ಯೆ ಎಲ್ಲಿದೆ ಅಂತ ಗೊತ್ತಾಯ್ತು. ಲಾಕ್ ಮಾಡಿದಾಗ ಅದನ್ನು ಹಿಡಿದಿಡುವ ಕಬ್ಬಿಣದ ತುಂಡು ಹಲವು ವರ್ಷಗಳ ಬಳಕೆಯಿಂದ ಸವೆದೂ ಸವೆದೂ ಕೆಳಕ್ಕೆ ಬಗ್ಗಿತ್ತು. ಹಾಗಾಗಿ ಲಾಕ್ ಮಾಡಿದಾಗ ಜಾರಿಕೊಳ್ಳುತ್ತಿತ್ತು. ಅದನ್ನು ಮೇಲಕ್ಕೆ ಎತ್ತಿ ಸ್ಕ್ರೂಡ್ರೈವರಿನ ಹಿಮ್ಮಡಿಯಿಂದ ಎರಡೇಟು ಹಾಕಿದೆ.
ಲಾಕ್ ಸರಿಹೋಯಿತು!

-ಮಲ್ಲಿಕಾರ್ಜುನ ಹೊಸಪಾಳ್ಯ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.