ಬರುವೆಯಾ ಗೆಳತಿ ಬಾಳಿಗೆ...!?

ಅದೊಂದು ಸುಂದರ ಚೈತ್ರದಲ್ಲಿಯೇ ಅಲ್ಲವೇ ನಿನ್ನ ಪರಿಚಯವಾದದ್ದು, ಅದೂ ಚಿತ್ರಕಲಾ ಪರಿಷತ್‌ನಲ್ಲಿ ಏರ್ಪಡಿಸಿದ್ದ ಚಿತ್ರಗಳ ಪ್ರದರ್ಶನ- ಮಾರಾಟ ಸಂದರ್ಭದಲ್ಲಿ ನಾನೊಂದು ಚಿತ್ರ ನೋಡುತ್ತಾ ಮೈಮರೆತು ನಿಂತಾಗ. ನೀನು ಬಂದು 'ಹೇಗಿದೆ ಆ ಚಿತ್ರ, ಚೆನ್ನಾಗಿದೆಯಾ? ನಿಮಗದು ಬೇಕೆ?' ಎಂದಾಗ, 'ಹೌದು' ಎನ್ನುತ್ತಾ ಖರೀದಿಸಿದೆ. ನಂತರ ಹಲವು ಕಾರ್ಯಕ್ರಮಗಳಲ್ಲಿ ಪರಿಚಯ, ಮುಗುಳ್ನಗೆ, ನಗು, ಹರಟೆ, ಜಗಳ, ಅಳು, ಪ್ರೀತಿ ವಿನಿಮಯವಾದದ್ದು!? ಪ್ರತಿ ದಿನ ಮುಂಜಾನೆ ನಿನ್ನ ಫೋಟೋ ನೋಡದೆ ಎಸ್.ಎಂ.ಎಸ್. ಓದದೆ ಬೆಳಕಾಗುತ್ತಿರಲಿಲ್ಲ. ರಾತ್ರಿ ಹನ್ನೊಂದರ ಸುಮಾರಿಗೆ 'ನಿನ್ನ ಮುದ್ದಾಡಲು ಇಂದು, ಕನಸಿನಲ್ಲಿ ಬರುವೆ', 'ಸಿಹಿ ಕನಸಿನೊಂದಿಗೆ..., ನಿನ್ನವಳೇ ಆದ...' ಎನ್ನುವ ನಿನ್ನ ಆ ಸಾಲಿನೊಂದಿಗೆ ನನ್ನ ಅಂದಿನ ದಿನಚರಿ ಮುಗಿಯುತ್ತಿತ್ತು.
ಗೆಳೆಯನ ಮದುವೆಗೆ ಕೊಡಗಿನ ಹಸಿರು ಘಟ್ಟಗಳ ನಡುವಿನಲ್ಲಿ ನಡೆದ ಸಮಾರಂಭಕ್ಕೆ ನೀನು ಬಂದಿದ್ದೆಯಲ್ಲಾ, ಅಂದು ಬೆಳಗ್ಗೆ ನಾನು ಉಪಾಹಾರ ಮುಗಿಸಿ ರೆಸಾರ್ಟಿಗೆ ಅಂಟಿಕೊಂಡಂತೆಯೇ ಇದ್ದ ಸಣ್ಣ ಗುಡ್ಡದ ಮೇಲೆ ಒಂಟಿಯಾಗಿ ಬೀಸುವ ತಣ್ಣನೆ ಗಾಳಿಗೆ ಮೈಯ್ಯೊಡ್ಡಿ, ಅದೇ ದಿಟ್ಟ ಹೆಸರಿನ ನಿಸರ್ಗವನ್ನು ದೂರದಲ್ಲೆಲ್ಲೋ ಬೆಟ್ಟಗಳ ನಡುವೆ ಬೀಳುತ್ತಿದ್ದ 'ಝರಿ'ಯನ್ನು ಕಣ್ಣಿನ ರೆಪ್ಪೆ ಮಿಟುಕಿಸದೇ ಆ ಚಿಗುರು, ಹಸಿರು ಮರಗಳಿಂದ, ಕಲ್ಲಿನ ನಡುವೆ ಇಳಿಬಿದ್ದ ಬಳ್ಳಿಗಳಿಂದ, ಇಣುಕಿ ನೋಡುತ್ತಿದ್ದ ಬಣ್ಣ ಬಣ್ಣಗಳಿಂದ ಕಂಗೊಳಿಸುವ ಹೂಗಳನ್ನು, ಹಸಿರನ್ನೇ ಹೊದ್ದು ನಿಂತ ಅಗಾಧ ವನಸಿರಿಯನ್ನು ಕಣ್ತುಂಬಿಸಿಕೊಳ್ಳಲು ಪ್ರಯತ್ನಿಸುತ್ತಿರುವಾಗ, ಆ ಸನ್ನಿವೇಶಕ್ಕೆ ನನ್ನ ಬದುಕಿನ ಅಚ್ಚರಿಯೆಂಬಂತೆ ನೀನು ಕಂಡಾಗ ಮನ ಪುಳಕಗೊಳ್ಳುವುದರೊಂದಿಗೆ, ಬೆಳಗಿನ ಹಿತವಾದ ಗಾಳಿ, ಹಸಿರಿನ ಹಿನ್ನೆಲೆಯೊಂದಿಗೆ ನಿನ್ನ ಆಗಮನವಾಯಿತು. ನಿನ್ನ ರೂಪು, ಲಾವಣ್ಯ, ಬಿಂಕ, ಬಿಗುಮಾನ, ನಿನ್ನ ಗಲ್ಲ, ತುಟಿ, ಕೆನ್ನೆ, ಮುಂಗುರುಳಿನ ತೆಳು ರವಿಕೆ, ಅವುಗಳ ಮೇಲಿನ ಕುಸುರಿ, ಬಟ್ಟೆಗೆ ಹಾಕಿದ ವಿದೇಶಿ ಸುಗಂಧ... ಯಾವ ಗಂಧರ್ವ ಕನ್ಯೆಗೂ ಕಡಿಮೆ ಇಲ್ಲದಂತೆ ಕಾಣುತ್ತಿದ್ದೆ ನೀನು!
ಆಗ ನನ್ನ ಮನದ ತಣ್ಣನೆಯ ಕೋಮಲ ಭಾವನೆಗಳು ಹೊಸ ರೂಪು ಪಡೆದು ಅದೆಂಥದೋ ಹೇಳಲೂ ಆಗದ, ತಡೆಯಲೂ ಆಗದ, ಕಲ್ಪನೆಗೂ ಮೀರಿದ ಅಮಿತಾನಂದ ನನ್ನೊಳಗೆ ಮೂಡಿ- ನನಗರಿವಿಲ್ಲದೆಯೇ ನನ್ನೊಳಗಿನ ಸುಪ್ತ ಶಕ್ತಿ ನಾಭಿಯಿಂದ ಹೊರಟು, ಕಾಡಿನ ಗಿಡ, ಮರ, ಹೂ, ಬಳ್ಳಿ, ಹರಿವ ನೀರು, ಹಾರುವ ಹಕ್ಕಿ, ತೇಲುವ ಮೋಡ ಎಲ್ಲರ ಒಪ್ಪಿಗೆ ಪಡೆದು ಅಲ್ಲವೆ ನಾನು ನಿನ್ನನ್ನು ಕೇಳಿದ್ದು 'ನನ್ನನ್ನು ಪ್ರೀತಿಸುತ್ತೀಯಾ?' ಎಂದು. 'ಅದಕ್ಕಾಗಿಯೇ ನಾನು ಬಂದಿರುವುದು'- ಎಂದು ನೀನು ಹೇಳಿದಾಗ ನನಗೆ ಹೇಗಾಗಿರಬೇಡ? ಇದು ಸತ್ಯನಾ? ಎಂದು ನನ್ನ ನಾ ಮರೆತಾಗ ನೀನೆ ಬಳಿ ಬಂದು ನನ್ನ ಚಿವುಟಿ 'ಖಂಡಿತಾ ಇದು ಸತ್ಯ!' - ಎಂದು ಖಾತ್ರಿಪಡಿಸಿ ಕೋಮಲ ಕೈಗಳಿಂದ ಕೆನ್ನೆ ಸವರಿ, ತೋಳುಗಳಿಂದ ನನ್ನ ಬರಸೆಳೆದು, ಜೇನನ್ನೇ ಸುರಿಸುವ ತುಟಿಗಳಿಂದ ನನ್ನ ಸಾಧಾರಣ ಪೇಲವ ತುಟಿಗಳಿಗೆ ಮುತ್ತನ್ನಿತ್ತಾಗ ನಾನು ಏನೂ ಹೇಳಲಾಗದೆ ನಿಂತುಬಿಟ್ಟೆ.
ಗಾಳಿ ಗಂಧವಾಗಿ, ಹೂವು ಪರಿಮಳವಾಗಿ, ನಿನ್ನ ಮಾತು ವೇಣು ನಾದವಾಗಿ, ಮನವು ಹಕ್ಕಿಯಾಗಿ ಹಾರಿ, ಕಾಮನ ಬಿಲ್ಲ ಏರಿ, ಮೋಡವಾಗಿ ತೇಲಿ, ಕೋಗಿಲೆಯ ಕೊರಳಲ್ಲಿ ಹೊಸರಾಗ ಹಾಡಿ, ನವಿಲಿನೊಂದಿಗೆ ಗರಿ ಬಿಚ್ಚಿ ಕುಣಿದು ಹೂಗಳಿಗೆ ಮುತ್ತಿಟ್ಟು ಬಂದರೆ ಅದಕ್ಕೆ ಹೊಣೆಗಾರ ನಾನಲ್ಲ! ನಿನ್ನ ಪ್ರೀತಿಯೇ ಕಾರಣ! ಬಂದುಬಿಡು ಗೆಳತಿ ನನ್ನ ಮನೆಯಂಗಳದಲ್ಲಿ ಬಣ್ಣದ ರಂಗೋಲಿ ಬಿಡಿಸು. ಬಾಳಿನ ಬಾಗಿಲಿಗೆ ಹಚ್ಚನೆ ಹಸಿರು ತೋರಣ ಕಟ್ಟು. ಮನೆಯಲ್ಲಿ- ಮನದಲ್ಲಿ ಪ್ರೀತಿಯ ನಂದಾದೀಪ ಬೆಳಗು.
ಬರುವೆಯಾ ಗೆಳತಿ ಬಾಳಿಗೆ..!?
- ಎಚ್.ಎನ್. ಕಿರಣ್ ಕುಮಾರ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


