ಮಕರಂದ/ದೋಣಿ

ನನ್ನ ಪ್ರಿಯ ಪ್ರಭು

ನನ್ನ ಪ್ರಿಯ ಪ್ರಭು
Published On :

ನಾನು ಕರ್ನಾಟಕದ ಹೊರಗಿದ್ದ ಹತ್ತೂವರೆ ವರ್ಷಗಳಲ್ಲಿ ಕರ್ನಾಟಕದಲ್ಲಿ ಆಗುತ್ತಿದ್ದ ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಬೆಳೆವಣಿಗೆಗಳ ಮುಖ್ಯಾಂಶಗಳನ್ನು ನನಗೆ ತಿಳಿಸುತ್ತಿದ್ದವರು ಎಂ.ಎಸ್.ಕೆ ಪ್ರಭು. ರಜೆಯಲ್ಲಿ ಅಥವಾ ರಜೆ ಪಡೆದು ಕರ್ನಾಟಕಕ್ಕೆ ಬಂದಾಗ ನಾನು ಹೆಚ್ಚು ಹೊತ್ತು ಕಳೆಯುತ್ತಿದ್ದದು ಅವರೊಡನೆ. ಗುಜರಾತು ದಿಲ್ಲಿಗಳಲ್ಲಿದ್ದಾಗಲಂತೂ ಕನ್ನಡ ಸಾಹಿತ್ಯದ ಕುರಿತು ಚರ್ಚಿಸಲು ನನಗೆ ಬೇರೆ ಯಾರು ಇರಲಿಲ್ಲ. ಕರ್ನಾಟಕಕ್ಕೆ ಬರುವುದೆಂದರೆ ಪ್ರಭುವಿನೊಡನೆ ಕೆಲವು ದಿನಗಳನ್ನು ಕಳೆಯುವುದೇ ಒಂದು ಮುಖ್ಯ ಉದ್ದೇಶವಾಗಿರುತ್ತಿತ್ತು. ನನ್ನ ತಲೆಯಲ್ಲಿ ಮೊಳೆತು ಬೆಳೆಯುತ್ತಿದ್ದ ವಸ್ತುಗಳನ್ನು ಹೇಳುವುದರಿಂದ ಹಿಡಿದು ಎಷ್ಟೋ ಸಾಹಿತ್ಯಿಕ ಸಮಸ್ಯೆಗಳನ್ನು ಅವರೊಡನೆ ಚರ್ಚಿಸುತ್ತಿದ್ದೆ. ಸ್ವತಃ ಸೃಜನಶೀಲ ಪ್ರತಿಭೆಯಿರುವ ಅವರು ನನ್ನ ವಸ್ತು ಮತ್ತು ಪಾತ್ರಗಳ ಅಂತರಂಗವನ್ನು ಹೊಕ್ಕು ಅರಿತು ಸಲಹೆ ಸೂಚನೆ ಕೊಡುತ್ತಿದ್ದರು. ನನಗೂ ಕರ್ನಾಟಕಕ್ಕೂ ಇದ್ದ ಬೌದ್ಧಿಕ ಕೊಂಡಿ ಅವರಾಗಿದ್ದರು...
ಅವರು ನನಗಿಂತ ನಾಲ್ಕು ವರ್ಷಕ್ಕೆ ಚಿಕ್ಕವರು. ಅವರ ಅಣ್ಣ ರಾಮಚಂದ್ರ ಹೊಯ್ಸಳ ಕರ್ನಾಟಕ ಹಾಸ್ಟೆಲಿನಲ್ಲಿ ನನ್ನ ಓರಗೆಯವರಾಗಿದ್ದರು. ಬಿಎಸ್‌ಸಿ ಮುಗಿಸಿದ್ದರು. ಬೆಂಗಳೂರಿನಲ್ಲಿ ಸೈಕಲ್‌ನಲ್ಲಿ ಹೋಗುತ್ತಿದ್ದಾಗ ಒಂದು ಲಾರಿ ಬಡಿದು ತೀರಿಹೋದರು. ನಾನು ಆನರ್ಸ್ ಓದುತ್ತಿದ್ದಾಗ ಪ್ರಭು ಇಂಟರ್ ಮೀಡಿಯೆಟ್ ಓದುತ್ತಿದ್ದರು. ಮೊದಲಿಂದಲೂ ಸಂಕೋಚದ ಸ್ವಭಾವ. ಅರ್ಹತೆ ಮಾತ್ರ ಸಾಲದು, ಅದೃಷ್ಟವೂ ಬೇಕು, ಮುನ್ನುಗ್ಗುವ ಛಾತಿಯೂ ಬೇಕು ಎನ್ನುವುದಕ್ಕೆ ಪ್ರಭು ಒಂದು ಉದಾಹರಣೆ. ಮೊದಲ ದರ್ಜೆಯಲ್ಲಿ ಅರ್ಥಶಾಸ್ತ್ರದ ಎಂ.ಎ ಮಾಡಿದ ಮೇಲೆ ಮೊದಲು ಸಿಕ್ಕಿದ ಎ.ಜಿ. ಕಚೇರಿಯ ಕೆಲಸಕ್ಕೆ ಸೇರಿಬಿಟ್ಟರು. ಅನಂತರ ಆಕಾಶವಾಣಿಯಲ್ಲಿ ಕಾರ್ಯಕ್ರಮ ನಿರ್ವಾಹಕರಾದರು.
ಅದು ಬಿಟ್ಟು ನನ್ನಂತೆ ಅಧ್ಯಾಪನ ವೃತ್ತಿಯನ್ನು ಹಿಡಿದ್ದಿದ್ದರೆ ಸಾಕಷ್ಟು ವಿರಾಮ ದೊರೆತು ಇನ್ನಷ್ಟು ಓದಿ ಬರೆಯಬಹುದಿತ್ತು. ಹಾಸ್ಟೇಲಿನಲ್ಲಿದ್ದಾಗಲೂ ಓದುವ, ಆಲೋಚಿಸುವ, ಗಂಭೀರ ಪ್ರವೃತ್ತಿಯವರು. ನನ್ನ ಜೊತೆ ಹಾಸ್ಟೇಲಿನಲ್ಲಿದ್ದು ಅನಂತರವೂ ಅಧ್ಯಯನ ಚಿಂತನೆ ಮತ್ತು ಸಾಹಿತ್ಯ ಸೃಷ್ಟಿಗಳಲ್ಲಿ ಬೆಳೆದು ಬುದ್ಧಿ ಭಾವಗಳೆರಡರಲ್ಲೂ ನನಗೆ ಗೆಳೆಯರಾಗಿರುವವರು ಅವರೊಬ್ಬರೇ. ನಾನು ಆನರ್ಸ್ ಓದುವಾಗ ಒಂದು ಕವನ ಬರೆದಿದ್ದೆ. ಇಂಟರ್ ಮೀಡಿಯೇಟ್‌ನಲ್ಲಿದ್ದ ಅವರು ಅದನ್ನು ಓದಿ ವಿಮರ್ಶಿಸಿ ತಿದ್ದಲು ಸಲಹೆ ಸೂಚನೆ ಕೊಟ್ಟರು. ಆಗ ಆರಂಭವಾದದ್ದು, ನನ್ನ ಇದುವರೆಗಿನ ಬರಹಗಳನ್ನೆಲ್ಲ ಹಸ್ತಪ್ರತಿಯಲ್ಲಿ ಓದಿ ವಿಮರ್ಶಿಸಿದ್ದಾರೆ. ಕೆಲವು ಕಾದಂಬರಿಗಳನ್ನು ನಾನು ಎರಡನೆಯ ಮೂರನೆಯ ಪರಿಜುಗಳನ್ನು ಬರೆದಿರುವುದೂ ಉಂಟು. ಅವನ್ನೆಲ್ಲ ಅವರು ಓದಿದ್ದಾರೆ. ಪ್ರತ್ಯೇಕವಾಗಿ ಎಂಟು ಹತ್ತು ಉದ್ದನೆ ಪುಟಗಳ ತುಂಬ ಟೀಕೆ ಟಿಪ್ಪಣಿ ಬರೆದುಕೊಂಡು ಓದುತ್ತಾರೆ. ಪ್ರಭು ನೋಡುವ ತನಕ ನಾನು ಯಾವುದನ್ನೂ ಟೈಪಿಗೆ ಅಥವಾ ಪ್ರಕಟಣೆಗೆ ಕೊಡುವುದಿಲ್ಲ.
ಸಾಹಿತ್ಯ ಮಾತ್ರವಲ್ಲ. ಅಂತರಂಗದ ಎಷ್ಟೋ ಸಂಗತಿಗಳನ್ನು ನಾನು ಪ್ರಭುವಿನೊಡನೆ ತೋಡಿಕೊಂಡಿದ್ದೇನೆ. ಅವರ ನಂಬಿಕೆಯ ಗುಣ ಅಗಾಧವಾದದ್ದು. ನಾನು ಕೊಟ್ಟದ್ದನ್ನು, ಹೇಳಿದುದನ್ನು ಓದಿ ಅನಂತರ ನನ್ನೊಡನೆ ಚರ್ಚಿಸುತ್ತಾರೆ. ಆಗಾಗ್ಗೆ ಪ್ರಭುವಿನೊಡನೆ ಎರಡು ದಿನ ಇದ್ದು ಮಾತನಾಡದಿದ್ದರೆ ಮನಸ್ಸು ಎಳೆಯಲು ಶುರುವಾಗುತ್ತದೆ. ಅವರು ಧಾರವಾಡದಲ್ಲಿರಲಿ, ಭದ್ರಾವತಿಯಲ್ಲಿರಲಿ, ಬೆಂಗಳೂರಿನಲ್ಲಿರಲಿ, ನಾನು ಅವರನ್ನು ಹುಡುಕಿಕೊಂಡು ಹೋಗುತ್ತೇನೆ. ಅಥವಾ ಅವರು ಮೈಸೂರಿಗೆ ಬರುತ್ತಾರೆ. ನಾವಿಬ್ಬರೂ ಕೂಡಿ ಒಂದು ವಾರ ಕೆಮ್ಮಣ್ಣುಗುಡಿಯಂಥ ಸ್ಥಳಕ್ಕೆ ಹೋಗಿರುವುದೂ ಉಂಟು.

- ಎಸ್.ಎಲ್.ಭೈರಪ್ಪ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.