ಮಕರಂದ/ದೋಣಿ

ಈ ರಾಜ್ಕುಮಾರನಿಗೂ ಪ್ಯಾಂಟು-ಶರ್ಟು ಮ್ಯಾಚ್ ಆಗ್ತಿರಲಿಲ್ಲ ಸ್ವಾಮೀ...

'ಶಂಕರ್-ಗುರು' ಸಿನಿಮಾ ತಯಾರಿಕೆಯ ಸಂದರ್ಭ,...

ಈ ರಾಜ್ಕುಮಾರನಿಗೂ ಪ್ಯಾಂಟು-ಶರ್ಟು ಮ್ಯಾಚ್ ಆಗ್ತಿರಲಿಲ್ಲ ಸ್ವಾಮೀ...
Published On :

'ಶಂಕರ್-ಗುರು' ಸಿನಿಮಾ ತಯಾರಿಕೆಯ ಸಂದರ್ಭ, ರಾಜ್‌ಕುಮಾರ್ ಮೊದಲ ಬಾರಿಗೆ ತ್ರಿಪಾತ್ರದಲ್ಲಿ ಅಭಿನಯಿಸುತ್ತಿದ್ದ ಸಿನಿಮಾ ಅದು, ಹಾಗಾಗಿ ತುಂಬಾ ಅದ್ಧೂರಿಯಾಗಿ ತೆಗೆಯಲು ನಿರ್ಧರಿಸಲಾಗಿತ್ತು. ಅರ್ಧದಷ್ಟು ಭಾಗದ ಚಿತ್ರೀಕರಣವನ್ನು ಕಾಶ್ಮೀರದಲ್ಲಿ ನಡೆಸಲು ನಿರ್ಧರಿಸಲಾಗಿತ್ತು. ಬಿಗ್ ಬಜೆಟ್‌ನ ಚಿತ್ರವಾದ್ದರಿಂದ ಸಿನಿಮಾಕ್ಕೆ ಹಿಂದಿ ಚಿತ್ರರಂಗದ ಪ್ರಾಣ್, ಅಮ್ಜದ್ ಖಾನ್ ಮುಂತಾದವರನ್ನು ವಿಲನ್ ಪಾತ್ರಗಳಿಗೆ ಹಾಕಿಕೊಂಡರೆ ಚಿತ್ರದ ಕಮರ್ಷಿಯಲ್ ವ್ಯಾಲ್ಯೂ ಹೆಚ್ಚಾಗುತ್ತದೆ, ಘಟಾನುಘಟಿಗಳೆಲ್ಲ ನಟಿಸಿದ್ದಾರೆ ಎಂಬ ಕಾರಣಕ್ಕೆ ಪ್ರೇಕ್ಷಕರಿಗೂ ಕುತೂಹಲ ಹೆಚ್ಚಾಗಿ ಸಿನಿಮಾ. ನೋಡುವವರ ಸಂಖ್ಯೆಯೂ ಹೆಚ್ಚುತ್ತದೆ ಎಂಬುದು 'ಶಂಕರ್-ಗುರು' ಚಿತ್ರದ ನಿರ್ದೇಶಕ ವಿ.ಸೋಮಶೇಖರ್ ಹಾಗೂ ನಿರ್ಮಾಪಕರ ವಾದವಾಗಿತ್ತು.

ಆದರೆ ಇಂಥ ಯೋಚನೆಗೆ ತಕ್ಷಣ ಬ್ರೇಕ್ ಹಾಕಿದ ರಾಜ್‌ಕುಮಾರ್ ಹೇಳಿದರಂತೆ 'ಸೋಮಶೇಖರ್ ಅವರೇ, ನಾವು ತೆಗೀತಾ ಇರೋದು ಕನ್ನಡ ಸಿನಿಮಾ ಪ್ರೇಕ್ಷಕರಾಗಿ ಬರೋದು ಕನ್ನಡದ ಜನತೆ, ಹೀಗಿರುವಾಗ ಪರಭಾಷೆಯ ಕಲಾವಿದರ ಅಗತ್ಯ ಏನಿದೆ ? ನಮ್ಮ ಶನಿಮಹಾದೇವಪ್ಪ, ತೂಗುದೀಪ ಶ್ರೀನಿವಾಸ್, ವಜ್ರಮುನಿ ಮುಂತಾದವರನ್ನೇ ಹಾಕಿಕೊಳ್ಳೊಣ..' ರಾಜ್ ಅವರು ಹೀಗೆಲ್ಲಾ ಹೇಳಿದರೂ ಸೋಮಶೇಖರ್ ಮಾತ್ರ ಹಿಂದಿಯ ಕಲಾವಿದರು ವಿಲನ್ ಪಾತ್ರಗಳಿಗೆ ಬಂದರೇ ಚೆಂದ ಎಂಬ ನಿಲುವಿಗೆ ಅಂಟಿಕೊಂಡರು. ಅದನ್ನು ರಾಜ್‌ಕುಮಾರ್ ಒಪ್ಪದೇ ಹೋದಾಗ 'ಅಣ್ಣಾವ್ರೇ, ನಾನು ಕನ್ನಡದ ಕಲಾವಿದರು ಬೇಡ ಅನ್ನಲು ಇನ್ನೂ ಒಂದು ಕಾರಣ ಇದೆ, ಏನೆಂದರೆ ಈ ಚಿತ್ರದಲ್ಲಿ ಎಲ್ಲಾ ವಿಲನ್‌ಗಳೂ ಟೈಟ್ ಪ್ಯಾಂಟು, ಅಷ್ಟೇ ಟೈಟಾದ ಶರ್ಟು ಹಾಗೂ ಒಂದೊಂದ್ಸಲ ಫುಲ್ ಸೂಟ್ ಹಾಕ್ಕೊಂಡಿರ್ತಾರೆ. ಅಂಥಾ ವೇಷದಲ್ಲಿ ನಮ್ಮ ಕನ್ನಡದ ಕಲಾವಿದರು ವಿಚಿತ್ರವಾಗಿ ಕಾಣಬಹುದು, ಆ ಕಾಸ್ಟೂಮು ಅವರಿಗೆ ಹೊಂದಿಕೆ ಆಗಲಾರದು ಅನಿಸುತ್ತೆ. ಹಾಗಾಗಿ ಹಿಂದಿಯ ಕಲಾವಿದರೇ ವಿಲನ್ ಪಾತ್ರಗಳಿಗೆ ಬಂದ್ರೆ ಚೆಂದ' ಎಂದರಂತೆ ಸೋಮಶೇಖರ್.
ಆಗ ರಾಜ್‌ಕುಮಾರ್ ನಿಷ್ಠುರ ಹಾಗೂ ನಿರ್ಧಾರದ ಧ್ವನಿಯಲ್ಲಿ ಹೇಳಿದರಂತೆ "ನೋಡಿ ಸೋಮಶೇಖರ್ ಅವರೇ, ಈ ರಾಜ್‌ಕುಮಾರ ಕೂಡಾ ಪ್ಯಾಂಟು, ಶರ್ಟು, ಸೂಟ್‌ನಂಥ ಡ್ರೆಸ್‌ಗಳಿಗೆ ನಾಲಾಯಕ್. ನಾನು ಏನಿದ್ರೂ ಪಂಚೆ, ಚೆಡ್ಡಿ, ಬನೀನು, ಜುಬ್ಬಾ ಅಂಥವಕ್ಕೇ ಲಾಯಕ್ಕು. ಅಬ್ಬಾಯಿ ನಾಯ್ಡು ಅವರ ಸಿನಿಮಾದಲ್ಲಿ ಮೊದಲ ಬಾರಿಗೆ ಪ್ಯಾಂಟು, ಶರ್ಟು ಹಾಕ್ಕೊಂಡಾಗ ನನಗೇ ಮುಜುಗರ ಆಗಿತ್ತು, ಆದ್ರೆ ಕಥೆಗೆ ಇದೆಲ್ಲಾ ಅಗತ್ಯ ಅನ್ನಿಸಿದಾಗ ಮುಜುಗರ ಮರೆತು ಅಭಿನಯಿಸಿದೆ. ಅವತ್ತಿಂದ ರಾಜ್‌ಕುಮಾರ್‌ಗೆ ಪ್ಯಾಂಟು, ಶರ್ಟು ಓಕೆ ಆಯ್ತು.  ನೋಡಿ, ಯಾವತ್ತೂ ಪಾತ್ರಕ್ಕಾಗಿ ಕಲಾವಿದನೇ ಹೊರತು, ಕಲಾವಿದನಿಗಾಗಿ ಪಾತ್ರ ಆಗಬಾರದು. ಯಾವುದೇ ಕಾರಣಕ್ಕೂ ಶನಿಮಹಾದೇವಪ್ಪ, ವಜ್ರಮುನಿ, ತೂಗುದೀಪ ಶ್ರೀನಿವಾಸ್ ಅವರನ್ನು ಬಿಡಬೇಡಿ, ಅವರು ಕನ್ನಡ ಸಿನಿಮಾಗಳನ್ನೇ ನಂಬಿ ಬದುಕುತ್ತಾ ಇರುವ ಜನ, ಪಾತ್ರಗಳೇ ಸಿಗಲಿಲ್ಲ ಅಂದ ಮೇಲೆ ಅವರು ಹೇಗೆ ಬದುಕಬೇಕು ? ಇಲ್ಲಿ ಕೆಲಸ ಇಲ್ಲ ಅಂದಮೇಲೆ ಅವರು ಎಲ್ಲಿಗೆ ಹೋಗ್ಬೇಕು ? ನಮ್ಮವರಿಗೆ ನಾವೇ ಕೆಲಸ ಕೊಡದೆ ಹೋದರೆ, ಬೇರೆಯವರನ್ನ ಕರೆತಂದರೆ, ನಮ್ಮವರಿಗೆ ಅನ್ಯಾಯ ಮಾಡಿದ ಹಾಗಾಗುತ್ತೆ. ಯಾವುದೇ ಕಾರಣಕ್ಕೂ ಅಂಥದೊಂದು ಕೆಲಸ ಆಗಬಾರದು...'

ವಿಲನ್ ಪಾತ್ರಗಳಿಗೆ ಕನ್ನಡದ ಕಲಾವಿದರೇ ಆಗಬೇಕು ಎಂದು ರಾಜ್‌ಕುಮಾರ್ ಪಟ್ಟು ಹಿಡಿದರಲ್ಲ, ಅದರ ಪರಿಣಾಮ ಸಿನಿಮಾ ನಿರ್ಮಾಣದ ಮೇಲಾಯಿತು. ಹಿಂದಿಯ ಘಟಾನುಘಟಿಗಳೆಲ್ಲಾ ಪಾತ್ರವಹಿಸಲಿದ್ದಾರೆ ಎಂಬ ನಂಬಿಕೆಯಿಂದ ಹಣ ಹೂಡಲು ಬಂದಿದ್ದ ನಿರ್ಮಾಪಕರು ತಮ್ಮ ನಂಬಿಕೆ ಹುಸಿಯಾಗಲಿದೆ ಎಂಬುದು ಖಚಿತವಾದ ತಕ್ಷಣ - ನಾನು ಪ್ರೊಡ್ಯೂಸರ್ ಆಗಲಾರೆ ಎಂದುಬಿಟ್ಟರು.

ಇಂಥ ಸಂದರ್ಭದಲ್ಲಿ ಆಗಿದ್ದಾಗಲಿ ಎಂಬ ಮನೋಭಾವದೊಂದಿಗೆ ಮುಂದೆ ಬಂದ ಪಾರ್ವತಮ್ಮ ರಾಜ್‌ಕುಮಾರ್, ತಾವೇ ನಿರ್ಮಾಪಕಿಯಾಗಲು ನಿರ್ಧರಿಸಿದರು. ರಾಜ್‌ಕುಮಾರ್ ಅವರ ಅಪೇಕ್ಷೆಯಂತೆ ಖಳನಾಯಕರ ಪಾತ್ರಗಳಿಗೆ ಕನ್ನಡದ ಕಲಾವಿದರನ್ನೇ ಬಳಸಿಕೊಂಡರು. ಮುಂದೆ ಈ ಸಿನಿಮಾ ಪಡೆದ ಪ್ರಚಂಡ ಯಶಸ್ಸು, ಇಡೀ ದಕ್ಷಿಣ ಭಾರತ ಚಿತ್ರರಂಗವೇ ಕನ್ನಡ ಚಿತ್ರರಂಗವನ್ನು ಬೆರಗು, ಅಭಿಮಾನ ಮತ್ತು ಅಚ್ಚರಿಯಿಂದ ನೋಡುವಂತೆ ಮಾಡಿತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.