ಮಕರಂದ/ದೋಣಿ

ಹಾಡಿನ ಹಾದಿ

ಹಾಡಿನ ಹಾದಿ
Published On :

ಗಮಕದ ಭವ್ಯ ಇತಿಹಾಸ ಹಲವರಿಗೆ ತಿಳಿದಿಲ್ಲ. ಇದು ಸಂಸ್ಕೃತ ಶಬ್ದ. ಸ್ಪಷ್ಟಪಡಿಸು, ವಿವರಿಸು, ತಿಳಿಯ ಹೇಳು- ಎಂಬುದು 'ಗಮಕ' ಪದಕ್ಕೆ ಅರ್ಥ. ಕ್ರಿ.ಪೂ. 1ನೇ ಶತಮಾನದಲ್ಲಿ ವಾತ್ಸಾಯನನು 'ಗೀತಪಠಿತಂ' ಎಂಬ ಗ್ರಂಥದಲ್ಲಿ 64 ಕಲೆಗಳಲ್ಲಿ 31ನೆಯದು ಪುಸ್ತಕವಾಚನ, 'ಗಮಕವಾಚನ' ಎನ್ನುತ್ತಾನೆ. ಬುದ್ಧನು ಪರಿಣತನಾಗಿದ್ದ ಚತುಷಷ್ಠಿ ಕಲೆಗಳಲ್ಲಿ 28ನೆಯದೇ 'ಗಮಕಕಲೆ'.
ಗಮಕವು ಕರ್ನಾಟಕದ ವಿಶಿಷ್ಟ ಕಲೆ. ಇದಕ್ಕೆ ಸಾವಿರ ವರ್ಷಗಳ ಇತಿಹಾಸವಿರುವುದಾದರೂ ಆದಿಕವಿ ವಾಲ್ಮೀಕಿಯು ಬರೆದ ರಾಮಾಯಣವನ್ನು ಹಾಡುಗಬ್ಬವಾಗಿ ಬರೆದು, ಕುಶಲವರಿಂದ ಹಾಡಿಸಿದ್ದರಿಂದ ಕುಶಲವರು ಆದಿ ಗಮಕಿಗಳೆಂದೂ ಅವರಿಂದಲೇ ಈ ಕಲೆಗೆ 'ಕುಶೀಲವ' ಎಂದರೆ ಕಾವ್ಯಗಾಯನ, ಕಾವ್ಯವಾಚನ ಎಂಬ ಪದ ರೂಢಿಯಲ್ಲಿದೆ ಎನ್ನುತ್ತಾರೆ ವಿದ್ವಾಂಸರು. ಕಾವ್ಯಗಳು ಜನರಿಗೆ ಸಮರ್ಥವಾಗಿ ಮುಟ್ಟಿಸಲು ಗಮಕಿಗಳು ಬೇಕು.
ಕವಿಯ ಕಾವ್ಯವನ್ನು ಶ್ರೋತೃಗಳಿಗೆ ಇಂಪಾಗಿ ಸಮೀಚೀನ ಪರಿಣಾಮವನ್ನುಂಟು ಮಾಡುವಂತೆ ಕಾವ್ಯದ ಅರ್ಥ, ರಸ, ಭಾವಗಳರಿತು ಆಯಾ ಸನ್ನಿವೇಶಗಳಿಗೆ ಅನುಗುಣವಾದ ರಾಗಗಳಿಂದ ವಾಚನ ಮಾಡುವ ಕಲೆ ಇದು. ಗಮಕ ಅಥವಾ ಕಾವ್ಯವಾಚನ ಕಲೆಯು ಕೇರಳದಲ್ಲಿ 'ಚಾಕ್ಯರ್ ಕೂತ್ತ್ ಪಾಠಕಂ', ತಮಿಳುನಾಡಿನಲ್ಲಿ 'ಪಾಡ್ಗಳ್‌', ಮಹಾರಾಷ್ಟದಲ್ಲಿ 'ಪೋವಾಡ', ಉತ್ತರ ಭಾರತದಲ್ಲಿ 'ಗಾಯನ'ವೆಂದೂ ಪ್ರಸಿದ್ಧಿ ಪಡೆದಿದೆ. ಕುಮಾರವ್ಯಾಸ ಭಾರತ ಇಂದಿಗೂ ಜನಮನದಲ್ಲಿ ಉಳಿದಿದೆ ಎಂದರೆ ಅದಕ್ಕೆ ಗಮಕಿಗಳೇ ಕಾರಣ.
ಕವಿರಾಜಮಾರ್ಗಕಾರ ಹೇಳುವಂತೆ ಕರ್ನಾಟಕದವರು 'ಕುರಿತೋದೆಯಂ ಕಾವ್ಯಪರಿಣಿತಮತಿಗಳ್‌' ಆದುದು ಗಮಕದಿಂದಲೇ. ಅನಕ್ಷರಸ್ಥರು, ನಿರಕ್ಷರಕುಕ್ಷಿಗಳಿಗೆ ವಾಚನದಿಂದ ಬೋಧನೆ, ಬದುಕಿಗೆ ಸೌಂದರ್ಯ- ಸಂಸ್ಕಾರ ನೀಡಿ, ಸುಸಂಸ್ಕೃತರನ್ನಾಗಿಸಿ, ನಮ್ಮ ಪರಂಪರೆ, ಭಾಷೆ, ಸಂಸ್ಕೃತಿಗಳನ್ನು ಉಳಿಸಿ, ಮಾನವೀಯ ಮೌಲ್ಯಗಳನ್ನು ತಿಳಿಸಿ, ಕವಿಗಳ ನುಡಿಗಳನ್ನು ಜನರಿಗೆ ತಲುಪಿಸಿದ್ದೂ ಇದೇ ಕಲೆಯೇ. ಲಕ್ಷ್ಮೀಶನ 'ಜೈಮಿನಿ ಭಾರತ', ಚಾಮರಸನ 'ಪ್ರಭುಲಿಂಗಲೀಲೆ', ರಾಘವಾಂಕನ 'ಹರಿಶ್ಚಂದ್ರ ಕಾವ್ಯ', ಕುವೆಂಪುರವರ 'ರಾಮಾಯಣ ದರ್ಶನಂ' ಮುಂತಾದ ಕಾವ್ಯಗಳು ಜನರಿಗೆ ತಲುಪುವಲ್ಲಿ ಗಮಕಿಗಳ ಪಾತ್ರ ಹಿರಿದು. ತಂಬೂರಿ ಶೃತಿಯೊಂದಿಗೆ ಹಾಡುವ ಗಮಕವು, ವಿಶೇಷ ಅರ್ಥವುಳ್ಳ ಕಾವ್ಯಗಳನ್ನು ರಸಭರಿತವಾಗಿಸಿ, ಶ್ರೋತೃಗಳ ಹೃದಯವನ್ನು ಆನಂದದಲ್ಲಿ ಅದ್ದುತ್ತದೆ. ಕಾವ್ಯಗಳನ್ನು ರಾಗಬದ್ಧವಾಗಿ, ಅರ್ಥಪೂರ್ಣವಾಗಿ ಓದುವ ಗಮಕಕಲೆಯು ಕಾವ್ಯ ಪ್ರಚಾರಕ್ಕೆ ಅನಿವಾರ್ಯ.
ಆದರೆ, ಕಾವ್ಯದ ಅರ್ಥವನ್ನು ಮರೆಸುವಷ್ಟು ಸಂಗೀತವಿರಬಾರದು. ಹಿಂದೆ ರಾಜರ ಆಸ್ಥಾನದಲ್ಲಿ ಸಾಹಿತ್ಯ ವರ್ಗಕ್ಕೆ ಸೇರಿದ ಕವಿ, ಗಮಕಿ, ವಾದಿ, ವಾಗ್ಮಿ- ಎಂಬ ನಾಲ್ವರು ಪಂಡಿತರು ಇರುತ್ತಿದ್ದರೆಂದು 'ಕುಮಾರವ್ಯಾಸ ಭಾರತ' ಹೇಳುತ್ತದೆ.
ಅರ್ಥವನ್ನು ಸ್ಪಷ್ಟವಾಗಿ ಬಿಡಿಸಿ ಹಾಡುವವನೇ ಗಮಕಿ. ಗಮಕಿಯ ವೈದುಷ್ಯದ ಕುರಿತು ತಮಿಳಿನ ಗ್ರಂಥದಲ್ಲಿ ಹೀಗೆ ಹೇಳಲಾಗಿದೆ; 'ಗಮಕಿ ರಸಜ್ಞಾನಿಯಾಗದಿದ್ದರೆ ಗಮಕ ನೀರಸ. ನಿಗೂಢವಾದ, ಅಸಾಮಾನ್ಯರಿಗೆ ಸಾಮಾನ್ಯವಾಗಿ ಕಾಣುವ ವಿಷಯಗಳನ್ನು ಕವಿಯು ಸುಂದರ ಕಾವ್ಯವನ್ನಾಗಿ ಕಟ್ಟುತ್ತಾನೆ. ಕಾವ್ಯವನ್ನು ಸುಂದರವಾಗಿ ಹಾಡಿ, ಆ ಕಾವ್ಯಕ್ಕೆ ಉನ್ನತ ಸ್ಥಾನ ಕಟ್ಟಿಕೊಡುವ ಶಿಲ್ಪಿಯೇ ಗಮಕಿ'.
ಪಂಪನ ತಮ್ಮ ಜಿನವಲ್ಲಭ ಉತ್ತಮ ಗಮಕಿಯಾಗಿದ್ದ. ಕವಿ ಪೊನ್ನ ಗಮಕಿಯೂ ಆಗಿದ್ದನು. ಕ್ರಿ.ಶ. 1533ರಲ್ಲಿ ಹಂಪಿಯ ಅರಸನಾಗಿದ್ದ ಅಚ್ಯುತರಾಯನ ಕಾಲದ ಶಾಸನವು 'ತಿರುಮಲಮ್ಮ ಎಂಬ ಮಹಿಳೆ ಕವಿಯೂ ಗಮಕಿಯೂ ಆಗಿದ್ದಳು' ಎನ್ನುತ್ತದೆ. ಅಭಿನವ ಕಾಳಿದಾಸ ಬಸವಪ್ಪಶಾಸ್ತ್ರಿಗಳು ಕನ್ನಡನಾಡಿನ ಶ್ರೇಷ್ಠ ಗಮಕಿ. ಸಂಗೀತ- ಸಾಹಿತ್ಯಗಳ ಮೇರು ಶಿಖರವಾದ ಅವರ ಗಮಕಕಲೆಗೆ ಮೈಸೂರ ಅರಸರೇ ಮಾರು ಹೋಗಿದ್ದರು.

- ಸೀತಾ ಎಸ್. ನಾರಾಯಣ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.