ಪರಲೋಕ
ವಾರಾನ್ನ, ಭಿಕ್ಷಾನ್ನ ಮಾಡಿಕೊಂಡೇ ಕನ್ನಡದ ಎಂ.ಎ. ಪದವಿ ಪಡೆದವರು!

ಕನ್ನಡ ಸಾಹಿತ್ಯದ ವಿಶಿಷ್ಟ ಪಾಂಡಿತ್ಯ ಎಸ್.ವಿ. ಪರಮೇಶ್ವರ ಭಟ್ಟರದ್ದು. ಅವರ ಮುಗುಳ್ನಗೂ ಇಂದಿಗೂ ಅಳಿಸಿಹೋಗದ ಚಿತ್ರ. ಆದರೆ, ಆ ನಗುವಿನ ಹಿಂದೆಯೂ ನೋವಿತ್ತೆನ್ನುವುದು ಅವರನ್ನು ಹತ್ತಿರದಿಂದ ಬಲ್ಲವರಿಗಷ್ಟೇ ಗೊತ್ತು. ಮುಂದೆ ಲೇಖಕರ ಮಾತಿನಲ್ಲೇ ಕೇಳಿಬಿಡಿ...
ಕನ್ನಡದ ಕಾಳಿದಾಸ, ಅಜಾತ ಶತ್ರು, ಮುಗುಳ್ನಗೆಯ ಮಹಾನುಭಾವ ಪರಮೇಶ್ವರ ಭಟ್ಟರನ್ನು ನಾನು 1955ಕ್ಕೂ ತುಸು ಹಿಂದಿನಿಂದಲೇ ಚೆನ್ನಾಗಿ ಬಲ್ಲೆ. ಭಟ್ಟರ ಮನೆ ಇದ್ದದ್ದು ಮೈಸೂರಿನ ಕೃಷ್ಣಮೂರ್ತಿ ಫಾರಮ್ಮಿನಲ್ಲಿ. ನಾವಿದ್ದ ಮನೆಯ ಸಾಲಿನಲ್ಲೇ ಹೆಚ್ಚೂ ಕಡಿಮೆ ನಿತ್ಯ ಅವರನ್ನು ನಾನು ನೋಡುತ್ತಿದ್ದೆ. ಮಾತನಾಡುತ್ತಿದ್ದೆ. ಜೊತೆಗೂಡಿ ಅಲ್ಲಲ್ಲಿ ಹೋಗುತ್ತಿದ್ದೆ.
ಮನೆಯ ಸಮೀಪಕ್ಕೆ ಅವರಿದ್ದುದ್ದರಿಂದ ಭಟ್ಟರ ಭವ್ಯ ಬದುಕನ್ನೂ ಹತ್ತಿರದಿಂದ ಕಂಡಿದ್ದೇನೆ. ಬರಡು ಬದುಕನ್ನೂ ಅಷ್ಟೇ ಹತ್ತಿರದಿಂದ ಕಂಡಿದ್ದೇನೆ. ಓದುವ ವರುಷಗಳಲ್ಲಿ ಕಿತ್ತು ತಿನ್ನುವ ಬಡತನ. ವಾರಾನ್ನ, ಭಿಕ್ಷಾನ್ನ ಮಾಡಿಕೊಂಡೇ ಕನ್ನಡದ ಎಂ.ಎ. ಪದವಿ ಪಡೆದರು! ಅದೂ ಫಸ್ಟ್ ರ್ಯಾಂಕಿನಲ್ಲಿ! ಆದರೆ ಇವರು ಎಂ.ಎ.ಗೆ ಕಟ್ಟಿದ್ದ ವರುಷ ಪರೀಕ್ಷೆಗೆ ಬರೆದಿದ್ದವರು ಇವರೊಬ್ಬರೆ! ಅದು ಬೇರೆ ಮಾತು. ಹಾಗಿರಲಿ ಬಿಡಿ. ಆದರೆ ಬಂದ ರ್ಯಾಂಕಿನಿಂದ ಭಟ್ಟರ ಪ್ರತಿಭೆಯನ್ನು ಅಳೆಯಬೇಕಿರಲಿಲ್ಲ. ಭಟ್ಟರದು ಪದವಿ ಪ್ರಶಸ್ತಿಗಳ ಮಟ್ಟ ಮೀರಿದ್ದಂಥ ದೈತ್ಯ ಪ್ರತಿಭೆ.
ಭಟ್ಟರು 25ರಲ್ಲೇ ಮದುವೆಯಾದವರು. ಯಾರನ್ನು? ಖ್ಯಾತ ಸಾಹಿತಿ, ಕಲಾವಿದ ಡಾ. ಎಚ್.ಕೆ. ರಂಗನಾಥ್ ಅವರ ಸ್ವಂತ ಸಹೋದರಿ, ರಾಜಲಕ್ಷ್ಮಿ ಅವರನ್ನು. ಸರಸ ಸುಂದರ ದಾಂಪತ್ಯ. ಕೆಲವು ವರುಷಗಳಷ್ಟೆ. ಮೆಚ್ಚಿನ ಮಡದಿ ರಾಜಲಕ್ಷ್ಮಿಗೆ ಇದ್ದಕ್ಕಿದ್ದಂತೆ ಹಿಸ್ಟೀರಿಯಾ ಅರ್ಥಾತ್ ಹುಚ್ಚು ಹಿಡಿಯಬೇಕೇ!? ಭಟ್ಟರು ತತ್ತರಿಸಿ ಹೋದರು. ವರುಷಗಳ ಕಾಲ ಮಾನಸಿಕ ಯಾತನೆಯಿಂದ ನರಳುತ್ತಿದ್ದ ಮಡದಿಯನ್ನು, ಮತ್ತಾಕೆಯ ಎರಡು ಮಕ್ಕಳನ್ನೂ ನಿತ್ಯ ಪೋಷಿಸುವುದರಲ್ಲಿ ಭಟ್ಟರು ಪಟ್ಟ ಪಾಡು ಪರಮಾತ್ಮನಿಗೇ ಪ್ರೀತಿ!
ಸಮಚಿತ್ತ ಕಳೆದುಕೊಂಡಿದ್ದ ಆ ಸಾಧ್ವಿಗೆ ಆಗಾಗ್ಗೆ ಭಟ್ಟರ ಮನೆಯ ತಾರಸಿಯ ಮೇಲೆ ನಿಂತು ಸುತ್ತಮುತ್ತಲಿನವರಿಗೆ ಕೇಳುವಂತೆ ಗಟ್ಟಿಯಾಗಿ ಚಿತ್ರಗೀತೆಗಳನ್ನು ವಿಚಿತ್ರ ಭಾವಭಂಗಿಗಳಲ್ಲಿ ಹಾಡುತ್ತಾ, ನಡುನಡುವೆ ನಡುಕ ಬರಿಸುವಂತೆ ನಗುತ್ತಾ ಅಡ್ಡಾಡುತ್ತಿರಬೇಕಾದರೆ, ಎಲ್ಲರಂತೆ ಮೇಲಿಂದ ಕೆಳಕ್ಕೆ ನೆಗೆದು ಬಿಟ್ಟಾಳೋ ಎಂಬ ಗಾಬರಿಯಿಂದ ನಿಂತ ನಿಲುವಿನಲ್ಲೇ ಮೇಲಕ್ಕೋಡುತ್ತಿದ್ದ ಭಟ್ಟರು ಮಡದಿಯನ್ನು ಮೃದುವಾಗಿ ರಮಿಸಿ ಕೆಳಕ್ಕೆ ಕರೆದುಕೊಂಡು ಬರುತ್ತಿದ್ದರು. ಒಂದು ಕೋಣೆಯಲ್ಲಿ ಬಂಧಿಸಿ, ಚಿಲಕ ಹಾಕುತ್ತಿದ್ದರು. ಬೆಳಗಾಗುವ ಮುನ್ನವೇ ಎದ್ದು, ಮಕ್ಕಳಿಬ್ಬರಿಗೂ ಸ್ನಾನ ಮಾಡಿಸಿ, ಬಟ್ಟೆ ಉಡಿಸಿ, ಶೃಂಗರಿಸಿ, ತಿಂಡಿ ತಿನಿಸಿ, ಅವನ್ನು ಶಾಲೆಗೆ ಕಳಿಸುವಷ್ಟರಲ್ಲಿ ಭಟ್ಟರು ಸುಸ್ತಾಗಿ ಹೋಗುತ್ತಿದ್ದರು. ಕೆಲವೊಮ್ಮೆ ಶಾಲೆಗೆ ಹೋಗಲು ಹಠ ಹಿಡಿಯುತ್ತಿದ್ದ ಸಣ್ಣವನನ್ನು ಎಡಗೈಯಲ್ಲಿ ಹೊತ್ತು ಬಲಗೈಯಲ್ಲಿ ಲೆದರ್ ಬ್ಯಾಗ್ ಹಿಡಿದು ತಮ್ಮ ಮನೆಯಿಂದ ಮಹಾರಾಜ ಕಾಲೇಜಿಗೆ ನಡೆದುಕೊಂಡೇ ಹೋಗಿ, ಆ ಪುಟ್ಟ ಬಾಲಕನನ್ನು ತಮ್ಮ ಕ್ಲಾಸಿಗೂ ಕರೆದೊಯ್ಯುತ್ತಿದ್ದರು. ಅವನನ್ನು ಟೇಬಲ್ ಮೇಲೆ ಕೂರಿಸಿ, ಎಂ.ಎ. ತರಗತಿಯ ವಿದ್ಯಾರ್ಥಿಗಳಿಗೆ ಮೆಚ್ಚೆನಿಸುವಂತೆ ಕಾಳಿದಾಸ, ಭವಭೂತಿ, ಶೂದ್ರಕರ ಮಹಾಕಾವ್ಯಗಳನ್ನು ಬೋಧಿಸುತ್ತಿದ್ದರೆಂದರೆ ಭಟ್ಟರ ಧೀಶಕ್ತಿ ಯಾವ ಮಟ್ಟದ್ದೆಂಬುದನ್ನು ಲೆಕ್ಕಹಾಕಿ.
ಈ ದಿನಗಳೆಲ್ಲ ಒಬ್ಬ ಹಣ್ಣು ಮಾರುವವನು ಭಟ್ಟರ ಮನೆಯ ಮುಂದೆ ನಿಂತು 'ಬಾಳೆಹಣ್ಣು ಬೇಕೇ ಬುದ್ದೀ' ಎನ್ನಲು ಒಂದು ರೀತಿಯ ನೋವಿನಿಂದ ನಕ್ಕ ಭಟ್ಟರು 'ಬೇಡ ಹೋಗಪ್ಪ... ನನ್ನ ಬಾಳೇ ಹಣ್ಣಾಗಿರುವಾಗ ಬೇರೆ ಬಾಳೇಹಣ್ಣು ಬೇಕಿಲ್ಲವಷ್ಟೇ!' ಎಂದು ಹೇಳುತ್ತಾ ಮನೆಯೊಳಕ್ಕೆ ಹೋದಾಗ ಕೇಳಿದ ಆ ಹಣ್ಣಿನ ವ್ಯಾಪಾರಿಗೆ ಏನೆಂದೂ ಅರ್ಥವಾಗದೇ ಪೆಚ್ಚಾಗಿ ಹೋದ. ಹೀಗೆ ವೈಯುಕ್ತಿಕ ಬದುಕು ಬರಡಾಗಿ ಹೋಗಿದ್ದರೂ ಪರಮೇಶ್ವರ ಭಟ್ಟರು ಮಾತ್ರ ತಮ್ಮ ವಿನೋದ ಪ್ರಜ್ಞೆ ಕಳೆದುಕೊಳ್ಳಲಿಲ್ಲ. ಅಂಥ ವಿನೋದ ಪ್ರಜ್ಞೆ ಇರದೇ ಹೋಗಿದ್ದರೆ ಪ್ರಾಯಶಃ ಭಟ್ಟರು ಅದೆಷ್ಟೋ ಸಲ ಆತ್ಮಹತ್ಯೆಗೆ ಯತ್ನಿಸುತ್ತಿದ್ದರೋ ಏನೋ?
ಒಮ್ಮೆ ಇವರ ಎಂ.ಎ. ವಿದ್ಯಾರ್ಥಿ ಬಂದ. ಅವನು ಎರಡು ಸಬ್ಜೆಕ್ಟ್‌ಗಳಲ್ಲಿ ಫೇಲಾಗಿದ್ದ. ಭಟ್ಟರನ್ನು ಕಾಣುತ್ತಲೇ ಹಲ್ಲು ಗಿಂಜುತ್ತಾ 'ಸಾರ್, ಈ ಸರ್ತಿ ಎರಡು ಸಬ್ಜೆಕ್ಟ್‌ಗಳು ಹೋಗ್ಬಿಡ್ತು. ಬರೋ ಸಪ್ಲಿಮೆಂಟರೀಲಿ ಒಂದಕ್ಕೂರ್ಲೋ ಅಥವಾ ಎರಡಕ್ಕೂ ಕೂರ್ಲೋ ?' ಎಂದು ಕೇಳಲು ನಕ್ಕ ಭಟ್ಟರು, 'ನೋಡಪ್ಪಾ ರಾಜಾ, ಒಂದಕ್ಕಾದ್ರೆ ನಿಂತ್ಕೋ, ಎರಡಕ್ಕಾದ್ರೆ ಕುಂತ್ಕೋ' ಎನ್ನಬೇಕೇ!?
ಇನ್ನೊಮ್ಮೆ ಭಟ್ಟರು ಸುಗಂಧ ರಾಜ ಹೂವಿನ ಹಾರವನ್ನು ಒಂದು ಕೈಯಲ್ಲಿ, ಇನ್ನೊಂದು ಕೈಯಲ್ಲಿ ದೊಡ್ಡ ಲೆದರ್ ಬ್ಯಾಗನ್ನು ಹಿಡಿದು ರಾಜಗಾಂಭೀರ್ಯದಿಂದ ಬೀಗುತ್ತಾ ಮನೆಯತ್ತ ಬರುತ್ತಿದ್ದರು. ನಾನವರನ್ನು ಕಂಡೆ, ಕೈ ಮುಗಿದೆ, ವಿನಯದಿಂದ 'ಏನ್ಸಾರ್, ಇವತ್ತು ಎಲ್ಲಿತ್ತು ಸಾರ್ ನಿಮ್ಮ ಭಾಷಣ? ಹಾರ ಬಹಳ ಜೋರಾಗಿದೆ' ಎನ್ನಲು ಭಟ್ಟರು ನಿಟ್ಟುಸಿರು ಬಿಡುತ್ತಾ, ಹಿಡಿದಿದ್ದ ಹಾರವನ್ನು ನನ್ನ ಕೈಗೆ ವರ್ಗಾಯಿಸುತ್ತಾ 'ಸಾಕಪ್ಪಾ ಸಾಕು, ಈ ಕೆಲವು ಕನ್ನಡ ಸಂಘಟನೆಯವರು ತಮ್ಮ ಶಕ್ತಿಗೂ ಮೀರಿ ನಾನು ಎಷ್ಟೇ ಬೇಡವೆಂದರೂ ಕೇಳದೆ ವಿಪರೀತ ಮರ್ಯಾದೆ ಮಾಡಿ ಕಳಿಸ್ತಾರೆ' ಎನ್ನಲು ನಾನು ಕುತೂಹಲದಿಂದ 'ಅಂಥಾದ್ದೇನ್ಸಾರ್, ಅವರು ಮಾಡಿದ ಅತಿರೇಕದ ಮರ್ಯಾದೆ?' ಎಂದು ಕೇಳಿದೆ. ಅದಕ್ಕವರು, 'ಮತ್ತಿನ್ನೇನಯ್ಯಾ ಕೇಶವ, ಬೇಡ ನಿಮಗೆ ತೊಂದರೆಯಾಗುತ್ತೆ, ನಿಮ್ಮದು ಬಡ ಕನ್ನಡ ಸಂಘ, ದುಡ್ಡಿನ ಹೊರೆ ನಿಮ್ಮ ಮೇಲೆ ಬೀಳಬಾರದು, ನಾನು ಥರ್ಡ್ ಕ್ಲಾಸಿನಲ್ಲಿಯೇ ಹೋಗುತ್ತೇನೆ ಎಂದು ಎಷ್ಟೇ ಬಡಿದುಕೊಂಡರೂ ಆ ಕನ್ನಡ ಕುವರರು ಕೇಳ್ಬೇಕಲ್ಲಾ! ಒಂದೇ ಪಟ್ಟು, ಇಲ್ಲಾ ಹಾಗೆನ್ನಬೇಡಿ. ನೀವು ಫಸ್ಟ್‌ಕ್ಲಾಸ್ನಲ್ಲೇ ಹೋಗ್ಬೇಕು, ಹಣದ ಬಗ್ಗೆ ನೀವೇನೂ ಯೋಚಿಸ್ಬೇಕಾದ್ದಿಲ್ಲ, ನೀವು ಹೆಸರಾಂತ ಕವಿಗಳು! ನಿಮ್ಮನ್ನು ಥರ್ಡ್‌ಕ್ಲಾಸ್ನಲ್ಲಿ ಕಳ್ಸಿದ್ರೆ ನಮ್ಮ ಮರ್ಯಾದೆ ಉಳಿಯುತ್ತದೆಯೇ ಸಾರ್ ಎಂದವರೇ ಬಲವಂತದಿಂದ ನನ್ನನ್ನು ಫಸ್ಟ್‌ಕ್ಲಾಸ್ನಲ್ಲೇ ಕಳುಹಿಸಿದ್ರು. ಬಲು ಭಂಡ ಕನ್ನಡಿಗರು' ಎಂದರು. ನಾನು ಕುತೂಹಲದಿಂದ 'ಚೆನ್ನಾಗಿದೆ, ಅಂದಹಾಗೆ ಯಾವ ಊರಿನಿಂದ ಫಸ್ಟ್ ಕ್ಲಾಸಿನಲ್ಲಿ ಬರ್ತಿದ್ದೀರಿ?' ಎಂದು ಕೇಳಿದೆ. 'ಆ ಶ್ರೀರಂಗಪಟ್ಟಣದಿಂದ ಈ ಮೈಸೂರಿಗೆ ಕೇಶವ. ಅನ್ಯಾಯ! ಅನ್ಯಾಯ!' ಎನ್ನುತ್ತಾ ಮನೆಯೊಳಕ್ಕೆ ಹೋದಾಗ ಕೇಳಿದ ನಾನು ಪಕ್ಕೆಬಿರಿಯಾ ಗಹಗಹಿಸಿ ನಕ್ಕೆ. ಅವರೂ ತಿರುಗಿ ಪಕಪಕನೆ ನಕ್ಕಾಗ ಅವರ ಇಕ್ಕಡೆಯ ಕೆನ್ನೆಗಳಲ್ಲೂ ಮೂಡಿದ ಗುಳಿಗಳಲ್ಲಿ ಒಂದೊಂದರಲ್ಲೂ ಅರೆಪಾವು ತುಪ್ಪವನ್ನು ತುಂಬಬಹುದಿತ್ತು!
ಅದೊಂದು ದಿನ ಭಟ್ಟರು ಬಿ.ಎ. ತರಗತಿಯ ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಿದ್ದರು. ನಡುವೆ ಜವಾನನೊಬ್ಬ ಬಂದ. 'ಈ ನೋಟೀಸನ್ನ ಓದ್ಬುಟ್ಟಿ ರುಜು ಆಕಿ ಕೊಡಿ ಬುದ್ದಿ' ಎಂದವನೆ ಪ್ರಿನ್ಸಿಪಾಲರು ಕಳುಹಿಸಿದ್ದ ಮೆಮೋವನ್ನು ಕೊಟ್ಟ. ಭಟ್ಟರು ಓದಿದರು ಗಟ್ಟಿಯಾಗಿ ನಕ್ಕರು. ಆ ಮೆಮೋವನ್ನು ಹುಡುಗರತ್ತ ಎತ್ತಿ ತೋರುತ್ತಾ 'ನೋಡಿ, ನಮ್ಮ ಪ್ರಿನ್ಸಿಪಾಲರ ಬುದ್ಧೀನ! ಯು ಆರ್ ರಿಕ್ವೆಸ್ಟೆಡ್ ಟು ಕವರ್ ಯುವರ್ ಪೋರ್ಷನ್ ಆ್ಯಂಡ್ ರಿಪೋರ್ಟ್ ಇಮ್ಮಿಡಿಯಟ್ಲಿ ಅಂತ ಬರೆದಿದ್ದಾರೆ. ಇವರ್ಗೇನಾದ್ರೂ ಬುದ್ಧಿ ಇದೆಯೇ? ಹೀಗಾ ಮೆಮೋ ಕೊಡೋದು? ಅಲ್ರಯ್ಯಾ, ನೀವೇ ನೋಡ್ತಿದ್ದೀರಲ್ಲಾ... ಹ್ಯಾವ್ ಐ ನಾಟ್ ಕವರ್ ಮೈ ಪೋರ್ಷನ್? ನೀವೇ ಹೇಳಿ' ಎಂದಾಗ ಇಡೀ ಕ್ಲಾಸಿಗೆ ಕ್ಲಾಸೇ ಕೊಠಡಿಯ ಅಟ್ಟ ಹಾರಿ ಹೋಗುವಂತೆ ಗಟ್ಟಿಯಾಗಿ ನಕ್ಕಿತು.
-ಬಿ.ಎಸ್. ಕೇಶವರಾವ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


