ಫೇಸ್‌ಬುಕ್ಕಿ
ಪುರಾಣೋಕ್ತ ಸಂಗತಿಗಳನ್ನು ನಂಬುವುದಾದರೆ 'ಫಿಕ್ಸಿಂಗ್' ಎಂಬುದು ದೇವಾನುದೇವತೆಗಳ...

ದೇಶವನ್ನು ತಲ್ಲಣಗೊಳಿಸಿರುವ ಫಿಕ್ಸಿಂಗ್ ದಂಧೆಯ ಹಿನ್ನೆಲೆಯಲ್ಲಿ ತೀವ್ರ ಚಿಂತಿತನಾಗಿ ಧ್ಯಾನಸ್ಥನಾದಾಗ ಕೆಲವು ಸತ್ಯ ದರ್ಶನಗಳಾದವು. ಇವುಗಳ ಖಚಿತತೆಗೆ ನಡೆಸಿದ ಪುರಾಣೇತಿಹಾಸಗಳ ನಿಖರ ಗ್ರಂಥಗಳ ಮಾಹಿತಿ ಸಂಶೋಧನೆಯೂ ಇದಕ್ಕೆ ಪೂರಕವಾಗಿಯೇ ಇದೆ.
ಇತಿಹಾಸ ಪೂರ್ವ ಕಾಲದ ಆಗುಹೋಗುಗಳನ್ನು ತಿಳಿಯಲು ನಮಗಿರುವ ಆಧಾರಗಳಲ್ಲಿ 'ಪುರಾಣ ಗ್ರಂಥಗಳು' ಪ್ರಮುಖ. ಆ ಪುರಾಣೋಕ್ತ ಸಂಗತಿಗಳನ್ನು ನಂಬುವುದಾದರೆ 'ಫಿಕ್ಸಿಂಗ್' ಎಂಬುದು ದೇವಾನುದೇವತೆಗಳ ಅತ್ಯಂತ ಪ್ರಾಚೀನವಾದ ನಡವಳಿಕೆ. ಆಗ 'ಫಿಕ್ಸಿಂಗ್' ಎಂಬ ಈ ಪದ ನೇರವಾಗಿ ಬಳಕೆಯಲ್ಲಿಲ್ಲದಿದ್ದರೂ, ಬೇರೆ ಬೇರೆ ಪ್ರಕರಣಗಳಲ್ಲಿ ಅದೇ ಉದ್ದೇಶದ ಘಟನೆಗಳು ನಡೆದಿವೆ. ಮುಂದೆ, ಅವು ಅವರವರ ಸಾಹಸ- ವಿಜಯದ ಪುರಾಣ ಕಥೆಗಳಾಗಿ ದಾಖಲಾಗಿವೆ. ಬೇರೆಲ್ಲಕ್ಕೂ ಆ ಕತೆಗಳನ್ನು ನಂಬುವುದಾದರೆ, 'ಫಿಕ್ಸಿಂಗ್' ಪರಿಕಲ್ಪನೆಯ ನೆಲೆಯಲ್ಲೂ ಅವನ್ನು ನಾವು ಪರಿಭಾವಿಸಬಹುದು. ಹಾಗೆ ಅವನ್ನು ನಂಬಿ ಆಧುನಿಕಕ್ಕೆ ಸಮೀಕರಿಸಿಕೊಳ್ಳುವುದಾದರೆ, ಜಗತ್ತಿನಲ್ಲಿ ಮೊದಲು 'ಫಿಕ್ಸಿಂಗ್' ನಡೆದಿದ್ದು ನಮ್ಮ ಕರುನಾಡಿನ ಗೋಕರ್ಣದಲ್ಲಿ!
ಹೌದು. ಈ 'ಫಿಕ್ಸಿಂಗ್' ಪ್ರಕರಣಕ್ಕೆ ಕಾರಣನಾದವ ಮಹಾತಂತ್ರಗಾರನೆಂದು ಪ್ರಖ್ಯಾತನಾದ ನಮ್ಮ ನಾರದಮುನಿ. ಇವನು ಬಹುಶಃ ಜಗತ್ತಿನ ಮೊಟ್ಟ ಮೊದಲ 'ಬುಕ್ಕಿ'. 'ಫಿಕ್ಸಿಂಗ್' ತಂತ್ರಕ್ಕೆ ಒಳಗಾದವ ವಟುರೂಪಿ ಗಣೇಶ. ಅಂತೂ, ಈ ಪ್ರಕರಣಕ್ಕೆ ಬಲಿಯಾಗಿ ಮೊದಲ ರನ್‌ಔಟ್ ಆದವನೆಂದು ಘೋಷಿಸಬೇಕಾಗಿರುವುದು ಮಹಾಬಲಿ ರಾವಣನನ್ನು. 'ಆತ್ಮಲಿಂಗ'ವನ್ನು ಭಾರಿ ಪಾರಿತೋಷಕ- ಎನ್ನುವುದಾದರೆ, ಅದನ್ನು ಪಡೆದು ಮ್ಯಾನ್ ಆಫ್ ದಿ ಮ್ಯಾಚ್ ಅಥವಾ ಮಹಾವಿಜಯ ಆಗುವುದನ್ನು ತಪ್ಪಿಸಲು ನಾರದ ಈ ವ್ಯೂಹ ರಚಿಸಿದ ಎಂಬುದನ್ನು ಪುರಾಣಾಸಕ್ತರಿಗೆ ಚೆನ್ನಾಗಿ ಗೊತ್ತಿದೆ.
ಫಿಕ್ಸಿಂಗ್ ಪುರಾಣ ದೊಡ್ಡದು. 'ಫಿಕ್ಸಿಂಗ್' ಎಂಬುದು ಎಷ್ಟು ವ್ಯಾಪಕವಾಗಿತ್ತು? ಹೇಗ್ಹೇಗೆ ನಡೆದಿತ್ತು? ಯಾರ್ಯಾರು ಭಾಗಿ? ಸಿಕ್ಕಬಿದ್ದವರೆಷ್ಟು? ಸಿಗದೇ ತಪ್ಪಿಸಿಕೊಂಡವರಾರು? ಅವರ ಆಗಿನ ಉಪದೇಶಗಳೇನು ಎಂಬುದಕ್ಕೆ ಮಾದರಿಯಾಗಿ ಇಲ್ಲಿ ಕೆಲವು ಪ್ರಕರಣಗಳನ್ನು ತೆರೆದಿಡಲಾಗಿದೆ.
'ಫಿಕ್ಸಿಂಗ್'ಗೆ ಸಿಕ್ಕಬಿದ್ದು, ರನ್‌ಔಟ್ ಆದ ರಾವಣನೇ ಮುಂದೊಮ್ಮೆ ಈ ತಂತ್ರವನ್ನು ತನ್ನ ಲಾಭಕ್ಕೆ ಬಳಸಿಕೊಳ್ಳುವುದನ್ನು ಕಲಿತ. ಆಗ, ತಾನೇ ಬುಕ್ಕಿಯಾದ ರಾವಣ, ಮಾರೀಚನನ್ನು 'ಫಿಕ್ಸ್' ಮಾಡಿಕೊಂಡ. ಸೀತೆಯೆಂಬ ಮಹಾ ಸಂಪತ್ತನ್ನು ತನ್ನದಾಗಿಸಿಕೊಳ್ಳುವುದು ಅವನ ಉದ್ದೇಶ. ಆದರೆ, ಅದರಲ್ಲಿ ಫಿಕ್ಸಿಂಗ್‌ಗೆ ಒಪ್ಪಿದ್ದ ಜಿಂಕೆ ವೇಷದ ಮಾರೀಚ ರಾಮನ ಬಾಣಕ್ಕೆ ಸಿಕ್ಕಿ ಜೀವತೆತ್ತ.
ಉದ್ದೇಶ ಸಾಧನೆಗೆ ಹೀಗೆ 'ಫಿಕ್ಸಿಂಗ್' ಮಾಡಿಕೊಳ್ಳುವುದು ಸುಲಭ ತಂತ್ರ ಎಂದು ಶ್ರೀರಾಮನಿಗೂ ಅನಿಸಿತೆಂದು ಕಾಣುತ್ತೆ. ಆತ ವಾಲಿಯನ್ನು ಕೊಲ್ಲಲು ಸುಗ್ರೀವನೊಂದಿಗೆ 'ಸಂಕೇತ'ದ 'ಬುಕ್ಕಿಂಗ್' ಮಾಡಿಕೊಂಡಿದ್ದ. ಇವತ್ತಿನ ಬುಕ್ಕಿಗಳ ಹಾಗೆ ದೂರದಲ್ಲಿ ಎಲ್ಲೋ ಅಡಗಿದ್ದ ರಾಮನಿಗೆ, ಒಂದೇ ರೀತಿಯಲ್ಲಿದ್ದ ವಾಲಿ, ಸುಗ್ರೀವರನ್ನು ಖಚಿತವಾಗಿ ಗುರುತಿಸುವುದು ಕಷ್ಟವಾಗಿತ್ತು. ಅದರ ಪರಿಹಾರಕ್ಕೆ, ಸುಗ್ರೀವನು ಒಂದು ಗುರುತನ್ನು ತೋರಬೇಕೆಂಬುದೇ ಆ ಒಪ್ಪಂದ (ಬುಕ್ಕಿಗಳಿಗೆ ಸೂಚನೆಯಾಗಿ ಈಗಿನ ಆಟಗಾರರು ಕರವಸ್ತ್ರ ಇಟ್ಟುಕೊಳ್ಳುವುದು, ಕೂಗುವುದನ್ನು ಮಾಡುತ್ತಾರಲ್ಲಾ... ಹಾಗೆ!). ಅಂತೂ, ರಾಮನ ಬಾಣದಿಂದ ವಾಲಿ ಬಿದ್ದ. ಸುಗ್ರೀವ ಗೆದ್ದ. ಪ್ರತಿಯಾಗಿ ಶ್ರೀರಾಮನಿಗೆ ಸೀತಾನ್ವೇಷಣಕ್ಕಾಗಿ ಸುಗ್ರೀವ ಸೈನ್ಯದ ಸಖ್ಯ ಸಿಕ್ಕಿತು.
ಶ್ರೀರಾಮನು ಕೃಷ್ಣನಾಗಿ ಅವತರಿಸಿದಾಗಲೂ ಇಂಥ ಅನೇಕ 'ಫಿಕ್ಸಿಂಗ್' ಪ್ರಕರಣಗಳನ್ನು ನಡೆಸಿದ್ದ. ಅವುಗಳಲ್ಲಿ ಒಂದು ಸುಭದ್ರಾಪಹರಣಕ್ಕೆ ಅರ್ಜುನ ಸನ್ಯಾಸಿಯನ್ನು ಫಿಕ್ಸ್ ಮಾಡಿದ್ದು. ಎಲ್ಲರ ಕಣ್ಮುಂದೆಯೇ ನಡೆದರೂ ಯಾರ ಅರಿವಿಗೂ ಬರದಂಥ ಚಾಣಾಕ್ಷ ನಡವಳಿಕೆಯನ್ನು 'ಫಿಕ್ಸಿಂಗ್' ಮೈಗೂಡಿಸಿಕೊಂಡಿರುತ್ತವೆ ಎಂಬುದಕ್ಕೆ ಈ ಪ್ರಕರಣ ಅತ್ಯುತ್ತಮ ಸಾಕ್ಷಿ. ಅರಮನೆಯ ದೊಡ್ಡ ಯಜಮಾನ ಬಲರಾಮನಿಗೂ ಇದರ ಅರಿವಿರಲಿಲ್ಲ- ಅವನ ಆಂತರಿಕ ಗೂಢಚಾರರಿಗೂ ಅದರ ಸುಳಿವು ಸಿಕ್ಕಿರಲಿಲ್ಲ ಎಂದ ಮೇಲೆ 'ಫಿಕ್ಸಿಂಗ್'ನ ನಿಗೂಢ ನಡೆ ಹೇಗಿರುತ್ತದೆ ಎಂಬುದನ್ನು ಊಹಿಸಬಹುದು.
'ಫಿಕ್ಸಿಂಗ್' ನಡೆಯುವ ಅಂದರೆ ಮೋಸದಾಟದ ಸಾಧ್ಯತೆ ಇದ್ದರೂ ಅದನ್ನು ನಿರ್ಲಕ್ಷಿಸಿ 'ಆಟ' ಆಡಿ ಎಲ್ಲಾ ಕಳೆದುಕೊಂಡವ ಸಂಭಾವಿತ ಹೆಸರಿನ ಹುಂಬ- ಧರ್ಮರಾಯ. ದುರ್ಯೋಧನನಿಗಾಗಿ ಫಿಕ್ಸಿಂಗ್ ಮಾಡಿಕೊಂಡು ಮೋಸದಾಟ ಪಗಡೆ ಆಡುತ್ತಾನೆ ಶಕುನಿ. ಆದರೆ, ಇಂಥ ವ್ಯೂಹದ ತಂತ್ರ ಪಕ್ಕಾಗದೆ, ತಂತ್ರವನ್ನು ಮೊದಲೇ ಅರಿತವನಾಗಿ ವ್ಯೂಹಿಗಳನ್ನೇ ಬಲಿ ತೆಗೆದುಕೊಂಡವನು ಅಗತ್ಯ ಮಹಾಮುನಿ. 'ವಾತಾಪಿ ಜೀರ್ಣೋದ್ಭವ'ದ ಪ್ರಸಂಗ ನೆನಪಿಸಿಕೊಳ್ಳಿ.
ಹೀಗೆ ಪಟ್ಟಿ ಬೆಳೆಯುತ್ತದೆ. ಜಗತ್ತಿನ ಇತರ ಪುರಾಣಗಳೂ ಒಂದಲ್ಲಾ ಒಂದು ರೀತಿಯ ಇಂಥ 'ಫಿಕ್ಸಿಂಗ್' ಪ್ರಕರಣಗಳನ್ನು ಬೇರೆ ಬೇರೆ ರೀತಿ ದಾಖಲಿಸಿವೆ. ಪುರಾಣ ಕಾಲದಲ್ಲಿ ದೇವಾನು ದೇವತೆಗಳೂ- ಅವತಾರ ಪುರುಷರೂ ಮಹಾಮುನಿಗಳೂ, ರಕ್ಕಸರೆಂಬುವರೂ ಮಾಡಿದ ಕಾರ್ಯಗಳನ್ನೇ ಇತಿಹಾಸದ ಘಟಾನುಘಟಿಗಳೂ ಮಾಡಿದ್ದಾರೆ. ಆಧುನಿಕ ಕಾಲದವರೂ, ಅವನ್ನು ಕಾಲ- ದೇಶಕ್ಕೆ ತಕ್ಕಂತೆ ಬೇರೆ ಬೇರೆ ಸಂದರ್ಭಗಳಲ್ಲಿ ಮುಂದುವರಿಸಿದ್ದಾರೆ ('ಪರಂಪರೆ'ಯನ್ನು ಬಿಡಬಾರದಲ್ಲ!). ಸದ್ದಾಂ ಹುಸೇನ್, ಬಿನ್ ಲಾಡೆನ್, ನಮ್ಮ ವೀರಪ್ಪನ್ ಇವರೆಲ್ಲಾ ಈಚೆಗೆ 'ಫಿಕ್ಸಿಂಗ್'ಗೆ ಬಲಿಯಾದವರೇ!
ರಾಜತಾಂತ್ರಿಕ ನೆಲೆಯಲ್ಲಿ ಬಹಳ ವೇಳೆ ವಿಜ್ಞಾನಿಗಳೂ, ಗೂಢಚಾರರೂ, ಸುರಸುಂದರಿಯರೂ 'ಫಿಕ್ಸಿಂಗ್'ಗೆ ಬಲಿಯಾಗಿರುತ್ತಾರೆ. ರಾಜಕಾರಣಿಗಳೂ, ಕಾಳಸಂತೆಯವರೂ ಎಲ್ಲೆಲ್ಲಿ ಏನೇನು ಫಿಕ್ಸಿಂಗ್ ಮಾಡಿರುತ್ತಾರೋ... ತಕ್ಷಣಕ್ಕೆ ಸುಲಭವಾಗಿ ಗೊತ್ತಾಗದು. ಅಷ್ಟಕ್ಕೂ ನಾವೆಂಬ ಜನಸಾಮಾನ್ಯರೂ ಎಲ್ಲೆಲ್ಲಿ ಯಾರಾರಿಗೆ 'ಫಿಕ್ಸಿಂಗ್' ಆಗಿರುತ್ತವೋ? (ನೆಲದಡಿಯ ಬಾಂಬು, ಎಲ್ಲಿಂದಲೋ ತೂರಿ ಬರುವ ಗುಂಡು ಅಥವಾ ಇನ್ನಾರದೋ ದಾಳಿ, ಅಪಹರಣ, ಅಪಘಾತ...) ಅಥವಾ ನಾವೇ ಯಾರನ್ನು 'ಫಿಕ್ಸ್' ಮಾಡಿಕೊಂಡಿರುತ್ತೇವೋ!? 'ವಿಧಿ'ಯೇ ದೊಡ್ಡ 'ಫಿಕ್ಸಿಂಗ್'ಗಾರ, ಅಲ್ಲವೇ?
ಫಿಕ್ಸಿಂಗ್ ಎಂಬುದು ಕಾಲ, ದೇಶ, ಧರ್ಮವನ್ನು ಮೀರಿದ್ದು. ಆದರೆ ಅದು ಯಾವ ಉದ್ದೇಶಕ್ಕೆ ನಡೆದಿದೆ ಎಂಬುದು ಮುಖ್ಯ. ದುರುದ್ದೇಶಕ್ಕೆ ನಡೆದ ಫಿಕ್ಸಿಂಗ್ ಎಂದೂ ಖಂಡನಾರ್ಹ. ಲೋಕಹಿತಾರ್ಥದ ಫಿಕ್ಸಿಂಗ್ ಸ್ವಾಗತಾರ್ಹ, ಅಲ್ಲವೇ?
- ಚೆನ್ನಾದೇವಿ ಗೋವಿಂದು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


