ಟಾಪಿಕ್ಕುಗಳ ಟ್ರಾಫಿಕ್ಕು!

ಗುಂಡಣ್ಣಂಗೆ ಕಥೆ ಬರೀಬೇಕು ಅನ್ನೋದೊಂದು ಕನಸು. 'ಮಾಲಳ್ಳಿ ಮಾಲಜ್ಜಿ ಮತ್ತು ಮಾಳ ಬೆಕ್ಕು', 'ಕುಂದಾಪ್ರುದ ಕಥೆ', 'ಮೂರಳ್ಳಿ ಕೋಟೆಯಲ್ಲೊಂದು ರಾತ್ರಿ', 'ನೀರ ರಾಣಿ ಮತ್ತು ನಂಜುಳ್ಳೆ'... ಹೀಗೆ ಹಲವು ಶೀರ್ಷಿಕೆಗಳು, ಅರ್ಧಂಬರ್ಧ ಐಡಿಯಾಗಳು ಹೊಳೆದರೂ ಅದ್ಯಾವ್ದೂ ಕಥೆಯ ಮೂರ್ತ ರೂಪ ತಾಳುತ್ತಿರಲಿಲ್ಲ. ನಾಳೆ ಕಥೆ ಬರ್ದೇ ಬರೀತೀನಿ ಅಂತ ಪ್ರತೀದಿನ ರಾತ್ರೆ ಮಲಗೋವಾಗ ನಿರ್ಧಾರ ಮಾಡಿದರೂ ಮಾರ್ನೇ ದಿನ ಬೆಳಗಾಗಿ, ಮಧ್ಯಾಹ್ನ ಆಗಿ ಮತ್ತೆ ರಾತ್ರೆ ಆಗೇ ಬಿಡ್ತಿತ್ತು! ಹೀಗೆ ದಿನಗಳು, ತಿಂಗಳುಗಳು ಉರುಳುತ್ತಿರಲು ಅವನ ಮನಸಲ್ಲಿ ಓಡುತ್ತಿದ್ದ ಕಥೆಯ ಕನಸುಗಳು ಕ್ರಮೇಣ ನಡೆಯೋಕೆ ಪ್ರಾರಂಭ ಮಾಡಿ, ತೆವಳಲಾರಂಭಿಸಿದ್ವು. ಕಥೆ ಬರೀಬೇಕು ಅಂತ ಗಂಟೆಗಟ್ಲೆ ಕೂತ್ರೂ ಒಂದು ಐಡಿಯಾ ಹೊಳೆಯದೇ, ತನ್ನೊಳಗಿನ ಕಥೆಗಾರ ಸತ್ತೇ ಹೋದನಾ? ಅಂತ ಗುಂಡಣ್ಣನ ಮನಸ್ಸಲ್ಲೇ ಗುಂಗಿ ಹುಳ ಕೊರೆಯೋಕೆ ಶುರು ಆಯ್ತು.
ಹೀಗೇ ಒಂದು ಶುಕ್ರವಾರ. ಬಸ್ಸ ಕಿಟಕಿ ಸೀಟಲ್ಲಿ ಕೂತಿದ್ದ ಗುಂಡಣ್ಣನ ಭುಜಕ್ಕೆ ತಣ್ಣನೆಯದೇನೋ ಸವರಿದಂತಾಯ್ತು. ಏನಾಗ್ತಿದೆ ಅಂತ ಗೊತ್ತಾಗೋದ್ರೊಳಗೆ ಕಣ್ಣುಗಳು ಮಂಜಾಗಿ ಬಣ್ಣ ಬಣ್ಣದ ಹೂಗಳ ಚಿತ್ರಗಳು ಮೂಡೋಕೆ ಶುರು ಆಯ್ತು. ಯಾವ್ದೋ ಬೆಕ್ಕೊಂದು ಕೂಗಿದ ಸದ್ದು ಕೇಳಿ ಎಚ್ಚರ ಆಯ್ತು. ಸುತ್ತ ಎಲ್ಲಿ ನೋಡಿದರೂ ಕತ್ತಲೆ. ಮಲಗಿರೋ ಗುಂಡಣ್ಣನ ಮೈಮೇಲೆ ಬೆಚ್ಚನೆಯ ಕಂಬಳಿಗಳ ಹೊದಿಕೆ. ಸುತ್ತ ಕೈ ಆಡಿಸಿದರೆ ಚಾಪೆಯ ಮೇಲೆ ಹಾಸಿದ್ದ ಹಾಸಿಗೆ ಬಿಟ್ಟು ಬೇರೇನೂ ಸಿಗ್ತಿಲ್ಲ. ಹೊರಗೆ 'ಉಧೋ' ಅಂತ ಮಳೆಯ ಸದ್ದು, ರಚ್ಚೆ ಹಿಡಿದ ಮಗುವಿನ ಅಳುವಂತೆ ಒಂದೇ ಸಮನೆ ಜೀಂಗುಡುವ ಝೀರುಂಡೆ ಶಬ್ದ ಬಿಟ್ಟರೆ ಬೇರೇನೂ ಇಲ್ಲ. ಹೀಗಿರಲು ಗುಂಡಣ್ಣಂಗೆ ಬಾಯಾರಿಕೆ ಶುರು ಆಯ್ತು. ಪಕ್ಕ ಎಲ್ಲಿ ತಡಕಿದರೂ ನೀರಿನ ಲೋಟವೋ, ಚಂಬೋ ಸಿಗ್ಲಿಲ್ಲ. ತಾನೆಲ್ಲಿದ್ದೇನೆ, ಮೊದಲೇ ಗೊತ್ತಿಲ್ಲ. ಸರಿ, ಮೇಲೆದ್ದು ಗೋಡೆಯೆಲ್ಲಾ ಲೈಟಿನ ಸ್ವಿಚ್ಚಿಗಾಗಿ ತಡಕಿದ. ತಾನೆಲ್ಲಿದ್ದೇನೆ ಅಂತ ಗೊತ್ತಾಗದಿದ್ದರೂ ಯಾವುದೋ ಮನೆಯ ಅಟ್ಟದ ಮೇಲಿರಬಹುದು ಅನಿಸಿತು. ಹೀಗೆ ಗೋಡೆ ಹಿಡಿದು ಸಾಗುತ್ತಿರುವಾಗ ಕಾಲಿಗೆ ಏನೋ ಸಿಕ್ಕಿದಂತಾಯ್ತು.
ಇವನ ಕಾಲಿಗೆ ಸಿಕ್ಕಿದ ವಸ್ತು ಪಕ್ಕನೆ ಈ ಬದಿಗೆ ಜರುಗೋದಕ್ಕೂ, ಹಿಂದೆಲ್ಲಿಂದಲೋ ಬೆಕ್ಕೊಂದು ಕೂಗೋದಕ್ಕೂ ಸರಿ ಆಯ್ತು. 'ಏ ಹಾಳು ಮಾಳ ಬೆಕ್ಕೇ, ನಿದ್ದೆ ಮಾಡಕ್ಕೂ ಬಿಡದಿಲ್ಯನ' ಅಂತ ಹೆಣ್ಣಿನ ಗದರೋ ದನಿ ಬಂತು! ಭಯದಿಂದ ಒಣಗಿದ ಗಂಟಲಲ್ಲಿ ಕೂಗೂ ಹೊರಬರದೇ ಗುಂಡಣ್ಣ ಹಾಗೇ ಹಿಂದೆ ಹೆಜ್ಜೆ ಇಟ್ಟ.
ಹಾಸಿಗೆಯಲ್ಲಿ ಮಲಗಿದ್ದ ಗುಂಡಣ್ಣಂಗೆ ಮೈಯೆಲ್ಲಾ ಒದ್ದೆಯಾದ ಅನುಭವ. ಎದ್ದು ನೋಡಿದರೆ ಅದು ನೀರಲ್ಲ, ಬೆವರು. ಮೈಮೇಲಿ ಕಂಬಳಿಯಿರಲಿಲ್ಲ. ಇದ್ದದ್ದೊಂದು ಬೆಡ್‌ಶೀಟಿಗೇ ಈ ಪಾಟೀ ಬೆವರೇ! ಯಾಕೋ ಸೆಖೆ. ಮತ್ತೆ ನೀರಡಿಕೆಯ ನೆನಪು. ಸರಿ ಅಂತ ಮತ್ತೆ ಏಳೋಕೆ ಹೋದ್ರೆ, ಕೈ ನೆಲಕ್ಕೆ ಸಿಗದೇ ಜೋಲಿತು. ಅತ್ತಿತ್ತ ತಡವಿ ನೋಡಿದರೆ ಇವ ಮಲಗಿರೋದು ನೆಲದ ಹಾಸಿಗೆಯ ಮೇಲಲ್ಲ, ಮಂಚದ ಮೇಲೆ! ಹೇಗೋ ಎದ್ದು ಮತ್ತೆ ಗೋಡೆ ತಡವುತ್ತಿರೋವಾಗ ಸ್ವಿಚ್ಚೊಂದು ಸಿಕ್ಕಿತು. ಅದನ್ನ ಹಾಕಿದ್ರೆ ಪಕ್ಕದಲ್ಲಿ ಬುಸ್ಸಂತ ಶಬ್ದ! ಅದನ್ನು ಹಾಗೇ ಆಫ್ ಮಾಡಿ ಉಳಿದ ಸ್ವಿಚ್‌ಗಳಿಗೆ ಹುಡುಕಾಟ. ಮತ್ತೊಂದು ಸ್ವಿಚ್ಚಿನಿಂದ ಬೆಗ್ಗನೆ ಬೆಳಗಾಯ್ತು. ಸುತ್ತ ನೋಡಿದಾಗ ಸಣ್ಣ ಕೋಣೆಯಲ್ಲಿ ಮಲಗಿದ್ದೀನಿ ಅಂತ ಗೊತ್ತಾಯ್ತು ಗುಂಡಣ್ಣಂಗೆ. ಹೊರಗೆ ನೋಡಿದರೆ ಹುಣ್ಣಿಮೆ ಬೆಳಕಲ್ಲಿ ದೂರದ ತೆಂಗು, ಅಡಿಕೆ ಮರಗಳ ಬಳುಕಾಟ. ಒಳಗಿನ ಸೆಖೆ ತಡೆಯೋಕಾಗ್ದೇ ಗುಂಡಣ್ಣ ಕಿಟಕಿ ತೆಗೆದಾಗ ಮತ್ತೆ ಮೈಯೆಲ್ಲಾ ತಣ್ಣಗಾದ ಅನುಭವ.
ಯಾಕೋ ತುಂಬಾ ಚಳಿ ಅಂತನ್ನಿಸಿ ಮತ್ತೆ ಎಚ್ಚರ ಆಯ್ತು ಗುಂಡಣ್ಣಂಗೆ. ತಾನೆಲ್ಲಿದ್ದೀನಿ ಅನ್ನೋದು ಎಂದಿನಂತೆ ಮತ್ತೆ ಡೌಟು. ಈಗ್ಯಾಕೋ ಮಲಗಿರೋದು ಹಾಸಿಗೆಯ ಮೇಲೋ ಕಲ್ಲಿನ ಮೇಲೋ ಅನ್ನೋ ಡೌಟು ಬಂತು. ಸುತ್ತ ಕೈಯಾಡಿಸಿದರೆ ಚಾಪೆಯೂ ಇಲ್ಲ, ಮಂಚವೂ ಇಲ್ಲ! ಕೈಗೆ ಎಲೆಗಳ ತರ ಏನೋ ಸಿಕ್ಕಂತೆ! ದೂರದಲ್ಲೆಲ್ಲೋ ಪಾಳೆಗಾರ ಕೂಗು. ತಾನೆಲ್ಲಿದ್ದೇನೆ ಅನ್ನೋದು ಗುಂಡಣ್ಣಂಗೆ ಮತ್ತೆ ಅಯೋವುಯ. ಎದ್ದು ಸುತ್ತೆಲ್ಲಾ ತಡಕಿದರೂ ಗೋಡೆಯೂ ಇಲ್ಲ, ಏನೂ ಇಲ್ಲ. ಹೆಜ್ಜೆ ಹೆಜ್ಜೆಗೆ ಸಿಗೋ ಕಲ್ಲು, ಮರಗಳು! ಹಾಗೇ ಸ್ವಲ್ಪ ದೂರ ಸಾಗಿದಾಗ ಮೋಡಗಳ ಮರೆಯಿಂದ ಇಣುಕುತ್ತಿದ್ದ ಚಂದ್ರ ಕಂಡ. ಮರದ ಮರೆಯಲ್ಲೇ ಎಲ್ಲೋ ಮಲಗಿದ್ದ ಗುಂಡಣ್ಣ ಹೊರಬಂದು ನೋಡಿದರೆ ದೂರದಲ್ಲೆಲ್ಲಾ ಕೋಟೆಯ ಪಾಳುಬಿದ್ದ ಗೋಡೆಗಳು, ಕಂದಕಗಳು ಕಾಣೋಕೆ ಶುರು ಆದವು. ಚಳಿಯಿಂದ ನಡುಗುತ್ತಿದ್ದ ಗುಂಡಣ್ಣನಿಗೆ ಅಲ್ಲೇ ಕೋಟೆಯ ಗೋಡೆಯ ಮೂಲೆಯಲ್ಲಿ ಬೆಂಕಿಯಂತೇನೋ ಕಂಡಿತು.
ಚಳಿಯಿಂದ ನಡುಗಿ ಸಾಯೋದನ್ನು ತಪ್ಪಿಸಲು,ಮೈ ಕಾಯಿಸಿಕೊಳ್ಳೋ ಬೆಂಕಿಯ ಆಸೆಯಿಂದ ಅತ್ತ ಹೆಜ್ಜೆ ಹಾಕಿದ. ಅಲ್ಲಿ ಒಲೆಯೊಂದು ಉರಿಯುತ್ತಿತ್ತು. ಅದರ ಮೇಲಿಟ್ಟಿದ್ದ ಅಕ್ಕಿ ಕೊತ ಕೊತ ಕುದಿಯುತ್ತಾ ಅನ್ನವಾಗುವ ಅವಸರದಲ್ಲಿತ್ತು. ಆದರೆ ಬೆಂಕಿಯ ಪಕ್ಕ ಯಾರೂ ಇರಲಿಲ್ಲ. ಅನ್ನ ನೋಡಿದೊಡನೆಯೇ ಗುಂಡಣ್ಣನಿಗೆ ಹಸಿವು, ಬಾಯಾರಿಕೆಗಳ ಮತ್ತೆ ನೆನಪು. ಅಲ್ಲೇ ನೀರನ್ನು ಹುಡುಕುತ್ತಿರುವಾಗ ಯಾರೋ ಹೆಗಲ ಮೇಲೆ ಕೈಯಿಟ್ಟಂತಾಯಿತು. ಅತ್ತ ತಿರುಗಿದಾಗ ಎರಡು ಜೊತೆ ಕಣ್ಣುಗಳನ್ನು ನೋಡಿದ್ದೊಂದೇ ನೆನಪು.
ಮತ್ತೆ ಕೈಯೆಲ್ಲಾ ಒದ್ದೆಯಾದ ಅನುಭವ. ಪಕ್ಕನೆ ಕಣ್ಣು ಬಿಟ್ಟ ಗುಂಡಣ್ಣನಿಗೆ ತನ್ನ ಕೈ ಹುಲ್ಲಿನ ಮೇಲಿದ್ದಂತೆ ಅನಿಸಿತು! ಪ್ರತ್ಯೂಷ ಸಮಯದ ಚಳಿ, ಮಸುಕಾಗುತ್ತಿರೋ ರಾತ್ರಿ, ತಯಾರಾಗುತ್ತಿರೋ ಮುಂಜಾನೆಗಳ ದ್ವಂದ್ವದ ಜೊತೆ ತಾನೆಲ್ಲಿದ್ದೇನೆ ಅನ್ನೋ ದ್ವಂದ್ವವೂ ಗುಂಡಣ್ಣಂಗೆ ಕಾಡೋಕೆ ಶುರು ಆಯ್ತು. ಪಕ್ಕ ಕೈಯಾಡಿಸಿದರೆ ಸಿಕ್ಕಿದೆಲ್ಲಾ ಹುಲ್ಲೇ! ನದಿ ಹರೀತಿರೋ ಸದ್ದು. ಹಾಗೇ ಎದ್ದು ನೋಡಿದರೆ ಆ ಮಸುಕು ಬೆಳಕಲ್ಲಿ ಕಂಡಿದ್ದು ನದಿ ತೀರ. ನದಿಯನ್ನು ನೋಡಿದೊಡನೆಯೇ ಮತ್ತೆ ಬಾಯಾರಿಕೆಯ ನೆನಪಾಯ್ತು. ನೀರ ಹರಿವಿನ ಶಬ್ದ ಬಂದತ್ತ ಹೆಜ್ಜೆ ಹಾಕಿದ. ಇದ್ದಕ್ಕಿದ್ದಂತೆ ಕಾಲು ಹುಗಿಯೋಕೆ ಶುರು ಆಯ್ತು. ಏನಾಗ್ತಿದೆ ಅಂತ ನೋಡೋದ್ರೊಳಗೆ ಗುಂಡಣ್ಣ ಮುಳುಗೋಕೆ ಶುರು ಆದ. ಮುಳು ಮುಳುಗಿ ಕೆಸರು, ಎದೆ ಮಟ್ಟಕ್ಕೆ ಬಂತು, ಕುತ್ತಿಗೆಗೂ ಬಂತು. ತಾನು ಸತ್ತೆ ಅಂದುಕೊಳ್ಳುವಷ್ಟರಲ್ಲಿ ಮೆತ್ತನೆಯ ವಸ್ತು ಇವನನ್ನು ಹಿಡಿದು ಮೇಲಕ್ಕೆ ಎಳೆದಂತಾಯಿತು. ಕುತ್ತಿಗೆಯವರೆಗೂ ಬಂದಿದ್ದ ಕೆಸರು ಮೂಗಿನವರೆಗೂ ಬಂದು ಒಳನುಗ್ಗಲಾರಂಭಿಸಿತು. ಗಾಳಿಯಿಲ್ಲದೇ ಉಸಿರುಗಟ್ಟಿದ್ದೊಂದೇ ನೆನಪು.
ಮತ್ತ್ಯಾವುದೋ ಗಡುಸು ಕೈ ಮೈಯೆಲ್ಲಾ ಅಲುಗಾಡಿಸಿದಂತಾಗಿ ಎಚ್ಚರ ಆಯ್ತು. 'ಶಿಮೊಗ್ಗ ಬಂತು ಏಳ್ರಿ. ಎಷ್ಟು ಸಲ ಅಂತ ಕರ್ಯೋದು ನಿಮ್ಗೆ, ಎಬ್ಸಿ ಎಬ್ಸಿ ಸಾಕಾಯ್ತು' ಅಂತ ಕಂಡಕ್ಟರು ಎಬ್ಬಿಸುತ್ತಾ ಇದ್ದ. ಹಾಗೇ ಕಣ್ಣು ತೆರೆದರೆ ಬೆಳ್ಳನೆ ಬೆಳಗಾಗಿದೆ! ಇಷ್ಟು ಹೊತ್ತು ತಾನೆಲ್ಲಿದ್ದೆ? ಎಂಬುದನ್ನು ಎಷ್ಟು ನೆನಪಿಸಿಕೊಂಡರೂ ಗುಂಡಣ್ಣಂಗೆ ದೃಶ್ಯದ ಮರುಪ್ರಸಾರ ಸಾಧ್ಯವಾಗಲೇ ಇಲ್ಲ. ಆದರೆ, ಅದರ ಬಗ್ಗೆ ಆತ ತಲೆ ಕೆಡಿಸಿಕೊಳ್ಳಲೇ ಇಲ್ಲ. ಮುಂದೆ ತಾನು ಯಾವ ಕಥೆ ಬರೀಬೇಕು ಎಂದು ಆಲೋಚನೆಯಲ್ಲೇ ಟಾಪಿಕ್ಕುಗಳನ್ನು ಹರವಿಕೊಂಡ!
= ಪ್ರಶಸ್ತಿ ಪಿ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


