ಮಕರಂದ/ದೋಣಿ

ಅಪ್ಪ ಹೇಳಿದ ಆ ಒಂದು ಮಾತು

ನಮ್ಮ ತಂದೆಗೆ ಕೆಲಸ ಮಾಡುವ ಶಕ್ತಿ ಬಂದಾಗಿನಿಂದಲೂ ಬೇರೆಯವರ ಮನೆಯಲ್ಲಿ ಜೀತ ಮಾಡಿಕೊಂಡು...

ಅಪ್ಪ ಹೇಳಿದ ಆ ಒಂದು ಮಾತು
Published On :

ನಮ್ಮ ತಂದೆಗೆ ಕೆಲಸ ಮಾಡುವ ಶಕ್ತಿ ಬಂದಾಗಿನಿಂದಲೂ ಬೇರೆಯವರ ಮನೆಯಲ್ಲಿ ಜೀತ ಮಾಡಿಕೊಂಡು ಬಂದವರು. ಹೆಬ್ಬೆಟ್ಟಾದರೂ ಜೀವನದ ಪಾಠವನ್ನು ಕಲಿಸುವುದರಲ್ಲಿ ಯಾರಿಗೇನೂ ಕಮ್ಮಿ ಇಲ್ಲ. ಮನುಷ್ಯನಾದವನಿಗೆ ಸ್ವಾಭಿಮಾನ ಇರಬೇಕು ಎಂದು ಹೇಳಿದವರೇ ಅವರು.

ಹಿಂದೆ ಅಪ್ಪ ತೋಟದ ಕೂಲಿ ಕೆಲಸಕ್ಕೆಂದು ದೂರದ ಹಳ್ಳಿಗೆ ಹೋದರೆ ವಾರಕ್ಕೊಮ್ಮೆ ಮನೆಗೆ ಬರೋರು. ನಮ್ಮದು ಹಿತ್ತಿಲಲ್ಲಿ ತೆಂಗಿನ ಗರಿಗಳ ಪುಟ್ಟ ಗುಡಿಸಲಿತ್ತು. ಪ್ರತಿ ಬಾರಿಯೂ ಅಪ್ಪ ಮನಗೆ ಬರುವಾಗ ಕತ್ತಲಾಗುತ್ತಿತ್ತು. ಅಪ್ಪ ಮನೆ ಬಾಗಿಲನ್ನು ತಲುಪುವ ಮುಂಚೆಯೇ ಕೂಸು ಎಂದು ಕೂಗಿಕೊಂಡು ಬರುತ್ತಿದ್ದ. ಬರುವಾಗ ಬೊಂಡ, ಪಕೋಡ, ಬಜ್ಜಿ, ಬಾಳೆಹಣ್ಣು, ದ್ರಾಕ್ಷಿ ಇಂತಹ ತಿನಿಸುಗಳು ಜೊತೆಗಿರುತ್ತಿದ್ದವು. ಅಪ್ಪನ ಕೂಗನ್ನು ಕೇಳಿ ನಾನು ಅವ್ವನಿಗೆ ಮಲಗಿದ್ದಾನೆ ಅಂತ ಹೇಳಿಬಿಡು ಎಂದು ನಿದ್ರೆ ಬಂದವನ ರೀತಿ ನಟನೆ ಮಾಡುತ್ತಿದ್ದೆ. ಮನೆ ಒಳಗೆ ಕಾಲಿಡುತ್ತಿದ್ದಂತೆ ಪಕ್ಕದಲ್ಲಿ ಕುಳಿತು ಏಳು ಮಗ, ಏಳು ಕೂಸು ಎಂದು ತಂದ ತಿಂಡಿಯನ್ನು ತಿಂದು ಮುಗಿಸುವ ತನಕ ಅಪ್ಪನಿಗೆ ನೆಮ್ಮದಿ ಇರಲಿಲ್ಲ. ಒಂದು ವಾರದ ಪ್ರೀತಿಯನ್ನು ಆ ರಾತ್ರಿ ಸಾಧ್ಯವಾದಷ್ಟು ಅನುಭವಿಸುತ್ತಿದ್ದರು. ರಾತ್ರಿ ಪೂರ್ತಿ ತಾನು ಕೆಲಸ ಮಾಡುವಾಗ ನಡೆದ ಕೆಲವು ಘಟನೆಗಳನ್ನು ಹೇಳುತ್ತಿದ್ದರು.

ಸಾಮಾನ್ಯವಾಗಿ ಅಪ್ಪಂದರಿಗೆ ಕಿರಿಯ ಮಗನ ಮೇಲೆ ಪ್ರೀತಿ ಜಾಸ್ತಿ. ಅದು ನನಗೂ ಸಿಕ್ಕಿತ್ತು. ಅಣ್ಣನಿಗಿಂತ ನನ್ನ ಕಂಡರೆ ಅದೇನೋ ಒಂದು ರೀತಿಯ ಪ್ರೀತಿ. ನನ್ನ ಕೆಲವು ಸಣ್ಣ ಪುಟ್ಟ ತಪ್ಪುಗಳನ್ನು ಕಂಡು ಅವ್ವ ಬೈದರೆ, ಹಾಗೆಲ್ಲ ಯಾಕ್ ಬೈಯ್ತಿಯಾ ಅವನು ಇನ್ನೂ ಕೂಸು ಎಂದು ಮುದ್ದಿಸುತ್ತಿದ್ದರು. ಸರಿ ತಪ್ಪುಗಳನ್ನು ತಕ್ಕ ಮಟ್ಟಿಗಾದರೂ ತಿಳಿಯುವ ಹಂತಕ್ಕೆ ಬಂದಿದ್ದರೂ ಅಪ್ಪನಿಗೆ ನಾನಿನ್ನೂ ಚಿಕ್ಕಮಗುವಾಗಿದ್ದೆ. ಕೆಲಸದಿಂದ ಮನೆಗೆ ಕಾಲಿಡುವ ಮುನ್ನವೇ ಅಪ್ಪನಿಗೆ ಬೇಕಾಗಿದ್ದುದು ಮಗನ ಪ್ರೀತಿಯೇ ಹೊರತು, ವಾರ ಪೂರ್ತಿ ದಣಿದ ದೇಹಕ್ಕೆ ರಜಾ ದಿನದ ವಿಶ್ರಾಂತಿಯಲ್ಲ ಅನ್ನಿಸುತ್ತಿತ್ತು.

ಅಪ್ಪನಿಗೆ ತಾತನಿಂದ ಸಿಕ್ಕ ಆಸ್ತಿಯೆಂದರೆ ಒಳ್ಳೆಯ ಮೀನು ಶಿಕಾರಿ ಮಾಡುವುದು. ಮನೆಯಲ್ಲಿದ್ದಾಗಲೆಲ್ಲ ಮೀನಿನ ಶಿಕಾರಿಗೆ ಹೋಗುವುದು. ಅಪ್ಪನಿಗೆ ನಾನಿಲ್ಲದೆ ಮೀನು ಹಿಡಿಯುವ ಮನಸ್ಸೆ ಬರುವುದಿಲ್ಲವಂತೆ. ಅದಕ್ಕೆ ಪ್ರತಿ ಬಾರಿಯು ಜೊತೆಯಲ್ಲಿ ನಾನಿರಲೇಬೇಕು. ಮೀನಿನ ಗಾಳ, ಕುಡುಗೋಲು ತೆಗೆದುಕೊಂಡು ಹೊರಟರೆ ಮತ್ತೆ ಮನೆ ಕಡೆ ನಡೆಯುವುದು ಸಂಜೆಯೇ. ನಡೆದುಹೋಗುವಾಗ ದಾರಿಯಲ್ಲಿ ಮುಳ್ಳು ಇದ್ದ ಸೂಚನೆಯನ್ನು ಕಂಡು 'ನಡಿಬೇಡ. ಮುಳ್ಳು ಇದೆ ಎಂದು  ಹೆಗಲ ಮೇಲೆ ಕೂರಿಸಿಕೊಂಡು ಸಾಗುತ್ತಿದ್ದರು'. ಅಪ್ಪ ಎಂದೂ ಚಪ್ಪಲಿ ಹಾಕಿದವರಲ್ಲ. ಎಲ್ಲಿ ಹೋದರೂ ಬರಿಗಾಲಲ್ಲಿ. ಆಗ ನಾ ಕೇಳಿದ ಮಾತು ಇಂದಿಗೂ ಮನಸ್ಸನ್ನು ತೊರೆಯುವ ಪ್ರಯತ್ನ ಮಾಡಿಲ್ಲ. ಅಪ್ಪ ನಿನ್ನ ಕಾಲಿಗೆ ಯಾಕೆ ಮುಳ್ಳು ಚುಚ್ಚಲ್ಲ? ಎಂದು ಕೇಳಿದರೆ, ನನ್ಗೆ ಮುಳ್ಳು ಚುಚ್ರೆ ನೋವಾಗಾಲ್ಲ, ನಿನ್ಗೆ ಕಾಲ್ಗೆ ಚುಚ್ಬಿಟ್ರೆ ಎಂದು ಒಳ್ಳೆ ದಾರಿ ಕಾಣುವವರೆಗೂ ಸಾಗುತ್ತಿದ್ದರು.

'ನೀನು ಒಳ್ಳೆಯವನಾಗು, ಯಾರ ಜೊತೆಯಲ್ಲೂ ಜಗಳಕ್ಕೆ ಹೋಗಬೇಡ, ನಾಲ್ಕು ಜನ ಮೆಚ್ಚುವವನ ಹಾಗೆ ಮಾತನಾಡು ಎಂದು ಹೇಳಿದರೇ ಹೊರತು ಎಂದು ಚೆನ್ನಾಗಿ ಓದಿ, ಒಳ್ಳೆಯ ಕೆಲ್ಸಕ್ಕೆ ಸೇರು ಎಂದು ಹೇಳಿದವರಲ್ಲ. ಆಗಾಗ್ಗೆ ತಪ್ಪದೇ ಒಂದು ಮಾತನ್ನು ಹೇಳುತ್ತಿದ್ದರು ಕೂಸೆ 'ನೀನು ನನ್ನಂತೆ ಆಗ್ಬೇಡ ಗೊತ್ತಾಯ್ತಾ" ಎಂದು ಹೇಳಿದರೆ ನಾನು ಸುಮ್ಮನೆ ತಲೆಯಾಡಿಸುತ್ತಿದ್ದೆ. ಯೋಚನೆ ಮಾಡುವ ಶಕ್ತಿ ಬೆಳೆದಂತೆ ಅಂದು ಹೇಳಿದ್ದು ನೆನಪಿಗೆ ಬಂದು ಅಪ್ಪ ನನ್ನಂತೆ ಆಗ್ಬೇಡ ಎಂದು ಹೇಳಿದ್ರಲ್ಲ ಯಾಕೆ? ಕುಡಿತ ಜೂಜಿನ ದಾರಿ ಹಿಡಿದವರಲ್ಲ. ಸದಾ ಬೀಡಿ ಸೇದುವುದನ್ನು ಬಿಟ್ಟರೆ ಎಲ್ಲಾ ರೀತಿಯಲ್ಲೂ ಒಳ್ಳೆಯವರೆ. ಅಂದ ಮೇಲೆ ನಾ ಅಪ್ಪನ ಹಾಗೆ ಒಳ್ಳೆಯವನಾಗುವುದು ಬೇಡವೇ. ಯಾವ ಉದ್ದೇಶದಿಂದ ಹೇಳಿದರು ಎಂಬುದು ಅರ್ಥವಾಗಲೇ ಇಲ್ಲ. ಆದ್ರೆ ಇಂದು ನನಗೆ ಅಪ್ಪನ ಆ ಒಂದು ಮಾತಿನ ಉದ್ದೇಶ ಅರ್ಥವಾಗಿದೆ. ಈ ನಮ್ಮ ಬಡತನ, ಜೀವನದುದ್ದಕ್ಕೂ ಮುಳ್ಳಿನ ದಾರಿ, ಪರರ ಕೈ ಕೆಳಗಿನ ಜೀತ ಇವೆಲ್ಲವೂ ನನಗೇ ಕೊನೆಯಾಗಲಿ, ನಿನಗದು ಬೇಡ. ನಾ ಅನುಭವಿಸುತ್ತಿರುವ ಈ ಸ್ಥಿತಿ ನಿನ್ನ ಬದುಕಿನಲ್ಲಿ ಬಾರದೇ ಇರಲಿ ಎಂದು...

- ನಾಗೇಶ ಕಾರ್ಯ, ಮೈಸೂರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.