ಬರಹವಿಲ್ಲದೆ ಬದುಕಲಾರೆ

ಆಲ್ಬರ್ಟ್ ಕಮು, ಅಲ್ಜೀರಿಯದಲ್ಲಿ ಹುಟ್ಟಿ ಬೆಳೆದ ಫ್ರೆಂಚ್ ಲೇಖಕ. ದಿ ಸ್ಟ್ರೇಂಜರ್, ಮಿಥ್ ಆಫ್ ಸಿಸಿಫಸ್ ಇವನ ಮುಖ್ಯ ಕೃತಿಗಳು. ಅಸ್ತಿತ್ವವಾದ ಹಾಗೂ ಅಸಂಗತಗಳು ಮೇಳೈಸಿರುವ ಈತನ ಸಾಹಿತ್ಯಕರ್ಮದಿಂದ ಕನ್ನಡದ ಅನೇಕ ಸಾಹಿತಿಗಳು ಪ್ರಭಾವಿತರು. 1957ರಲ್ಲಿ ನೊಬೆಲ್ ಪಡೆದ ಈತನ ಭಾಷಣದಿಂದ ಆಯ್ದ ಭಾಗ.
- ನಾನು ನನ್ನ ಕಲೆಯಿಂದ ಹೊರತಾಗಿ ಬದುಕಲಾರೆ. ಆದರೆ ಅದು ನನ್ನ ಪಾಲಿಗೆ ಬೇರೆಲ್ಲದಕ್ಕಿಂತಲೂ ಮಿಗಿಲಾದ್ದೂ ಅಲ್ಲ. ನಾನು ನನ್ನ ಜತೆಗಾರರಿಂದ ಬೇರೆಯಾಗಿ ಬದುಕಲಾರೆ. ನಾನಿದ್ದಂತೇ ಅವರ ಜತೆಯಾಗಿ ಬಾಳಲು ಅದು ನನಗೆ ಅಗತ್ಯ. ಸರ್ವಸಾಮಾನ್ಯವಾದ ಖುಷಿ ಹಾಗೂ ದುಃಖದ ಚಿತ್ರಗಳನ್ನು ನೀಡುವ ಮೂಲಕ ಸಾವಿರಾರು ಮಂದಿಯನ್ನು ಮುಟ್ಟಲು ಅದೊಂದು ಸಾಧನ. ಜನರಿಂದ ದೂರ ಉಳಿಯದಿರಲು ಅದು ಕಲೆಗಾರನನ್ನು ಒತ್ತಾಯಿಸುತ್ತದೆ. ನಾನು ಎಲ್ಲರಿಗಿಂತ ಭಿನ್ನ ಎಂದು ಯಾರು ತಿಳಿದುಕೊಳ್ಳುತ್ತಾನೋ ಆತ, ತಾನು ಭಿನ್ನತೆಯನ್ನೂ ಕಲೆಯನ್ನೂ ಉಳಿಸಿಕೊಳ್ಳಲಾರೆ ಎಂದು ಬಹುಬೇಗ ಅರ್ಥ ಮಾಡಿಕೊಳ್ಳುತ್ತಾನೆ. ತನ್ನ ಸಮುದಾಯದಿಂದ ಆತ ಕಳಚಿಕೊಳ್ಳಲಾರ. ಅದಕ್ಕಾಗಿಯೇ ನೈಜ ಕಲಾಕಾರರು, ತೀರ್ಪುಗಾರರಾಗುವುದಕ್ಕಿಂತಲೂ ಹೆಚ್ಚಾಗಿ ಅರ್ಥ ಮಾಡಿಕೊಳ್ಳುವವರಾಗಿ ಇರಬೇಕಾಗುತ್ತದೆ.
- ಕ್ಲಿಷ್ಟಕರವಾದ ಕರ್ತವ್ಯಗಳಿಂದ ಬರಹಗಾರ ತಪ್ಪಿಸಿಕೊಳ್ಳಲಾರ. ಇತಿಹಾಸವನ್ನು ಸೃಷ್ಟಿಸುವವರ ಸೇವೆಯಲ್ಲಿ ಆತ ತೊಡಗಿಸಿಕೊಳ್ಳಕೂಡದು. ಇತಿಹಾಸದಡಿಯಲ್ಲಿ ನರಳುವವರ ಸೇವೆ ಆತನದಾಗಿರಬೇಕು. ಇಲ್ಲದಿದ್ದರೆ ಆತ ಏಕಾಂಗಿಯಾಗಿ, ತನ್ನ ಕಲೆಯ ಭಾರಕ್ಕೆ ತಾನೇ ಕುಸಿಯಬೇಕಾಗುತ್ತದೆ. ದಂಗೆಯೇಳುವ ಸಾವಿರಾರು ಮಂದಿಯ ಸೈನ್ಯವೂ, ಆತ ಅದರ ಜತೆಗೇ ಇದ್ದರೂ, ಆತನನ್ನು ಆ ಒಂಟಿತನದಿಂದ ಪಾರುಮಾಡಲಾರದು. ಆದರೆ ಜಗತ್ತಿನ ಇನ್ನೊಂದು ಮೂಲೆಯಲ್ಲಿರುವ ಯಾವುದೋ ಒಂಟಿ ಕೈದಿಯ ನಿಟ್ಟುಸಿರು ಅತನನ್ನು ಒಂಟಿತನದಿಂದ ಹೊರಗೆಳೆಯಬಲ್ಲದು. ಸ್ವಾತಂತ್ರ್ಯದ ಸೌಭಾಗ್ಯಗಳ ಮುಂದೆ ಮೌನವನ್ನು ಆತ ಮರೆಯುವುದಿಲ್ಲ. ತನ್ನ ಕಲೆಯ ಮೂಲಕ ಅದನ್ನು ಪ್ರತಿಧ್ವನಿಸುವಂತೆ ಮಾಡುವುದೂ ಅವನಿಗೆ ಗೊತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


