ಮಕರಂದ/ದೋಣಿ

ನ್ಯಾನೋಕಥೆಗಳು

Published On :

ಅಕ್ಕಿ ಬೆಲೆ ಹೆಚ್ಚಾಯಿತು ಎಂದು ಕೂಗಿಕೊಂಡರು. ಈ ಬಾರಿ ಓಟು ಕೇಳಲು ಅವನು ಬರಲಿ ಎಂದು ಕಾದು ಕುಳಿತರು. ಕಡೆಗೊಮ್ಮೆ ಆ ನಾಯಕ ಓಟು ಕೇಳಲು ಬಂದ.
'ಕಳೆದ ಬಾರಿ ನೂರು ರೂ.ಗೆ ಓಟು ಹಾಕಿದ್ದೇವೆ. ಈ ಬಾರಿ ಸಾವಿರದ ಕಡಿಮೆ ಸಾಧ್ಯವಿಲ್ಲ' ಎಂದರು.
 ಆತ ಒಪ್ಪಿಕೊಂಡ. ಮತ್ತೆ ಗೆದ್ದು ಬಂದ. ಅಕ್ಕಿ ಬೆಲೆ ಮತ್ತೆ ಹೆಚ್ಚಾಯಿತು.
=
ಕುತಂತ್ರ
 ಆ ವಸ್ತುವಿನ ಬೆಲೆಯನ್ನು 5ರು. ಹೆಚ್ಚಿಸಬೇಕಾಗಿತ್ತು. ಜನಗಳು ದಂಗೆ ಏಳಬಹುದೆಂಬ ಗಾಬರಿಯಿಂದ ಸರ್ಕಾರವಿತ್ತು. ನಂತರ 5ರ ಬದಲೂ 10 ರು. ಹೆಚ್ಚಿಸಿದರು. ನಿರೀಕ್ಷೆಯಂತೆ ಜನಗಳು ಚಳವಳಿಗೆ ನಿಂತರು. ಮತ್ತೆ 5 ರು. ಬೆಲೆ ಕಡಿಮೆ ಮಾಡಿದರು. ಜನ ಶಾಂತರಾದರು.
=
ಪ್ರೀತಿ
ಫೆಬ್ರವರಿ ಹದಿನಾಲ್ಕನೇ ತಾರೀಕಿಗೆ ಕಾದಿದ್ದ ಆತ ಅಂದು ಆಕೆಗೆ 'ನಾನು ನಿನ್ನನ್ನು ಪ್ರೀತಿಸುತ್ತಿದ್ದೇನೆ' ಎಂದಳು.
ಆಕೆ ಅಂದಳು: ನನ್ನೊಬ್ಬಳನ್ನು ಪ್ರೀತಿಸಿ ಜಗತ್ತಿನ ದ್ವೇಷವನ್ನೇಕೆ ಕಟ್ಟಿಕೊಳ್ಳುವೆ? ಜಗತ್ತನ್ನೇ ಪ್ರೀತಿಸು, ಅದರೊಳಗೆ ನಾನೂ ಸೇರಿಕೊಳ್ಳುವೆ.
=
ದಯೆ
ನಮ್ಮ ಧರ್ಮ ಶ್ರೇಷ್ಠ, ನಮ್ಮದು ನಮ್ಮದು ಎಂದು ಒಂದಷ್ಟು ಜನ ಬೊಬ್ಬೆ ಹೊಡೆಯುತ್ತಿದ್ದರು. ಅದೇ ವೇಳೆಗೆ ಹಸಿವಿನಿಂದ ಕಂಗಾಲಾದ ಮುದುಕಿಯೊಬ್ಬಳು ಕುಸಿದುಬಿದ್ದು ಇವರ ಪಕ್ಕದಲ್ಲಿಯೇ ಉಸಿರು ಬಿಟ್ಟಳು. ಅವಳ ಸಾವಿನ ಮೂಲಕ ಇವರು ಯಾವ ಧರ್ಮಕ್ಕೂ ಸೇರಿದವರಲ್ಲವೆಂಬುದು ಸಾಬೀತಾಗಿತ್ತು.
=
ಹಲ್ಲಿ
 ಆತ ಯಾವುದೋ ಕೆಲಸಕ್ಕೆ ಹೋಗಬೇಕಾಗಿತ್ತು. ಬಾಗಿಲ ಬಳಿ ಬರುವಷ್ಟರಲ್ಲಿ ನೆತ್ತಿಯ ಮೇಲೆ ಹಲ್ಲಿ ಬಿದ್ದಿತು. 'ನೆತ್ತಿ ಮೇಲೆ ಹಲ್ಲಿ ಬಿದ್ದರೆ ಪ್ರಾಣಕ್ಕೆ ಅಪಾಯ, ದೇವರಿಗೆ ದೀಪ ಹಚ್ಚಿ ಹೋಗು' ಎಂದು ಮನೆಯವರು ಹಠ ಮಾಡಿದರು. ಆತ ನನಗೆ ಸಮಯವಿಲ್ಲವೆಂದರೂ ಒಪ್ಪಲಿಲ್ಲ. ಕೊನೆಗೆ ದೀಪ ಹಚ್ಚಿ ಹೊರಟ. ಸ್ವಲ್ಪ ಸಮಯದ ನಂತರ ಕರೆ ಬಂದಿತು. 'ನಿಮ್ಮ ಮಗ ವೇಗವಾಗಿ ಬೈಕ್ ಓಡಿಸುವಾಗ ಜಾರಿ ಬಿದ್ದಿದ್ದಾನೆ, ಪ್ರಾಣಕ್ಕೆ ಅಪಾಯವಿದೆ.'
=
ಅಪಶಕುನ
ಕೆಲಸಕ್ಕೆ ತೆರಳಲೆಂದು ಮನೆಯಿಂದ ಹೊರ ಬಂದಿದ್ದೇ ತಡ ಪಕ್ಕದ ಮನೆಯ ಮುದ್ದು ಮಗುವೊಂದು 'ಅಂಕಲ್, ಎಲ್ಲಿಗೆ ಹೋಗುತ್ತಿದ್ದೀರಿ?' ಎಂದು ಕೇಳಿತು. ಉತ್ತರ ಹೇಳಲೆಂದು ಆ ಮಗುವಿನ ಕಡೆ ತಿರುಗಿದೆ. ಅಷ್ಟಕ್ಕೆ ವೇಗವಾಗಿ ಬಂದ ವಾಹನವೊಂದು ನನ್ನ ಷರ್ಟನ್ನು ಸೋಕಿಕೊಂಡು ಹೋಯಿತು. ಆ ಮಗು ಕೂಗದಿದ್ದರೆ ನಾ ನಿಂತಲ್ಲಿಯೇ ಪ್ರಾಣ ಬಿಡುತ್ತಿದ್ದೆ ಎಂದುಕೊಂಡೆ. ಥ್ಯಾಂಕ್ಸು ಕಂದಾ ಎನ್ನಲು ಮುಂದಾದೆ. ಅಷ್ಟರಲ್ಲಿ ಪಕ್ಕದ ಮನೆಯ ಒಳಗಿನಿಂದ ಯಾರೋ ಕೂಗಿಕೊಂಡರು. 'ಮಗೂ, ಯಾರಾದರೂ ಎಲ್ಲಿಗಾದರೂ ಹೋಗುವಾಗ ಎಲ್ಲಿಗೆ ಅಂತ ಕೇಳೋದು ಅಪಶಕುನ ಅಂತ ಎಷ್ಟು ಸಾರಿ ಹೇಳಿದ್ದೀನಿ ನಿನಗೆ?'
-ಮೋಹನ್ ವಿ. ಕೊಳ್ಳೇಗಾಲ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.