ಮಕರಂದ/ದೋಣಿ

ಇಂದಿಗೂ ನೀನೇ ನನಗೆ ಓಯಸಿಸ್ಸು...

ಇಂದಿಗೂ ನೀನೇ ನನಗೆ ಓಯಸಿಸ್ಸು...
Published On :

ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸಿದೆ ನಿನ್ನ. ನನ್ನೆಲ್ಲಾ ಕನಸೆಂಬ ಸಿನಿಮಾಗಳಿಗೆ ನಾಯಕನಾಗಿಸಿದೆ ನಿನ್ನ. ಆದರೆ ಅವುಗಳೆಲ್ಲಾ ಬದುಕೆಂಬ ಚಿತ್ರಮಂದಿರದಲ್ಲಿ ಓಡಲೇ ಇಲ್ಲ.

ನಾನು ಪ್ರೀತಿಸಬೇಕು. ನನಗೂ ಒಬ್ಬ ಗೆಳೆಯ ಬೇಕು ಎಂದು ಹಂಬಲಿಸುತ್ತಿದ್ದ ದಿನಗಳವು. ನನ್ನ ಮೊರೆ ದೇವರಿಗೆ ಕೇಳಿಸಿತಾ? ಗೊತ್ತಿಲ್ಲ. ಉಡುಗೊರೆ ಎಂಬಂತೆ ನೀ ದೊರಕಿದೆ. ಆ ಕ್ಷಣ ಜಗತ್ತನ್ನೇ ಗೆದ್ದಷ್ಟು ಖುಷಿಯಾಗಿತ್ತು ನನಗೆ. ಜಗತ್ತಿನಲ್ಲಿ ನಾನೇ ಶ್ರೀಮಂತೆ ಎಂದು ಬೀಗಿದ್ದೆ ಆ ದಿನ. ಆದರೆ ಉಡುಗೊರೆ ಶಾಶ್ವತವಲ್ಲವೆಂಬುವುದನ್ನು ಅರಿಯುವಷ್ಟರಲ್ಲಿ ನೀ ದೂರ ಸರಿದಾಗಿತ್ತು.
ಅದೇಕೋ ಗೊತ್ತಿಲ್ಲ. ನನ್ನ ಜೀವನದಲ್ಲಿ ಮೊದಲಿನಿಂದಲೂ ನಾನು ಬಯಸಿದ್ದು ನನಗೆ ಸಿಗಲೇ ಇಲ್ಲ. ನಾ ಇಷ್ಟ ಪಟ್ಟ ವಸ್ತು, ಜನರು, ನನ್ನವರಾಗಲೇ ಇಲ್ಲ. ನಾನು ನೆಚ್ಚಿದ ವಸ್ತುವೇ ಇನ್ಯಾರಿಗೋ ಬೇಕು. ಜಗತ್ತಿನಲ್ಲಿ ಅದೆಷ್ಟೋ ಸುಂದರ ವಸ್ತುಗಳಿದ್ದರೂ ಅವರಿಗೆ ನಾ ಇಷ್ಟ ಪಟ್ಟಿದ್ದರ ಮೇಲೆಯೇ ಕಣ್ಣು. ಗೆಳೆಯಾ, ನಿನ್ನ ವಿಷಯದಲ್ಲೂ ನನಗೆ ಮತ್ತದೇ ಸ್ಥಿತಿ.
ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸಿದೆ ನಿನ್ನ. ನನ್ನೆಲ್ಲಾ ಕನಸೆಂಬ ಸಿನಿಮಾಗಳಿಗೆ ನಾಯಕನಾಗಿಸಿದೆ ನಿನ್ನ. ಆದರೆ ಅವುಗಳೆಲ್ಲಾ ಬದುಕೆಂಬ ಚಿತ್ರಮಂದಿರದಲ್ಲಿ ಓಡಲೇ ಇಲ್ಲ. ಏಕೋ ಗೊತ್ತಿಲ್ಲ? ನನ್ನ ನಿರ್ದೇಶನವೇ ಸರಿ ಇಲ್ಲವೇನೋ. ಕಥೆಯಿಲ್ಲದ ಸಿನಿಮಾ ಈಗ ನನ್ನ ಬದುಕು. ಪ್ರೀತಿಗೆ ಸ್ವಾರ್ಥವಿಲ್ಲವೆನ್ನುತ್ತಾರೆ, ಆದರೆ ನಮ್ಮಿಬ್ಬರ ವಿಷಯದಲ್ಲಿ ಹಾಗಾಗಲೇ ಇಲ್ಲ. ಹಾಗೆಂದು ನಾ ನಿನ್ನನು ದೂಷಿಸಲಾರೆ. ಈಗ ಯಾರು ಯಾರನ್ನು ದೂಷಿಸಿದರೂ ಪ್ರಯೋಜನ ಮಾತ್ರ ಶೂನ್ಯ. ನೀನೆಷ್ಟೇ ದೂರ ಮಾಡಿದರೂ ನಾ ನಿನ್ನ ಮೊದಲಿನಷ್ಟೇ ಪ್ರೀತಿಸುವೆ. ಯಾಕೆಂದರೆ ಪ್ರೀತಿಯಿಂದಾದ ನೋವಿಗೆ ಮತ್ತಷ್ಟು ಪ್ರೀತಿಸುವುದೇ ಮುಲಾಮಲ್ಲವೇ ಗೆಳೆಯಾ...?
ಅಂದು ದುಡುಕಿ ನೀ ತೆಗೆದುಕೊಂಡ ಒಂದು ನಿರ್ಧಾರ ಇಂದು ನಮ್ಮನ್ನು ಅಪರಿಚಿತರನ್ನಾಗಿ ನಿಲ್ಲಿಸಿದೆ. ಎದುರು ಬದುರು ಸಿಕ್ಕರೂ ನಾನು ಅಪರಿಚಿತಳು ನಿನ್ನ ಪಾಲಿಗೆ. ನಿನ್ನ ಬಳಿ ಹೇಳಬೇಕಾದ ಅದೆಷ್ಟೋ ವಿಷಯಗಳು ನನ್ನಲ್ಲಿ ಹೇಳಲಾಗದೇ ಬರೀ ನನ್ನ ಡೈರಿಯ ಹಾಳೆಗಳಲ್ಲೇ ಉಳಿದು ಹೋಗಿವೆ. ನನಗೆ ಗೊತ್ತು. ಮತ್ತೆ ನೀ ಸಿಗಲಾರೆ, ನಾನು ಅವುಗಳನ್ನೆಲ್ಲಾ ನಿನ್ನ ಬಳಿ ಹೇಳುವ ದಿನಗಳು ಬರಲಾರವು ಎಂದು. ಆದರೂ ಹುಚ್ಚು ಆಸೆ, ಸಿನಿಮಾದಂತೆ ಎಂದಾದರೊಂದು ದಿನ ನಮ್ಮ ಪ್ರೀತಿಗೂ ಸುಂದರ ಅಂತ್ಯ ಸಿಗಬಹುದೆಂದು. ಹುಚ್ಚಿ ಅಲ್ವಾ ನಾನು? ಆದರೆ, ಏನೇ ಆಗಲಿ ಬಿಡು ನೀ ಅದೃಷ್ಟವಂತ. ನಾವಿಬ್ಬರು ದೂರವಾದರೂ ನನಗಿಂತ ಹೆಚ್ಚು ಪ್ರೀತಿಸುವ ಹುಡುಗಿ ನಿನ್ನೊಂದಿಗಿದ್ದಾಳೆ. ಆದರೆ ತ್ಯಾಗಮೂರ್ತಿಯಾಗ ಹೊರಟು ಬರಿಗೈಯಲ್ಲಿ ನಿಂತ ಅಸಹಾಯಕಿ ನಾನು. ಒಂದು ಕಾಲದಲ್ಲಿ ಪ್ರೀತಿ ಬಗ್ಗೆ ಗಂಟೆಗಟ್ಟಲೇ ಲವ್ ಗುರುವಿನಂತೆ ಭಾಷಣ ಮಾಡುತ್ತಿದ್ದ ನಾನು ಈಗ ಪ್ರೀತಿ ಎಂಬ ವಿಷಯದಲ್ಲಿ ನಪಾಸಾದ ವಿದ್ಯಾರ್ಥಿ. ಎಂತಹ ಬದಲಾವಣೆ? ಆದರೆ ನನಗೆ ಗೊತ್ತು, ಒಂದು ಕ್ಷಣವಾದರೂ ನೀ ನನ್ನ ನೆನೆಸಿಕೊಳ್ಳದಿರಲಾರೆ. ಎಲ್ಲೋ ನನ್ನ ಹೆಸರು ಕೇಳಿದಾಗ ನಿನ್ನ ಮನಸ್ಸು ಅರೆಕ್ಷಣ ನನ್ನ ನೆನಪಿನ ಜಾಹೀರಾತು ನೀಡದಿರಲಾರದೆಂದು.
ಇಂದು ನೀ ನನ್ನಿಂದ ದೂರವಾದರೇನು, ನೀ ಕಟ್ಟಿ ಕೊಟ್ಟ ಸಾಲು ಸಾಲು ನೆನಪುಗಳು ನನ್ನಲ್ಲಿ ಜೀವಂತ. ಅದೇ ನೆನಪುಗಳು ಅದೆಷ್ಟೋ ಬಾರಿ ಸ್ಫೂರ್ತಿಯಾಗಿವೆ. ನೀ ಕಟ್ಟಿಕೊಟ್ಟ ಕನಸುಗಳನ್ನೇ ಹಿಂಬಾಲಿಸಿಕೊಂಡು ನನ್ನ ಬದುಕ ಸವಿಯುತ್ತಿದ್ದೇನೆ. ಇಂದು ನೀ ನನ್ನೊಂದಿಗಿಲ್ಲದಿದ್ದರೂ ಇದ್ದಷ್ಟು ದಿನ ನಿನ್ನನ್ನು ಪ್ರಾಮಾಣಿಕವಾಗಿ ಪ್ರೀತಿಸಿದ ಬಗ್ಗೆ ನನಗೆ ತೃಪ್ತಿಯಿದೆ. ಗೆಳೆಯಾ, ನೀ ದೂರವಾದರೂ ನನ್ನ ಮುಖದಲ್ಲಿ ತರಿಸಿದ ನಗು ಇಂದಿಗೂ ಗುಪ್ತಗಾಮಿನಿಯಾಗಿ ಹರಿಯುತ್ತಿದೆ. ನನಗಷ್ಟು ಸಾಕು. ಪ್ರೀತಿಯೆಂಬ ಸರಿಗಮಪದ ಮೀಟಲಾರದೇ ಹೋದರೂ ದೂರದಿಂದಲೇ ನೀ ಮೀಟುವ ರಾಗದ ಸ್ವರ ಕೇಳಿ ತಲೆದೂಗುವ ಆವಕಾಶ ದೊರೆಯಿತಲ್ಲಾ ಅದೇ ನನ್ನ ಪಾಲಿಗೀಗ ಓಯಸಿಸ್ಸು. ಏನೇ ಆಗಲಿ ನಿನ್ನ ತುಂಬಾ ಮಿಸ್ ಮಾಡ್ಕೊಳ್ತೀನಿ ಕಣೋ....
ನಿನ್ನೊಲವಿನ ಬಣ್ಣ...
-ನವ್ಯ ಅಯ್ಯನಕಟ್ಟೆ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.