ಮಕರಂದ/ದೋಣಿ

ಎಚ್ಚೇನ್ ಜೇನ್ನುಡಿ

ಎಚ್ಚೇನ್ ಜೇನ್ನುಡಿ
Published On :
  • ಭ್ರೂಣದಿಂದ ಸಮಾಧಿಯವರೆಗೆ ಕಲಿಕೆ ಒಂದು ನಿರಂತರ ಪ್ರಕ್ರಿಯೆ ಆಗಬೇಕು. ಕೇವಲ ತರಗತಿಯ ನಾಲ್ಕು ಗೋಡೆಗಳಿಗಷ್ಟೇ ಸೀಮಿತ ಎಂಬ ತಪ್ಪು ಕಲ್ಪನೆಯಿದೆ. ಚುರುಕಾದ ಪರಿಶೀಲನ ಪ್ರಜ್ಞೆಯುಳ್ಳ ವ್ಯಕ್ತಿಯ ಸೂಕ್ಷ್ಮ ಸಂವೇದಿ ಮನಸ್ಸು ಬದುಕಿನ ಪ್ರತಿ ಘಟನೆಯಿಂದಲೂ ಕಲಿಯಬಹುದು.
  •     ಸಿದ್ಧಾರ್ಥನ ಸಂದರ್ಭದಲ್ಲಿ ಆದದ್ದು ಹೀಗೆಯೇ. ಒಬ್ಬ ಮುದುಕ, ರೋಗಿ ಮತ್ತು ಒಂದು ಹೆಣ ಆತನಿಗೆ ಅರ್ಥಪೂರ್ಣ ಸಂದೇಶ ನೀಡಿತು. ಅಂತಿಮವಾಗಿ ಆತ ಬುದ್ಧನಾದ. ನಾವಾದರೋ ಮುದುಕರು, ರೋಗಿಗಳ ನಡುವೆಯೇ ಸಾವಿನಿಂದ ಆವೃತ್ತರಾಗಿದ್ದರೂ, ಪ್ರಭಾವಿತರಾಗದೆ ಬದುಕುತ್ತಿದ್ದೇವೆ. ಮೂವತ್ತೈದು ವರ್ಷಗಳಿಗೂ ಮಿಕ್ಕಿ, ವಿದ್ಯಾರ್ಥಿಗಳೊಂದಿಗೆ ಕಾರ್ಯನಿರ್ವಹಿಸಿ, ಹಲವು ಪಠ್ಯ ಹಾಗೂ ಸಹಪಠ್ಯ ಚಟುವಟಿಕೆಗಳ ಅನುಷ್ಠಾದಲ್ಲಿ ಪಾಲ್ಗೊಂಡ ನನ್ನ ಅನುಭವದಂತೆ ಮುಕ್ತ ಮನಸ್ಸಿದ್ದು, ವಿದ್ಯಾರ್ಥಿಗಳನ್ನು ಅಪ್ರಬುದ್ಧರು ಹಾಗೂ ಬೇಜವಾಬ್ದಾರರೆಂದು ಪರಿಗಣಿಸದೆ ಇದ್ದರೆ, ಮಲಿನವಾಗದ, ತಾಜಾ ಯುವ ಮನಸ್ಸುಗಳಿಂದ ಹೊಸ ಸಲಹೆಗಳನ್ನು ಸ್ವೀಕರಿಸಲು ಸಾಧ್ಯ. ಮೂವತ್ತು ವರ್ಷಗಳ ಹಿಂದೆ ನ್ಯಾಷನಲ್ ಕಾಲೇಜಿನ ಹಾಸ್ಟೆಲ್ ವಾರ್ಡನ್ ಆಗಿ, ಕಡ್ಡಾಯವಾಗಿದ್ದ ಮುಂಜಾನೆಯ ಪ್ರಾರ್ಥನೆಗೆ ಬೇಗ ಎಚ್ಚರಗೊಳ್ಳದ ಹಾಸ್ಟೆಲ್ ನಿವಾಸಿಗಳಿಗೆ ನಾಲ್ಕಾಣೆ ದಂಡ ವಿಧಿಸಿದ್ದೆ. ತನಗೆ ಖಂಡಿತಾ ಬೀಳಬಹುದಾದ ದಂಡದ ಮೊದಲ ಕಂತಾಗಿ ಒಬ್ಬ ಪ್ರಾಮಾಣಿಕವಾಗಿ ನನಗೆ ಒಂದು ರು. ಮುಂಗಡ ಕೊಟ್ಟಿದ್ದ.
  •     ದಂಡನಾಕ್ರಮಗಳ ಬಗ್ಗೆ, ಯೋಚಿಸಿದಾಗಲೆಲ್ಲಾ ಈ ಸರಳ ಘಟನೆ ನನ್ನನ್ನು ನಿಯಂತ್ರಿಸುತ್ತಿತ್ತು. ಸಾಧಾರಣವಾಗಿ ಜನ ನಿರ್ಲಕ್ಷಿಸುವ ಒಂದು ಸಾಮಾನ್ಯ ದೃಶ್ಯ ನನ್ನನ್ನು ದಶಕಗಳಿಂದ ಕಾಡುತ್ತಿದೆ. ಕಸದ ತೊಟ್ಟಿಯ ಹಿಡಿ ಎಂಜಲಿಗಾಗಿ ಬೀದಿನಾಯಿಯೊಂದಿಗಿನ ಮನುಷ್ಯನ ಜಗಳ ನನ್ನ ಮನಸ್ಸಿನ ಮೇಲೆ ಕಳವಳಕಾರಿ ಪರಿಣಾಮವನ್ನು ಬೀರುತ್ತಲೇ ಇದೆ. ಕಡು ಬಡತನದ ಇಂಥ ದೃಶ್ಯಗಳು ನನ್ನಲ್ಲಿ ಯಾವಾಗಲೂ ಅಪರಾಧಿತ್ವದ ಭಾವ ಬೆಳೆಸುತ್ತವೆ. 13ನೇ ವಯಸ್ಸಿನಲ್ಲಿ ಖಾದಿ ತೊಡಲು ಪ್ರಾರಂಭಿಸಿದೆ ಮತ್ತು ಈಗಲೂ ತೊಡುತ್ತಿರುವೆ.
  •     ರಾಷ್ಟ್ರೀಯತೆ ಕುರಿತು ನನ್ನ ವಿಚಾರಗಳಿಗೆ ಕುಮ್ಮಕ್ಕು ದೊರೆತದ್ದು ನಾನು ಬೆಂಗಳೂರಿನ ನ್ಯಾಷನಲ್ ಹೈಸ್ಕೂಲ್ ವಿದ್ಯಾರ್ಥಿಯಾಗಿದ್ದಾಗ. ನನ್ನ ಬದುಕಿನ ಮೊದಮೊದಲ ವರ್ಷಗಳಲ್ಲಿ ತಮ್ಮ ಸರಳತೆ ಹಾಗೂ ದೃಢ ದೇಶ ಪ್ರೇಮಗಳಿಂದಾಗಿ ಗಾಂಧೀಜಿ ನನ್ನ ಮೇಲೆ ಆಳವಾದ ಪ್ರಭಾವ ಬೀರಿದ್ದರು. 1942 ನನ್ನ ಬದುಕಿಗೆ ತಿರುವು ತಂದ ವರ್ಷ. ಸೆಂಟ್ರಲ್ ಕಾಲೇಜಿನಲ್ಲಿ ಬಿಎಸ್ಸಿ ವಿದ್ಯಾರ್ಥಿಯಾಗಿದ್ದಾಗ (ಆಗಸ್ಟ್ 9, 1942) ನಾನು ಧುಮುಕಬೇಕೆಂದುಕೊಂಡಿದ್ದ 'ಕ್ವಿಟ್ ಇಂಡಿಯಾ' ಚಳುವಳಿಗೆ ಒಂದು ದಿನ ಮುಂಚೆ ಗಾಂಧೀಜಿ ಮತ್ತು ಉಳಿದ ಧುರೀಣರನ್ನು ಬಂಧಿಸಲಾಯಿತು.
  •     ಇಡೀ ದೇಶವೇ ಅಸದೃಶ್ಯವಾದ ಸಂಘರ್ಷದ ಹಿಡಿಯಲ್ಲಿರುವಾಗ ನನ್ನ ವೈಯಕ್ತಿಕ ಹಿತಸಾಧನೆಗಿಂತ ದೇಶಕ್ಕೆ ನಾನು ಸಲ್ಲಿಸಬೇಕಾದ ಕರ್ತವ್ಯವೇ ಮುಖ್ಯ ಎಂಬ ತೀರ್ಮಾನ ಕೈಗೊಂಡು ನಾನೂ ಚಳುವಳಿಯ ಭಾಗವಾದೆ. ಸೆಂಟ್ರಲ್ ಕಾಲೇಜು ರಸ್ತೆಯಾಚೆಗಿದ್ದ ಸೆಂಟ್ರಲ್ ಜೈಲಿನಲ್ಲಿ ನನ್ನನ್ನು ಕೂಡಿಹಾಕಲಾಯಿತು. ಸೆಂಟ್ರಲ್ ಕಾಲೇಜಿನಲ್ಲಿದ್ದಷ್ಟೇ ಖುಷಿಯಲ್ಲಿ ಸೆಂಟ್ರಲ್ ಜೈಲಿನಲ್ಲಿದ್ದೆ.
  •     ನಮ್ಮ ದೇಶದ ಶಿಕ್ಷಣ ಅತ್ಯಂತ ನಿರ್ಲಕ್ಷ್ಯಕ್ಕೆ ತುತ್ತಾದ ವಿಷಯ. ಜತೆಗೆ ನಮ್ಮ ಶಿಕ್ಷಣ ಪದ್ಧತಿಯಲ್ಲಿ ಅಧ್ಯಾಪಕ ಅತ್ಯಂತ ದುರ್ಬಲ ಕೊಂಡಿ. ಹಾಗೆಂದು ಸರಕಾರಿ ಮತ್ತು ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ದುಡಿಯುತ್ತಿರುವ ಅರ್ಪಣಾ ಭಾವದ, ಉತ್ಸಾಹ ತುಂಬುವ ಮಹಾನ್ ಶಿಕ್ಷಕರ ಬಗ್ಗೆ ನನಗೆ ತಿಳಿದಿಲ್ಲವೆಂದಲ್ಲ. ಆದರೆ ಇಂಥ ಶಿಕ್ಷಕರ ಸಂಖ್ಯೆ ಚಿಕ್ಕದು ಮತ್ತು ಬೇಗನೆ ಮಾಯವಾಗುತ್ತಿರುವಂಥದ್ದು.
(ಕೊಡುಗೆ: ಕೆ.ಎಂ. ವಿಶ್ವನಾಥ ಮರತೂರ)

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.