ಪಾದಚಾರಿ

ಪಾದಚಾರಿ ಮಾರ್ಗದಲ್ಲಿ ಆತ ಸಾಗುತ್ತಿದ್ದ. ಪೊಲೀಸರಿಬ್ಬರು ಆತನನ್ನು ತಡೆದರು. ಆತ ಯಾರು? ಏನು? ಎಂಬ ಹಲವು ಪ್ರಶ್ನೆಗಳನ್ನು ಕೇಳಿದ ನಂತರ ಆತ ಮಾನಸಿಕ ಅಸ್ವಸ್ಥ ಎಂಬ ಹಣೆಪಟ್ಟಿ ಕಟ್ಟಿ ಮಾನಸಿಕ ಆಸ್ಪತ್ರೆಗೆ ಸಾಗಿಸಿದರು.
ಹಿನ್ನೆಲೆ: ಲಿಯೋನಾರ್ಡ್ ಮೀಡ್‌ಗೆ ಸಂಜೆಗತ್ತಲಲ್ಲಿ ನಿರ್ಮಾನುಷ ಬೀದಿಗಳಲ್ಲಿ ಸುತ್ತಾಡುವ ಆಸೆ. ಆತನಿಗೆ ಕುಳಿರ್ಗಾಳಿಗೆ ಮೈಯೊಡ್ಡಿ ನಡೆಯುವುದೇ ಒಂದು ಹಿತ. ಆದರೆ ಯಾವ ಮನುಷ್ಯ ಪ್ರಾಣಿಗಳೂ ಸೂರ್ಯಾಸ್ತದ ನಂತರ ಮನೆಯಿಂದ ಕಾಲಿಡುವ ಕಾಲವೇ ಅದಾಗಿರಲಿಲ್ಲ. ಸಂಜೆಯ ನಂತರ ಟೀವಿ ನೋಡುತ್ತಾ ಸಮಯ ಕಳೆಯುವುದೇ ಸಹಜ ಎನ್ನುವ ವಾತಾವರಣ ಸೃಷ್ಟಿಯಾಗಿತ್ತು. ಜನರು ತಮ್ಮ ಸೃಜನಶೀಲತೆ ಮರೆತು ಯಾರದೋ ಕಲ್ಪನೆಯ ಕೂಸಿನ ಸೀರಿಯಲ್ಲುಗಳನ್ನು ನೋಡಿ ಆನಂದಿಸುತ್ತಿದ್ದರು. ಮುಗೀತು ಮಗೀತು ಅಂದರೂ ಮುಗಿಯದ ಕೋರ್ಟ್ ಸೀನುಗಳು, ಮುಕ್ತರಾಗದ ಜನಗಳನ್ನು ನೋಡಿ ಆನಂದಿಸುತ್ತಿದ್ದರು, ಸೀನುತ್ತಿದ್ದರು, ಆಕಳಿಸುತ್ತಿದ್ದರು.
ಈ ಹಿಂದೆ ಮೀಡ್‌ನ ಅಜ್ಜ, ಆತನಿಗೆ ಸಣ್ಣವನಿದ್ದಾಗ ಹೇಳಿದ ಕತೆಯ ಪ್ರಕಾರ ಮೀಡ್‌ನ ಅಜ್ಜನ ಕಾಲದಲ್ಲಿ ಜನ ನಡೆದುಕೊಂಡೇ ಓಡಾಡುತ್ತಿದ್ದರು, ವಾಹನಗಳ, ಲಿಫ್ಟುಗಳ ಮೇಲೆ ಅವಲಂಬಿತರಾಗದೇ, ಸಿಟಿ ಬಸ್ಸುಗಳಲ್ಲಿ- ಟ್ರೈನುಗಳಲ್ಲಿ ನೇತಾಡದೆ ಹೆಜ್ಜೆ ಮೇಲೆ ಹೆಜ್ಜೆಯನಿಟ್ಟು ಸಾಗುತ್ತಿದ್ದರು. ಆದರೆ, ಮೀಡ್‌ನ ಬದುಕುತ್ತಿರುವ ಈ ಕಾಲದಲ್ಲಿ ಜನ ನಡೆಯುವುದೇ ಇಲ್ಲ. ಬೊಜ್ಜಿಗೆ, ರೋಗಗಳಿಗೆ ಮದ್ದಿದೆ ಹಾಗೂ ಮದ್ದಿಗೆ ಜನರ ಬಳಿ ದುಡ್ಡಿದೆ. ಜನರು ತಮ್ಮ ಅವಯವಗಳಿಂದ ಬೆವರು ಹರಿಸಲು ಪ್ರತ್ಯೇಕ ಯಂತ್ರಗಳನ್ನು ಇಟ್ಟುಕೊಂಡಿದ್ದಾರೆ ಹಾಗೂ ಅವುಗಳನ್ನು ಕೊಂಡು ತಂದ ಮೊದಲೆರಡು ವಾರ ಉಪಯೋಗಿಸಿದ ನಂತರ ಅಟ್ಟದ ಮೇಲೆ ಅಲಂಕಾರಕ್ಕಾಗಿ ಇಟ್ಟಿರುತ್ತಾರೆ.
ಮೀಡ್‌ನ ಅಜ್ಜನ ಕಾಲದಲ್ಲಿ ಜನರು ವಾಕಿಂಗ್‌ಗಾಗಿ ಮಾರುದ್ದ ಕೋಲಿನ ಜೊತೆಗೆ ಮನೆ ಬಿಡುತ್ತಿದ್ದರು ಹಾಗೂ ಮನೆಗೆ ಮರಳುವಾಗ ಅವರಿವರ ಮನೆಯ ಹೂದೋಟದಿಂದ ಕದ್ದುತಂದ ಹೂಗಳನ್ನು ದೇವರಿಗೆ ಸಮರ್ಪಿಸುತ್ತಿದ್ದರು. ಆದರೆ ಮೀಡ್‌ನ ಕಾಲದಲ್ಲಿ ಜನ ಪ್ಲಾಸ್ಟಿಕ್ ಹೂಗಳನ್ನು ಫೋಟೋಗಳಿಗೆ ಏರಿಸಿ ಸುಗಂಧಕ್ಕಾಗಿ ಅಗರಬತ್ತಿಗಳನ್ನು ಉರಿಸುತ್ತಾರೆ. ಬಟ್ಟೆ ಒಗೆಯುವುದೂ ಸೇರಿದಂತೆ ದೈಹಿಕ ವ್ಯಾಯಾಮಗಳೂ ಇಲ್ಲದೇ ಇರುವಂಥ ಯಂತ್ರಗಳು ಕಾರ್ಯ ನಿರ್ವಹಿಸುತ್ತದೆ. ಸೊಳ್ಳೆ ಹೊಡೆಯಲು ಕಷ್ಟವಾಗುತ್ತದೆ ಎಂಬ ಕಾರಣಕ್ಕಾಗಿ ಸೊಳ್ಳೆಗಳನ್ನು ಸಾಯಿಸುವ ರಾಸಾಯನಿಕಗಳನ್ನು ಉರಿಸುತ್ತಾರೆ.
ಜನರು ತಮ್ಮಿಂದ ಸಾಧ್ಯವಾಗದ ತುಂಬಿದ ಕುಟುಂಬಗಳನ್ನು ಧಾರಾವಾಹಿಗಳಲ್ಲಿ ನೋಡಿ ಆನಂದಿಸುತ್ತಾರೆ. ಅನ್ಯಾಯದ ವಿರುದ್ಧ ಹೋರಾಡಲಾಗದ ಮಂದಿ ಅನ್ಯಾಯದ ವಿರುದ್ಧ ಹೋರಾಡುವ ನಾಯಕನನ್ನು ನೋಡಿ ಖುಷಿಪಡುತ್ತಾರೆ. ತಂದೆತಾಯಿಗಳನ್ನು ವೃದ್ಧಾಶ್ರಮದಲ್ಲಿಟ್ಟು ಟೀವಿಯಲ್ಲಿ ತಂದೆ ತಾಯಿಯ ಪಾತ್ರಗಳನ್ನು ನೋಡಿ ವ್ಯಾಕುಲಗೊಳ್ಳುತ್ತಾರೆ, ಕಣ್ಣೀರು ಸುರಿಸುತ್ತಾರೆ.
ಸಾಮಾನ್ಯ ಜನರಂತೆ ವರ್ತಿಸದ ಕಾರಣಕ್ಕಾಗಿ ಮೀಡ್ ಒಬ್ಬ ಮಾನಸಿಕ ರೋಗಿ ಎಂಬ ತೀರ್ಮಾನಕ್ಕೆ ಬಂದ ಪೋಲಿಸರು ಈ ಕ್ರಮಕ್ಕೆ ಮುಂದಾಗಿರುತ್ತಾರೆ..
ಎಲ್ಲರೂ ಈಗಿನಿಂದಲೇ ವಾಕಿಂಗ್ ಹೊರಡಿ... ಮೀಡ್‌ನನ್ನು ಏಕಾಂಗಿಯಾಗಲು ಬಿಡಬೇಡಿ.
- ಮೂಲ: ಬ್ರ್ಯಾಡ್‌ಬರಿ
ಭಾವಾನುವಾದ: ದೀಪಕ್ ಡೋಂಗ್ರೆ ಶಿವಮೊಗ್ಗ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


