ಮಕರಂದ/ದೋಣಿ

ಬರಹ ದೀಪವಾಯಿತು ದಾರಿಯಾಯಿತು...

ಇದು ನಿನ್ನದೇ ಕತೆಯಾ? ಮೊದಲ ಬಾರಿ ಸೆಂಟಿಮೆಂಟ್ ಬರಹವೊಂದನ್ನು ಬ್ಲಾಗ್‌ನಲ್ಲಿ ಪೋಸ್ಟ್ ಮಾಡಿದಾಗ ಗೆಳತಿಯೊಬ್ಬಳು ಈ ರೀತಿ...

ಬರಹ ದೀಪವಾಯಿತು ದಾರಿಯಾಯಿತು...
Published On :

ಇದು ನಿನ್ನದೇ ಕತೆಯಾ? ಮೊದಲ ಬಾರಿ ಸೆಂಟಿಮೆಂಟ್ ಬರಹವೊಂದನ್ನು ಬ್ಲಾಗ್‌ನಲ್ಲಿ ಪೋಸ್ಟ್ ಮಾಡಿದಾಗ ಗೆಳತಿಯೊಬ್ಬಳು ಈ ರೀತಿ ಕೇಳಿದ್ದಳು. "ಅಲ್ಲ ಕಣೇ..ಇದೆಲ್ಲಾ ಸುಮ್ನೆ ಕಲ್ಪನೆ...ಬದುಕಿಗೂ ಆ ಲೇಖನಕ್ಕೂ ಯಾವುದೇ ಸಂಬಂಧವಿಲ್ಲ" ಎಂದು ಸುಳ್ಳು ಹೇಳಿದ್ದೆ.
ಆಕೆ ಅದನ್ನು ನಂಬಿದಳೋ ಬಿಟ್ಟಳೋ ನನಗೆ ಗೊತ್ತಿಲ್ಲ.. ನಾನು ಬರೆದ ಅದೇ ಹಳೆಯ ಲೇಖನವನ್ನು ಈಗ ಓದಿದರೆ ನಿಜವಾಗ್ಲೂ ನನಗೆ ನಗು ಬರುತ್ತದೆ.
ಅಯ್ಯೋ, ಇಷ್ಟೊಂದು ಚಿಕ್ಕ ವಿಷ್ಯವನ್ನು ನಾನು ಎಷ್ಟೊಂದು ಎಮೋಷನಲ್ ಆಗಿ ಬರೆದಿದ್ದೆ ಅಲ್ವಾ? ಪೆದ್ದಿ ನಾನು ಎಂದು ನನ್ನಷ್ಟಕ್ಕೇ ಹಣೆ ಚಚ್ಚಿಕೊಳ್ತೀನಿ.
ಈಗ ನಾನು ಹೀಗೆ ಅಂದುಕೊಳ್ಳುತ್ತಿದ್ದರೂ ಆ ಹೊತ್ತಿಗೆ ಆ ಚಿಕ್ಕ ವಿಷ್ಯ ನನ್ನ ಕಣ್ಣಲ್ಲಿ ಅದೆಷ್ಟು ನೀರು ತರಿಸಿತ್ತು!.. ಅದೊಂದು ವಿಷ್ಯಕ್ಕೆ ಕೊರಗಿ ಜೀವನವೇ ಬೇಡ ಎಂದು ಅನಿಸಿದ್ದೂ ಉಂಟು. ಆದರೆ ಆ ವೇದನೆಗಳನ್ನೆಲ್ಲಾ ಅಕ್ಷರ ರೂಪಕ್ಕಿಳಿಸಿದಾಗ ಮನಸ್ಸು ಶಾಂತವಾಗಿತ್ತು. ಹೀಗೆ ಬೇಜಾರಾದಾಗೆಲ್ಲಾ ಮನಸ್ಸಿನ ಖುಷಿಗಾಗಿ ಬರೆಯುತ್ತಲೇ ಹೋದೆ. ಮಾಯಾನಗರಿಯಲ್ಲಿ ಕಾಡುವ ಒಬ್ಬಂಟಿತನ, ಯಾರನ್ನು ವಿಶ್ವಾಸ ಮಾಡಬೇಕು, ಬೇಡ ಎನ್ನುವ ಜಂಜಾಟಗಳ ನಡುವೆಯೇ ಮನಸ್ಸಿಗೆ ತೋಚಿದ್ದನ್ನೆ ಗೀಚುತ್ತಲೇ ಹೋದೆ. ಬರವಣಿಗೆಯೊಂದಿಗೆ ಮನಸ್ಸು ಪಕ್ವವಾಗುತ್ತಾ ಹೋಯಿತು. ಜತೆಗೆ ಆಲೋಚನೆಯ ರೀತಿಯೂ ಹೊಸ ಆಯಾಮ ಪಡೆಯಿತು.
ಹೀಗೆ ಬರೆಯುತ್ತಿರುವಾಗಲೇ ನಡೆದು ಬಂದ ದಾರಿಯನ್ನೊಮ್ಮೆ ಹಿಂತಿರುಗಿ ನೋಡಿದರೆ ಅಲ್ಲಿ ಅದೆಷ್ಟೋ ಮೈಲಿಗಲ್ಲುಗಳು ಎದ್ದು ಕಾಣುತ್ತವೆ. ಅಂದೊಮ್ಮೆ ಕಣ್ಣು ಕಲಕಿಸಿದ್ದ ಅದೇ ಧೂಳು, ಬಿಸಿಯುಸಿರಲ್ಲಿ ಮೇಲೇರಿ ಮನಸ್ಸಲ್ಲೊಮ್ಮೆ ಮೋಡವಾಗಿ ಕಾಡಿ, ಮಳೆಯಂತೆ ಕಂಬನಿ ಸುರಿಸಿದೆ. ಯಾರದ್ದೋ ಕೈಗಳು ಕಣ್ಣೀರು ಒರೆಸಿವೆ... ಇನ್ಯಾರೋ ಹೆಗಲ ಮೇಲೆ ಕೈಯಿಟ್ಟು ನಾನಿದ್ದೀನಿ ಎಂದು ಧೈರ್ಯ ಹೇಳಿದ್ದಾರೆ. ನನ್ನವರ ಪ್ರಾರ್ಥನೆಗಳು ಮತ್ತೆ ಬದುಕಿಸಿವೆ. ಸೂಚನಾಫಲಕಗಳಂತೆ ದಾರಿ ತೋರಿದವರು...ಜತೆಯಾಗಿ ಹೆಜ್ಜೆ ಹಾಕಿದವರು..ಸುಮ್ ಸುಮ್ನೆ ಕಾಲೆಳೆದವರು...ಮನಸ್ಸು ನೋಯಿಸಿದವರು...ಕೆಲವರ ಹೆಜ್ಜೆ ಗುರುತುಗಳು ...ಇನ್ನು ಕೆಲವರ ಅಡ್ಡಗಾಲುಗಳು ಈ ದಾರಿಯುದ್ದಕ್ಕೂ ಇವೆ. ನಡೆದಂತೆಯೇ ಆ ದಾರಿ ಬೆಳೆಯುತ್ತಲೇ ಇದೆ...ಗಮ್ಯ ತಲುಪಲು ದಣಿವಾರಿಸಿಕೊಳ್ಳುತ್ತಲೇ ಇನ್ನೂ ಮುಂದೆ ಸಾಗಲೇಬೇಕಾಗಿದೆ.
ಬದುಕಿನ ಭಾಗವೇ ಆಗಿರುವ ಬರವಣಿಗೆಯ ವಿಷ್ಯಕ್ಕೆ ಬಂದರೆ, ಪ್ರತಿಯೊಂದು ಲೇಖನ ಬರೆದ ನಂತರವೂ ಛೇ..ಇದಕ್ಕಿಂತ ಚೆನ್ನಾಗಿ ಬರೆಯಬಹುದಿತ್ತಲ್ವಾ? ಎಂದು ಅನಿಸುತ್ತದೆ. ಬದುಕಲ್ಲಿ ನಡೆಯುವ ಕೆಲವೊಂದು ಘಟನೆಗಳೇ ಹಾಗೆ. ಕಂಪ್ಯೂಟರ್ ಕೀಲಿ ಮಣೆಯಲ್ಲಿ ಟೈಪ್ ಮಾಡುವಾಗ ತಪ್ಪಾದರೆ ತಿದ್ದಿಕೊಳ್ಳಬಹುದು, ಒಂದು ವೇಳೆ ಆವಾಗ ಮಾಡಿದ್ದೇ ಸರಿ ಎಂದು ಅನಿಸಿದರೆ Undo  ಆಪ್ಶನ್ ಕ್ಲಿಕ್ ಮಾಡಿ ಹಳೆಯದನ್ನು ಉಳಿಸಿಕೊಳ್ಳಬಹುದು. ಆದರೆ ಬದುಕಿನಲ್ಲಿ  ಈCTRL+Zಎಂಬ ಆಪ್ಶನ್ ಇರಲ್ಲ. ರೀ ಎಡಿಟ್ ಮಾಡುವಂತೆಯೂ ಇರಲ್ಲ. ಮನಸ್ಸು ಮಾಗಿದಂತೆ ಎಷ್ಟೊಂದು ಬದಲಾವಣೆಗಳು!. ಈ ಬದಲಾವಣೆಗಳಿಗೆಲ್ಲಾ ಕಾರಣ ಏನು ಎಂದು ಕೇಳಿದರೆ ಅದಕ್ಕೆ ಉತ್ತರ ಇಷ್ಟೇ...
ಒಂದು ಪ್ರೀತಿ...
ಇನ್ನೊಂದು ಹಸಿವು.

-ರಶ್ಮಿ ಕಾಸರಗೋಡು

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.