ಒಂದುಪದ್ಯ

ಒಬ್ಬ ಸಂದರ್ಶಕ ಕೇಳಿದ, 'ಸಾಹಿತ್ಯದ ಹಾಸಿಗೆ ಮೇಲೆ ಇಂಗ್ಲಿಷ್ ಹರಡಿಕೊಂಡಷ್ಟು, ಬೇರೆ ಯಾವ ಭಾಷೆಗಳೂ ಹರಡಿಕೊಂಡಿಲ್ಲ ಯಾಕೆ?'. ಅದಕ್ಕೆ ಹೆಸರಾಂತ ಐರಿಷ್ ಕವಿ ವಿಲಿಯಂ ಬಟ್ಲರ್ ಏಟ್ಸ್ ನಗುತ್ತಲೇ ಉತ್ತರಿಸುತ್ತಾನೆ, 'ಈ ಬಗ್ಗೆ ನಾನೂ ಚಿಂತಿಸಿದ್ದೇನೆ. ಇಂಗ್ಲಿಷ್ ಬೇರೊಂದು ಭಾಷೆ ಜತೆ ಬೆರೆಯುವುದಿಲ್ಲ. ಅದನ್ನು ಯಾರು ಸಮುದ್ರವಾಗಿಸಿದ್ದಾರೋ ತಿಳಿಯದು. ಹೀಗಾಗಿ, ಅದರ ಕಣ್ಣಿಗೆ ಎಲ್ಲವೂ ಉಪಭಾಷೆಗಳು. ಬೇರೆ ಭಾಷೆಗಳಿಗೆ ಅನುವಾದದ ತಲೆಬಿಸಿಯಿದೆ. ಆದರೆ, ಇಂಗ್ಲಿಷಿಗೆ ಅನುವಾದದ ಹಂಗಿಲ್ಲ. ಸ್ವಂತ ರಚನೆಗಳಿಂದಲೇ ವಿಸ್ತಾರವಾಗುತ್ತಾ ಹೋಗುತ್ತದೆ'.
ಏಟ್ಸ್ ಹೇಳುವುದನ್ನು ಇವತ್ತಿನ ದಿನಕ್ಕೆ ತಳಕು ಹಾಕುವುದು ಕಷ್ಟ. ಏಕೆಂದರೆ, ಇತ್ತೀಚೆಗೆ ಇತರೆ ಭಾಷಾ ಕೃತಿಗಳೂ ಇಂಗ್ಲಿಷಿನ ಒಡಲನ್ನು ಸೇರುತ್ತಿವೆ. ಆದರೆ, ಇಂಗ್ಲಿಷಿಗಿಂತ ಹೆಚ್ಚಾಗಿ ಇತರೆ ಭಾಷೆಗಳಿಗೆ ಈ ಅನುವಾದದ ರಿಸ್ಕ್ ಇದ್ದೇ ಇದೆ.
ಮೊನ್ನೆ ನರೇಂದ್ರಮೋದಿ ಹೀಗೊಂದು ಮಾತು ಉದ್ಧರಿಸಿದರು, 'ಇಂಗ್ಲಿಷನ್ನು ಬಳಸಿಕೊಳ್ಳದೆ, ಪ್ರಾದೇಶಿಕ ಭಾಷೆಯನ್ನು ನಂಬಿಯೇ ಚೀನಾ ಜಗತ್ತಿನ ಮುಂಚೂಣಿ ರಾಷ್ಟ್ರಗಳಲ್ಲೊಂದಾಗಿದೆ' ಅಂತ. ಹಾಗಾದರೆ, ಚೀನಿ ಬಲಿಷ್ಠ ಭಾಷೆಯೇ? ಎಂಬ ಪ್ರಶ್ನೆಯೂ ಈ ಮಾತಿನ ಹಿಂದೆ ಹುಟ್ಟಬಹುದು. ಚೀನಿ ಬಲಿಷ್ಠ ಭಾಷೆ ಎನ್ನುವುದಕ್ಕಿಂತ ಹೆಚ್ಚಾಗಿ, ಅವರ ತಂತ್ರಜ್ಞಾನ ಅಷ್ಟು ಉತ್ಕೃಷ್ಟದ್ದು ಎನ್ನಬಹುದು. ಇಂಗ್ಲಿಷ್ ಸೇರಿದಂತೆ ಜಗತ್ತಿನ ನೂರಿನ್ನೂರು ಭಾಷೆಗಳನ್ನು ಚೀನಿಗೆ ಸುಲಭವಾಗಿ ಭಾಷಾಂತರಗೊಳಿಸುವ ಸಾಫ್ಟ್‌ವೇರ್‌ಗಳು ಅವರ ಬಳಿ ಇವೆ. ಹಾಗಾದರೆ, ಕನ್ನಡ ಆ ಹಂತಕ್ಕೆ ಏರುವುದು ಯಾವಾಗ?
ಇರಲಿ, ಅಲ್ಲಿಯತನಕವಾದರೂ ಅನುವಾದ ಪ್ರಕ್ರಿಯೆ ಸಾಗಲೇಬೇಕಲ್ಲವೇ? ಮೂಲ ಭಾಷೆಯ ಆಶಯವನ್ನು ಪಕ್ಕಕ್ಕೆ ಸರಿಸದೆ, ಚೌಕಟ್ಟಿನೊಳಗೇ ಪ್ರಾವೀಣ್ಯತೆ ಮೆರೆಯುವ ಕಲೆಯೇ ಅನುವಾದ. ಬೂಕರ್ ತನಕ ಹೋಗಿಬಂದ ಡಾ. ಯು.ಆರ್. ಅನಂತಮೂರ್ತಿ, ಪಾಶ್ಚಾತ್ಯ ಸಾಹಿತ್ಯವನ್ನು ಎಳೆಎಳೆಯಾಗಿ ವಿಮರ್ಶಿಸಿ ಕನ್ನಡಿಗರಿಗೆ ಪರಿಚಯಿಸಿದ ಎಲ್.ಎಸ್. ಶೇಷಗಿರಿ ರಾವ್, ಪಿ. ಲಂಕೇಶ್ ಮತ್ತಿತರರನ್ನು ಈ ಹಂತದಲ್ಲಿ ನೆನೆಯಲೇಬೇಕು.
ಆದರೆ, ಅನುವಾದ ಈ ಘಟಾನುಘಟಿಗಳನ್ನೂ ಅಲುಗಾಡಿಸಿದೆ. ಲಂಕೇಶರು 'ಮನಕೆ ಕಾರಂಜಿಯ ಸ್ಪರ್ಶ'ದಲ್ಲಿ ಇದನ್ನು ಸ್ಪಷ್ಟವಾಗಿ ಉಲ್ಲೇಖಿಸಿದ್ದಾರೆ. ಡಬ್ಲ್ಯು.ಬಿ. ಏಟ್ಸ್‌ನ ಒಂದು ಪದ್ಯವನ್ನು ಅನಂತಮೂರ್ತಿ, ಲಂಕೇಶ್ ಅನುವಾದಿಸಲು ಯತ್ನಿಸುತ್ತಾರೆ. ಬಂದ ಫಲಿತಾಂಶಗಳು ಕೊಂಚ ಭಿನ್ನವಾಗಿರುತ್ತವೆ. 'ಈ್ಠಛಣಣ ಒಛಟಿಜ ಖಿಛಟ್ಞಡ ಗ್ಝಿಝಿ ಝಿಜ ಇ್ಝಝ್ಟಠ' ಕವಿತೆಯನ್ನು ಅನಂತಮೂರ್ತಿ ತುಸು ಗಂಭೀರವಾಗಿ ಅನುವಾದಿಸಿದರೆ, ಲಂಕೇಶ್ ಮೋಹಕವಾಗಿ ಅದನ್ನು ಬಿಡಿಸಿಡುತ್ತಾರೆ. ಆದರೆ, ಇಬ್ಬರಿಂದಲೂ ಏಟ್ಸ್‌ನ ಉದ್ದೇಶಗಳಿಗೇನೂ ಧಕ್ಕೆಯಾಗಿಲ್ಲ.
ಒಟ್ಟಿನಲ್ಲಿ ಅನುವಾದಕರೆಂಬ ಮರುಸೃಷ್ಟಿಕರ್ತರಿಗೆ ಎಂದೂ ಪರಿಪೂರ್ಣ ಸಮಾಧಾನ ಸಿಗುವುದಿಲ್ಲ.
Crazy Jane Talks
With The Bishop
I met the Bishop on the road
And much said he and I.
'Those breasts are flat and fallen now,
Those veins must soon be dry;
Live in a heavenly mansion,
Not in some foul sty.'
'Fair and foul are near of kin,
And fair needs foul,' I cried.
'My friends are gone, but that's a truth
Nor grave nor bed denied,
Learned in bodily lowliness
And in the heart's pride.
'A woman can be proud and stiff
When on love intent;
But Love has pitched his mansion in
The place of excrement;
For nothing can be sole or whole
That has not been rent.'
ಮರಳಿ ಜೇನ್ ಗೌರವಾನ್ವಿತ ಬಿಷಪ್‌ಗೆ
ಬೀದಿಯಲ್ಲಿ ಬಿಷಪ್ ಸಿಕ್ಕ
ಅವನು ಅಂದ, ನಾನೂ ಅಂದೆ;
'ಎಂಥ ಮೊಲೆಗಳೂ ಸೊರಗಿವೆ, ಜೋತಿವೆ,
ಅನಾಳಗಳೂ ಬತ್ತಲಿವೆ.
ನಿರ್ಮಲ ಸೌಧದಿ ಬಾಳೇ ಹೆಣ್ಣೆ,
ಮಲದ ಕೂಪ ತೊರೆಯೆ,
ನಿಜದ ಠಾವು ಅರಿಯೆ'.
ನಾನದ ಕೊಡೆ: ಕೇಳೋ ತಂದೆ
ಮಲ ನಿರ್ಮಲ ನೆಂಟರಂತೆ
ಮಲವಿದ್ದೇ ಅಮಲ;
ಸಖರೆಷ್ಟೋ ಸತ್ತರು- ನಿಜ
ಗೋರಿಯಷ್ಟೇ ಸುಖದ ಶಯ್ಯೆ
ಮರೆಮಾಚದ ನಿಜವದು.
ಅರಿತದ್ದೋ ಅದು-
ಪಾಪದ ತನು ವಿನಯದಲ್ಲಿ
ಹೃದಯ ಹೆಮ್ಮೆಯಲ್ಲಿ.
'ರತ್ಯಾತುರ ಹೆಣ್ಣಿಗು ಇದೆ
ಲಜ್ಜೆಯ ಬಿಗುಮಾನ;
ಪ್ರೇಮವೆಬ್ಬಿಸಿದ ಸಿರಿಸೌಧದ ಠಾವೊ
ಮಲಮೂತ್ರದ ಜಫನ;
ಬಿಡಿ ನಿಂತಿದ್ದೂ ಇಡಿ ತುಂಬಿದ್ದೂ
ಬಗೆದದ್ದೇ ಎಲ್ಲ- ಹರಿಯದೆ
ಬಗೆದದ್ದೂ ಇಲ್ಲ'.
- ಯು.ಆರ್. ಅನಂತಮೂರ್ತಿ
ಮಳ್ಳಿ ಜೇನ್ ಮತ್ತು ಬಿಶಪ್ ಮಾತಾಡಿದ್ದು
ಬೀದಿಯಲ್ಲೊಬ್ಬ ಪಾದ್ರಿ ಸಿಕ್ಕಿದ್ದ,
ಆಡಿದೆವು ಅದು ಇದೂ ಮಾತು.
ಅವನೆಂದ, 'ಎಂಥ ಮೊಲೆ ಬತ್ತಿವೆ. ನರ
ಒಣಗಿ ಬೀಳಲಿವೆ ಜೋತು;
ಹೊಲಸು ಹಕ್ಕೆಯ ತೊರೆ, ಕಳೆ
ದಿನಗಳ ದೇವಾಲಯದಿ ಕೂತು.'
ಚೀರಿದೆ ನಾನು, 'ಹೊಲಸಿಗೂ ಸೊಗಸಿಗೂ
ಬಿಡಿಸಲಾರದ ಮಿಲಾಖತ್ತು;
ಸಖರು ಹೊರಟುಹೋದರು- ಈ ವಾಸ್ತವ
ಹಾಸಿಗೆ, ಗೋರಿಗೂ ಗೊತ್ತು;
ದೇಹದ ಪತನಕ್ಕೆ ಹಿಗ್ಗಿದ ಹೃದಯ,
ಪಡಕೊಂಡಿದೆ ಸುಖಸಂಪತ್ತು'.
'ಹೆಣ್ಣು ಪ್ರೇಮಕ್ಕೆ ಮನದ ನೆಟ್ಟರೆ
ಉಬ್ಬಿಹೋಗುವಳು ಸೆಡೆದು
ಕಾಮ ಮಾಡಿದ್ದೇನು, ಹಾಕಿದ ಢೇರೆ
ಮಲಮೂತ್ರ ಸ್ಥಾನ ಹಿಡಿದು,
ಇಲ್ಲಿ ಚಿಂದಿಯಾಗದೆ ಕಷ್ಟ, ಮತ್ತೆ
ಒಂದಾಗಿಸುವುದು ಹೊಲಿದು'.
-ಪಿ. ಲಂಕೇಶ್
- ಕೀರ್ತಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


