ಮುಂದಿನ ಜನ್ಮದಲ್ಲಾದರೂ...
ಪ್ರೀತಿಯ ಕೆಂಪಿ,
ನಾನು ನಿನ್ನ ಕರಿಯ. ಈ ಪತ್ರದೊಂದಿಗೆ ನಾಲ್ಕು ವರ್ಷ ಪ್ರೀತಿಯಿಂದ ಸಾಕಿ ಬೆಳೆಸಿದ ಪ್ರೇಮದ ಕೂಸನ್ನು ನಾವೇ ಉಸಿರುಕಟ್ಟಿಸಿ ಕೊಲ್ಲುವ ಪರಿಸ್ಥಿತಿ ಬಂದಿದೆ. ಆ ವಿಧಿ ನಮ್ಮ ಬಾಳಿನಲ್ಲಿ ಕಣ್ಣಾಮುಚ್ಚಾಲೆ ಆಟ ಆಡಿದೆ. ಪ್ರೇಮಿಗಳನ್ನು ಎಷ್ಟು ರೀತಿಯಲ್ಲಿ ಹಿಂಸಿಸಬಹುದೋ ಅಂತಹ ಎಲ್ಲಾ ನೋವುಗಳನ್ನೂ ಅನುಭವಿಸಿಯಾಗಿದೆ.
ನನ್ನ ನಿನ್ನ ಪರಿಚಯ ಚಿಕ್ಕಂದಿನಿಂದಲೇ ಇದ್ದರೂ, ಪ್ರೀತಿ ಮೊಳೆತದ್ದು ಯೌವನದಲ್ಲಿ. ಅದೂ ಕೂಡ ಒಂದು ಅನಿರೀಕ್ಷಿತ ಘಟನೆಯಿಂದ. ಇಬ್ಬರೂ ದೂರದ ಸಂಬಂಧಿಕರೇ. ಹಾಗಿದ್ದರೂ ಕಣ್ಣೋಟ ಸಂಧಿಸಿದ್ದು ಕೆಲವೇ ಸಲ... ನನ್ನ ಪ್ರೇಮ ನಿವೇದನೆಯನ್ನು ನೀನು ಥಟ್ಟನೆ ಒಪ್ಪಿಕೊಂಡಾಗಲೇ ತಿಳಿದಿದ್ದು ನೀನೂ ನನ್ನನ್ನು ಪ್ರೀತಿಸುತ್ತಿದ್ದೆಯೆಂದು. ಜೀವನದಲ್ಲಿ ಉತ್ತಮ ಸ್ಥಿತಿ ತಲುಪಿದ್ದರೂ ನಿನ್ನನ್ನು ಪಡೆಯಲಾಗದಿರುವುದು ನನ್ನ ದೌರ್ಭಾಗ್ಯವೇ ಸರಿ...
ತಾಯಿಯ ಮಾತಿಗೆ ತಲೆಕೊಟ್ಟು ಆಕೆ ಹೇಳಿದ ಹುಡುಗಿಯ ಕೈ ಹಿಡಿಯಲು ಅಣಿಯಾಗಿದ್ದೆ. ನೀನು ನಿನ್ನ ಮನಸ್ಸಿನ ಇಂಗಿತವನ್ನು ನನ್ನೆದುರು ತೋಡಿಕೊಳ್ಳದೇ ಕಣ್ಣೀರು ಒರೆಸಿಕೊಂಡು ನಗುತ್ತಾ ಓಡಾಡಿಕೊಂಡಿದ್ದೆ. ಇನ್ನೇನು ಎಲ್ಲಾ ಆಗಿಯೇ ಹೋಯಿತು ಅನ್ನುವ ಸಂದರ್ಭದಲ್ಲಿ ಮದುವೆ ನಿಂತುಹೋಗಿದ್ದು ನನಗೂ ನಿನಗೂ ಸ್ವಲ್ಪ ಸಮಾಧಾನ ತಂದಿತ್ತು. ಆದರೀಗ ತಾಯಿಯ ಒತ್ತಾಸೆಯಂತೆ ಮತ್ತೆ ನನ್ನ ಮದುವೆ ತಯಾರಿ ನಡೆದಿದೆ. ಕಳೆದ ವಾರದ ಎರಡು ದಿನಗಳು ನಾನು ನಿನ್ನೊಂದಿಗಿದ್ದರೂ ಮಾತನಾಡಲು ಸಾಧ್ಯವಾಗಲಿಲ್ಲ. ಅದಕ್ಕೆ ಕ್ಷಮೆಯಿರಲಿ...
ಮನಸ್ಸಿನ ಭಾವನೆಯನ್ನು ಮನೆಯಲ್ಲಿ ಹೇಳಲಾಗದೆ, ತೊಳಲಾಡುತ್ತಿರುವ ನಿನ್ನ ಮನದ ತಳಮಳ ಶೀಘ್ರವೇ ಶಮನವಾಗಲಿ. ನಾವಿಬ್ಬರೂ ಲೋಕದ ಬೇರೆಯ ಪ್ರೇಮಿಗಳಂತೆ ಅಲ್ಲದೇ, ಈಗಿನವರಂತೆ ಜೊತೆಗೆ ಸುತ್ತಾಡದೇ, ಮಾತನಾಡದೇ ಕೇವಲ ಮನಸ್ಸಿನಲ್ಲಿ ಒಬ್ಬರನ್ನೊಬ್ಬರು ಆರಾಧಿಸುತ್ತಾ ಕಳೆದ ಬಗ್ಗೆ ನನಗೆ ಹೆಮ್ಮೆಯಿದೆ. ನಮ್ಮ ಈ ನಿಷ್ಕಲ್ಮಶ ಪ್ರೀತಿ ಈ ಪತ್ರದೊಂದಿಗೆ ಕೊನೆಗಾಣಿಸಬೇಕಾಗಿದೆ. ಆ ದೇವರು ಪ್ರೇಮಿಗಳ ಅಗಲಿಕೆಯ ನೋವನ್ನು ದಯಮಾಡಿ ನಮ್ಮೊಂದಿಗೇ ಕೊನೆಗಾಣಿಸಿ, ಮುಂಬರುವ ಸಾವಿರಾರು ಪ್ರೇಮಿಗಳಿಗಾದರೂ ಸೇರಿ ಬಾಳುವ ಅವಕಾಶ ಕಲ್ಪಿಸಲಿ ಎಂದು ಹಾರೈಸೋಣ.
ನಾನು ಮುಂಗಾರು ಮಳೆಯ ಗಣೇಶನಂತೆ "ಪ್ರೀತಿ ಮಧುರ.. ತ್ಯಾಗ ಅಮರ..." ಎಂದು ಜೋಗದ ತುದಿಯಲ್ಲಿ ನಿಂತು ಹೇಳಲು ಆಗದಿದ್ದರೂ, ಅಷ್ಟೇ ಭರಪೂರ ಭಾವನೆಗಳೊಂದಿಗೆ ಹೇಳುತ್ತಿರುವೆ ಗೆಳತಿ ನಾವಿಬ್ಬರೂ ದೂರವಾಗಿ ಬಿಡೋಣ. ನಮ್ಮ ಹೆತ್ತವರ ಆಶಯಗಳನ್ನು ಈಡೇರಿಸುತ್ತಾ ನಮ್ಮ ಜೀವನವನ್ನು ಕಣ್ಮುಚ್ಚಿಕೊಂಡು ಕಳೆದುಬಿಡೋಣ. ಸಾಧ್ಯವಾದಲ್ಲಿ, ಆ ದೇವರು ಕರುಣಿಸಿದಲ್ಲಿ ಮುಂದಿನ ಜನ್ಮದಲ್ಲಾದರೂ ಜೊತೆಯಾಗೋಣ.
- ಎಂ. ಹರ್ಷವರ್ಧನ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

