ಮಕರಂದ/ದೋಣಿ

ನಗೆ (ಹನಿ ಹನಿ)

Published On :

ನಿನ್ನ ಬಿಚ್ಚು ನಗೆಯ ಹಿಂದೆ
ಮುರಿದು ಬಿದ್ದ
ಅದೆಷ್ಟೋ ಮನಸುಗಳು
ಬಿಕ್ಕುವ ಸದ್ದು
ಗಾಬರಿ ಹುಟ್ಟಿಸಿತು.

ವ್ಯರ್ಥ
ಭಾವನೆಗಳ ಕತ್ತು ಹಿಚುಕಿ
ಕನಸುಗಳ ಗೋಣು ಮುರಿದು
ಬದುಕುವುದೆಂದರೆ...
ಸತ್ತಂತೆಯೇ ಅಲ್ಲವೇ?

ಸಮ್ಮತಿ
ಜಗತ್ತನ್ನೇ ಮಣಿಸಿ
ನಿನ್ನ ಪದತಲದಲ್ಲಿ
ಇಟ್ಟುಬಿಡುವೆ
ಒಂದು ಸಾರಿ ಹೂಂ ಅನ್ನು ಗೆಳತಿ...
ಪ್ರೀತಿಯ ಎಲ್ಲ
ಮೇರೆಗಳ
ದಾಟಿಬಿಡುವೆ.

ಪ್ರಶ್ನೆ

ತೀರಕ್ಕೆ ನುಗ್ಗಿ ಬರುವ
ಪ್ರತಿ ಸಮುದ್ರದಲೆಯ
ಆರ್ಭಟದಲ್ಲಿ ಒಂದೇ ಪ್ರಶ್ನೆ:
ನನ್ನ ಜೊತೆ
ನೀನು ಬಿಟ್ಟು
ಹೋದದ್ದಾದರೂ
ಯಾಕೆ ಕಣೇ?

ನೆನಪು
ನಿನ್ನ ನೆನಪಿನಲ್ಲಿಯೆ
ದುಃಖಿಸುವದೆಂದರೆ
ಕಣ್ಣೀರು ಸಿಹಿಯಾದಂತೆ.


ಸಂಭ್ರಮ
ಬದುಕಿಗೆ ನೀನು ಲಗ್ಗೆಯಿಟ್ಟ ಮೇಲೆ
ಇನ್ನಿಲ್ಲದ ಸಡಗರಗಳು
ಸದ್ದಿಲ್ಲದೆ ಜೊತೆಯಾದವು
ಕಮ್ಮಗೆ ಕುಳಿತ ದುಃಖದ ಬಿಕ್ಕುಗಳು
ಮರಳಿ ಬಾರದ ದಾರಿಗೆ ಪೇರಿ ಕಿತ್ತವು.
ನಾಗೇಶ್ ಜೆ. ನಾಯಕ
---
ನ್ಯಾನೋಕಥೆಗಳು
ಬೇಡನ ಕೈಯಲ್ಲಿ ಸಿಕ್ಕಿಬಿದ್ದ ಮೊಲ ಕೇಳಿಕೊಂಡಿತು- "ಅಯ್ಯಾ ಬೇಟೆಗಾರ ದಯವಿಟ್ಟು ನನ್ನನ್ನು ಬಿಟ್ಟುಬಿಡು. ಮನೆಯಲ್ಲಿ ನನ್ನನ್ನೇ ನಂಬಿದ ನನ್ನ ಹೆಂಡತಿ ಮಕ್ಕಳಿದ್ದಾರೆ." ಬೇಟೆಗಾರ ಹೇಳಿದ- "ನನ್ನ ಮನೆಯಲ್ಲೂ ನನ್ನ ಹೆಂಡತಿ ಮಕ್ಕಳು ಬೆಳಗಿನಿಂದ ಉಪವಾಸವಿದ್ದು ನನಗಾಗಿ ಕಾಯುತ್ತಿದ್ದಾರೆ."
=
ಹೆತ್ತವರೇ ದೇವರು. ಮುದಿ ತಂದೆ ತಾಯಿಗಳ ಸೇವೆ ಮಾಡಿದರೆ ಅದೇ ಭಗವಂತನ ಸೇವೆಯೆಂದು ತಮ್ಮ ಸನ್ನಿಧಿಗೆ ಬಂದ ಭಕ್ತಾಧಿಗಳೆಲ್ಲರಿಗೂ, ಆ ಮಠಾಧೀಶರು ಪ್ರವಚನ ನೀಡುತ್ತಾರೆ. ವಾಸ್ತವದಲ್ಲಿ ಅವರೂ ಸಹ ಸನ್ಯಾಸತ್ವವನ್ನು ಸ್ವೀಕರಿಸಲು ತಮ್ಮ ಮುದಿ ತಂದೆ ತಾಯಿಗಳನ್ನು ತೊರೆದು ಬಂದವರು.
=
ಅವರಿಬ್ಬರ ಆ ಎರಡೂ ಮನಸುಗಳು ಪರಸ್ಪರ ತಮ್ಮ ಕನಸುಗಳನ್ನ ಹುಡುಕುತ್ತಿವೆ. ಆದರೆ ಅವರ ದೇಹಗಳು ಮಾತ್ರ ಯೌವನದ ಹಸಿವಿಗೆ ಆಹಾರವನ್ನು ಹುಡುಕಲು ಹೊಂಚು ಹಾಕಿ ಕಾಯುತ್ತಿವೆ.
ಭಯಭಕ್ತಿಯಿಂದ ದೇವರಿಗೆ ಪ್ರದಕ್ಷಿಣೆ ಹಾಕುತ್ತಿದ್ದ ಜನರನ್ನು ನೋಡಿ, ಎಂತಹ ಹುಚ್ಚು ಜನರೆಂದು ತನ್ನೊಳಗೇ ನಕ್ಕ. ಅಷ್ಟರಲ್ಲೇ ಆಸ್ಪತ್ರೆಯಿಂದ ತಪ್ಪಿಸಿಕೊಂಡು ಬಂದ ರೋಗಿಯನ್ನು ಹುಡುಕುತ್ತಾ ಅಲ್ಲಿಗೆ ಬಂದ ಹುಚ್ಚಾಸ್ಪತ್ರೆಯ ಸಿಬ್ಬಂದಿ ಅವನನ್ನು ತಮ್ಮೊಂದಿಗೆ ಎಳೆದೊಯ್ದರು.
=
ನಿನ್ನ ಗಂಡನನ್ನು ಕೊಲ್ಲಲು ಕಾರಣ?  ಕಟಕಟೆಯಲ್ಲಿ ನಿಂತವಳನ್ನು ನ್ಯಾಯಾಧೀಶರು ಪ್ರಶ್ನಿಸಿದರು. ಅಪರಾಧಿ ಸ್ಥಾನದಲ್ಲಿದ್ದ ಅವಳು ಉತ್ತರಿಸಿದಳು- 'ಅವನು ನನ್ನ ನಂಬಿಕೆಗಳನ್ನು ಕೊಂದ'.
= ನವೀನ್, ಮಧುಗಿರಿ
---
ನಗಬೇಕು
ಪೆದ್ದ ಮತ್ತು ಗುಂಡ ಇಬ್ಬರೂ ಟೀಚರ್ ಕ್ಲಾಸ್ ರೂಮಿಗೆ ಬರುವಾಗ ಕಾಲರ್ ಹಿಡಿದುಕೊಂಡು ಜಗಳಾಡ್ತಾ ಇರ್ತಾರೆ...
ಟೀಚರ್ : ಏಯ್ ಏಯ್ ನಿಲ್ಲಿಸ್ರೋ ಸಾಕು. ಯಾಕೆ ಕಿತ್ತಾಡ್ತಾ ಇದ್ದೀರಾ ?
ಪೆದ್ದ : ಮೇಡಂ, ಇಬ್ಬರಿಗೂ ಹತ್ತು ರುಪಾಯಿ ಸಿಕ್ಕಿತು. ಯಾರು ಬ್ರಹ್ಮಾಂಡದಂಥ ಸುಳ್ಳು ಹೇಳ್ತಾರೆ ಅವರಿಗೆ ಈ ಹತ್ತು ರುಪಾಯಿ ಅಂತ ಹೇಳ್ದೆ.
ಗುಂಡ : ಅದಕ್ಕೆ, ಅವ್ನು ಹೇಳ್ತಾನಂತ ಅವನು.... ನಾನು ಹೇಳ್ತೀನಂತ ನಾನು... ಜಗಳ ಶುರುವಾಯಿತು.
ಟೀಚರ್ : ಥೂ, ನಾಚಿಕೆಯಾಗಲ್ವಾ ನಿಮಗಿಬ್ಬರಿಗೂ, ನಿಮ್ಮಷ್ಟು ವಯಸ್ಸಿದ್ದಾಗ ನನಗೆ ಸುಳ್ಳು ಅಂದರೇನೇ ಗೊತ್ತಿರಲಿಲ್ಲ ಗೊತ್ತಾ ?
ಪೆದ್ದ ಮತ್ತು ಗುಂಡ : ಹಾಗಾದರೆ ಈ ಹತ್ತು ರುಪಾಯಿ ನಿಮಗೇ ಸೇರಬೇಕು ಮೇಡಂ !
=
ಗಂಡ ಟಿವಿ ನೋಡುತ್ತಾ ಅಳುತ್ತಿದ್ದ...
ಹೆಂಡತಿ : ಯಾಕ್ರೀ ಅಳುತ್ತಿದ್ದೀರಾ ?
ಗಂಡ : ಪಾಪ ಕಣೇ ಅವನ ಜೀವನ ಹಾಳಾಗಿ ಹೋಯಿತು..
ಹೆಂಡತಿ : ಯಾವ ಧಾರಾವಾಹಿಯಲ್ಲಿ ?
ಗಂಡ : ಅದು ಧಾರಾವಾಹಿಯಲ್ಲ.. ನಮ್ಮ ಮದುವೆ ಸಿಡಿ !

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.