ಸಿದ್ದಹಸ್ತ

ಕನ್ನಡದ ಹಿಂದಿನ ಪೀಳಿಗೆಯ ಲೇಖಕರಲ್ಲಿ ಶರ್ಮತ್ರಯರು ಪ್ರಸಿದ್ಧರು. ತಿರುಮಲೆ ತಾತಾಚಾರ್ಯ ಶರ್ಮ, ಸಿದ್ದವನಹಳ್ಳಿ ಕೃಷ್ಣಶರ್ಮ ಮತ್ತು ಬೆಟಗೇರಿ ಕೃಷ್ಣಶರ್ಮ ಇವರೇ ಆ ತ್ರಯರು. ಸಿದ್ದವನಹಳ್ಳಿಯವರು ಅಪಾರವಾಗಿ ದುಡಿದು ತಮ್ಮದೇ ವಿಶಿಷ್ಟ ಜಾಡನ್ನು ಸೃಷ್ಟಿಸಿ, ಈಗಾಗಲೇ ಜೀವನರಂಗದಿಂದ ವಿರಮಿಸಿದ್ದಾರೆ.
ಧೀಮಂತ ಸಾಹಿತಿ ಸಿದ್ದವನಹಳ್ಳಿ ಕೃಷ್ಣಶರ್ಮರು ಹುಟ್ಟಿದ್ದು ಜುಲೈ 4, 1904ರಲ್ಲಿ. ತಂದೆ ರಂಗಾಚಾರ್, ತಾಯಿ ಶೇಷಮ್ಮ.
ಗಾಂಧಿಯುಗದ ಕರೆ ಸಿದ್ದವನಹಳ್ಳಿ ಶರ್ಮಾರನ್ನು ಹೋರಾಟದ ಬಲೆಯಲ್ಲಿ ಕಟ್ಟಿಹಾಕಿತು. ವಿದ್ಯಾರ್ಥಿಯಾಗಿದ್ದಾಗಲೇ ಸ್ವಾತಂತ್ರ್ಯ ಹೋರಾಟಗಾರರನೆಸಿಕೊಂಡರು. ವರ್ಧಾದಿಂದ ಬೆಂಗಳೂರಿಗೆ ಬಂದ ಕೃಷ್ಣಶರ್ಮರು ತಾತಾಚಾರ್ಯರಿಗೆ ಬಲಗೈ ಆಗಿ ನಿಂತರು. ಕನ್ನಡ, ಹಿಂದಿ, ತೆಲುಗು, ತಮಿಳು, ಉರ್ದು, ಸಂಸ್ಕೃತ, ಇಂಗ್ಲಿಷ್ ಭಾಷೆಗಳನ್ನು ಬಲ್ಲವರಾಗಿದ್ದ ಕೃಷ್ಣಶರ್ಮರ ಮಾತು, ಬರಹ, ಸಂಭಾಷಣೆಗಳಿಂದಲೇ ಮನೆಮಾತಾದರು.
ವೃತ್ತಪತ್ರಿಕಾ ಕ್ಷೇತ್ರದಲ್ಲಿ ಶರ್ಮರನ್ನು ಶಿಖರಕ್ಕೇರಿಸಿದ್ದು 'ಹರಿಜನ' ಪತ್ರಿಕೆ. ಇದರ ಕನ್ನಡ ಆವೃತ್ತಿಯನ್ನು ತಂದು, ಗಾಂಧಿಸಾಹಿತ್ಯವನ್ನು ಪರಿಚಯಿಸಿದರು. ಎಲ್ಲರಲ್ಲೂ ದೇಶಾಭಿಮಾನ ಪುಟಿದೇಳಿಸಿದರು.
ಕೃಷ್ಣಶರ್ಮರ 'ವರ್ಧಾಯಾತ್ರೆ'ಯಂತೆ 'ಪರ್ಣಕುಟಿ', 'ದೀಪಮಾಲೆ' ಈ ಗ್ರಂಥಗಳೂ ಅವರ ಸಾಹಿತ್ಯ ನಿರ್ಮಾಣಶಕ್ತಿಯ, ಸೃಜನಾತ್ಮಕ ಶುದ್ಧ- ಹಿತ- ರೋಚಕ ಬರಹ ಶಕ್ತಿಯ, ಸ್ಫುಟವಾಗಿ ನಿಲ್ಲುವ ಪ್ರತಿಮೆಗಳ ದ್ಯೋತಕವಾಗಿವೆ.
'ಪರ್ಣಕುಟಿ'- ಸೇವಾಗ್ರಾಮದ ಜೀವಕಳೆ ತುಂಬಿದ ಚಿತ್ರ. ಅಹಮದಾಬಾದನ್ನು ತ್ಯಜಿಸಿ, ವರ್ಧಾಕ್ಕೆ ಬಂದು ನೆಲೆಸಿದ ಬಾಪೂವನ್ನು ಇದು ವರ್ಣಿಸುತ್ದೆ. ಲಕ್ಷಾಧೀಶ ಶಿಷ್ಯ (ಐದನೇ ಮಗನೆಂದು ಹೆಸರಾದ) ಜಮನಾಲಾಲರ ಕೈಂಕರ್ಯದ ಫಲಗಳನ್ನೂ ಈ ಕೃತಿ ಎತ್ತಿಹಿಡಿಯುತ್ತದೆ.
ದೀಪಮಾಲೆಯೆಂಬ ಚಿತ್ರಮಾಲೆ
'ದೀಪಮಾಲೆ' ಕೃಷ್ಣಶರ್ಮರ ಇನ್ನೊಂದು ಉತ್ಕೃಷ್ಟ ಕೃತಿ. ಅವರ ಪಳಗಿದ ಲೇಖನಿ ಸುಂದರ ವ್ಯಕ್ತಿ ರೇಖಾಚಿತ್ರಗಳನ್ನು ಚಿತ್ರಿಸುತ್ತಿತ್ತು. ಅದರಲ್ಲಿ ಇರುವುದು ಹದಿನಾಲ್ಕು ವ್ಯಕ್ತಿಚಿತ್ರಗಳು. ಈ ವ್ಯಕ್ತಿಗಳೆಲ್ಲ ಗಾಂಧಿ ಪ್ರಭಾವಳಿಯಲ್ಲಿ ರಾರಾಜಿಸಿದ ಸರೋಜಿನಿದೇವಿ, ಠಕ್ಕರ್ ಬಾಪಾ, ಆಚಾರ್ಯ ವಿನೋಬಾ, ಆಂಧ್ರದ ಬಾರೂ ರಾಜಾರಾವ್, ಮೌಲಾನಾ ಆಜಾದ್, ಜಮನಾಲಾಲ್ ಬಜಾಜ್, ರಾಜೇನ್ ಬಾಬೂ, ಡಾ. ಪಟ್ಟಾಭಿ, ತತ್ವವೇತ್ತ ರಾಧಾಕೃಷ್ಣನ್, ಮಕ್ಸವಾಲಾ, ವಲ್ಲಭಬಾಯಿ, ಕೃಪಲಾನಿ, ರಾಜಗೋಪಾಲಾಚಾರಿ- ಇವರೇ ಇದರಲ್ಲಿನ ರೇಖಾಚಿತ್ರಗಳು. ಕೃಷ್ಣಶರ್ಮರು ಗಾಂಧಿಸಾಹಿತ್ಯದ ಮಾರ್ಗದಲ್ಲಿ ನಡೆದವರು. ಅನುವಾದದಲ್ಲೂ ಇವರದ್ದು ಎತ್ತಿದಕೈ.
ಗಾಂಧೀಜಿಯ ತರುವಾಯ ಗಾಂಧಿ ವಿಚಾರದ, ಸರ್ವೋದಯ ವಿಚಾರ- ಆಚಾರದ ಮೂರ್ತಸ್ವರೂಪರಾದವರು ವಿನೋಬಾ. ಕೃಷ್ಣಶರ್ಮರೂ ಕೆಲವು ವರ್ಷ 'ಸರ್ವೋದಯ' ಪತ್ರಿಕೆ ನಡೆಸಿ, ನಿಲ್ಲಿಸಿದರು. ಗಾಂಧಿ ಪರಿವಾರದಲ್ಲಿ ಪ್ರಮುಖರೆನಿಸಿದ್ದ ಮಶ್ರೂವಾಲಾ, ಜೆ.ಸಿ. ಕುಮಾರಪ್ಪ, ದಾದಾ ಧರ್ಮಾಧಿಕಾರಿ ಇವರ ವಿಶ್ಲೇಷಣಾತ್ಮಕ ಸಮಾಲೋಚನೆಗಳ ಕೃತಿಗಳನ್ನೂ ಇವರು ಕನ್ನಡಕ್ಕೆ ತಂದಿದ್ದಾರೆ.
ವಿನೋಬಾ ಅವರ ಗೀತಾ ಪ್ರವಚನದ ಕನ್ನಡ ಅನುವಾದ ಒಂದು ಅಮೋಘ ಕೃತಿ. ಶರ್ಮರ ಭಾಷಾಂತರ ಸಾಮರ್ಥ್ಯಕ್ಕೆ ಸೊಗಸಿಗೆ ಸಾಟಿಯಿಲ್ಲದ ನಿದರ್ಶನವನ್ನು ಇದರಲ್ಲಿ ಕಾಣಬಹುದು. ಕೃಷ್ಣ ಅರ್ಜುನನಿಗೆ ಯೋಗಯುಕ್ತವಾಗಿ ಬೋಧಿಸಿದ. ವಿನೋಬಾಜೀ ಯೋಗಯುಕ್ತರಾಗಿ ಪ್ರವಚನ ನೀಡಿದರು. ಕೃಷ್ಣಶರ್ಮರೂ ಯೋಗಯುಕ್ತರಾಗಿ ಅದನ್ನು ಅನುವಾದ ಮಾಡಿದರು. ಇದರಲ್ಲಿ ಒಸರುವ ಗೀತಾಮೃತ ಓದುಗರ ಹೃದಯದೊಳಗೆ ಇಳಿದು, ಚೈತನ್ಯ ತುಂಬುವಂತಿದೆ.
ಕನ್ನಡ ನಾಡಿಗೆ ಕೃಷ್ಣಶರ್ಮ ಅವರ ಕೊಡುಗೆ ಹಲವು ರೀತಿಯಲ್ಲಿ ಸಂದಿದೆ. ಸಾಹಿತ್ಯ, ಸ್ವಾತಂತ್ರ್ಯ ಹೋರಾಟ, ಪತ್ರಿಕೆ, ಸಹಕಾರ, ಜನಸಂಗ್ರಹ ಇತ್ಯಾದಿ. ಅವರ ವಿಶಿಷ್ಟ ಲೇಖನ ಶೈಲಿ, ಸಾಹಿತ್ಯ ಪ್ರೇರಣೆ, ಮೇಲಾಗಿ ಅವರ ಆದರ್ಶಮಯ ಬದುಕು ವಿಶೇಷವಾದವು. ಜೀವನಾದರ್ಶಗಳ ಪ್ರತಿಪಾದಕರಾಗಿ, ಪ್ರಚಾರಕರಾಗಿ, ಪ್ರವರ್ತಕರಾಗಿ, ಪರಿಪಾಲಕರಾಗಿ ಸಿದ್ದವನಹಳ್ಳಿ ಕೃಷ್ಣಶರ್ಮಾಜಿ ಚಿರಸ್ಮರಣೀಯರು.
- ಬಳಕೂರು ವಿ.ಎಸ್. ನಾಯಕ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


