ಮಕರಂದ/ದೋಣಿ

ಚಂಡಿಯ ಕಥೆ

Published On :

ಮಹಾಭಾರತದ 'ಅಶ್ವಮೇಧ ಪರ್ವ'ದಲ್ಲಿ ಚಂಡಿಯ ಕಥೆ ಬರುತ್ತದೆ. ಕುರುಕ್ಷೇತ್ರ ಯುದ್ಧದಲ್ಲಿ ತನ್ನ ಬಂಧು ಬಾಂಧವರನ್ನೆಲ್ಲ ಕಳೆದುಕೊಂಡ ಧರ್ಮರಾಯನು ದುಃಖಿತನಾಗಿ ಪರಿಹಾರಾರ್ಥವಾಗಿ ವ್ಯಾಸ ಮಹರ್ಷಿಗಳ ಸೂಚನೆಯಂತೆ 'ಅಶ್ವಮೇಧಯಾಗ' ವನ್ನು ಕೈಗೊಳ್ಳುತ್ತಾನೆ. ಯಜ್ಞದ ಕುದುರೆಯ ದಿಗ್ವಿಜಯ ಯಾತ್ರೆ ಕೈಗೊಳ್ಳಲು ತನ್ನ ತಮ್ಮಂದಿರಾದ ಭೀಮ, ಅರ್ಜುನರನ್ನು ನೇಮಿಸುತ್ತಾನೆ.
ಅರ್ಜುನನು ಯಜ್ಞದ ಕುದುರೆಯನ್ನು ಹಿಂಬಾಲಿಸಿ ನಡೆಯುತ್ತಿದ್ದಾಗ, ಒಂದು ಕಡೆ ಕುದುರೆಯು ಒಂದು ಬಂಡೆಯ ಸಂಪರ್ಕಕ್ಕೆ ಬಂದಾಗ ಮುಂದೆ ಚಲಿಸಲಾರದೆ ನಿಂತುಬಿಡುತ್ತದೆ. ಆಗ ಅರ್ಜುನನು ಹತ್ತಿರದ ತೆಪ್ಪವನದಲ್ಲಿ ಯೋಗ ನಿರತನಾಗಿದ್ದ ಸೌಭರಿಯೆಂಬ ಮುನಿಯ ಪಾದಗಳಿಗೆ ನಮಸ್ಕರಿಸಿದನು. ಯೋಗ ಸಮಾಧಿಯಿಂದೆದ್ದ ಸೌಭರಿಯು ಅರ್ಜುನನ್ನು ಹರಸಿದಾಗ, ತನ್ನ ಕುದುರೆಗಾದ ಅವಸ್ಥೆಯನ್ನು ತಿಳಿಸಲು, ಆ ಮಹರ್ಷಿಯು ಆ ಶಿಲೆಯ ಕಥೆಯನ್ನು ಹೀಗೆ ಹೇಳಿದನು:
'ಹಿಂದೆ ಉದ್ದಾಲಕನೆಂಬ ಬ್ರಾಹ್ಮಣನು ಚಂಡಿಕೆಯೆಂಬಾಕೆಯನ್ನು ಮದುವೆಯಾಗಿ, ತನ್ನ ಸಂಸಾರವನ್ನು ಸುಖವಾಗಿರಿಸುವ ಉದ್ದೇಶದಿಂದ, ತನ್ನ ಜಪಾನುಷ್ಠಾನಕ್ಕೆ ಅನುಕೂಲವಾಗಿರಬೇಕೆಂದು ಹೇಳಿದನು. ಆಕೆ, ಗಂಡ ಹೇಳಿದಂತೆ ಕೇಳುವುದಿಲ್ಲವೆಂದು ಹಠ ಹಿಡಿದಳು. ಆಗ ಉದ್ದಾಲಕನ ಸ್ನೇಹಿತನಾದ ಕೌಂಡಿನ್ಯನು ಹೇಳಿಕೊಟ್ಟ ಉಪಾಯದಂತೆ, ತನ್ನ ಮನಸ್ಸಿನಲ್ಲಿದ್ದುದಕ್ಕೆ ವಿರೋಧವಾದುದನ್ನು ಹೇಳಿ ಹೆಂಡತಿಯನ್ನು ಅನುಕೂಲೆಯನ್ನಾಗಿ ಮಾಡಿಕೊಂಡಿದ್ದನು.
ಹೀಗಿರುವಾಗ, ಒಮ್ಮೆ ಉದ್ದಾಲಕನ ತಂದೆಯ ಶ್ರಾದ್ಧವು ಬರಲಾಗಿ, ಅವನು ತನ್ನ ಹೆಂಡತಿಗೆ ತಾನು ತಂದೆಯ ಶ್ರಾದ್ಧವನ್ನು ಮಾಡುವುದಿಲ್ಲವೆಂದೂ, ಅಗತ್ಯ ವಸ್ತುಗಳನ್ನು ತರುವುದಿಲ್ಲವೆಂದೂ, ಅನರ್ಹ ಬ್ರಾಹ್ಮಣರನ್ನು ಕರೆಯುವುದಾಗಿ ಹೇಳಿದನು. ಚಂಡಿಯು ಅದಕ್ಕೆ ವ್ಯತಿರಿಕ್ತವಾಗಿ ಕೆಲಸ ಮಾಡಿದಳು.
ಮಾರನೆಯ ದಿನ ಚಂಡಿಯು ತನ್ನ ಹಠದಂತೆ ಶ್ರಾದ್ಧವನ್ನು ಬಲವಂತದಿಂದ ಮಾಡಿಸಿದಳು. ಆಗ ಉದ್ದಾಲಕನಿಗೆ ಸಂತೋಷವಾಗಿ, ಹೆಂಡತಿಯ ದುಃಸ್ವಭಾವವು ಮರೆತುಹೋಗಿ, ಶ್ರಾದ್ಧದ ಪಿಂಡವನ್ನು ಹೆಂಡತಿಯ ಕೈಗೆ ಕೊಟ್ಟು ನೀರಿಗೆ ಎಸೆಯುವಂತೆ ಹೇಳಿದನು. ಅವಳು ಗಂಡನ ಮಾತಿಗೆ ವಿರುದ್ಧವಾಗಿ ಅದನ್ನು ಬೀದಿಗೆ ಎಸೆದಳು. ಕೋಪಗೊಂಡ ಉದ್ದಾಲಕನು ಕಲ್ಲಾಗಿ ಹೋಗುವಂತೆ ಆಕೆಯನ್ನು ಶಪಿಸಿದನು. ಆದರೆ ಕರುಣೆಯಿಂದ ಧರ್ಮರಾಯನ ಯಾಗದ ಕುದುರೆಯ ಸಂಪರ್ಕ ಉಂಟಾಗಿ, ಅರ್ಜುನನಿಂದ ಪುನಃ ಸ್ತ್ರೀರೂಪ ಬರುತ್ತದೆಯೆಂದು ವಿಶ್ಯಾಪವನ್ನು ಕೊಟ್ಟನು...' ಅದರಂತೆ ಸೌಭರಿ ಮುನಿಯ ಆಜ್ಞೆಯಂತೆ ಅರ್ಜುನನು ಚಂಡಿಯ ಶಾಪವನ್ನು ಹೋಗಲಾಡಿಸಿ ಮುಂದಕ್ಕೆ ಹೊರಡುತ್ತಾನೆ. ಇತ್ತ ಚಂಡಿಯು ತಪಸ್ಸಿಗೆ ಹೋಗುತ್ತಾಳೆ.

- ಪ್ರಫುಲ್ಲಾ ಜಗನ್ನಾಥ್, ಮೈಸೂರು

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.