ಈ ಜೀವವ ನೀ ಮರೆಯದಿರು...
ಹೆಚ್ಚಿನ ಸಿನಿಮಾಗಳಲ್ಲಿ ತೋರಿಸುವಂತೆ ನಾಯಕ ನಾಯಕಿಯರ ಭೇಟಿ ಸ್ನೇಹಿತರ, ಸಂಬಂಧಿಕರ ಮದುವೆ ಸಮಾರಂಭದಲ್ಲಾಗುವಂತೆ ನಮ್ಮ ಭೇಟಿಯಾದುದು...

ಹೆಚ್ಚಿನ ಸಿನಿಮಾಗಳಲ್ಲಿ ತೋರಿಸುವಂತೆ ನಾಯಕ ನಾಯಕಿಯರ ಭೇಟಿ ಸ್ನೇಹಿತರ, ಸಂಬಂಧಿಕರ ಮದುವೆ ಸಮಾರಂಭದಲ್ಲಾಗುವಂತೆ ನಮ್ಮ ಭೇಟಿಯಾದುದು ಮದುವೆ ಕಾರ್ಯಕ್ರಮದಲ್ಲೇ. ಬಂಧುಗಳ ಮೇಲೆ ಕಣ್ಣು ಹಾಯಿಸುತ್ತಿರುವಾಗ ನೀನು ನನ್ನ ಕಣ್ಣಿಗೆ ಬಿದ್ದೆ. ನಾ ನಿನ್ನ ನೋಡಿದಾಗ ನೀನು ನನ್ನನ್ನೇ ನೋಡುತ್ತಿದ್ದುದು ಒಮ್ಮೆಗೆ ಮುಜುಗರ, ನಾಚಿಕೆ ಉಂಟು ಮಾಡಿದರೂ ನಂತರ ಏನೋ ಸಂತಸ ತಂದುಕೊಟ್ಟಿತು. ಆದರೂ ಯಾವುದೇ ಭಾವನೆಯನ್ನು ವ್ಯಕ್ತಪಡಿಸದೆ ಬೇರೆ ಕಡೆಗೆ ದೃಷ್ಟಿ ಹರಿಸಿದೆ. ಸ್ವಲ್ಪ ಸಮಯದ ಬಳಿಕ ನೀನಲ್ಲೇ ಇರುವೆಯೇನೋ ಎಂದು ಪರೀಕ್ಷಿಸಲು ನೀನಿದ್ದ ಸ್ಥಳ ನೋಡಿದರೆ ನೀನಲ್ಲಿರಲಿಲ್ಲ.
ಮದುವೆ ಊಟದ ಬಳಿಕ ಮಗದೊಮ್ಮೆ ನಿನ್ನ ದೃಷ್ಟಿ ನನ್ನ ಮೇಲಿದ್ದುದು ನನಗೆ ಆಶ್ಚರ್ಯವನ್ನುಂಟುಮಾಡಿತ್ತು. ಏಕೋ ಏನೋ ಹೃದಯವು ಜೋರಾಗಿ ಬಡಿದುಕೊಳ್ಳಲಾರಂಭಿಸಿತು. ನಿನ್ನನ್ನೇ ಸ್ವಲ್ಪ ಹೊತ್ತು ನೋಡಿದ ನಾನು ಬೇಗನೇ ಎಚ್ಚೆತ್ತುಕೊಂಡು ಆಚೆಈಚೆ ನೋಡಿ ಯಾರೂ ನಮ್ಮನ್ನು ನೋಡುತ್ತಿದ್ದುದನ್ನು ಗಮನಿಸಿಲ್ಲವೆಂದು ಸಮಧಾನಿಸಿಕೊಂಡೆ. ನೀನು ಮದುವೆ ಗಂಡಿನ ಹತ್ತಿರದ ಸಂಬಂಧಿ. ನಾನು ಹೆಣ್ಣಿನ ಹತ್ತಿರದ ಸಂಬಂಧಿಯಾದ್ದರಿಂದ ನಮ್ಮ ಎರಡನೇ ಭೇಟಿಗೆ ಹೆಚ್ಚಿನ ಸಮಯ ಹಿಡಿಯಲಿಲ್ಲ. ನಮ್ಮ ಮನೆಯಲ್ಲಿ ಸತ್ಯನಾರಾಯಣ ಪೂಜೆಯಿದೆ ಬರಬೇಕೆಂದು ಆಹ್ವಾನ ಬಂದಾಗ ಮೊದಲು ನೆನಪಾದುದೇ ನೀನು. ನಿಮಗೂ ಆಹ್ವಾನಿಸಿರಬಹುದು ನೀನೂ ಬರಬಹುದೆಂಬ ನಿರೀಕ್ಷೆಯಲ್ಲಿ ನಾನು ಅಲ್ಲಿಗೆ ಆಗಮಿಸಿದೆ, ನನ್ನ ನಿರೀಕ್ಷೆ ಸುಳ್ಳಾಗಲಿಲ್ಲ.
ಮೊದಲ ಭೇಟಿಯಲ್ಲಿ ಕಂಗಳು ಮಾತಾಡಿತ್ತೇ ಹೊರತು ಬಾಯಿ ತುಟಿಕ್ ಪಿಟಿಕ್ ಅಂದಿರಲಿಲ್ಲ. ಆದರೆ ನಮ್ಮ ಎರಡನೇ ಭೇಟಿಯು ನಗುವಿನಿಂದ ಆರಂಭವಾಗಿ ಅಲ್ಪ ಸ್ವಲ್ಪ ಮಾತಿನವರೆಗೆ ಬಂದು ನಿಂತಿತ್ತು. ಹೀಗೆ ಆರಂಭವಾದ ನಮ್ಮ ಪ್ರೀತಿಗೆ ನಾಳೆಗೆ ನಾಲ್ಕು ವರ್ಷ ತುಂಬುತ್ತದೆ. ಕಂಗಳ ಮಾತಿಂದ ಬೆಳೆದ ಪ್ರೀತಿ ಇಂದು ಹೆಮ್ಮರವಾಗಿ ಬೆಳೆದು ನಿಂತಿದೆ. ನಿನ್ನ ಮೊದಲ ನೋಟವೇ ನನ್ನನ್ನು ಪ್ರೀತಿಯ ಬಲೆಗೆ ನೂಕಿತ್ತು. ನನ್ನ ಹೃದಯದಲ್ಲಿ ಪ್ರೀತಿಯ ಆಲೆ ಎದ್ದಿತ್ತು. ನಿನ್ನ ನೋಟ, ಮಾತು, ನಗು, ಕೋಪ, ಚೇಷ್ಟೆಯನ್ನು ನಾನೆಂದೂ ಮರೆಯಲಾರೆ.
ಪ್ರೇಮಿಗಳ ಮಧ್ಯೆ ಮೊಬೈಲ್, ಎಸ್.ಎಂ.ಎಸ್. ಇ-ಮೇಲ್ ಕಾರುಬಾರು ಜೋರಾಗಿರುವಾಗ ನಾನು ಪತ್ರ ಬರೆಯುತ್ತಿರುವುದು ನಿನಗೆ ವಿಚಿತ್ರ ಎಂದೆನಿಸಬಹುದು. ನಾನು ಪತ್ರ ಬರೆಯಲು ಕಾರಣವಿದೆ. ಈ ಪತ್ರವನ್ನು ಓದಿ ಹಿಂದಿನದ್ದೆಲ್ಲವನ್ನು ನೆನದು ಒಂದು ಮುಗುಳ್ನಗು ನಿನ್ನ ಮೊಗದಲ್ಲಿ ಮೂಡಿದರೆ ನಾನು ಪತ್ರ ಬರೆದದ್ದಕ್ಕೂ ಸಾರ್ಥಕತೆ ಸಿಗುವುದು. ಈ ಪತ್ರಕ್ಕೆ ಪ್ರತ್ಯುತ್ತರ ನಿರೀಕ್ಷೆಯಲ್ಲಿರುವ.
ಇಂತಿ ನಿನ್ನ ಪ್ರೀತಿಯ.
- ಎನ್. ಹರ್ಷಿತ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


