ಚಂದ್ರನ ಮಗಳು

ಒಬ್ಬ ಚಿಕ್ಕ ಹುಡುಗಿ ಇದ್ದಳು. ಅವಳಿಗೆ ತಂದೆ-ತಾಯಿ ಇರಲಿಲ್ಲ. ಮನೆಯಲ್ಲಿ ಒಂಟಿಯಾಗಿ ಇರುತ್ತಿದ್ದಳು. ಒಮ್ಮೆ ಶ್ರೀಮಂತ ವ್ಯಕ್ತಿಯೋರ್ವನು ಈ ಹುಡುಗಿಯನ್ನು ತನ್ನ ಮನೆಗೆ ಕರೆದೊಯ್ದನು. ಅಲ್ಲಿ ಹುಡುಗಿಗೆ ಬಹಳ ಕೆಲಸ ಮಾಡಬೇಕಾಗಿತ್ತು. ಮನೆಗೆ ನೀರು ತರುವುದು, ಅಡಿಗೆ ಮಾಡುವುದು, ಮಕ್ಕಳ ಆರೈಕೆ ಮಾಡುವುದು ಮುಂತಾದ ಕೆಲಸಗಳನ್ನು ಹುಡುಗಿಯೇ ನಿರ್ವಹಿಸುತ್ತಿದ್ದಳು. ಇಷ್ಟೆಲ್ಲಾ ಕೆಲಸಗಳನ್ನು ಮಾಡುತ್ತಿದ್ದ ಅವಳಿಗೆ ಎರಡು ಹೊತ್ತಿನ ರೊಟ್ಟಿ ಮಾತ್ರ ಸಿಗುತ್ತಿತ್ತು. ಆಟ ಆಡುವುದಕ್ಕಾಗಲೀ, ಒಂದೆರಡು ನಿಮಿಷ ವಿಶ್ರಾಂತಿ ಪಡೆಯಲಿಕ್ಕಾಗಲಿ ಅವಳಿಗೆ ಅವಕಾಶ ದೊರೆಯುತ್ತಿರಲಿಲ್ಲ. ಮನೆಯ ಯಜಮಾನ ಬಹಳ ಚಾಣಾಕ್ಷನೂ ಹಾಗೂ ಕರುಣೆಯಿಲ್ಲದ ವ್ಯಕ್ತಿಯಾಗಿದ್ದನು. ಅವನ ಹೆಂಡತಿಯು ಅವನಿಗಿಂತಲೂ ಎರಡು ಹೆಜ್ಜೆ ಮುಂದೆಯೇ ಇದ್ದಳು.
ಒಂದು ದಿನ ರಾತ್ರಿ ಆಕಾಶದಲ್ಲಿ ಚಂದ್ರನು ಪ್ರಕಾಶಿಸುತ್ತಿದ್ದನು. ಹೊರಗೆ ಬಹಳ ಚಳಿಯು ಉಂಟಾಗಿತ್ತು. ಈಸಮಯದಲ್ಲಿ ಶ್ರೀಮಂತನ ಹೆಂಡತಿಯು ಹುಡುಗಿಗೆ ನೀರು ತೆಗೆದುಕೊಂಡು ಬರುವಂತೆ ಹೇಳಿದಳು. ಹುಡುಗಿಯು ಹೊರಗಿನಿಂದ ನೀರು ತರಲಿಕ್ಕಾಗಿ ಕೆರೆಯ ಬಳಿಗೆ ಹೋದಳು. ಭೀಕರ ಚಳಿಯಿಂದಾಗಿ ಅವಳ ಕೈ-ಕಾಲುಗಳು ಕಂಪಿಸುತ್ತಿದ್ದವು. ಕೆರೆಯ ನೀರು ಸಹ ಗಡ್ಡೆಕಟ್ಟಿತ್ತು.ಹುಡುಗಿಯು ಮಂಜುಗಡ್ಡೆಯಲ್ಲಿ ರಂಧ್ರ ಮಾಡಿದಳು, ಅಲ್ಲಿನ ನೀರನ್ನು ತನ್ನ ಬಕೆಟ್‌ನಲ್ಲಿ ತುಂಬಿಕೊಂಡು ಮನೆಗೆ ಸಮೀಪಕ್ಕೆ ಬಂದಾಗ ಕಾಲು ಜಾರಿ ನೆಲಕ್ಕೆ ಉರುಳಿ ಬಿದ್ದಳು. ನೀರು ಚೆಲ್ಲಿ ಹೋಯಿತು. ಗಾಬರಿಗೊಂಡ ಹುಡುಗಿಯು ಬರಿಗೈಯಲ್ಲಿ ಮನೆಯೊಳಗೆ ಹೋಗಲಾರದೆ ಮನೆಯ ಬಾಗಿಲಿನ ಬಳಿ ಭಯ ಭೀತಳಾಗಿ ನಿಂತಿದ್ದಳು. ಆಕಾಶದಲ್ಲಿ ಪ್ರಕಾಶಮಾನವಾಗಿದ್ದ ಚಂದ್ರನು ನಗುತ್ತಾ ನೋಡುತ್ತಿದ್ದನು.
ಆಗ ಹುಡುಗಿಯು ಚಂದ್ರನನ್ನು ಕುರಿತು "ಚಂದ ಮಾಮನೇ... ನೋಡು ಇಲ್ಲಿ ನಾನು ಎಷ್ಟು ದುಃಖಿತಳಾಗಿದ್ದೇನೆ. ನನಗೆ ದಯವಿಟ್ಟು ಸಹಾಯ ಮಾಡು ನನ್ನನ್ನು ಕರುಣೆಯಿಲ್ಲದ ಈ ಕ್ರೂರಿಗಳಿಂದ ಕಾಪಾಡು ಇಲ್ಲವಾದರೆ ಇವರು ನನ್ನನ್ನು ಸಾಯಿಸಿ ಬಿಡುವರು" ಎಂಬುದಾಗಿ ಬೇಡಿಕೊಂಡಳು. ಹುಡುಗಿಯ ಮಾತುಗಳನ್ನು ಆಲಿಸಿದ ಚಂದ್ರನು ಧರೆಗೆ ಇಳಿದು ಬಂದನು. ಚಂದ್ರನ ಹಿರಿಯಣ್ಣನಾದ ಸೂರ್ಯನೂ ಕೂಡಾ ಹುಡುಗಿಯ ವೇದನೆಯನ್ನು ಕೇಳಿಕೊಂಡು ಅವನು ಸಹ ಮಾನವ ರೂಪದಲ್ಲಿ ಬಂಗಾರದ ಬಣ್ಣದ ಉಡುಪನ್ನು ಧರಿಸಿ ಹುಡುಗಿಯನ್ನು ಕರೆದೊಯ್ಯಲು ಭುವಿಗೆ ಇಳಿದು ಬಂದಿದ್ದನು.
ಸೂರ್ಯನು ಚಂದ್ರನನ್ನು ಉದ್ದೇಶಿಸಿ ಸೋದರನೇ, ನಾನು ಈ ದುಃಖ ತಪ್ತ ಹುಡುಗಿಯನ್ನು ಕೊಂಡೊಯ್ಯಲು ಇಲ್ಲಿಗೆ ಬಂದಿದ್ದೇನೆ. ಅವಳನ್ನು ನನ್ನೊಂದಿಗೆ ಕಳುಹಿಸಿಕೊಡು ಏಕೆಂದರೆ ನಾನು ನಿನಗಿಂತಲೂ ದೊಡ್ಡವನಲ್ಲವೇ ? ಎಂದು ಹೇಳಿದನು. ಇದಕ್ಕೆ ಉತ್ತರಿಸಿದ ಚಂದ್ರನು "ನೀನು ದೊಡ್ಡವನೆಂಬ ಮಾತಂತೂ ನಿಜ. ಆದರೆ ಈಗ ರಾತ್ರಿ ವೇಳೆಯ ರಾಜನು ನಾನಲ್ಲವೇ? ಈ ಹುಡುಗಿಯು ನನ್ನಿಂದ ಮಾತ್ರ ಸಹಾಯ ಕೋರಿದ್ದಳು. ಆದುದರಿಂದ ಇವಳನ್ನು ನಾನೇ ಕರೆದುಕೊಂಡು ಹೋಗುತ್ತೇನೆ" ಎಂದು ತಿಳಿಸಿದನು. ಚಂದ್ರನು ಈ ಹುಡುಗಿಯನ್ನು ತನ್ನ ಭುಜದ ಮೇಲೆ ಕುಳ್ಳಿರಿಸಿಕೊಂಡು ಆಕಾಶದೆಡೆಗೆ ಹಾರಿದನು. ಅಂದಿನಿಂದ ಆ ಪುಟ್ಟ ಹುಡುಗಿಯು ಚಂದ್ರನಲ್ಲೇ ಇದ್ದಾಳೆ. ನೀವುಗಳು ಹುಣ್ಣಿಮೆಯ ಚಂದ್ರನನ್ನು ನೋಡಿದ್ದೇಯಾದರೆ ಅಲ್ಲಿ ಅವಳು ನಗುತ್ತಾ, ಹಾಡುತ್ತಾ, ಕುಣಿಯುತ್ತಿರುವುದು ಕಾಣಬರುವುದು!
- ಕೆ.ಎಸ್. ಅಕ್ರಂಪಾಶ, ಚಿಂತಾಮಣಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


