ಮಕರಂದ/ದೋಣಿ

ಸಪ್ತ ಸಾಗರವ ಗೆದ್ದಂತೆ ಬೀಗುವೆನು...

ಸಪ್ತ ಸಾಗರವ ಗೆದ್ದಂತೆ ಬೀಗುವೆನು...
Published On :

ನನ್ನ ಹೃದಯವೇ,
ಚಳಿಗಾಲದ ಬೆಳಗ್ಗೆ ಹನ್ನೊಂದೂವರೆಯ ಸಮಯ. ಸೂರ್ಯ ಕಣ್ಬಿಟ್ಟು ಐದು ತಾಸಾಗಿದ್ದರೂ ಚುಮುಚುಮು ಚಳಿ ಕಡಿಮೆಯಾಗಿಲ್ಲ... ನಾವು ಹೆಜ್ಜೆ ಹಾಕಿದ ಅದೇ ರೋಡಲ್ಲಿ ನಿನ್ನ ನೆನೆಯುತ್ತಾ ಹೆಜ್ಜೆ ಹಾಕುತಿರೆ ಮರದ ಎಲೆಗಳು ಉದುರಿದ ಹಾಗೆ ಕಣ್ಣ ಪರದೆಯಲಿ ಆ ದಿನಗಳು ತೇಲಿ ತೇಲಿ ತೇಲುತ್ತಲೇ ಇವೆ... ಬೋಳಾದ ಮರ ನನ್ನ ನೋಡಿ ಅಣಕಿಸಿದಂತಿದೆ, ನನ್ನಂತೆಯೇ ಕೆಲವು ದಿನಗಳಿಗಾದರೂ ನಿನ್ನೆದೆ ಬರಿದಾಗಿದೆ ಎಂದು. ಎದೆ ಬರಿದಾಗಿಲ್ಲ. ನೀ ಕಟ್ಟಿದ ಸುಂದರ ಸೌಧದಲಿ ಖಾಲಿ ಎನ್ನುವ ಪದವೂ ನುಸುಳದು. ಒಂಟಿ ಎಂಬ ಪದವೂ ಬೇಕೆಂದರೂ ಇಣುಕದು. ಆದರೆ ಅನಿಸುತಿದೆ - ನೀ ಈ ಹೃದಯದ ಬಡಿತ, ಕಣ್ಣುಗಳ ನೋಟ, ಮೌನದ ಮಾತು, ಮಾತುಗಳೊಳಗಿನ ಮೌನ ಎಲ್ಲಾ... ಎಲ್ಲಾ ನೀನೇ... ನನ್ನೆಲ್ಲಾ ಕನಸು ಕಲ್ಪನೆಗಳ ಸಾರಥಿ ನೀನೇ...

ಬರೀ ಒಂದು ವಾರದ ಅಗಲಿಕೆಯ ಎರಡನೇ ದಿನವೇ ಯುಗಗಳು ಸರಿದಂತೆನಿಸಿದೆ. ಎಷ್ಟು ಹುಡುಕಿದರೂ ಮನವು ನಿನ್ನ ಬಿಟ್ಟು ಬೇರೆ ಯೋಚಿಸುವ ಪ್ರಯತ್ನವನ್ನೇ ಮಾಡುತ್ತಿಲ್ಲ. ನಿನ್ನೆಯಿಂದ ನಿನ್ನ ಅಪ್ಪ ಅಮ್ಮನಿಗೆ ಹಾಕಿದ ಹಿಡಿ ಶಾಪಗಳೆಷ್ಟೋ... ಯಾಕೆ ನಮ್ಮಿಬ್ಬರನ್ನೂ ದೂರ ಮಾಡಿ ಏಳು ದಿನಗಳೆಂಬ ಸಾಗರವ ದಾಟಲು ಹೇಳಿದರೋ... ತಿಳಿಯದು. ನಿನ್ನ ನಗುವಿನ ಮುಖ ನೋಡದೇ ಬೆಳಗಾಗುತ್ತಿರಲಿಲ್ಲ... ನಿನ್ನ ಸಿಹಿಮುತ್ತ ಸವಿಯದೆ ನಿಶೆಯ ನಶೆಯು ಮೈದಳೆಯುತ್ತಿರಲಿಲ್ಲ... ಮನೆಯ ಮನದ ಹೊಸ್ತಿಲಲಿ ನಿಂತು ನಗುವ ನಿನಗೆ ಏನು ಕೊಟ್ಟರೂ ತೀರದು. ತುಂಬಿ ತುಂಬಿ ಕೊಡುತ್ತಿರುವ ಪ್ರೀತಿಗೆ ಆಜನ್ಮ ಋಣಿ ನಾನು. ಹೀಗೇ ಸಾಗಬೇಕು, ಸಾಗುತಿರಲಿ ಪ್ರೀತಿ ಬದುಕಿನ ಅಲ್ಲ ಬದುಕಿನ ಪ್ರೀತಿಯ ಹಾದಿ... ಆದರೆ ಒಂದೇ ಒಂದು ಬೇಡಿಕೆ: ಅರೆಕ್ಷಣದ ವಿರಹವೂ ಬೇಡ, ಅದರೊಳಗಿನ ಚಡಪಡಿಕೆಯಂತೂ ಯಾವ ಶತ್ರುವಿಗೂ ಬೇಡ...

ಈ ಪತ್ರ ಓದಿ ನಿನಗೆ ನಗು ಬರಬಹುದು... ಆದರೆ ನಿನಗೆ ಗೊತ್ತು, ನನ್ನ ಅಂತರಂಗದ ಪ್ರತಿ ಮಿಡಿತದಲ್ಲೂ ಬರೆಯಲಾಗದಷ್ಟು, ಹೇಳಲಾಗದಷ್ಟು ನಿನ್ನ ಮಿಸ್ ಮಾಡ್ಕೋತಾ ಇದ್ದೀನಿ ಅಂತ... ನಿನಗೂ ನನ್ನ ಹಾಗೆ ಅನಿಸುತ್ತಿದ್ದರೆ ಏನಾದರೊಂದು ಸುಳ್ಳು ಹೇಳಿ ಬೇಗ ಬಂದು ಬಿಡು. ನೀನೇನಾದರೂ ಅಂಥ ಒಳ್ಳೆಯ ಕೆಲಸ ಮಾಡಿದರೆ, ಸಾವಿರಾರು ಮೈಲಿ ದೂರವಿರುವ ಸೇರು.. ಸಪ್ತ ಸಾಗರವನು ಎರಡೇ ದಿನಗಳಲಿ ಗೆದ್ದಂತೆ ಬೀಗುವೆನು...
ನಿನ್ನದೇ ಹೃದಯ

- ಜಮುನಾರಾಣಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.