ಮಕರಂದ/ದೋಣಿ

ಸಿದ್ಧಾಂತ ಹುಡುಕಿದರೆ ಭಯ

ಸಿದ್ಧಾಂತ ಹುಡುಕಿದರೆ ಭಯ
Published On :

ಆಂಟನ್ ಚೆಕಾವ್ ರಷ್ಯಾದ ಬಹುದೊಡ್ಡ ಕತೆಗಾರ. ತನಗಿಂತ ಕಿರಿಯರಿಗೆ, ಓರಗೆಯ ಬರಹಗಾರರಿಗೆ ಆತ ಬರೆಯುತ್ತಿದ್ದ ಪತ್ರಗಳಲ್ಲಿ ಕತೆ ಕಟ್ಟುವ ಕಲೆಯ ಬಗ್ಗೆ ಆಗಾಗ ವಿವರಿಸಿದ್ದ. ಅಂಥ ಕೆಲವು ಇಲ್ಲಿವೆ.
-    ನಾನು ಕಳೆದ ಇಪ್ಪತ್ತೈದು ವರ್ಷಗಳಿಂದ ನನ್ನ ಕತೆಗಳ ಬಗ್ಗೆ ಬರುತ್ತಿರುವ ವಿಮರ್ಶೆಗಳನ್ನು ಓದುತ್ತಲೇ ಇದ್ದೇನೆ. ಯಾವುದರಲ್ಲೂ ನೆನಪಿಡಬಹುದಾದ ಒಂದೇ ಒಂದು ಸಾಲು, ಒಳ್ಳೆಯ ಒಂದು ಸಲಹೆ ನನಗೆ ಸಿಕ್ಕಿಲ್ಲ!
-    ಕತೆಯ ಪಾತ್ರಗಳ ಮಾನಸಿಕ, ಆಧ್ಯಾತ್ಮಿಕ ವಿವರಗಳನ್ನೇನೂ ನೀವು ನೀಡಬೇಕಾಗಿಲ್ಲ. ಅದು ಅವರ ವರ್ತನೆಗಳಿಂದಲೇ ಹೊರ ಹೊಮ್ಮುವಂತಿರಬೇಕು. ಒಮ್ಮೆಗೇ ಹಲವಾರು ಪಾತ್ರಗಳನ್ನು ತರುವುದೂ ಬೇಡ.
-    ಸಮಸ್ಯೆಯ ಪರಿಹಾರ ಮತ್ತು ಸಮಸ್ಯೆಯ ಸಮರ್ಪಕವಾದ ಮಂಡನೆ- ಈ ಎರಡು ವಿಚಾರಗಳಲ್ಲಿ ಕಲೆಗಾರನಿಗೆ ಎರಡನೆಯದಷ್ಟೇ ಬೇಕಾಗಿರುವುದು.
-    ನನ್ನ ಕತೆಯ ಸಾಲುಗಳ ಮಧ್ಯೆ ಸಿದ್ಧಾಂತವೊಂದನ್ನು ಹುಡುಕಲು ಯತ್ನಿಸುವವರನ್ನು ಕಂಡರೆ ನನಗೆ ಭಯ. ಇಂಥವರು ನಾನು ಉದಾರವಾದಿಯೋ, ಸಂಪ್ರದಾಯವಾದಿಯೋ ಎಂಬುದನ್ನು ಕಂಡುಹಿಡಿಯಲು ಯತ್ನಿಸುತ್ತಾರೆ. ನಾನು ಉದಾರವಾದಿಯೂ ಅಲ್ಲ, ಸಂಪ್ರದಾಯವಾದಿಯೂ ಅಲ್ಲ. ನಾನು ಮುಕ್ತ ಕಲಾಕಾರನಲ್ಲದೆ ಬೇರೇನೂ ಆಗಲು ಬಯಸುವುದಿಲ್ಲ.
-    ನನ್ನ ಕೆಲವು ಕತೆಗಳಲ್ಲಿ ನಾನು ಏನು ಹೇಳಲು ಉದ್ದೇಶಿಸಿದ್ದೆ ಎಂದು ಕೇಳುವವರಿದ್ದಾರೆ. ಇಂಥ ಪ್ರಶ್ನೆಗಳಿಗೆ ನನ್ನಲ್ಲಿ ಉತ್ತರವಿಲ್ಲ. ಬರೆಯುವುದು ನನ್ನ ಕಾಳಜಿ, ಬೋಧಿಸುವುದಲ್ಲ. ನಾನು ಯಾವುದರ ಬಗ್ಗೆ ಬರೆಯಬೇಕೆಂದು ಹೇಳಿ, ಬರೆಯುತ್ತೇನೆ. ಮೇಜಿನ ಮೇಲಿರುವ ಈ ಬಾಟಲಿಯ ಬಗ್ಗೆ ಬರೆಯಲು ಹೇಳಿ, ಬಾಟಲಿ ಎಂಬ ಹೆಸರಿನ ಕತೆ ಬರೆದು ಕೈಗಿಟ್ಟುಬಿಡುತ್ತೇನೆ. ಪ್ರಾಮಾಣಿಕ ಅನುಭವ ವಿವರಗಳಿಂದ ಕೂಡಿದ ಪ್ರತಿಮೆಗಳು ಚಿಂತನೆಯನ್ನು ಸೃಜಿಸಬಲ್ಲವು, ಆದರೆ ಚಿಂತನೆಯು ಪ್ರತಿಮೆಯನ್ನಲ್ಲ.
-    ದೇವರು, ಆಸ್ತಿಕತೆ ಮುಂತಾದ ಸಮಸ್ಯೆಗಳನ್ನು ಬಗೆಹರಿಸುವುದು ಬರಹಗಾರನ ಕೆಲಸವಲ್ಲ. ಯಾರು ಯಾವಾಗ ಎಂಥ ಸಂದರ್ಭದಲ್ಲಿ ದೇವರ ಬಗೆಗೆ ಅಥವಾ ಆಸ್ತಿಕತೆಯ ಬಗೆಗೆ ಹೇಗೆ ಚಿಂತಿಸಿದರು, ಹೇಗೆ ನಡೆದುಕೊಂಡರು ಎಂಬುದನ್ನು ಹೇಳುವುದಷ್ಟೇ ನಮ್ಮ ಕೆಲಸ. ತನ್ನ ಪಾತ್ರಗಳ ನ್ಯಾಯಾಧೀಶನಾಗುವುದಲ್ಲ, ಪಕ್ಷಪಾತರಹಿತನಾದ ಸಾಕ್ಷಿಯಾಗುವುದು.
-    ದುಃಖಿಗಳು ಮತ್ತು ನಿರ್ಭಾಗ್ಯವಂತರ ಬಗ್ಗೆ ನೀವು ಬರೆಯುತ್ತಿದ್ದೀರಿ, ಓದುಗನಲ್ಲಿ ಅವರ ಬಗ್ಗೆ ಸಹಾನುಭೂತಿ ಉಕ್ಕಬೇಕಾಗಿದೆ ಎಂದಿಟ್ಟುಕೊಳ್ಳಿ. ಕತೆಯನ್ನು ತಣ್ಣಗೆ ಹೇಳಲು ಯತ್ನಿಸಿ. ಇನ್ನೊಬ್ಬರ ದುಃಖಕ್ಕೆ ಅದು ಹಿನ್ನೆಲೆಯಾಗಿ ಅದರಿಂದಲೇ ಪಾತ್ರದ ದುಃಖವು ಎದ್ದು ಕಾಣಿಸುತ್ತದೆ. ಅಂದರೆ ನಿಮ್ಮ ಪಾತ್ರದ ಬಿಕ್ಕಳಿಕೆಗೆ ನೀವು ನಿಟ್ಟುಸಿರು ಬಿಡಬಹುದಷ್ಟೇ. ಹೆಚ್ಚು ತಣ್ಣಗಿರಿ, ವಿವರಗಳಿಗೆ ನಿಷ್ಠರಾಗಿದ್ದಷ್ಟೂ ನೀವು ಹೆಚ್ಚು ಪರಿಣಾಮ ಬೀರಬಲ್ಲಿರಿ.
-    ಬರೆದದ್ದರ ಪ್ರೂಫ್ ನೋಡುವಾಗ ಅದರಲ್ಲಿರುವ ಗುಣವಾಚಕಗಳು ಹಾಗೂ ಕ್ರಿಯಾವಿಶೇಷಣಗಳನ್ನು ಎಷ್ಟು ಸಾಧ್ಯವೋ ಅಷ್ಟು ಕಿತ್ತುಹಾಕಿ. ಇವು ಎಂಥ ಅಡ್ಡಿಗಳೆಂದರೆ, ಇದರಿಂದ ಓದುಗ ಬರಹವನ್ನು ಬದಿಗಿಟ್ಟು ಎದ್ದು ಹೋಗುತ್ತಾನೆ.
'ಅವನು ಹುಲ್ಲಿನ ಮೇಲೆ ಕುಳಿತಿದ್ದ' ಎಂದು ನಾನು ಬರೆದರೆ ಅದು ಸ್ಪಷ್ಟವಾಗಿ ಅರ್ಥವಾಗುತ್ತದೆ. 'ಪಾದಚಾರಿಗಳು ಈಗಾಗಲೇ ಬೇಕಾದಷ್ಟು ಓಡಾಡಿ ತುಳಿದುಹಾಕಿದ್ದ ಹಸಿರು ಹುಲ್ಲಿನ ಮೇಲೆ ಎತ್ತರದ, ಸಪೂರ ಎದೆಯ, ಕೆಂಪು ಗಡ್ಡದ ಆ ಮನುಷ್ಯ ಆತಂಕದಿಂದ ಸುತ್ತಮುತ್ತಲನ್ನು ಗಮನಿಸುತ್ತ ಮೌನವಾಗಿ ಕುಳಿತಿದ್ದ'- ಹೀಗೆ ಬರೆದರೆ ಓದುವುದೂ, ಮೆದುಳನ್ನು ಒಂದೆಡೆ ಹಿಡಿದಿಡುವುದೂ ಕಷ್ಟಸಾಧ್ಯ. ಪ್ರಜ್ಞೆ ಇಷ್ಟೊಂದು ವಿವರವನ್ನು ಒಮ್ಮೆಲೇ ಖಂಡಿತ ಹಿಡಿದಿಡಲಾರದು.

- ಹರೀಶ್ ಕೇರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.