ಮಾಧವಿಯ ಸ್ವಗತ... (ಲಹರಿ)
ಪೃಥ್ವಿಪತಿಗಳಲ್ಲಿ ಶ್ರೇಷ್ಠನೆನಿಸಿಕೊಂಡ ಪುರುವಂಶದ ರಾಜ ಯಯಾತಿ. ಆಕೆಯ ಪುತ್ರಿಯೇ ಮಾಧವಿ.

ಪೃಥ್ವಿಪತಿಗಳಲ್ಲಿ ಶ್ರೇಷ್ಠನೆನಿಸಿಕೊಂಡ ಪುರುವಂಶದ ರಾಜ ಯಯಾತಿ. ಆತನ ಪುತ್ರಿಯೇ ಮಾಧವಿ. ವಿಶ್ವಾಮಿತ್ರನ ಶಿಷ್ಯನಾದ ಗಾಲವ, ತನ್ನ ಗುರುವಿಗೆ ಗುರುದಕ್ಷಿಣೆ ನೀಡಲು 800 ಯಾಗಾಶ್ವಗಳನ್ನು ಹೊಂದಿಸಬೇಕಾಗಿದೆ. ಅದಕ್ಕಾಗಿ ಸಹಾಯ ಮಾಡಬೇಕೆಂದು ಯಯಾತಿಯಲ್ಲಿ ಕೇಳಿಕೊಂಡಾಗ, "ತನಗೆ ಇಷ್ಟೊಂದು ಅಶ್ವಗಳನ್ನು ಕೊಡಲು ಸಾಧ್ಯ ಇಲ್ಲದೇ ಇರುವುದರಿಂದ ನಾನು ನನ್ನ ಕುವರಿ ಮಾಧವಿಯನ್ನೇ ನಿನಗೆ ದಾನ ನೀಡುತ್ತೇನೆ. ಚಿರಯೌವ್ವನೆ ವರ ಪಡೆದಿರುವ ಅವಳನ್ನು ಬಳಸಿಕೊಂಡು ನೀನು ಯಾಗಾಶ್ವಗಳನ್ನು ಪಡೆ" ಎಂದು ಹೇಳುತ್ತಾನೆ ಯಯಾತಿ. ಮಾಧವಿಯನ್ನು ದಾನ ಪಡೆದುಕೊಂಡ ಗಾಲವ ಅವಳನ್ನು ಹಲವು ರಾಜರಿಗೊಪ್ಪಿಸಿ ಅವರಿಂದ ಯಾಗಾಶ್ವಗಳನ್ನು ಪಡೆಯುತ್ತಾ ಹೋಗುತ್ತಾನೆ. ಅಕ್ಷರಶಃ ಮಾರಾಟದ ವಸ್ತುವಂತಾಗುವ ಮಾಧವಿಯ ವ್ಯಥೆ ಹಾಗು ಒಡಲಾಳದ ತಲ್ಲಣ ಇಲ್ಲಿದೆ....
ಗಾಲವ...ನಿನಗೆ ನನ್ನ ಪ್ರೀತಿ ಅರ್ಥವಾಗುವುದೇ ಇಲ್ಲವೇ? ನನ್ನ ಅಪ್ಪ ಯಯಾತಿ ನಿನಗೆ ನನ್ನನ್ನು ದಾನ ಮಾಡಿದಂದಿನಿಂದ ನಾನು ನಿನ್ನವಳು. ಆದರೆ ನಿನಗೆ? ನಾನು ಕೇವಲ ಮಾರಾಟದ ವಸ್ತು ಮಾತ್ರ!. ನಿನಗೆ 'ಗುರುದಕ್ಷಿಣೆ'ಯೇ ಮುಖ್ಯವಾಗಿತ್ತು. ನಿನ್ನ ಗುರು ವಿಶ್ವಾಮಿತ್ರರಿಗೆ 800 ಯಾಗಾಶ್ವಗಳನ್ನು ಗುರುದಕ್ಷಿಣೆಯಾಗಿ ನೀಡಿಯೇ ತೀರುವೆನೆಂಬ ನಿನ್ನ ಹಠ ಒಂದೆಡೆಯಾದರೆ ತನ್ನ ಪ್ರತಿಷ್ಠೆಗಾಗಿ ಮಗಳನ್ನೇ ದಾನ ಮಾಡಿ ಮೆರೆದ ನನ್ನ ಅಪ್ಪ ಯಯಾತಿ.
ಛೇ...ಹುಟ್ಟಿಸಿದ ಅಪ್ಪನೂ, ನನ್ನನ್ನು ದಾನವಾಗಿ ಪಡೆದ ನೀನೂ ಅದೆಷ್ಟು ಸ್ವಾರ್ಥಿಗಳು!. ನಿಮ್ಮಿಬ್ಬರ ಸ್ವಾರ್ಥಕ್ಕೆ ಬಲಿಯಾಗಿರುವುದು ಓರ್ವ ಮುಗ್ಧ ಹೆಣ್ಣು ಎಂದು ಮರೆತಿರುವೆಯಾ?
ನನ್ನ ಈ ಸೌಂದರ್ಯ, ಚಿರಯೌವ್ವನೆ ವರ ಎಲ್ಲವೂ ನನಗೆ ಶಾಪವೇ ಆಗಿತ್ತು. ನಾನು ಕನಸು ಕಂಡಂತಹ ರಾಜಕುಮಾರ ನೀನಾಗಿರಲಿಲ್ಲ ನಿಜ. ಆದರೆ ಯಯಾತಿಯ ಆಸ್ಥಾನದಿಂದ ಹೊರಗೆ ಕಾಲಿಟ್ಟ ಕೂಡಲೇ ನಾನು ನಿನ್ನವಳಾಗಿದ್ದೆ. ನೀನೇ ನನ್ನ ಸರ್ವಸ್ವ ಎಂದು ನಂಬಿದ್ದೆ. ಯಾಗಾಶ್ವಗಳನ್ನು ಹುಡುಕಿ ಅಲೆಯುವಾಗ ನಿನ್ನ ಪ್ರೀತಿಯ ನೋಟಕ್ಕೆ ನಾನದೆಷ್ಟು ಹಂಬಲಿಸಿದ್ದೆ!
ನೀನು ರಾಜ ಹರ್ಯಾಸ್ವನಲ್ಲಿಗೆ ನನ್ನನ್ನು ಒಪ್ಪಿಸಿದಾಗ ನಿನಗೇನೂ ಅನಿಸಿಲ್ಲವೇ? ಹೂಂ.. ನಿನಗೆ ಯಾಗಾಶ್ವಗಳಷ್ಟೇ ಬೇಕಾಗಿದ್ದವು. ಆದರೆ ನನಗೆ? ಮೊದಲ ಬಾರಿಗೆ ಪರ ಪುರುಷನೊಂದಿಗೆ ದೇಹ ಹಂಚಿಕೊಂಡಾಗ ಆದ ನೋವು, ಸಂಕಟ, ತಳಮಳ...ನಿನಗಿದು ಅರ್ಥವಾಗುವುದಾದರೂ ಹೇಗೆ?.
ರಾಜನ ಶಯ್ಯೆಯಲ್ಲಿ ಎರಡು ದೇಹ, ಎರಡು ಜೀವಗಳು ಮಿಲನವಾದವೇ ಹೊರತು ನಮ್ಮಿಬ್ಬಿರ ಮಧ್ಯೆ ಅವಿನಾಭಾವ ಮೂಡಲೇ ಇಲ್ಲ. ಇದಾದ ಮೇಲೇ ರಾಜ ದಿವೋದಾಸ, ಉಶೀನರ...ಕೊನೆಗೆ ನಿನ್ನ ಗುರು ವಿಶ್ವಾಮಿತ್ರ! ನಿನ್ನನ್ನೇ ಧೇನಿಸುತ್ತಾ ಅವರೊಂದಿಗಿನ ಕೂಡುವಿಕೆಯಲ್ಲಿಯೂ ನಾನು ವಿಮನಸ್ಕಳಾಗಿ ಬಿಡುತ್ತಿದ್ದುದು ಅವರ ಅರಿವಿಗೂ ಬಂದಿ ರಬಹುದು. ನಾನು ಎಲ್ಲರಿಗೂ ಶಯನರಾಣಿಯಾದನೇ ಹೊರತು ಮನದ ರಾಣಿಯಾಗಲು ನನ್ನಿಂದ ಸಾಧ್ಯವಾಗಲಿಲ್ಲ! ಅದು ಸಾಧ್ಯವಾಗಿದ್ದರೆ ನಿನಗೆ ಯಾಗಾಶ್ವಗಳೂ ದಕ್ಕುತ್ತಿರಲಿಲ್ಲವಲ್ವಾ?
ಕೊನೆಗೂ ನಿನ್ನ ಗುರುದಕ್ಷಿಣೆ, ಅಪ್ಪನ ಪ್ರತಿಷ್ಠೆ ಎಲ್ಲವನ್ನೂ ಉಳಿಸಿಕೊಂಡು ನಾನು ಸ್ವಯಂವರಕ್ಕೆ ಸಿದ್ಧಳಾದೆ. ರಾಜ ಮಹಾರಾಜರುಗಳು ನನ್ನನ್ನು ಪಡೆಯಲು ಹಂಬಲಿಸುತ್ತಿದ್ದರೆ, ನಾನು ನಿನ್ನನ್ನು ಪಡೆಯಲು ಹಂಬಲಿಸಿದೆ. ಗಾಲವ..ನನಗೆ ರಾಜ್ಯ, ಸಂಪತ್ತು ಯಾವುದೂ ಬೇಕಾಗಿರಲಿಲ್ಲ..ನಿನ್ನ ಪ್ರೀತಿಯೊಂದೇ ಸಾಕಾಗಿತ್ತು. ಅದಕ್ಕಾಗಿಯೇ ನಾನು ನನ್ನ ಚಿರಯೌವನ ಸೌಂದರ್ಯದ ಕೃತಕ ಹೊದಿಕೆಯನ್ನು ಕಳಚಿ ನಿನ್ನ ಮುಂದೆ ನಿಂತೆ. ಪ್ರೀತಿಗೆ ಸೌಂದರ್ಯದ ಹಂಗಿಲ್ಲ ಎಂದು ನಾನು ನಂಬಿದ್ದೆ. ಆದರೆ ನೀನಾಡಿದ ಮಾತಿನಿಂದ ನನ್ನ ಈ ನಂಬಿಕೆ ಬರೀ ನಂಬಿಕೆ ಮಾತ್ರ ಎಂಬುದು ಅರಿವಾಯಿತು.
ಗಾಲವ..ನಿನಗೆ ನನ್ನ ದೇಹಸೌಂದರ್ಯ ಮುಖ್ಯವೇ ಹೊರತು ನಾನಲ್ಲ. ನನ್ನ ಈ ಮೂಳೆ ಮಾಂಸಗಳ ಸುಂದರಾಕೃತಿಯಲ್ಲಿ ನಿನ್ನೊಲವಿಗಾಗಿ ತುಡಿವ ಮನಸ್ಸೊಂದಿದೆ ಎಂಬುದು ನಿನಗೆ ಕೊನೆಗೂ ಅರ್ಥವಾಗದೆ ಹೋಯಿತಲ್ವಾ?
ಹೋಗು ಗಾಲವ...ಹೋಗು...ನಂಬಿಕೆಯೇ ಮುರಿದ ಮೇಲೆ ಸಂಬಂಧಕ್ಕೆ ಬೆಲೆ ಎಲ್ಲಿದೆ? ನನಗೆಲ್ಲವೂ ಅರ್ಥವಾಗಿದೆ.. ಸಾಕು!
= ರಶ್ಮಿ ಕಾಸರಗೋಡು
rashkasar@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


