ದೂರ ತೀರ ಧ್ಯಾನ
ವಲಸೆ ಎನ್ನುವುದು ಒಂದು ದೀರ್ಘ ಪ್ರಕ್ರಿಯೆ. ಯಾರೇ ಎಲ್ಲೇ ವಲಸೆಹೋದರೂ...

ವಲಸೆ ಎನ್ನುವುದು ಒಂದು ದೀರ್ಘ ಪ್ರಕ್ರಿಯೆ. ಯಾರೇ ಎಲ್ಲೇ ವಲಸೆಹೋದರೂ ಜೀವಮಾನವಿಡೀ ಈ ಹೊಸ ಪ್ರದೇಶಕ್ಕೆ ಹೊಂದಿಕೊಳ್ಳುವ, ಬಿಟ್ಟು ಬಂದ ಊರ ನೆನವರಿಕೆ, ಕನವರಿಕೆ ಇತ್ಯಾದಿ ಹಳವಂಡಗಳು ಕಾಡುತ್ತಲೇ ಇರುತ್ತವೆ. ಹೊಸಾ ದೇಶದ ಬೆರಗು, ಅಲ್ಲಿ ಜೀವಿಸಬೇಕಾಗಿರುವ ಅನಿವಾರ್ಯತೆ, ದೂರದಲ್ಲಿರುವ ಬಂಧುವರ್ಗಕ್ಕೆ ಬೇಕಾದಾಗ ಸಹಾಯ ಮಾಡಲಾಗದಿರುವ ಅಸಹಾಯಕತೆ, ಬೇರೆ ಸಂಸ್ಕೃತಿಯಲ್ಲಿ ಬೆಳೆಯುತ್ತಿರುವ ಮುಂದಿನ ಪೀಳಿಗೆ- ಇವು ಪ್ರತಿಯೊಬ್ಬರನ್ನೂ ಕಾಡೇ ಕಾಡುತ್ತವೆ. ಇದು ಸಾರ್ವತ್ರಿಕ.
ಇಂಗ್ಲಿಷಿನಲ್ಲಿ ವಲಸೆ ಸಾಹಿತ್ಯವನ್ನು ಓದಿದಾಗ ಅವುಗಳು ಹೀಗೇ ಇರಬೇಕು ಎಂದು ಫಾರ್ಮುಲಾ ಹಿಡಿದು ಬರೆಯುವಂತೆ ಬರೆಯುವಷ್ಟು ನಿರ್ದಿಷ್ಟ ಗುಣಗಳಿರುವುದನ್ನು ನಾವು ಕಾಣಬಹುದು. ಮೊಟ್ಟಮೊದಲಿಗೆ ವಲಸೆ ಎಂದ ತಕ್ಷಣ ಅದು ಪೂರ್ವದಿಂದ ಪಶ್ಚಿಮಕ್ಕೆ ಎನ್ನುವುದು ಡೀಫಾಲ್ಟ್. ಇಲ್ಲಿ ಒಬ್ಬ ಪ್ರಯಾಣಿಕನ ಹುಟುಕಾಟ, ನಾನ್ಯಾರು, ಎಲ್ಲಿಯವನು ಎಂಬ ಅಸ್ಮಿತೆಯ ಪ್ರಶ್ನೆ. ಹಿಂದೆ ಇದ್ದ ಮತ್ತು ಈಗ ಇರುವ ನಾಡಿನಿಂದ ತನ್ನೂರಿನ 'ಒಳ ಮತ್ತು ಹೊರ' ನೋಟ- ವಗೈರೆಗಳು ಪಶ್ಚಿಮದ ಓದುಗರಿಗೆ ಒಂದು ಹುಲುಸಾದ ಓದನ್ನು ಒದಗಿಸಿಕೊಡುವುದಂತೂ ಗ್ಯಾರೆಂಟಿ. ನೈಪಾಲ್ನಿಂದ ಜಂಪಾ ಲಹಿರಿಯವರೆಗೆ ಯಾವುದೇ ವಲಸೆ ಬರಹಗಳಲ್ಲಿರುವ ಸಾಮಾನ್ಯ ಗುಣ- ಪಶ್ಚಿಮಕ್ಕೆ ಬೇಕಾದ 'ಹೊರಗಿನವನ ಒಳನೋಟ'. ಈ ಹೊರಗಿನವನು ಕೂಡ ಪೂರಾ ಹೊರಗಿನವನಲ್ಲ. ತಮ್ಮ ಬೇರುಗಳು ಎಂದೋ ಬಿಟ್ಟು ಬಂದ ತಾವು ಹುಟ್ಟಿದ ನಾಡಿನಲ್ಲಿಯೇ ಇದೆ ಎಂದು ತಿಳಕೊಂಡಿರುವವರು. ಆದ್ದರಿಂದ ಪಶ್ಚಿಮದವರು ಹೋಗಿ ಈ ದೇಶಗಳನ್ನು ಸುತ್ತಿ ಬರೆದ ಪುಸ್ತಕಗಳು ಈ 'ಒಳನೋಟಗಳಿಲ್ಲ' ಎನ್ನುವ ಕಾರಣಕ್ಕಾಗಿ ಜನಪ್ರಿಯವಾಗುವುದು ಕಮ್ಮಿ. (ಕೆಲವೊಂದು ಅಪವಾದಗಳಿದ್ದೇ ಇರುತ್ತವೆ. ಉದಾಹರಣೆಗೆ, ಯಾನ್ ಮಾರ್ಟೆಲ್ನ 'ಲೈಫ್ ಆಫ್ ಪೈ'.)
ಇಲ್ಲಿ ಇನ್ನೊಂದು ಗುಣವನ್ನು ನಾವು ಗಮನಿಸಬಹುದು. ಈ ರೀತಿಯ ಇಂಗ್ಲಿಷ್ 'ಅನಿವಾಸಿ' ಬರಹಗಾರರು ನಮ್ಮ ಪುರಾಣಗಳಾದ ರಾಮಾಯಣ, ಮಹಾಭಾರತಗಳಿಂದ ಪ್ರೇರಿತಗೊಂಡಿಲ್ಲ. ಗಾಂಧೀವಾದವಾಗಲೀ, ಪೆರಿಯಾರ್ ಆಗಲೀ, ವಿವೇಕಾನಂದರ, ಪರಮಹಂಸರ ವಿಚಾರ ಸರಣಿಗಳನ್ನಾಗಲೀ ಓದಿ ತಮ್ಮ ಚಿಂತನ ಕ್ರಮವನ್ನು ಬೆಳೆಸಿಕೊಂಡಿಲ್ಲ. ನಿಜ ಹೇಳಬೇಕೆಂದರೆ, ಬಹಳಷ್ಟು ಮಂದಿಗೆ ಭಾರತೀಯತೆಯನ್ನುವ ರಾಷ್ಟ್ರೀಯತೆಯ ಯಾವ ಸೂಕ್ಷ್ಮಗಳೂ ಗೊತ್ತಿಲ್ಲ. ಕೆಲವರು ಭಾರತದಲ್ಲಿ ಹುಟ್ಟಿಯೂ ಇಲ್ಲ. (ನೈಪಾಲ್ ಮತ್ತು ಜಂಪಾ ಲಹಿರಿಗಳು ಭಾರತದ ಬಗ್ಗೆ ಬರೆದಾಗ ಅದು ಹೊರಗಿನ ನೋಟವೋ ಅಥವಾ ಒಳನೋಟವೋ?) ಇವರು ಬೆಳೆಯಬೇಕಾದಾಗ 'ಕಥಾ ಸರಿತ್ಸಾಗರ' ಓದಿಲ್ಲ. ಬೇತಾಳ ಕಥೆಗಳು, ಪಂಚತಂತ್ರವೂ ಇವರಿಗೆ ಗೊತ್ತಿಲ್ಲ. 'ಹಕಲ್ಬೆರಿ ಫಿನ್', 'ಜೇನ್ ಐರ್' ಅಥವಾ 'ಓ ಹೆನ್ರಿ'ಯನ್ನು ಓದಿಕೊಂಡೇ ಬೆಳೆದವರು. ಆದರೆ, ಇವರು ಬರೆಯುವುದು ಭಾರತೀಯರ ಬಗ್ಗೆ ಇವರಿಗಿರುವ ಹಣೆಪಟ್ಟಿ 'ಭಾರತೀಯ ಇಂಗ್ಲಿಷ್ ಬರವಣಿಗೆ' ಅಥವಾ 'ವಲಸೆ ಬರವಣಿಗೆ.'
ಈ ರೀತಿಯ ವಲಸೆ ಬರವಣಿಗೆ ಪಶ್ಚಿಮದಲ್ಲಿ ಬಹಳ ಜನಪ್ರಿಯ. ಪ್ರತಿ ಬಾರಿ ಬೂಕರ್ ಪ್ರಶಸ್ತಿಗೆ ಕೆಲವಾದರೂ ಇಂಥ ಬರಹಗಾರರ ಕೃತಿಗಳು ಸೂಚಿತವಾಗಿರುತ್ತವೆ. ಬಹಳ ಬಾರಿ, ಇಂಥ ಪ್ರಶಸ್ತಿಗಳನ್ನು ಗೆದ್ದುಕೊಂಡೂ ಇರುತ್ತವೆ. ಕೊಂಚ ಯೋಚಿಸಿದರೆ ಹೇಳಬಹುದು- ಈ ಬರಹಗಳು ಮುಖ್ಯವಾಗಿ ಪಶ್ಚಿಮ ಪ್ರಣೀತವಾದದ್ದು. ಬೇಕಾದ ವೇದಿಕೆ ಮತ್ತು ಪಾತ್ರಗಳು ಭಾರತೀಯವಾಗಿರಬಹುದು, ಭಾಷೆ, ರೂಪಕಗಳು, ತಂತ್ರ ಮತ್ತು ಬರಹದ ಸಾಧನಗಳೂ ಪಶ್ಚಿಮದ್ದೇ. ಕೊನೆಗೆ, ಎಲ್ಲವೂ ಕೊನೆಗೊಳ್ಳುವುದು ಅರಸಿ ಬಂದ ಆಶಯಗಳನ್ನು ಪೂರೈಸುವ, ಕನಸುಗಳನ್ನು ನನಸಾಗಿಸುವ 'ಅಪೂರ್ವ ಪಶ್ಚಿಮ'ದಿಂದಲೇ, ಪಶ್ಚಿಮವನ್ನು ಅಪೂರ್ವವಾಗಿಸುವ ಇಂಥ ಕೃತಿಗಳು ಬೂಕರ್ ಜ್ಯೂರಿಗೆ 'ಪೊಲಿಟಿಕಲಿ ಕರೆಕ್ಟ್' ಆದ 'ಫೀಲ್ ಗುಡ್' ಅಂಶವನ್ನು ತನ್ನಂತಾನೇ ಕೊಟ್ಟಿರುತ್ತವೆ. ಆ 'ಫೀಲ್ ಗುಡ್' ಕನಸುಗಳ ಪೂರೈಕೆಯ ಹವಣಿಕೆಯಲ್ಲಿ ಆಗುವ ಸಂಸ್ಕೃತಿಗಳ ಜಟಾಪಟಿ ಯಾವಾಗಲೂ ಬರಹಗಾರರಿಗೂ ಓದುಗರಿಗೂ ಒಂದು ಕಾಡುವ ವಸ್ತುವಾಗಿರುತ್ತದೆ. ಜಂಪಾ ಲಹಿರಿಯ 'ಗೊಗೊಲ್', ಖಾಲಿದ್ ಹೊಸೀನೀಯ 'ಕೈಟ್ ರನ್ನರ್'ನ ನಾಯಕ, ಭಾರತವನ್ನು ಕುರಿತು ಬರೆದಿರುವ ನೈಪಾಲರ ಪುಸ್ತಕಗಳು, ಸಲ್ಮಾನ್ ರಶ್ದಿಯ 'ಶಾಲೀಮಾರ್'- ಎಲ್ಲರ ಕೇಂದ್ರವೂ ಒಂದೇ- ಪಶ್ಚಿಮ ಅಪೂರ್ವವಾದದ್ದು. ನಮ್ಮ ಕನಸುಗಳು ನನಸಾಗುವುದು ಇಲ್ಲಿಯೇ. ಆರ್.ಕೆ. ನಾರಾಯಣರ ಬರವಣಿಗೆ ಮಾತ್ರ ಇದಕ್ಕೆ ಅಪವಾದ.
ಇದನ್ನು ನಾವು ಗಮನಿಸುವುದು ಯಾಕೆ ಮುಖ್ಯ ಎಂದು ಒಂದು ಉದಾಹರಣೆ ಕೊಡುತ್ತೇನೆ. ನಾಲ್ಕೈದು ವರ್ಷಗಳ ಹಿಂದೆ ಬೂಕರ್ ಪ್ರಶಸ್ತಿಗೆ ನಾಮಿನೇಟ್ ಆಗಿದ್ದ ಪಾಕಿಸ್ತಾನಿ ಬರಹಗಾರ ಮೊಹ್ಸಿನ್ ಹಮೀದ್ರ 'ದ ರಿಲಕ್ಟಂಟ್ ಫಂಡಮೆಂಟಲಿಸ್ಟ್'ನಲ್ಲಿ ಒಂದು ಸನ್ನಿವೇಶವಿದೆ. ನಾಯಕ ಚಂಗೇಜ್ ಇಪ್ಪತ್ತೆರಡರ ಪಾಕಿಸ್ತಾನಿ. ನ್ಯೂಯಾರ್ಕಿನ ಒಂದು ಕಂಪೆನಿಯಲ್ಲಿ ಆತನಿಗೆ ಒಂದು ಉತ್ತಮ ಕೆಲಸವಿದೆ. ಅಲ್ಲಿ ಅವನಿಗೆ ಒಬ್ಬ ಬಿಳಿಯ ಗೆಳತಿಯೂ ಇದ್ದಾಳೆ. ಜೀವನ ಸುಗಮವಾಗಿ ನಡೆಯುತ್ತಿದೆ. ಅಷ್ಟರಲ್ಲಿ ನ್ಯೂಯಾರ್ಕ್ನಲ್ಲಿ ವರ್ಲ್ಡ್ ಟ್ರೇಡ್ ಸೆಂಟರ್ ಕುಸಿಯುತ್ತದೆ. ಯಾವುದೋ ಕೆಲಸಕ್ಕೆಂದು ಬೇರೆ ದೇಶದಲ್ಲಿದ್ದ ಆತ ನ್ಯೂಯಾರ್ಕಿನ ಈ ಕಟ್ಟಡಗಳು ಕುಸಿಯುತ್ತಿರುವುದನ್ನು ಟಿವಿಯಲ್ಲಿ ನೋಡುತ್ತಾನೆ. ಆತನಿಗೆ ಗೊತ್ತಿಲ್ಲದಂತೆ ತುಟಿಯ ಮೇಲೆ ಒಂದು ಮುಗುಳ್ನಗೆ ಹಾದುಹೋಗಿರುತ್ತದೆ. 'ಓ ಅಮೆರಿಕ, ನಿನ್ನನ್ನು ಮಂಡಿಬಗ್ಗಿಸಿ ಮಲಗಿಸಿದರಲ್ಲ' ಎಂದು ಆತನಿಗನಿಸುತ್ತದೆ. ಆತ ಒಬ್ಬ ಮುಸ್ಲಿಮ್. ಅಮೆರಿಕದ ಮತ್ತು ಮುಸ್ಲಿಮ್ ರಾಷ್ಟ್ರಗಳ ನಡುವಿನ ರಾಗದ್ವೇಷಗಳು ಪ್ರತಿಯೊಬ್ಬ ಮುಸ್ಲಿಮನಲ್ಲಿಯೂ ಹುಟ್ಟುಹಾಕಿರುವ ಭಾವನೆ ಒಂದು ಮಟ್ಟದ ಪ್ರತಿಭಟನೆ. ಈ ಪ್ರತಿಭಟನೆ ದ್ವೇಷದ ರೂಪ ಕಂಡುಕೊಂಡಾಗ ಅದನ್ನು ವಿರೋಧಿಸುವ ವಿವೇಕವನ್ನು ಕಳೆದುಕೊಂಡು ಆ ಒಂದು ಕ್ಷಣದಲ್ಲಿ ನಾಯಕ ತನಗೇ ಗೊತ್ತಿಲ್ಲದಂತೆ ಅಮೆರಿಕದ ಈ ಸೋಲನ್ನು ಮನಸಾರೆ ಮೆಚ್ಚಿರುತ್ತಾನೆ. ಸಾವಿರಾರು ಜನ ಮುಗ್ಧಜೀವಿಗಳು ಈ ಕೃತ್ಯದಿಂದ ಸತ್ತಿದ್ದಾರೆ ಎನ್ನುವುದು ಆತನಿಗೆ ಮುಖ್ಯವಾಗುವುದಿಲ್ಲ. ಒಳಿತು, ಕೆಡುಕುಗಳ ನಿರ್ಧಾರ ನಂತರ. ಅವಳಿ ಕಟ್ಟಡಗಳು ಉರುಳಿದಾಗ ಮೊಟ್ಟಮೊದಲಿಗೆ ಚಂಗೇಜನ ಪ್ರತಿಕ್ರಿಯೆ ಬಲವಂತವಾಗಿ ಅದುಮಿಡಬೇಕಾದ ಒಂದು ಸಣ್ಣ ಮುಗುಳ್ನಗೆಯ ಸಂಭ್ರಮ. ಒಂದು ಮಟ್ಟದಲ್ಲಿ ಪ್ರಾಮಾಣಿಕ ಅನ್ನಿಸುತ್ತದೆ, ಕೂಡ. ಈ ಪುಸ್ತಕಕ್ಕೆ ಬೂಕರ್ ಬರದೇ ಹೋದದ್ದು ಕೇವಲ ಆಕಸ್ಮಿಕ ಅಲ್ಲ.
ಇದೇ ಕಾರಣಕ್ಕೇ ನಮ್ಮ ಅರವಿಂದ ಅಡಿಗನ 'ವೈಟ್ ಟೈಗರ್'ಗೆ ಬೂಕರ್ ಪ್ರಶಸ್ತಿ ಬರುತ್ತದೆ.
- ಗುರುಪ್ರಸಾದ್ ಕಾಗಿನೆಲೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


