ಮಕರಂದ/ದೋಣಿ

ಮುಂದಾಲೋಚನೆ...

Published On :

ಒಮ್ಮೆ ಇಲಿಯೊಂದಕ್ಕೆ ತಿನ್ನಲಿಕ್ಕಾಗಿ ಹಲವು ದಿನಗಳಿಂದ ಏನೂ ಸಹ ಸಿಗಲಿಲ್ಲ. ಅದು ಆಹಾರಕ್ಕಾಗಿ ಎಲ್ಲಾ ಕಡೆ ಹುಡುಕಾಡಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಬಡಪಾಯಿ ಇಲಿಯು ಹಸಿವಿನಿಂದ ತತ್ತರಿಸಿತು. "ಪರಿಸ್ಥಿತಿಯು ಇದೇ ರೀತಿಯಲ್ಲಿ ಮುಂದುವರೆದಿದ್ದೇಯಾದರೆ, ತಾನು ಸಾಯುವುದಂತೂ ಖಂಡಿತ" ಎಂಬುದಾಗಿ ಮನದಲ್ಲೇ ಆಲೋಚಿಸಿತು.
ಮತ್ತೆ ಆಹಾರವನ್ನು ಹುಡುಕಲು ಹೊರಟ ಇದಕ್ಕೆ ಒಂದು ಮಣ್ಣಿನ ಗಡಿಗೆಯು ಕಾಣಿಸಿತು. ಅದಕ್ಕೆ ಒಂದು ಸಣ್ಣ ರಂಧ್ರವಿತ್ತು. ಈ ಗಡಿಗೆಯನ್ನು ಕಂಡ ಇಲಿಯು ಇದರ ಒಳಗೆ ಏನಾದರೂ ಆಹಾರ ಸಿಗಬಹುದೆಂದು ಭಾವಿಸಿ ಆ ರಂಧ್ರ ಮೂಲಕ ಒಳಕ್ಕೆ ಹೋಗಲು ಪ್ರಯತ್ನಿಸಿತು. ಕೆಲ ದಿನಗಳಿಂದ ಊಟವಿಲ್ಲದೆ ಬಳಲಿ ಬೆಂಡಾಗಿದ್ದ ಇಲಿಯು ರಂಧ್ರದ ಮೂಲಕ ಒಳಕ್ಕೆ ನುಸುಳುವಲ್ಲಿ ಯಶಸ್ವಿಯಾಯಿತು.
ಅದರಲ್ಲಿ ಅರ್ಧದಷ್ಟು ಆಹಾರ ಧಾನ್ಯಗಳು ಇದ್ದವು. ಹಸಿವಿನಿಂದ ಬಳಲಿದ್ದ ಇಲಿಯ ಸಂತೋಷಕ್ಕೆ ಪಾರವೇ ಇಲ್ಲವಾಯಿತು. ಅದು ಒಂದೇ ಸಮನೆ ಧಾನ್ಯಗಳನ್ನು ತಿನ್ನಲಾರಂಭಿಸಿತು. ಆದರೆ ಹೊಟ್ಟೆಯ ಗಾತ್ರವು ದೊಡ್ಡದಾಗಿ ಇನ್ನಷ್ಟು ತಿನ್ನಲು ಸಾಧ್ಯವಿಲ್ಲದಂತಾಯಿತು. ಹೊಟ್ಟೆ ತುಂಬಿಸಿಕೊಂಡ ಇಲಿಯು ಈಗ ಹೊರ ನಡೆಯಲು ನಿರ್ಧರಿಸಿತು. ಆದರೆ ಅದರ ಹೊಟ್ಟೆಯ ಗಾತ್ರವು ದೊಡ್ಡದ್ದಾಗಿದ್ದರಿಂದಾಗಿ ಆ ಸಣ್ಣ ರಂಧ್ರದ ಮೂಲಕ ಹೊರಬರಲು ಸಾಧ್ಯವಾಗದಾಯಿತು. ಎಷ್ಟೇ ಪ್ರಯತ್ನಿಸಿದರೂ ಫಲ ಸಿಗಲಿಲ್ಲ. ಕೆಲ ಸಮಯದ ನಂತರ ಬೇರೊಂದು ಇಲಿಯು ಇಲ್ಲಿಂದ ಹಾದು ಹೋಗುವಾಗ ಒಳಗಿದ್ದ ಇಲಿಯನ್ನು ಕುರಿತು "ಏನು ಸಮಾಚಾರ?" ಎಂದು ಕೇಳಿತು. ಆಗ ಒಳಗೆ ಸಿಕ್ಕಿ ಹಾಕಿಕೊಂಡಿದ್ದ ಇಲಿಯು ಇದುವರೆವಿಗೂ ನಡೆದಂತಹ ಎಲ್ಲಾ ಸಂಗತಿಗಳನ್ನು ವಿವರಿಸಿತು. ಇದನ್ನೆಲ್ಲಾ ಗಂಭೀರವಾಗಿ ಆಲಿಸಿದ ಇಲಿಯು "ನಿನ್ನ ಹೊಟ್ಟೆ ಸಣ್ಣದಾಗುವ ತನಕ ಏನನ್ನೂ ತಿನ್ನದೇ ಇಲ್ಲೇ ಇರು. ನಂತರ ಹೊರಬರಲು ಸಾಧ್ಯವಾಗುವುದು" ಎಂಬುದಾಗಿ ಸಲಹೆ ನೀಡಿತು. ಅಲ್ಲದೆ "ಮುಂದಾಲೋಚನೆಯಿಲ್ಲದೆ ಕೆಲಸ ಮಾಡುವ ಪ್ರತಿಯೊಬ್ಬರಿಗೂ ಕೂಡ ಇಂತಹ ತೊಂದರೆಗಳು ತಪ್ಪಿದ್ದಲ್ಲ" ಎಂದು ಎಚ್ಚರಿಕೆಯನ್ನೂ ನೀಡಿ ಅಲ್ಲಿಂದ ಹೊರಟು ಹೋಯಿತು.

- ಕೆ.ಎನ್. ಅಕ್ರಂಪಾಷ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.