ಮಕರಂದ/ದೋಣಿ

ದ್ರೋಣ ಆಚಾರ್ಯನಾದದ್ದು...

ದ್ರೋಣ ಆಚಾರ್ಯನಾದದ್ದು...
Published On :

ಭಾರದ್ವಾಜ ಮಹರ್ಷಿ, ಗಂಗಾನದಿಯಲ್ಲಿ ಜಳಕ ಮಾಡುತ್ತಿದ್ದಾಗ 'ಘೃತಾಚಿ' ಎಂಬ ಅಪ್ಸರೆಯನ್ನು ಕಂಡು ಮೋಹ ಪರವಶಗೊಂಡ. ಆಗ ಅವನಿಗೆ ರೇತಸ್ಸು ಪತನವಾಯ್ತು. ಅದನ್ನವನು ಒಂದು ದೊನ್ನೆಯಲ್ಲಿರಿಸಿದ. ಅದರಿಂದ ಒಬ್ಬ ಬಾಲಕ ಜನಿಸಿದ. 'ದ್ರೋಣ' ಎಂದರೆ 'ದೊನ್ನೆ'. ಅದರಿಂದ ಹುಟ್ಟಿದವನಾದ್ದರಿಂದ ಅವನಿಗೆ 'ದ್ರೋಣ' ಎಂಬ ಹೆಸರು ಬಂದಿತು.
ದ್ರೋಣ, ತಂದೆಯಾದ ಭಾರದ್ವಾಜ ಮಹರ್ಷಿಯಿಂದ ವೇದ- ವೇದಾಂಗಗಳನ್ನು ಅಧ್ಯಯನ ಮಾಡಿದ. ಯಾರಿಗೂ ಲಭ್ಯವಾಗದ ಅಸ್ತ್ರ, ಶಸ್ತ್ರ, ವಿದ್ಯೆಗಳನ್ನು ಕಲಿತ. ಬಾಲ್ಯದಲ್ಲಿ ಅವನು ವ್ಯಾಸಂಗ ಮಾಡುವಾಗ ರಾಜಕುಮಾರ ದ್ರುಪದನು ಉತ್ತಮ ಸ್ನೇಹಿತನಾಗಿದ್ದನು. ತಾನು ರಾಜನಾದರೆ ಅರ್ಧ ರಾಜ್ಯವನ್ನು ಕೊಡುತ್ತೇನೆಂದು ಆ ಸಂದರ್ಭದಲ್ಲಿ ದ್ರುಪದನು ವಾಗ್ದಾನ ಮಾಡಿದನು.
ದ್ರೋಣ ಧನುರ್ವಿದ್ಯೆಯಲ್ಲಿ ತನಗೆ ತಾನೇ ಸಾಟಿ ಎಂದು ಕೀರ್ತಿ ಗಳಿಸಿದ. ಅವನು ಕೃಪಾಚಾರ್ಯರ ತಂಗಿಯಾದ ಕೃಪಯನ್ನು ವಿವಾಹವಾದನು. ಅವರ ಮಗನೇ ಅಶ್ವತ್ಥಾಮ. ಮಗ ಹುಟ್ಟಿದಾಗ ದ್ರೋಣನು ತುಂಬಾ ಸಂತಸಗೊಂಡರೂ, ತನ್ನ ಬಡತನದಿಂದಾಗಿ ತುಂಬಾ ದುಃಖಿಸುತ್ತಿದ್ದ. ಮಗ ಹಾಲುಬೇಕೆಂದು ರಚ್ಚೆ ಹಿಡಿದಾಗ, ತಂದು ಕೊಡಲು ಅಶಕ್ತನಾದುದಕ್ಕೆ ತುಂಬಾ ಕುಗ್ಗುತ್ತಿದ್ದ.
ಹೀಗಿರುವಾಗಲೇ, ಪರಶುರಾಮನು ಬ್ರಾಹ್ಮಣರಿಗೆ ದಾನ ಮಾಡುತ್ತಿದ್ದಾನೆಂಬ ವಿಷಯ ತಿಳಿಯಿತು. ಹಣಕ್ಕಾಗಿ ಬೇಡಿದನು. 'ನಾನು ಧನವನ್ನೆಲ್ಲಾ ದಾನ ಮಾಡಿಬಿಟ್ಟೆ. ನನ್ನ ಹತ್ತಿರವೀಗ ಈ ಶರೀರ, ನಾನು ಕಲಿತ ವಿದ್ಯೆ ಮಾತ್ರ ಉಳಿದಿದೆ. ಇವೆರಡರಲ್ಲಿ ನಿನಗೇನು ಬೇಕು ಕೋರಿಕೋ. ಕೊಡುತ್ತೇನೆ' ಎಂದಾಗ ದ್ರೋಣನು ಅವನಿಂದ ವಿದ್ಯಾದಾನವನ್ನು ಪಡೆದನು.
 ಈ ಮಧ್ಯೆ ಬಾಲ್ಯದ ಗೆಳೆಯ ದ್ರುಪದನನ್ನು ನೆನಪಿಸಿಕೊಂಡು, ಅವನ ಬಳಿ ಹೋಗಿ ಸಹಾಯ ಬೇಡಿದಾಗ, ಅವನು ದ್ರೋಣನನ್ನು ಅವಮಾನಿಸಿದನು. ಹಿಂದೆ ಕೊಟ್ಟಿದ್ದ ವಾಗ್ದಾನವನ್ನು ನೆನಪಿಸಿದರೂ ಅವನ ಕೋರಿಕೆಗೆ ದ್ರುಪದ ಒಪ್ಪಲಿಲ್ಲ. ಅವನಿಗೆ ಪ್ರತೀಕಾರ ಮಾಡಬೇಕೆಂದುಕೊಂಡು, ದ್ರೋಣನು ಪತ್ನಿಯೊಂದಿಗೆ ಹಸ್ತಿನಾವತಿಗೆ ಬಂದನು. ಹೀಗಿರುವಾಗ ಒಮ್ಮೆ ಕೌರವ ಪಾಂಡವರು ಉದ್ಯಾನವನದಲ್ಲಿ ಆಡುತ್ತಿದ್ದಾಗ ಅವರ ಚೆಂಡು ಬಾವಿಯಲ್ಲಿ ಬಿದ್ದಿತು. ಅಲ್ಲದೇ ಧರ್ಮರಾಜನ ಕೈಯ ಉಂಗುರವೂ ಬಿದ್ದಿತು. ಅವರು ಚಿಂತಾಕ್ರಾಂತರಾಗಿ ಕುಳಿತಿದ್ದಾಗ, ಅಲ್ಲಿಗೆ ದ್ರೋಣಾಚಾರ್ಯನು ಬಂದು 'ನಾನು ಚೆಂಡು, ಉಂಗುರವನ್ನು ತೆಗೆದುಕೊಡುವೆ, ನನಗೆ ಊಟ ಹಾಕಿಸುತ್ತೀರಾ?' ಎಂದಾಗ ಧರ್ಮರಾಜನು 'ನಿಮಗೆ ಬದುಕಿರುವಷ್ಟು ದಿನವೂ ಊಟ ಹಾಕಿಸುತ್ತೇನೆ' ಎಂದ.
ತಕ್ಷಣ ದ್ರೋಣನು ತನ್ನ ಧನುರ್ವಿದ್ಯೆಯಿಂದ ಅವನ್ನು ಹೊರ ತೆಗೆದ. ಅಚ್ಚರಿಗೊಂಡ ರಾಜಕುಮಾರರು ದ್ರೋಣನಿಗೆ ನಮಸ್ಕರಿಸಿ, ಭೀಷ್ಮನ ಬಳಿ ಹೋಗಿ ನಡೆದ ವೃತ್ತಾಂತವನ್ನೆಲ್ಲವನ್ನು ವಿವರಿಸಿದರು. ಆಗ ಭೀಷ್ಮನು ದ್ರೋಣನನ್ನು ಕರೆಸಿ ಆಚಾರ್ಯ ಪದವಿಯನ್ನಿತ್ತು, ಕೌರವ, ಪಾಂಡವರಿಗೆ ವಿದ್ಯೆ ಕಲಿಸುವ ಏರ್ಪಾಡು ಮಾಡಿದನು.

- ಬಸವನಗೌಡ ಹೆಬ್ಬಳಗೆರೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.